ಮೈಸೂರು: ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿರುವ ಫೇಸ್ಬುಕ್ನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ ವಂಚಿಸುವ ಪ್ರಕರಣಗಳು ದಿನೆದಿನೇ ಹೆಚ್ಚಾಗುತ್ತಿವೆ. ಉನ್ನತ ಪೊಲೀಸ್ ಅಧಿಕಾರಿಗಳಿಂದ ಹಿಡಿದು ಆಡಳಿತಾರೂಢ ಜನಪ್ರತಿನಿಧಿಗಳಿಗೂ ಫೇಸ್ಬುಕ್ನಲ್ಲಿ ವಂಚನೆ ಪ್ರಕರಣಗಳು ಕಾಡತೊಡಗಿವೆ. ತಾಜಾ ಪ್ರಕರಣದಲ್ಲಿ ಮೈಸೂರಿನಲ್ಲಿ ಯುವತಿಯೊಬ್ಬಳು ನಕಲಿ ಖಾತೆ ತೆರೆದು ಜನರ ಅಸಲಿ ಖಾತೆಗೆ ಕನ್ನಹಾಕಿದ್ದಾಳೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೇಘಾ ಅಲಿಯಾಸ್ ಹರಿಣಿ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ.
ಮೇಘಾ ಅಲಿಯಾಸ್ ಹರಿಣಿ ಫೇಸ್‌ಬುಕ್ ನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿಕೊಂಡು ಯುವಕರಿಗೆ ವಂಚನೆ ಮಾಡುತ್ತಿದ್ದಳು. ಈ ವಂಚನೆ ಪುರಾಣದಲ್ಲಿ ಲಕ್ಷಾಂತರ ರೂಪಾಯಿ ಹಣ ಹಾಗೂ ಆಭರಣಗಳನ್ನು ಲಪಟಾಯಿಸಿರುವುದೂ ಪತ್ತೆಯಾಗಿದೆ. ಯುವತಿ ಚಿನ್ನು ಗೌಡ ಎಂಬ ಹೆಸರಿನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿಕೊಂಡು ವಂಚನೆಯಲ್ಲಿ ತೊಡಗಿದ್ದಳು. ಮೇಟಗಳ್ಳಿ ಪೊಲೀಸರ ಸಕಾಲಿಕ ಕಾರ್ಯಾಚರಣೆ ಮೂಲಕ ಯುವತಿ ಈಗ ಪೊಲೀಸ್ ಬಂಧನದಲ್ಲಿದ್ದಾಳೆ.
ರವಿ ಎಂಬ ವ್ಯಕ್ತಿಗೆ ವಂಚನೆ ಮಾಡಲು ಮುಂದಾದ ಮೇಘಾ ಅಲಿಯಾಸ್ ಹರಿಣಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಆತನು ರಿಕ್ವೆಸ್ಟ್ ಅನ್ನು ಅಕ್ಸೆಪ್ಟ್ ಮಾಡಿದ ಮೇಲೆ ವಂಚನೆಗಿಳಿದಿದ್ದಾಳೆ. ಬೇರೆಯವರ ಫೋಟೋಗಳನ್ನು ತನ್ನದೇ ಫೋಟೋ ಎಂದು ಕಳುಹಿಸಿ ಪರಿಚಯ ಮಾಡಿಕೊಂಡಿದ್ದಾಳೆ. ತಮ್ಮ ತಂದೆಗೆ 2 ಪೆಟ್ರೋಲ್ ಬಂಕ್ ಮತ್ತು ಬಾರ್ಗಳು ಇರುವುದಾಗಿ ಹೇಳಿ, ಲಕ್ಷಾಂತರ ಹಣ ಪಡೆದು ವಂಚಿಸಿದ್ದಾಳೆ. ಪ್ರಕರಣ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ: ಫೇಸ್‌ಬುಕ್ ಸ್ನೇಹಿತನ ಜೊತೆ ಪ್ರೀತಿಗೆ ಬಿದ್ದಿದ್ದ ಯುವತಿ ಅವನದೇ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
Published On - 11:03 am, Wed, 17 March 21