ದೈಹಿಕ ಶಿಕ್ಷಕರಿಗೆ ಶುಭ ಸುದ್ದಿ; 148 ಹುದ್ದೆಗಳಿಗೆ ಮುಂಬಡ್ತಿ, ಜೂನ್ 21ಕ್ಕೆ ಕೌನ್ಸಿಲಿಂಗ್: ಶಿಕ್ಷಣ ಸಚಿವ ಸುರೇಶ್ ಕುಮಾರ್

ಜುಲೈ 3ನೇ ವಾರದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ಸಮ್ಮತಿಸಿದೆ. ಹೀಗಾಗಿ ಈಗಾಗಲೇ ನಿಗದಿಪಡಿಸಿದಂತೆ ಜುಲೈ 3ನೇ ವಾರದಲ್ಲೇ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯುವುದು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ದೈಹಿಕ ಶಿಕ್ಷಕರಿಗೆ ಶುಭ ಸುದ್ದಿ; 148 ಹುದ್ದೆಗಳಿಗೆ ಮುಂಬಡ್ತಿ, ಜೂನ್ 21ಕ್ಕೆ ಕೌನ್ಸಿಲಿಂಗ್: ಶಿಕ್ಷಣ ಸಚಿವ ಸುರೇಶ್ ಕುಮಾರ್
ಶಿಕ್ಷಣ ಸಚಿವ ಸುರೇಶ್ ಕುಮಾರ್
Follow us
TV9 Web
| Updated By: guruganesh bhat

Updated on: Jun 18, 2021 | 4:32 PM

ಚಾಮರಾಜನಗರ: ಸರ್ಕಾರಿ ಪ್ರೌಢ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರ ಬಹುಕಾಲದ ಬೇಡಿಕೆಯಾಗಿದ್ದ ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಗೆ ಬಡ್ತಿಗೆ ಸಂಬಂಧಿಸಿದಂತೆ ಆದೇಶ ಹೊರಡಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಸರ್ಕಾರಿ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಗ್ರೇಡ್-1 ಹುದ್ದೆಯಿಂದ ಗ್ರೂಪ್-ಬಿ ವೃಂದದ ದೈಹಿಕ ಶಿಕ್ಷಣ ಪರಿವೀಕ್ಷಕರ 148 ಹುದ್ದೆಗಳಿಗೆ ಮುಂಬಡ್ತಿಯನ್ನು ನೀಡಿ ಆದೇಶ ಹೊರಡಿಸುವ ಮೂಲಕ ಕರ್ನಾಟಕ ರಾಜ್ಯ ಸರ್ಕಾರಿ ಪ್ರೌಢ ಶಾಲಾ ದೈಹಿಕ ಶಿಕ್ಷಕರ ಸಂಘದ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದಂತಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2016ರಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪದೋನ್ನತಿ ಪ್ರಕ್ರಿಯೆ ನಡೆದಿದ್ದು, ಐದು ವರ್ಷಗಳ ಕಾಲ ಪ್ರೌಢ ಶಾಲಾ ದೈಹಿಕ ಶಿಕ್ಷಕರಿಗೆ ಯಾವುದೇ ಪದೋನ್ನತಿ ನೀಡಿರಲಿಲ್ಲ. ನೆನೆಗುದಿಗೆ ಬಿದ್ದಿದ್ದ ಬಡ್ತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು ಆಡಳಿತಾತ್ಮಕ ಸಮಸ್ಯೆ ಬಗೆಹರಿಸಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಗೆ ಜೂನ್ 21ರಂದು ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿ   ಮಾಡಲಾಗುತ್ತಿದ್ದು, ಕೊವಿಡ್ ನಿಯಮಗಳನ್ನು ಪಾಲಿಸಿ ದೈಹಿಕ ಶಿಕ್ಷಕರು ಕೌನ್ಸೆಲಿಂಗ್ ನಲ್ಲಿ ಭಾಗವಹಿಸಿ ತಮ್ಮ ಇಚ್ಛಾನುಸಾರ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು  ಸಚಿವರು ತಿಳಿಸಿದ್ದಾರೆ.

ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಗೆ ಬಡ್ತಿ ನೀಡಬೇಕೆಂಬುದು ಕರ್ನಾಟಕ ರಾಜ್ಯ ಸರ್ಕಾರಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪ್ರಧಾನ ಬೇಡಿಕೆಯಾಗಿತ್ತು. ಈಗ ಆ ಪ್ರಕ್ರಿಯೆ ಮುಗಿದಿದ್ದು, ಮುಂಬಡ್ತಿ ಹೊಂದಲಿರುವ ದೈಹಿಕ ಶಿಕ್ಷಣ ಪರಿವೀಕ್ಷಕರು ಇಲಾಖೆಯಲ್ಲಿ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿ ಗುಣಮಟ್ಟದ ಶಿಕ್ಷಣದಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಬೇಕೆಂದು ಸುರೇಶ್ ಕುಮಾರ್ ಹೇಳಿದ್ದಾರೆ.

ಖಾಸಗಿ ಶಾಲೆಗಳ ಫೀಸ್ ಮತ್ತು ಪುಸ್ತಕ ಬೆಲೆ ಸಮಸ್ಯೆಗೆ ಸೋಮವಾರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಒಂದೇ ಕಂತಿನಲ್ಲಿ ಶುಲ್ಕ ಪಾವತಿಗೆ ಖಾಸಗಿ ಶೈಕ್ಷಣಿಕ ಸಂಸ್ಥೆಗಳು ಮನವಿ ಮಾಡಿವೆ. ಒಂದೇ ಕಂತಿನಲ್ಲಿ ಶುಲ್ಕ ಕಟ್ಟದಿದ್ದರೆ ಸಿಬ್ಬಂದಿಯ ವೇತನ ಪಾವತಿಸಲು ಸಮಸ್ಯೆ ಆಗಲಿದೆ ಎಂಬುದು ಖಾಸಗಿ ಶಾಲೆಗಳ ವಾದವಾಗಿದೆ. ಆದರೆ ಕೊವಿಡ್ ವೇಳೆ ಒಂದೇ ಕಂತಿನಲ್ಲಿ ಶುಲ್ಕ ಕಟ್ಟಲು ಆಗುವುದಿಲ್ಲ ಎಂದು ಪೋಷಕರು ಹೇಳುತ್ತಿದ್ದಾರೆ. ಇಬ್ಬರ ಅಭಿಪ್ರಾಯ ಎಜಿ ಮೂಲಕ ಹೈಕೋರ್ಟ್​ಗೆ ತಿಳಿಸುತ್ತೇವೆ ಎಂದು ಚಾಮರಾಜನಗರದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಜುಲೈ 3ನೇ ವಾರದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ಸಮ್ಮತಿಸಿದೆ. ಹೀಗಾಗಿ ಈಗಾಗಲೇ ನಿಗದಿಪಡಿಸಿದಂತೆ ಜುಲೈ 3ನೇ ವಾರದಲ್ಲೇ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯುವುದು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Second PU Results: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಬದಲಾವಣೆ; ಗ್ರೇಡ್ ಬದಲು ಹಳೆ ಪದ್ಧತಿಯಂತೆ ಅಂಕಗಳನ್ನೇ ಪರಿಗಣಿಸಲು ತೀರ್ಮಾನ

ಕೊವಿಡ್ ಮಾರ್ಗಸೂಚಿ ಉಲ್ಲಂಘಿಸಿ ನಂಜನಗೂಡಿನಲ್ಲಿ ಪೂಜೆ: ವಿಜಯೇಂದ್ರ ನಡೆಯ ಬಗ್ಗೆ ಹೈಕೋರ್ಟ್​ ಸಿಟ್ಟು

(Education Minister Suresh Kumar order accept long-term demand for physical education teachers in government high schools)