
ಬೆಂಗಳೂರು: ರಾಜ್ಯಾದ್ಯಂತ ಇಂದು ಬಕ್ರೀದ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದ್ದು, ಹಲವೆಡೆ ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿದೆ. ಈ ನಡುವೆ ರಾಜ್ಯದಲ್ಲಿ ಅಲ್ಲಲ್ಲಿ ಭಾರಿ ಮಳೆಯಾಗುತ್ತಿದ್ದು, ಇದನ್ನು ಲೆಕ್ಕಿಸಿದೆ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದ್ದಾರೆ. ಅಲ್ಲದೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಕೂಡ ಮುಸ್ಲಿಮರೊಂದಿಗೆ ಸೇರಿಕೊಂಡು ಟೊಪ್ಪಿ ಧರಿಸಿ, ಶಾಲು ಧರಿಸಿ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ. ಅದಾಗ್ಯೂ ಬೆಂಗಳೂರು ನಗರ ಸೇರಿದಂತೆ ವಿವಿಧ ಕಡೆಗಳಲ್ಲಿನ ಬಕ್ರೀದ್ ಆಚರಣೆ (Bakrid Celebration) ಹೇಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಇದನ್ನೂ ಓದಿ: ಸಿದ್ದರಾಮಯ್ಯ, ಜಮೀರ್ ಹಣೆಗೆ ಕೇಸರಿ ಬೊಟ್ಟು ಹಚ್ಚಿದ ಪುರೋಹಿತರು; ವಿಡಿಯೋ ಇಲ್ಲಿದೆ
ಬೆಂಗಳೂರು ನಗರದಾದ್ಯಂತ ಬಕ್ರೀದ್ ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತಿದ್ದು, ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಬೆಳಗ್ಗೆ 9 ಗಂಟೆಗೆ ಮೈದಾನದಲ್ಲಿ ಮುಸ್ಲಿಮರಿಗೆ ಪ್ರಾರ್ಥನೆ ಸಲ್ಲಿಸಲು ಪೊಲೀಸರು ಅವಕಾಶ ನೀಡಿದ್ದು, ಅದರಂತೆ ಶಾಂತಿಯುತವಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ. ಇನ್ನೊಂದೆಡೆ ರಸ್ತೆ ಮೇಲೆ ಕುಳಿತುಕೊಂಡು ಮುಸ್ಲಿಮರು ನಮಾಜ್ ಮಾಡಿದ್ದಾರೆ. ರಸ್ತೆ ಮೇಲೆ ನಮಾಜ್ ಮಾಡಲು ಅವಕಾಶ ಇಲ್ಲಿದಿದ್ದರೂ ನಮಾಜ್ ಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ನಡುವೆಯೂ ಮುಸ್ಲಿಮರು ಬಕ್ರೀದ್ ಹಬ್ಬವನ್ನು ಆಚರಿಸುತ್ತಿದ್ದಾರೆ. ಅತ್ಯಂತ ಭಾರಿ ಮಳೆಯಾಗುವ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್ ನೀಡಲಾಗಿದೆ. ಅದರಂತೆ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಭಟ್ಕಳದ ಜಾಮಿಯಾ ಮಸೀದಿಯಲ್ಲಿ ಮಳೆಯ ನಡುವೆಯೂ ನಮಾಜ್ ಮಾಡಲಾಗಿದೆ. ಪರಸ್ಪರ ಅಪ್ಪಿಕೊಳ್ಳುವ ಮೂಲಕ ಈದ್ ಸಂಭ್ರಮವನ್ನು ಆಚರಿಸಿ ಶುಭಕೋರಿದರು.
ಇದನ್ನೂ ಓದಿ: ಟೋಪಿ ಧರಿಸಿ ಮುಸ್ಲಿಂ ಬಾಂಧವರ ಜೊತೆ ನಮಾಜ್ ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ
ಮೈಸೂರಿನಲ್ಲಿ ಸಾಮೂಹಿಕ ಪ್ರಾರ್ಥನೆ
ಬಕ್ರೀದ್ ಹಬ್ಬ ಹಿನ್ನೆಲೆ ಮೈಸೂರಿನ ತಿಲಕ್ ನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ ನಡೆಯಿತು. ಕಳೆದ ಬಾರಿ ಕೊವಿಡ್ ಹಿನ್ನೆಲೆ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ಹೇರಲಾಗಿತ್ತು. ಆದರೆ ಈ ಬಾರಿ ಶ್ರದ್ದಾ ಭಕ್ತಿಯಿಂದ ಬಹಳ ವಿಜ್ರಂಭಣೆಯಿಂದ ಆಚರಿಸಲಾಗುತ್ತಿದ್ದು, ಸಾಮೂಹಿಕ ಪ್ರಾರ್ಥನೆಯಲ್ಲಿ ಸಾವಿರಾರು ಮುಸ್ಲಿಮರು ಭಾಗಿಯಾಗಿದ್ದಾರೆ. ಈ ವೇಳೆ ಮುಸ್ಲಿಂ ಧಾರ್ಮಿಕ ಗುರುಗಳಿಂದ ಹಬ್ಬದ ಸಂದೇಶ ರವಾನಿಸಲಾಗಿದೆ.
ಟೊಪ್ಪಿ ಧರಿಸಿಕೊಂಡು ಪ್ರಾರ್ಥನೆ ಸಲ್ಲಿಸಿದ ಸಿದ್ದರಾಮಯ್ಯ
ಚಾಮರಾಜಪೇಟೆಯಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭಾಗಿಯಾಗಿ ಪ್ರಾರ್ಥನೆ ಸಲ್ಲಿಸಿದರು. ಟೊಪ್ಪಿ ಧರಿಸಿ ಮೈದಾನಕ್ಕೆ ಬಂದ ಸಿದ್ದರಾಮಯ್ಯ ಅವರು ಮುಸ್ಲಿಮರೊಂದಿಗೆ ಸೇರಿಕೊಂಡು ಪ್ರಾರ್ಥನೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಎಲ್ಲರೂ ಕೂಡಾ ಪ್ರೀತಿ ವಿಶ್ವಾಸದಿಂದ ಇರುವ ವಾತಾವರಣ ನಿರ್ಮಾಣ ಆಗಬೇಕು. ದೇಶದಲ್ಲಿ ಶಾಂತಿ ಕಾಪಾಡುವಂತೆ ಅಲ್ಲಾನಲ್ಲಿ ಎಲ್ಲರೂ ಪ್ರಾರ್ಥನೆ ಮಾಡಬೇಕು. ನಾನು ಕೂಡ ಭಕ್ತಿಯಿಂದ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದೇನೆ. ದೇಶದಲ್ಲಿ ಶಾಂತಿ ಕಾಪಾಡಲಿ ಎಂದು ಅಲ್ಲಾನಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದರು.
ಇದನ್ನೂ ಓದಿ: ಮಳೆಗಾಗಿ ವಿಜಯಪುರ ಜಿಲ್ಲೆಯಲ್ಲಿ ವಿಶಿಷ್ಟ ಆಚರಣೆ: ಹೂತಿದ್ದ ಶವ ಮೇಲೆ ನೀರು ಹಾಕಿ ಮಳೆಗಾಗಿ ಪ್ರಾರ್ಥನೆ
ಈದ್ಗಾ ಮೈದಾನದ ಸುತ್ತ ಪೊಲೀಸರ ಸರ್ಪಗಾವಲು
ಚಾಮರಾಜಪೇಟೆ ಈದ್ಗಾ ಮೈದಾನದ ವಿವಾದ ಕಳೆದ ಹಲವು ದಿನಗಳಿಂದ ಜೋರಾಗಿಯೆ ನಡೆಯುತ್ತಿದೆ. ಈ ವಿವಾದಿತ ಮೈದಾನದಲ್ಲಿ ಇಂದು ಮುಸ್ಲಿಮರಿಗೆ ಪ್ರಾರ್ಥನೆ ಸಲ್ಲಿಸಲು ಪೊಲೀಸರು ಅನುವು ಮಾಡಿಕೊಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ ಬೈದಾನದ ಸುತ್ತ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಮೈದಾನದ ಬಳಿ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೆ ನಗರದ ಅಯಾ ವಿಭಾಗದ ಡಿಸಿಪಿಗಳು, ಠಾಣೆಯ ಇನ್ಸ್ಪೆಕ್ಟರ್ಗಳು ಸೂಕ್ತ ಬಂದೋಬಸ್ತ್ ನಡೆಸುವಂತೆ ಸೂಚನೆ ನೀಡಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಜೊತೆಗೆ 20ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆ ಮೂಲಕ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವನ್ನು ಪೊಲೀಸ್ ಇಲಾಖೆ ಕೈಗೊಂಡಿದೆ.
ನಿರಂತರ ಮಳೆಯಿಂದಾಗಿ ನಮಾಜ್ಗೆ ಅಡ್ಡಿ
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್ ಹಿಂಭಾಗದ ಖುದ್ದೂಸ್ ಸಾಹೇಬ್ ದರ್ಗಾದಲ್ಲಿ ನಮಾಜ್ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆದರೆ ನಿರಂತರ ಮಳೆಯ ಸುರಿಯುತ್ತಿರುವ ಹಿನ್ನೆಲೆ ನಮಾಜ್ ಮಾಡಲು ಸಾಧ್ಯವಾಗದೆ ಖಾದ್ರಿಯ ಮಸ್ಜಿದ್ನ ಒಳಭಾಗದಲ್ಲಿ ನಮಾಜ್ ಮಾಡಲಾಗಿದೆ. ನಮಾಜ್ನಲ್ಲಿ ನೂರಾರು ಸಂಖ್ಯೆಯಲ್ಲಿ ಮುಸ್ಲಿಮರು ಭಾಗಿಯಾಗಿದ್ದಾರೆ.
Published On - 1:48 pm, Sun, 10 July 22