ಬೀದರ್: ಗಾಳಿ ಸಹಿತ ಆಲಿಕಲ್ಲು ಮಳೆ; ಮನೆ ಮೇಲ್ಚಾವಣಿ ಮೇಲಿನ ಕಲ್ಲುಬಿದ್ದು 6 ವರ್ಷದ ಮಗು ಸಾವು
ಬೀದರ್ ಜಿಲ್ಲೆಯ ಹುಲಸೂರು ಗ್ರಾಮದಲ್ಲಿ ಭಾರೀ ಮಳೆಯಿಂದ ದುರಂತ ಸಂಭವಿಸಿದೆ. ಮನೆ ಮೇಲ್ಚಾವಣಿಯಿಂದ ಕಲ್ಲು ಬಿದ್ದು ಆರು ವರ್ಷದ ಮಗು ಮೃತಪಟ್ಟಿದೆ. ಈ ಘಟನೆ ತೀವ್ರ ನೋವುಂಟು ಮಾಡಿದ್ದು, ಮಳೆಯ ಆರ್ಭಟಕ್ಕೆ ಮನೆಗಳ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ. ಹುಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೀದರ್, ಮೇ 26: ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಭಾರೀ ಆಲಿಕಲ್ಲು ಮಳೆ ಸುರಿದಿದೆ. ಧಾರಾಕಾರ ಮಳೆಗೆ ಮನೆ ಮೇಲ್ಚಾವಣಿ ಮೇಲಿನ ಕಲ್ಲುಬಿದ್ದು 6 ವರ್ಷದ ಮಗು ಸಾವನ್ನಪ್ಪಿರುವಂತಹ ದಾರುಣ ಘಟನೆ ಜಿಲ್ಲೆಯ ಹುಲಸೂರು ತಹಶೀಲ್ದಾರ್ ಕಚೇರಿ ಬಳಿಯ ಬಡಾವಣೆಯಲ್ಲಿ ನಡೆದಿದೆ. ಮಾಹೇರಾ (6) ಮೃತ ಮಗು. ಇನ್ನು ಈ ವೇಳೆ ಫೈಸ್(8), ಲಾಯಿಬಾ(10), ಯಾಸ್ಮೀನ್(30) ಇಸ್ಮಾಯಿಲ್ಗೆ ಗಾಯಗಳಾಗಿದ್ದು, ಹುಲಸೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಗೆ ತಹಶೀಲ್ದಾರ್ ಶಿವಾನಂದ ಭೇಟಿ ನೀಡಿ ಆರೋಗ್ಯ ವಿಚಾರಣೆ ಮಾಡಿದ್ದಾರೆ. ಹುಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಘಟನೆಯು ಸ್ಥಳೀಯರಲ್ಲಿ ಆಘಾತ ಮತ್ತು ಆತಂಕವನ್ನು ಮೂಡಿಸಿದೆ. ಸದ್ಯ ಭಾರೀ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

