ಎಲೆಕ್ಟ್ರಿಕ್ ವಾಹನಗಳ 1 ಸಾವಿರ ರೀಚಾರ್ಜಿಂಗ್ ಕೇಂದ್ರ ಆರಂಭ; ಬೆಂಗಳೂರಲ್ಲೇ 500: ಸಚಿವ ಸುನೀಲ್ ಕುಮಾರ್

| Updated By: guruganesh bhat

Updated on: Sep 18, 2021 | 3:26 PM

ಅಪಾರ್ಟ್‌ಮೆಂಟ್, ಮಾಲ್, ಸರ್ಕಾರಿ ಕಚೇರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ, ಪ್ರವಾಸೋದ್ಯಮ ಜಾಗಗಳಲ್ಲಿ ರೀಚಾರ್ಜಿಂಗ್ ಸೆಂಟರ್ ಮಾಡಬೇಕು ಎಂದು ಆಲೋಚನೆಯಿದೆ ಎಂದು ಅವರು ತಿಳಿಸಿದ್ದಾರೆ.

ಎಲೆಕ್ಟ್ರಿಕ್ ವಾಹನಗಳ 1 ಸಾವಿರ ರೀಚಾರ್ಜಿಂಗ್ ಕೇಂದ್ರ ಆರಂಭ; ಬೆಂಗಳೂರಲ್ಲೇ 500: ಸಚಿವ ಸುನೀಲ್ ಕುಮಾರ್
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್
Follow us on

ಬೆಂಗಳೂರು: ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ 1 ಸಾವಿರ ರೀಚಾರ್ಜಿಂಗ್ ಸೆಂಟರ್ ತೆರೆಯುತ್ತೇವೆ. ಈ ಪೈಕಿ ಬೆಂಗಳೂರು ಒಂದರಲ್ಲೇ 500 ಸೆಂಟರ್ ತೆರೆಯುವ ಸಾಧ್ಯತೆಯಿದೆ ಎಂದು ಬೆಂಗಳೂರಲ್ಲಿ ಇಂಧನ ಸಚಿವ ಸುನಿಲ್ ಕುಮಾರ್ ತಿಳಿಸಿದರು. ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಬೇಕಾಗಿದೆ. ಹೀಗಾಗಿ ಕೇಂದ್ರ, ರಾಜ್ಯ ಸರ್ಕಾರ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ.

ಅಪಾರ್ಟ್‌ಮೆಂಟ್, ಮಾಲ್, ಸರ್ಕಾರಿ ಕಚೇರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ, ಪ್ರವಾಸೋದ್ಯಮ ಜಾಗಗಳಲ್ಲಿ ರೀಚಾರ್ಜಿಂಗ್ ಸೆಂಟರ್ ಮಾಡಬೇಕು ಎಂದು ಆಲೋಚನೆಯಿದೆ. ಹೀಗಾಗಿ ವಾಹನಗಳನ್ನು ತಯಾರಿಸುವ ಮಾಲೀಕರ ಜತೆ ಕಾರ್ಯಾಗಾರ ಮಾಡುವ ಮೂಲಕ ಮಾತುಕತೆ ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದರು.

ವಿದ್ಯುತ್​ ಚಾಲಿತ ವಾಹನ ಇನ್ನು ಮುಂದೆ ಅನಿವಾರ್ಯ
ವಿದ್ಯುತ್​ ಚಾಲಿತ ವಾಹನಗಳಿಗೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಬೆಂಗಳೂರಿನಲ್ಲಿ 136 ಕಡೆ ವಿದ್ಯುತ್ ರೀ ಚಾರ್ಜಿಂಗ್ ಸೆಂಟರ್ ಆರಂಭವಾಗುತ್ತಿದೆ. ಮುಂದಿನ ದಿನಗಳಲ್ಲಿ 500ಕ್ಕೂ ಹೆಚ್ಚು ಸೆಂಟರ್ ನಿರ್ಮಾಣವಾಗಲಿದೆ. ವಿದ್ಯುತ್ ಚಾಲಿತ ವಾಹನಗಳು ಭವಿಷ್ಯಕ್ಕೆ ಅನಿವಾರ್ಯವಾಗಿರುವ ಕಾರಣ ನಾವು ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚು ಪ್ರೋತ್ಸಾಹ ನೀಡಲಿದ್ದೇವೆ ಎಂದು ಬೆಂಗಳೂರಿನಲ್ಲಿ ಇಂಧನ ಸಚಿವ ಸುನಿಲ್‌ಕುಮಾರ್ ಸೆಪ್ಟೆಂಬರ್ 9ರಂದು ಸಹ ಹೇಳಿಕೆ ನೀಡಿದ್ದರು.

ವಿದ್ಯುತ್​ ಚಾಲಿತ ವಾಹನಗಳಿಗೆ ಬೇಕಾದ ಅಗತ್ಯ ಸೌಕರ್ಯ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಯೋಜನೆಗಳನ್ನು ರೂಪಿಸಲಿದೆ. ಈ ವಾಹನಗಳ ಬಳಕೆ ಹೆಚ್ಚಾಗಲಿದ್ದು, ಭವಿಷ್ಯದಲ್ಲಿ ಇದು ಅನಿವಾರ್ಯವಾಗಲಿದೆ. ಹೀಗಾಗಿ ರೀ ಚಾರ್ಜಿಂಗ್​ ಸೆಂಟರ್​ ಸ್ಥಾಪಿಸಲು ಹೆಚ್ಚು ಒತ್ತು ನೀಡಲಿದ್ದೇವೆ. ಇದು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಸಚಿವ ಮುನಿರತ್ನ, ವಿದ್ಯುತ್ ಚಾಲಿತ ವಾಹನಗಳಿಗೆ ರೀಚಾರ್ಜ್ ಸೆಂಟರ್​ ಮಾಡುವಾಗ ಅವುಗಳನ್ನು ಈಗ ಇರುವ ಪೆಟ್ರೋಲ್ ಬಂಕ್ ಬಳಿಯೇ ಮಾಡಬೇಕು. ಜತೆಗೆ, ವಿದ್ಯುತ್ ಚಾಲಿತ ವಾಹನಗಳ ಬೆಲೆ ಕಡಿಮೆ ಮಾಡಬೇಕು. ಪೆಟ್ರೋಲ್​ ವಾಹನಗಳ ಬೆಲೆಗಿಂತ ಶೇ.40ರಷ್ಟು ಕಡಿಮೆ ದರದಲ್ಲಿ ವಿದ್ಯುತ್​ ಚಾಲಿತ ವಾಹನಗಳು ಮಾರುಕಟ್ಟೆಯಲ್ಲಿ ಲಭ್ಯವಿರಬೇಕು. ಈ ಕುರಿತು ವಾಹನ ಕಂಪನಿಗಳಿಗೆ ಬೆಲೆ ಕಡಿಮೆ ಮಾಡಲು ಕೋರುತ್ತೇನೆ ಎಂದು ತಿಳಿಸಿದ್ದಾರೆ.

ಇದೇ ವಿಚಾರವಾಗಿ ಅಭಿಪ್ರಾಯ ಹಂಚಿಕೊಂಡ ಸಚಿವ ಕೆ.ಸಿ.ನಾರಾಯಣಗೌಡ, ನಮ್ಮ ಆರೋಗ್ಯ, ಪರಿಸರ ಕಾಪಾಡಿಕೊಳ್ಳಬೇಕು ಎಂದರೆ ವಿದ್ಯುತ್ ಚಾಲಿತ ವಾಹನ ಬಳಕೆ ಹೆಚ್ಚಾಗಬೇಕು. ವಿದ್ಯುತ್ ಚಾಲಿತ ವಾಹನಗಳಿಗೆ ಸಬ್ಸಿಡಿ ನೀಡಲಾಗುತ್ತಿದೆ. ಕೇಂದ್ರ, ರಾಜ್ಯ ಸರ್ಕಾರಗಳು ಸೂಕ್ತ ಸಬ್ಸಿಡಿ ನೀಡುತ್ತಿವೆ. ವಿದ್ಯುತ್ ಚಾಲಿತ ವಾಹನಗಳ ಬಳಕೆಯನ್ನು ಹೆಚ್ಚು ಮಾಡಿದರೆ ಮುಂದಿನ ದಿನಗಳಲ್ಲಿ ಪೆಟ್ರೋಲ್ ಬೆಲೆ ಕಡಿಮೆಯಾಗುತ್ತೆ. ಮುಖ್ಯವಾಗಿ ನಮ್ಮ ಶರೀರವನ್ನ ,ನಮ್ಮ ಪರಿಸರವನ್ನ ಕಾಪಾಡಿಕೊಳ್ಳಬೇಕು ಎಂದರೆ ಇವುಗಳು ಅನಿವಾರ್ಯ ಎಂದು ಹೇಳಿದ್ದಾರೆ.

ಇದನ್ನೂ ಓದಿ:

Ola Electric: ಓಲಾ ಎಲೆಕ್ಟ್ರಿಕ್ ಸ್ಕೂಟರ್​ ಮಾರಾಟದಿಂದ ಎರಡು ದಿನದಲ್ಲಿ ರೂ. 1100 ಕೋಟಿ ಸಂಗ್ರಹ

ಎಲೆಕ್ಟ್ರಿಕ್ ವಾಹನಗಳ ಚಾರ್ಜ್ ಚಿಂತೆ ಬಿಟ್ಟು ಬಿಡಿ: ಮನೆ ಬಾಗಿಲಿಗೆ ಬರಲಿದೆ ಚಾರ್ಜಿಂಗ್ ವ್ಯಾನ್

(Energy Minister Sunil Kumar says will start 1 thousand charging center for electric vehicles in Karnataka 500 in Bengaluru)