ಎಲೆಕ್ಟ್ರಿಕ್ ವಾಹನಗಳ ಚಾರ್ಜ್ ಚಿಂತೆ ಬಿಟ್ಟು ಬಿಡಿ: ಮನೆ ಬಾಗಿಲಿಗೆ ಬರಲಿದೆ ಚಾರ್ಜಿಂಗ್ ವ್ಯಾನ್
ಗೋಫ್ಯೂಯಲ್ ಕಂಪೆನಿಯು ಎರಡು ಸೌಲಭ್ಯವನ್ನು ಗ್ರಾಹಕರ ಮುಂದಿಡಲಿದೆ. ಅದೇನೆಂದರೆ ಬ್ಯಾಟರಿ ವಿನಿಮಯ ಅಥವಾ ವ್ಯಾನ್ ಚಾರ್ಜಿಂಗ್.
Updated on:Sep 10, 2021 | 7:36 PM

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳು ಸಂಚಲನ ಸೃಷ್ಟಿಸುತ್ತಿದೆ. ಈಗಾಗಲೇ ಅನೇಕ ಕಂಪೆನಿಯು ವಿದ್ಯುತ್ ಚಾಲಿತ ವಾಹನಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇತ್ತ ವಾಹನ ಪ್ರಿಯರು ಕೂಡ ದುಬಾರಿ ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಪರ್ಯಾಯವಾಗಿ ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಇದಾಗ್ಯೂ ಚಾರ್ಜಿಂಗ್ ಮಾಡಿಕೊಳ್ಳೋದು ಹೇಗೆ ಎಂಬುದೇ ಅತೀ ದೊಡ್ಡ ಚಿಂತೆ. ಏಕೆಂದರೆ ಪ್ರಮುಖ ನಗರಗಳಲ್ಲೇ ಚಾರ್ಜಿಂಗ್ ಸ್ಟೇಷನ್ಗಳ ಕೊರತೆಯಿದೆ. ಇನ್ನೂ ಮನೆಯಲ್ಲಿಯೇ ಚಾರ್ಜಿಂಗ್ ಮಾಡಬೇಕೆಂದರೂ ಬಹುತೇಕ ವಾಹನಗಳ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಲು 5 ರಿಂದ 8 ಗಂಟೆಗಳು ತೆಗೆದುಕೊಳ್ಳುತ್ತವೆ. ಅಷ್ಟೇ ಅಲ್ಲದೆ ದೂರದ ಪ್ರಯಾಣದ ವೇಳೆ ಚಾರ್ಜ್ ಖಾಲಿಯಾದರೆ ಮುಂದೇನು ಎಂಬ ಆತಂಕ ಕೂಡ ಎಲೆಕ್ಟ್ರಿಕ್ ವಾಹನಗಳ ಮಾಲೀಕರಲ್ಲಿದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲು ಗೋಫ್ಯೂಯಲ್ (GoFuel) ಕಂಪೆನಿ ಮುಂದಾಗಿದೆ.

ಚೆನ್ನೈ ಮೂಲದ ಗೋಫ್ಯೂಯಲ್ ಪೈವೇಟ್ ಲಿಮಿಟೆಡ್ ಕಂಪೆನಿಯು ಚಾರ್ಜ್ ಆನ್ ದಿ ಗೋ ಎಂಬ ಹೊಸ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಕಂಪೆನಿಯೇ ಬಂದು ಚಾರ್ಜ್ ಮಾಡಿಕೊಡಲಿದೆ. ಅಂದರೆ ಸ್ವಿಗ್ಗಿ, ಝೊಮಾಟೊ ಡೆಲಿವರಿ ನೀಡುವಂತೆ ಗೋಫ್ಯೂಯಲ್ ಕಂಪೆನಿ ಬಂದು ಎಲೆಕ್ಟ್ರಿಕ್ ಚಾರ್ಜಿಂಗ್ ಸೌಲಭ್ಯ ಒದಗಿಸಲಿದೆ. ಈಗಾಗಲೇ ಗೋಫ್ಯೂಯಲ್ ಕಂಪೆನಿ ಡೀಸೆಲ್ ಅನ್ನು ಡೋರ್ ಡೆಲಿವರಿ ಮಾಡಿ ಯಶಸ್ಸು ಸಾಧಿಸಿದೆ. ಇದೀಗ ಎಲೆಕ್ಟ್ರಿಕ್ ಚಾರ್ಜಿಂಗ್ ಕ್ಷೇತ್ರದತ್ತ ಮುಖ ಮಾಡಿದೆ. ಅದರಂತೆ ಮುಂದಿನ ವರ್ಷದಗೊಳಗೆ ಕಂಪನಿಯು ಸೌರ ಶಕ್ತಿಯನ್ನು ಬಳಸಿಕೊಂಡು 100 ಮೊಬೈಲ್ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಹಾಗೂ ವಿನಿಮಯ ಕೇಂದ್ರಗಳನ್ನು ಆರಂಭಿಸಲಿದೆ.

ಗೋಫ್ಯೂಯಲ್ ಕಂಪನಿಯು ಇತ್ತೀಚೆಗೆ ಸೋಲಾರ್ ಇಪಿಸಿ ಪೂರೈಕೆದಾರರು, ಚಾರ್ಜಿಂಗ್ ಸ್ವಾಪಿಂಗ್ ಉತ್ಪನ್ನಗಳ ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹಾಗೆಯೇ ಯುರೋಪ್ ಕಂಪೆನಿಯೊಂದಿಗೂ ಕೂಡ ಚಾರ್ಜಿಂಗ್ ಉಪಕರಣಗಳಿಗಾಗಿ ಡೀಲ್ ಕುದುರಿಸಲು ಮಾತುಕತೆ ನಡೆಸಿದೆ. ಈ ಒಪ್ಪಂದ ಮೂಲಕ ಚಾರ್ಜ್ ಪಾಯಿಂಟ್ ನೆಟ್ವರ್ಕ್ ಜಾಲವನ್ನು ಸ್ಥಾಪಿಸಲಿದೆ. ಅದರಂತೆ ದೇಶದ ಬಹುತೇಕ ಕಡೆ ಗೋಫ್ಯೂಯಲ್ ಚಾರ್ಜಿಂಗ್ ಸ್ಟೇಷನ್ಗಳನ್ನು ತೆರೆಯಲಿದೆ.

ಹಾಗೆಯೇ ಚಾರ್ಜ್ ಆನ್ ದಿ ಗೋ ಮೊಬೈಲ್ ಚಾರ್ಜಿಂಗ್ ಸ್ಟೇಷನ್ ಅನ್ನು ದೇಶದಾದ್ಯಂತ ವಿಸ್ತರಿಸಲಿದೆ. ಇದರಿಂದ ಎಲೆಕ್ಟ್ರಿಕ್ ವಾಹನಗಳು ಚಾರ್ಜ್ ಇಲ್ಲದೆ ಎಲ್ಲಾದರೂ ಸಿಲುಕಿದರೆ ಅಥವಾ ಅರ್ಜೆಂಟ್ ಆಗಿ ಚಾರ್ಜ್ ಮಾಡಬೇಕಿದ್ದರೆ ಗೋಫ್ಯೂಯಲ್ನ ಚಾರ್ಜ್ ಆನ್ ದಿ ಗೋ ನೆರವು ಪಡೆಯಬಹುದು. ಅಂದರೆ ನೀವು ಆಹಾರಗಳನ್ನು ಆರ್ಡರ್ ಮಾಡುವಂತೆ ಮೊಬೈಲ್ನಲ್ಲಿ ಚಾರ್ಜ್ ಬೇಕೆಂದು ತಿಳಿಸಿದರೆ ಸಾಕು. ಅದರಂತೆ ಕಂಪೆನಿಯ ಕಡೆಯಿಂದ ಹೋಮ್ ಡೆಲಿವರಿಯಂತೆ ಚಾರ್ಜಿಂಗ್ ವಾಹನ ನಿಮ್ಮ ವಾಹನಗಳಿರುವಲ್ಲಿಗೆ ಬರಲಿದೆ. ಇಂತಹದೊಂದು ಯೋಜನೆ ಯುರೋಪ್ ದೇಶಗಳಲ್ಲಿ ಯಶಸ್ವಿಯಾಗಿದೆ. ವಾಹನಗಳು ಇರುವಲ್ಲಿಗೆ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸುವ ಅನೇಕ ಕಂಪೆನಿಗಳು ವಿದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದೇ ಮಾದರಿಯಲ್ಲಿ ಗೋಫ್ಯೂಯಲ್ ಕೂಡ ಭಾರತದಲ್ಲಿ ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ ಮಾಡಿಕೊಡಲಿದೆ.

ಗೋಫ್ಯೂಯಲ್ ಕಂಪೆನಿಯು ಎರಡು ಸೌಲಭ್ಯವನ್ನು ಗ್ರಾಹಕರ ಮುಂದಿಡಲಿದೆ. ಅದೇನೆಂದರೆ ಬ್ಯಾಟರಿ ವಿನಿಮಯ ಅಥವಾ ವ್ಯಾನ್ ಚಾರ್ಜಿಂಗ್. ಅಂದರೆ ಬದಲಿಸಬಹುದಾದ ಬ್ಯಾಟರಿ ಪ್ಯಾಕ್ ಹೊಂದಿದ್ದರೆ, ಕಂಪೆನಿಯು ನಿಮಗೆ ಚಾಜ್ ಆಗಿರುವ ಬ್ಯಾಟರಿ ನೀಡಿ ವಿನಿಮಯ ಮಾಡಿಕೊಳ್ಳಲಿದೆ. ಇದಲ್ಲದಿದ್ದರೆ ಚಾರ್ಜಿಂಗ್ ವ್ಯಾನ್ ಕಳುಹಿಸಿಕೊಡುವ ಮೂಲಕ ನಿಮ್ಮ ವಾಹನವನ್ನು ಚಾರ್ಜ್ ಮಾಡಿಕೊಡಲಿದೆ. ದ್ವಿಚಕ್ರ ವಾಹನಗಳಿಗೆ ಬ್ಯಾಟರಿ ವಿನಿಮಯ ಸೇವೆ ನೀಡಲು ಕಂಪೆನಿ ಯೋಜನೆ ಹಾಕಿಕೊಂಡಿದ್ದು, ಅದರಂತೆ 2022ರ ವೇಳೆಗೆ ಗೋಫ್ಯೂಯಲ್ 100 ಮೊಬೈಲ್ ಚಾರ್ಜಿಂಗ್ ಮತ್ತು ವಿನಿಮಯ ಕೇಂದ್ರಗಳನ್ನು ಹೊಂದುವ ಗುರಿಯನ್ನು ಹೊಂದಿದೆ.
Published On - 7:35 pm, Fri, 10 September 21



















