
ಬೆಂಗಳೂರು: ರಿಕ್ರಿಯೇಷನ್ ಕ್ಲಬ್‌ಗಳ ಹೆಸರಿನಲ್ಲಿ ಕಲಬುರಗಿ ಮತ್ತು ಬೀದರ್‌ನಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ವಿಧಿವಿಜ್ಞಾನ ಪ್ರಯೋಗಾಲಯ ವಿಭಾಗ (ಎಫ್‌ಎಸ್‌ಎಲ್) ವರದಿಗಳು ಕೂಡ ವಿಳಂಬದ ಹಾದಿಯನ್ನು ಹಿಡಿದಿದೆ ಎಂದು ಸದನದಲ್ಲಿ ಕಾಂಗ್ರೆಸ್ ಶಾಸಕ ಈಶ್ವರ ಖಂಡ್ರೆ ಆರೋಪ ಮಾಡಿದ್ದಾರೆ.
ಖಂಡ್ರೆ ಆರೋಪಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಉತ್ತರ ನೀಡಿದ್ದು, ನಮ್ಮ ಸರ್ಕಾರದಿಂದ ಮಾದಕ ವಸ್ತು ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ಹಿಂದೆ ಎಫ್ಎಸ್ಎಲ್ನಿಂದ ಡ್ರಗ್ ಕೇಸ್ಗಳ ವರದಿ ಬರಲು ಸಮಯ ಹಿಡಿಯುತ್ತಿತ್ತು. ಸದ್ಯ ವಿಧಿವಿಜ್ಞಾನ ಪ್ರಯೋಗಾಲಯವನ್ನು ಆಧುನೀಕರಣ ಮಾಡಿದ್ದು, ಎಫ್‌ಎಸ್‌ಎಲ್ ವರದಿ ಕಾಲಮಿತಿಯಲ್ಲಿ ಬರುವಂತೆ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.
ಆಂಧ್ರಪ್ರದೇಶ, ತೆಲಂಗಾಣ ಗಡಿಯಲ್ಲಿ ರಿಕ್ರಿಯೇಷನ್ ಕ್ಲಬ್ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ. ಅಂತರಾಷ್ಟ್ರದಿಂದ ಬರುವ ಡ್ರಗ್ಸ್ಗೆ ನಿರ್ಬಂಧ ಹಾಕಿದ್ದೇವೆ. ಜೊತೆಗೆ ಈಗಾಗಲೇ 20ಕ್ಕೂ ಹೆಚ್ಚು ಡಾರ್ಕ್ ವೆಬ್ ಪ್ರಕರಣಗಳನ್ನ ಭೇದಿಸಿದ್ದು, ಡ್ರಗ್ಸ್ ಪ್ರಕರಣಗಳಲ್ಲಿ ಯಾರ ಒತ್ತಡಕ್ಕೂ ನಾವು ಮಣಿಯುವುದಿಲ್ಲ, ಎಲ್ಲರನ್ನೂ ಒದ್ದು ಒಳಗೆ ಹಾಕುತ್ತೇವೆ ಎಂದು ಸಚಿವ ಬೊಮ್ಮಾಯಿ ಹೇಳಿದರು.
ಎನ್‌ಡಿಪಿಎಸ್ ಕಾಯ್ದೆಗೆ ಕೇಂದ್ರ ತಿದ್ದುಪಡಿ ತರಬೇಕಿದೆ. ಸದ್ಯ ಈ ಕಾಯ್ದೆಯಲ್ಲಿ ತನಿಖಾಧಿಕಾರಿಗೆ ಹಲವು ನಿರ್ಬಂಧಗಳಿವೆ. ಆದರೂ ನಮ್ಮ ವ್ಯಾಪ್ತಿಯಲ್ಲಿ ತನಿಖಾಧಿಕಾರಿಗೆ ತನಿಖೆ ಮಾಡಲು ಅನುಕೂಲ ಆಗುವ ನಿಯಮಗಳನ್ನು ಅಳವಡಿಸಿದ್ದೇವೆ ಎಂದು ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ತನಿಖೆಯ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ: ಬೊಮ್ಮಾಯಿ