Kolar News: ಲಾಕ್ಡೌನ್ನಿಂದಾಗಿ ಅಬಕಾರಿ ಇಲಾಖೆಗೆ ನಷ್ಟ; ಮದ್ಯ ಮಾರಾಟದಲ್ಲಿ ಕುಸಿತ
ಲಾಕ್ಡೌನ್ಗೆ ಮೊದಲು ತಿಂಗಳಿಗೆ ಸುಮಾರು 1,90,000 ಬಾಕ್ಸ್ ಮದ್ಯ ಮಾರಾಟವಾಗಿತ್ತು. ಆದರೆ ಮೇ ನಲ್ಲಿ ಕೇವಲ 1,30,000 ಬಾಕ್ಸ್, ಹಾಗೂ ಜೂನ್ನಲ್ಲಿ 1,75,000 ಬಾಕ್ಸ್ ಮದ್ಯ ಮಾರಾಟವಾಗಿದೆ. ಇದಕ್ಕೆ ಜನರಿಗೆ ಸಮಯಕ್ಕೆ ಸರಿಯಾಗಿ ಮದ್ಯ ಸಿಗದಿರುವುದು ಒಂದು ಕಾರಣವಾದರೆ, ಜನರಿಗೆ ಕೆಲಸವಿಲ್ಲದೆ ಕುಡಿಯಲು ಹಣ ಸಿಗದೆ ಇರುವುದು ಒಂದು ಕಾರಣ ಆಗಿದೆ ಎಂದು ಅಬಕಾರಿ ಡಿಸಿ ರವಿಶಂಕರ್ ತಿಳಿಸಿದ್ದಾರೆ.
ಕೋಲಾರ: ಕೊರೊನಾ ಎರಡನೇ ಅಲೆಯ ತೀವ್ರತೆಯನ್ನು ಕಡಿಮೆ ಮಾಡಲು ಲಾಕ್ಡೌನ್ ಜಾರಿಗೆ ತರಲಾಗಿತ್ತು. ಆದರೆ ಕೊರೊನಾ ಮೊದಲ ಅಲೆಯಲ್ಲಿ ಆದ ನಷ್ಟವನ್ನು ಅರಿತ ರಾಜ್ಯ ಸರ್ಕಾರ ಈ ಬಾರಿಯ ಲಾಕ್ಡೌನ್ ಸಂದರ್ಭದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿತ್ತು. ಆದರೆ ಈ ಬಾರಿ ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟರೂ ಮೇ ಮತ್ತು ಜೂನ್ ತಿಂಗಳ ಲಾಕ್ಡೌನ್ ಅವಧಿಯಲ್ಲಿ ಅಬಕಾರಿ ಇಲಾಖೆಗೆ ಸಾಕಷ್ಟು ನಷ್ಟವಾಗಿದೆ. ಅಬಕಾರಿ ಇಲಾಖೆಯ ಪ್ರಕಾರ ಮೇ ತಿಂಗಳ ಮದ್ಯ ಮಾರಾಟದಲ್ಲಿ ಶೇಕಡಾ 35 ರಷ್ಟು ನಷ್ಟವಾಗಿದ್ದರೆ, ಜೂನ್ ತಿಂಗಳಲ್ಲಿ ಶೇಕಡಾ 15 ರಷ್ಟು ಮದ್ಯ ಮಾರಾಟದಲ್ಲಿ ಕುಸಿತ ಕಂಡು ಬಂದಿದೆ.
ಲಾಕ್ಡೌನ್ಗೆ ಮೊದಲು ತಿಂಗಳಿಗೆ ಸುಮಾರು 1,90,000 ಬಾಕ್ಸ್ ಮದ್ಯ ಮಾರಾಟವಾಗಿತ್ತು. ಆದರೆ ಮೇ ನಲ್ಲಿ ಕೇವಲ 1,30,000 ಬಾಕ್ಸ್, ಹಾಗೂ ಜೂನ್ನಲ್ಲಿ 1,75,000 ಬಾಕ್ಸ್ ಮದ್ಯ ಮಾರಾಟವಾಗಿದೆ. ಇದಕ್ಕೆ ಜನರಿಗೆ ಸಮಯಕ್ಕೆ ಸರಿಯಾಗಿ ಮದ್ಯ ಸಿಗದಿರುವುದು ಒಂದು ಕಾರಣವಾದರೆ, ಜನರಿಗೆ ಕೆಲಸವಿಲ್ಲದೆ ಕುಡಿಯಲು ಹಣ ಸಿಗದೆ ಇರುವುದು ಒಂದು ಕಾರಣ ಆಗಿದೆ ಎಂದು ಅಬಕಾರಿ ಡಿಸಿ ರವಿಶಂಕರ್ ತಿಳಿಸಿದ್ದಾರೆ.
ಎರಡು ತಿಂಗಳ ಲಾಕ್ಡೌನ್ ಅವಧಿಯಲ್ಲಿ ಮದ್ಯ ಮಾರಾಟ ಕುಸಿದಿದೆ ಎನ್ನುವುದು ಒಂದು ವಿಚಾರವಾದರೆ ಈ ಅವಧಿಯಲ್ಲಿ ಮದ್ಯವನ್ನು ಎಂಆರ್ಪಿ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿರುವುದು ಕಂಡು ಬಂದಿದೆ. ಅಷ್ಟೇ ಅಲ್ಲ ಅಕ್ರಮ ಮದ್ಯ ಸಾಗಾಟ, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ, ಪ್ರಕರಣಗಳು ಈ ಅವಧಿಯಲ್ಲಿ ಹೆಚ್ಚಾಗಿವೆ.
ಮೇ ಮತ್ತು ಜೂನ್ ತಿಂಗಳಲ್ಲಿ ಕೋಲಾರ ಜಿಲ್ಲೆಯಲ್ಲಿ ಅಧಿಕ ಬೆಲೆಗೆ ಮದ್ಯ ಮಾರಾಟ ಮಾಡಿದ ಹಿನ್ನೆಲೆ 109 ಪ್ರಕರಣ ದಾಖಲು ಮಾಡಿದ್ದಾರೆ. ಅಕ್ರಮ ಮದ್ಯ ಸಾಗಾಟಕ್ಕೆ ಸಂಬಂಧಿಸಿದಂತೆ 22 ಪ್ರಕರಣ ದಾಖಲು ಮಾಡಿ 1445 ಲೀಟರ್ ಮದ್ಯ, 195 ಲೀಟರ್ ಬಿಯರ್ ಹಾಗೂ ಅದಕ್ಕೆ ಸಂಬಂಧಿಸಿದಂತೆ 15 ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಇನ್ನು ನಿಯಮ ಉಲ್ಲಂಘನೆ ಮಾಡಿದ 54 ಸನ್ನದುಗಳ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ ಎಂದು ಅಬಕಾರಿ ಡಿಸಿ ರವಿಶಂಕರ್ ಹೇಳಿದ್ದಾರೆ.
ಅಲ್ಲದೆ 3 ಸನ್ನದುಗಳನ್ನು ಅಮಾನತು ಮಾಡಲಾಗಿದ್ದು, ಲಾಕ್ಡೌನ್ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ ಮಾಡಿರುವವರ ಮೇಲೆ 125 ಪ್ರಕರಣಗಳನ್ನು ದಾಖಲು ಮಾಡಿ 145 ಜನರನ್ನು ದಸ್ತಗಿರಿ ಮಾಡಲಾಗಿದೆ. ಈ ಮೂಲಕ ಲಾಕ್ಡೌನ್ ಸಂದರ್ಭದಲ್ಲಿ ಮದ್ಯ ಮಾರಾಟ ಕುಸಿತದ ಜತೆಗೆ ಅಕ್ರಮಗಳು ಕೂಡಾ ಹೆಚ್ಚಾಗಿವೆ ಎಂದು ಅಬಕಾರಿ ಡಿಸಿ ರವಿಶಂಕರ್ ತಿಳಿಸಿದ್ದಾರೆ.
ಇದನ್ನೂ ಓದಿ:
ಬಾಗಲಕೋಟೆಯಲ್ಲಿ ಮದ್ಯದಂಗಡಿ ಆರಂಭಕ್ಕೆ ವಿರೋಧ; ಡಿಸಿ ಕಚೇರಿ ಎದುರು ಮಹಿಳೆಯರಿಂದ ಪ್ರತಿಭಟನೆ
ರಾಯಚೂರಿನಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಲು ಆಗ್ರಹಿಸಿ ಮಹಿಳೆಯರ ಪ್ರತಿಭಟನೆ