ಫೇಸ್‌ಬುಕ್ ಪರಿಚಯ: ಗೆಳತಿ ತಾಯಿಯ ಆಸ್ಪತ್ರೆ ಖರ್ಚಿಗೆಂದು 2.5 ಲಕ್ಷ ರೂಪಾಯಿ ಪಡೆದು ಪಂಗನಾಮ ಹಾಕಿದ ಯುವತಿ
ಫೇಸ್‌ಬುಕ್‌ನಲ್ಲಿ ಪರಿಚಯ ಆದವರ ಬಣ್ಣದ ಮಾತುಗಳನ್ನು ನಂಬಿ ಹಣ ಹಾಕಿದ ನಾಗರಾಜ ಎಂಬ ಯುವಕ ಹಣ ಹಾಕಿಸಿಕೊಂಡಿದ್ದಾರೆ ಎನ್ನಲಾದ ಮಲ್ಲನಗೌಡ ಮತ್ತು ಆತನ ಗೆಳತಿ ಆತ್ಮ ಜೋಯ್ಸ್, ಪೂರ್ವಿ ಶೆಟ್ಟಿ ಸೇರಿದಂತೆ ಮೂವರ ಮೇಲೆ ಹಾವೇರಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.
ಹಾವೇರಿ : ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಿ ಹಣ ದೋಚುವುದು, ಸ್ನೇಹ- ಪ್ರೀತಿ ಹೆಸರಿನಲ್ಲಿ ಮೋಸ ಮಾಡುವುದು ಸಾಮಾನ್ಯವಾಗಿದೆ. ಆದರೆ ಇನ್ನು ಕೂಡ ಕೆಲವರು ಎಚ್ಛೆತ್ತುಕೊಂಡಿಲ್ಲ ಇದಕ್ಕೆ ಸಾಕ್ಷಿಯೇ ಹಾವೇರಿ ಜಿಲ್ಲೆಯ ಯುವಕ. ಫೇಸ್‌ಬುಕ್‌ನಲ್ಲಿ ಪರಿಚಯ ಆದವಳನ್ನು ನಂಬಿ ಹಣ ನೀಡಿ ಮೋಸ ಹೋಗಿದ್ದಾನೆ. ಯುವಕನನ್ನು ಪರಿಚಯ ಮಾಡಿಕೊಂಡ ಯುವತಿ ತನ್ನ ಗೆಳತಿಯ ತಾಯಿಯ ಆಸ್ಪತ್ರೆ ಖರ್ಚಿಗೆ ಹಣ ಬೇಕು ಎಂದು ಎರಡೂವರೆ ಲಕ್ಷ ರೂಪಾಯಿ ಹಣವನ್ನು ಬೇರೆ ಬೇರೆ ಖಾತೆಗಳು ಮತ್ತು ಫೋನ್ ಪೇ ಮೂಲಕ ಹಾಕಿಸಿಕೊಂಡು ವಂಚಿಸಿದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ನಡೆದಿದೆ.
ಹಾನಗಲ್ ಪಟ್ಟಣದ ಯುವಕನೊಬ್ಬನಿಗೆ ಒಂದು ವರ್ಷದ ಹಿಂದೆ ಆತ್ಮಿ ಜೋಯ್ಸ್ ಎನ್ನುವ ಯುವತಿ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದಳು. ದೂರವಾಣಿ ಮೂಲಕ ಸಂಪರ್ಕ ಬೆಳಸಿ ತನ್ನ ಗೆಳತಿ ಪೂರ್ವಿ ಶೆಟ್ಟಿ ಎಂಬುವವಳ ತಾಯಿಗೆ ಬ್ರೇನ್ ಟ್ಯೂಮರ್ ಆಗಿದೆ. ಅವಳಿಗೆ ಆಸ್ಪತ್ರೆ ಖರ್ಚಿಗೆ ಹಣ ಬೇಕಾಗಿದೆ ಎಂದು ಸಮಸ್ಯೆ ತೋಡಿಕೊಂಡಿದ್ದಳು. ತನ್ನ ಮತ್ತು ಗೆಳತಿಯ ಬಳಿ ಹಣವಿಲ್ಲದ್ದಕ್ಕೆ ಆಸ್ಪತ್ರೆಗೆ ತೋರಿಸುವುದು ಕಷ್ಟ ಆಗಿದೆ ಎಂದು ಹೇಳಿದ್ದಳು. ಅಲ್ಲದೆ ಆಸ್ಪತ್ರೆ ಖರ್ಚಿಗೆ ಎರಡೂವರೆ ಲಕ್ಷ ರೂಪಾಯಿ ಹಣ ನೀಡಿದರೆ ಅವಳ ತಾಯಿ ಗುಣವಾದ ಮೇಲೆ ಐದು ಲಕ್ಷ ಕೊಡುವುದಾಗಿ ಆಫರ್ ನೀಡಿ ನಂಬಿಸಿದ್ದಳು.
ಎರಡೂವರೆ ಲಕ್ಷಕ್ಕೆ ಐದು ಲಕ್ಷ ಬರುತ್ತದೆ. ಅಲ್ಲದೆ ತಾಯಿಯ ಆಸ್ಪತ್ರೆ ಖರ್ಚಿಗೆ ಸಹಾಯ ಮಾಡಿದರೆ ಪುಣ್ಯ ಬರುತ್ತದೆ ಎಂದು ನಂಬಿದ ಹಾನಗಲ್ ಪಟ್ಟಣದ ಯುವಕ ನಾಗರಾಜ, ಯುವತಿಯ ಪರಿಚಿತರು ಎನ್ನಲಾದ ಮಲ್ಲನಗೌಡ ಮತ್ತು ಮೌನೇಶ ಎನ್ನುವವರ ಬ್ಯಾಂಕ್ ಖಾತೆಗಳಿಗೆ ಮತ್ತು ಪೋನ್ ಪೇಗೆ ಬರೋಬ್ಬರಿ ಎರಡೂವರೆ ಲಕ್ಷ ರೂಪಾಯಿ ಹಣ ಹಾಕಿದ್ದಾನೆ. ಆದರೆ ಎರಡೂವರೆ ಲಕ್ಷ ರೂಪಾಯಿ ಹಣ ಹಾಕಿಸಿಕೊಂಡು, ಈಗ ಹಣ ಕೊಡದೆ ನಾಪತ್ತೆಯಾಗಿದ್ದಾರೆ ಎಂದು ಮೋಸ ಹೋದ ಯುವಕ ದೂರು ದಾಖಲಿಸಿದ್ದಾನೆ. ಫೇಸ್‌ಬುಕ್‌ನಲ್ಲಿ ಪರಿಚಯ ಆದವರ ಬಣ್ಣದ ಮಾತುಗಳನ್ನು ನಂಬಿ ಹಣ ಹಾಕಿದ ನಾಗರಾಜ ಎಂಬ ಯುವಕ ಹಣ ಹಾಕಿಸಿಕೊಂಡಿದ್ದಾರೆ ಎನ್ನಲಾದ ಮಲ್ಲನಗೌಡ ಮತ್ತು ಆತನ ಗೆಳತಿ ಆತ್ಮ ಜೋಯ್ಸ್, ಪೂರ್ವಿ ಶೆಟ್ಟಿ ಸೇರಿದಂತೆ ಮೂವರ ಮೇಲೆ ಹಾವೇರಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.
ಯುವಕ ನಾಗರಾಜ ನೀಡಿದ ದೂರು ದಾಖಲಿಸಿಕೊಂಡ ಸಿಇಎನ್ ಠಾಣೆಯ ಪೊಲೀಸರು ಫೇಸ್‌ಬುಕ್ ಮೂಲಕ ಪರಿಚಯವಾಗಿ ಹಣ ಪಡೆದು ವಂಚಿಸಿದವರ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇನ್ನಾದರೂ ಜನರು ಎಚ್ಛೆತ್ತುಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯ ಮಾಡಿಕೊಂಡು, ಬಣ್ಣ ಬಣ್ಣದ ಮಾತುಗಳನ್ನು ಹೇಳಿ ಹಣ ಕೇಳುವವರ ಸಂದೇಶಗಳಿಗೆ ಕಿವಿಗೊಟ್ಟು, ಹಣ ಹಾಕಿ ಮೋಸ ಹೋಗಬಾರದು ಎಂದು ಸಿಇಎನ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಮೈಸೂರು: ಫೇಸ್‌ಬುಕ್‌ನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ ಲಕ್ಷಾಂತರ ರೂ ವಂಚಿಸಿದ್ದ ಮೇಟಗಳ್ಳಿ ಯುವತಿ ಸೆರೆ