ಬುಡುಬುಡುಕೆ ವೇಷದಲ್ಲಿ ಭವಿಷ್ಯ ನುಡಿಯುವ ನೆಪದಲ್ಲಿ ಪೂಜೆ ಮಾಡಿಸಿ ಮಹಿಳೆಯ ಕಿವಿಯೋಲೆ ದೋಚಿದ ಖದೀಮ

| Updated By: ಆಯೇಷಾ ಬಾನು

Updated on: Jan 29, 2024 | 11:19 AM

ಬುಡುಬುಡುಕೆ ವೇಷದಲ್ಲಿ ಮನೆ ಮುಂದೆ ಬಂದು ಗಂಡನ ಜೀವಕ್ಕೆ ಆಪತ್ತು ಎಂದು ಸುಳ್ಳು ಭವಿಷ್ಯ ನುಡಿದು ಮಹಿಳೆ ಕೈಯಿಂದ ಪೂಜೆ ಮಾಡಿಸಿ ಆಕೆಯ ಕಿವಿಯೋಲೆ ದೋಚಿ ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಘಟನೆ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬುಡುಬುಡುಕೆ ವೇಷದಲ್ಲಿ ಭವಿಷ್ಯ ನುಡಿಯುವ ನೆಪದಲ್ಲಿ ಪೂಜೆ ಮಾಡಿಸಿ ಮಹಿಳೆಯ ಕಿವಿಯೋಲೆ ದೋಚಿದ ಖದೀಮ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಜ.29: ನಗರದಲ್ಲಿ ಖತರ್ನಾಕ್ ಗ್ಯಾಂಗ್​ವೊಂದು ಆಕ್ಟಿವ್ ಆಗಿದೆ. ಬುಡುಬುಡುಕೆಯವನ ವೇಷದಲ್ಲಿ ಮನೆಯ ಮುಂದೆ ಬಂದು ನಿಂತು ಭವಿಷ್ಯ ನುಡಿಯುವ ನೆಪದಲ್ಲಿ ಖದೀಮರು ಮನೆ ದೋಚುತ್ತಿದ್ದಾರೆ (Theft). ಗಂಡನಿಗೆ ಗಂಡಾಂತರ ಇದೆ ಚಿನ್ನಾಭರಣ (Gold) ಬಿಚ್ಚಿಟ್ಟು ಪೂಜೆ ಮಾಡಿ ಎಂದು ಹೇಳುತ್ತ ಚಿನ್ನಾಭರಣ ದೋಚುತ್ತಿದ್ದಾರೆ. ಈ ಪ್ರಕರಣ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬುಡುಬುಡುಕೆ ಬಾರಿಸುತ್ತ ಭವಿಷ್ಯ ನುಡಿಯುತ್ತ ಮನೆ ಮುಂದೆ ಬಂದು ದಾನ-ಧರ್ಮಕ್ಕಾಗಿ ಕೈ ಚಾಚುವ ಬೀದಿ ನೆಂಟರ ಬಾಳು ಈಗ ಬೀದಿಪಾಲಾಗಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಬುಡುಬುಡುಕೆ ಬಾರಿಸಿ ಭವಿಷ್ಯ ಹೇಳುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ ಮತ್ತೊಂದೆಡೆ ಇದೇ ಬುಡುಬುಡುಕೆ ವೃತ್ತಿಯನ್ನು ಬಳಸಿಕೊಂಡು ಕೆಲ ಖದೀಮರು ದರೋಡೆ ಮಾಡುತ್ತಿದ್ದಾರೆ. ಕೊತ್ತನೂರು ಠಾಣೆಯ ದೊಡ್ಡ ಗುಬ್ಬಿ ಗ್ರಾಮದ ಜನತಾ ಕಾಲೋನಿಯ ಶಕುಂತಲಾ ಎನ್ನುವವರ ಮನೆಗೆ ನಿನ್ನೆ ಬೆಳಗ್ಗೆ ಬಂದಿದ್ದ ಬುಡುಬುಡುಕೆಯವನು ಪೂಜೆ ಮಾಡದಿದ್ರೆ 9 ದಿನದಲ್ಲಿ ನಿನ್ನ ಗಂಡನಿಗೆ ಮರಣ ಎಂದು ಕಿವಿಯೋಲೆ ದೋಚಿ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಹೈಸ್ಕೂಲ್ ದಿನಗಳಲ್ಲಿ ಪ್ರೀತಿಸಿ ಮದುವೆಯಾದ ದಂಪತಿಗೆ ಜೀವ ಬೆದರಿಕೆ, ಎಸ್ಪಿ ಕಚೇರಿಗೆ ಓಡೋಡಿ ಬಂದ ಜೋಡಿ ಹಕ್ಕಿಗಳು!

ನಿನ್ನ ಗಂಡನಿಗೆ ದೊಡ್ಡ ಗಂಡಾಂತರ ಕಾದಿದೆ. ಪೂಜೆ ಮಾಡದಿದ್ದರೇ ಮರಣ ಫಿಕ್ಸ್ ಎಂದು ನಕಲಿ ಬುಡುಬುಡುಕೆಯವನು ಮಹಿಳೆಯನ್ನು ಹೆದರಿಸಿದ್ದ. ಇದರಿಂದ ಹೆದರಿದ್ದ ಶಕುಂತಲಾ ಪೂಜೆ ಮಾಡಿಸೋದಕ್ಕೆ ಒಪ್ಪಿಕೊಂಡರು. ಒಂದು ಮಡಕೆ ಕೊಟ್ಟು ಅದಕ್ಕೆ ಅರಶಿಣ, ಕುಂಕುಮ, ಅಕ್ಕಿ ಹಾಕುವಂತೆ ಬುಡುಬುಡುಕೆಯವನು ಹೇಳಿದ. ಹಾಗೆ ಕಿವಿಯೋಲೆಯನ್ನ ಕೂಡ ಬಿಚ್ಚಿ ಅದಕ್ಕೆ ಹಾಕುವಂತೆ ಹೇಳಿದ. ಕಣ್ಣು ಮುಚ್ಚಿ ಕುಳಿತುಕೊಳ್ಳಿ ಪೂಜೆ ಮಾಡುತ್ತೇನೆ ಎಂದು ಮಡಿಕೆ ಸುತ್ತ ದಾರ ಕಟ್ಟಿದ. ಮಹಿಳೆ ಕಣ್ಮುಚ್ಚಿ ಕುಳಿತಾಗ ಕಿವಿಯೋಲೆಯನ್ನ ಮಡಿಕೆಯಿಂದ ತೆಗೆದು ಕೊಂಡಿದ್ದು ನಿಮ್ಮ ಗಂಡ ಬಂದ್ಮೇಲೆ ಅವರಿಂದಲೇ ನೀವೂ ಇದಕ್ಕೆ ಪೂಜೆ ಮಾಡಿಸಬೇಕು. ನಿಮ್ಮ ಗಂಡ ಪೂಜೆ ಮಾಡಿದ ಬಳಿಕ ಕಿವಿಯೋಲೆ ತೆಗೆದುಕೊಳ್ಳಿ ಎಂದು ಹೇಳಿ ಬುಡುಬುಡುಕೆಯವನು ಎಸ್ಕೇಪ್ ಆಗಿದ್ದಾನೆ.

ನಂತರ ಗಂಡ ಮನೆಗೆ ಬಂದ ಬಳಿಕ ಶಕುಂತಲಾ ಅವರು ಗಂಡನ ಕೈಯಿಂದ ಪೂಜೆ ಮಾಡಿಸಿ ಮಡಿಕೆ ತೆಗೆದು ನೋಡಿದ್ರೆ ಕಿವಿಯೋಲೆ ಕಾಣೆಯಾಗಿದೆ. ಬಳಿಕ ಮೋಸ ಹೋಗಿರುವುದು ತಿಳಿಯುತ್ತಿದ್ದಂತೆ ಕೊತ್ತನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಕೊತ್ತನೂರು ಪೊಲೀಸ್ ಠಾಣೆ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ