ಯಾದಗಿರಿ ಜಿಲ್ಲೆಗೆ ಎಂಟ್ರಿ ಕೊಟ್ಟ ನಕಲಿ ಹತ್ತಿ ಬೀಜ: ರೈತರಲ್ಲಿ ಆತಂಕ, ಸೂಕ್ತ ಕ್ರಮಕ್ಕೆ ಆಗ್ರಹ
ಕೃಷಿ ಪ್ರಧಾನವಾಗಿರುವ ಯಾದಗಿರಿ ಜಿಲ್ಲೆಯಲ್ಲಿ ಮುಂಗಾರು ಮುನ್ನವೆ ಮಳೆ ಸುರಿದ್ದರಿಂದಾಗಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಜಿಲ್ಲೆಯಲ್ಲಿ ಅತಿಯಾಗಿ ರೈತರು ಹತ್ತಿ ಬೆಳೆಯನ್ನೇ ಬೆಳೆಯುತ್ತಾರೆ. ಆದರೆ ಜಿಲ್ಲೆಗೆ ನಕಲಿ ಹತ್ತಿ ಬೀಜಗಳು ಎಂಟ್ರಿ ಕೊಟ್ಟಿದ್ದು, ಇದರಿಂದ ರೈತರು ಆತಂಕಗೊಂಡಿದ್ದಾರೆ. ನಕಲಿ ಬೀಜಗಳನ್ನ ಮಾರಾಟವಾಗದಂತೆ ಕ್ರಮಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಮುಂದಾಗಬೇಕೆಂದು ಆಗ್ರಹಿಸುತ್ತಿದ್ದಾರೆ.
ಯಾದಗಿರಿ, ಜೂನ್ 01: ಆ ಜಿಲ್ಲೆಯ ರೈತರು (Farmers) ಅತಿಯಾಗಿ ಹತ್ತಿ ಬೆಳೆಯನ್ನ ಬೆಳೆಯುತ್ತಾರೆ. ಕಳೆದ ವರ್ಷದಂತೆ ಈ ವರ್ಷ ಬಿಳಿ ಬಂಗಾರ ಅಂತ ಕರಿಸಿಕೊಳ್ಳುವ ಹತ್ತಿ ಬಿತ್ತನೆ ಸಿದ್ಧತೆ ಮಾಡಿಕೊಂಡಿದ್ದಾರೆ. ಮುಂಗಾರು ಮಳೆ ಆಗಮಿಸುತ್ತಿದ್ದ ಹಾಗೆ ಬಿತ್ತನೆಯ ಸಿದ್ದತೆ ಗರಿಗೆದರಿದೆ. ಆದರೆ ಹತ್ತಿ ಬಿತ್ತನೆಗೆ ಮುಂದಾಗುತ್ತಿರುವ ರೈತರಿಗೆ ನಕಲಿ ಬೀಜದ ಜಾಲದಲ್ಲಿ ಸಿಲುಕುವ ಆತಂಕ ಎದುರಾಗಿದೆ. ಯಾಕೆಂದ್ರೆ ಆಂಧ್ರ, ತೆಲಂಗಾಣದಿಂದ ನಕಲಿ ಹತ್ತಿ ಬೀಜ (Fake cotton seed) ರಾಜ್ಯಕ್ಕೆ ಎಂಟ್ರಿ ಕೊಟ್ಟಿದೆ.
ಕೃಷಿ ಪ್ರಧಾನವಾಗಿರುವ ಯಾದಗಿರಿ ಜಿಲ್ಲೆಯಲ್ಲಿ ಮುಂಗಾರು ಮುನ್ನವೆ ಮಳೆ ಸುರಿದ್ದರಿಂದಾಗಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಮಳೆ ಆಗ್ತಾಯಿದ್ದ ಹಾಗೆ ಮುಂಗಾರು ಬಿತ್ತನೆಗೆ ರೈತರು ಸಿದ್ದರಾಗುತ್ತಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಅತಿಯಾಗಿ ರೈತರು ಹತ್ತಿ ಬೆಳೆಯನ್ನೇ ಬೆಳೆಯುತ್ತಾರೆ. ಚೆನ್ನಾಗಿ ಇಳುವರಿ ಹಾಗೂ ಬೆಲೆ ಕೂಡ ಸಿಗುತ್ತೆ ಎನ್ನುವ ಕಾರಣಕ್ಕೆ ಹತ್ತಿ ಬೆಳೆಯನ್ನೆ ಬೆಳೆಯುತ್ತಾರೆ. ಜಿಲ್ಲೆಯಲ್ಲಿ ಈ ಬಾರಿ 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯನ್ನ ಬೆಳೆಯೋಕೆ ಗುರಿ ಹೊಂದಲಾಗಿದೆ.
ಇದನ್ನೂ ಓದಿ: ಈ ಬಾರಿಯೂ ವಿಮೆ ಕಂಪನಿಗಳಿಂದ ರೈತರಿಗೆ ಮೋಸ, ಕೃಷಿ ಇಲಾಖೆ ಶಾಮೀಲು: ರೈತನ ‘ಕೈ’ಹಿಡಿಯುವವರು ಯಾರು?
ಹತ್ತಿ ಬಿತ್ತನೆಗೆ ಮುಂದಾಗುತ್ತಿರುವ ರೈತರಿಗೆ ಮೋಸ ಜಾಲದಲ್ಲಿ ಸಿಲುಕುವ ಆತಂಕ ಎದುರಾಗಿದೆ. ಯಾಕೆಂದ್ರೆ ಜಿಲ್ಲೆಗೆ ನಕಲಿ ಹತ್ತಿ ಬೀಜಗಳು ಎಂಟ್ರಿ ಕೊಟ್ಟಿವೆ. ಇದಕ್ಕೆ ತಾಜಾ ಉದಾಹರಣೆ ಅಂದ್ರೆ ನಿನ್ನೆಯಷ್ಟೇ ಕೃಷಿ ಇಲಾಖೆ ಅಧಿಕಾರಿಗಳು ಯಾದಗಿರಿ ತಾಲೂಕಿನ ಸೈದಾಪುರ ಪಟ್ಟಣದಲ್ಲಿ ನಕಲಿ ಹತ್ತಿ ಬೀಜ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ದಾಳಿ ಮಾಡಿ ಸುಮಾರು 600 ಕ್ಕೂ ಅಧಿಕ ನಕಲಿ ಹತ್ತಿ ಬೀಜದ ಪ್ಯಾಕೆಟ್ ಗಳನ್ನ ಸೀಜ್ ಮಾಡಿದ್ದಾರೆ. ಇದರಿಂದ ಆತಂಕಗೊಂಡಿರುವ ರೈತರು ನಕಲಿ ಬೀಜಗಳನ್ನ ಮಾರಾಟವಾಗದಂತೆ ಕ್ರಮಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಮುಂದಾಗಬೇಕೆಂದು ಆಗ್ರಹಿಸುತ್ತಿದ್ದಾರೆ.
ಜಿಲ್ಲೆಯ ಕೆಲ ಗ್ರಾಮಗಳು ಅಂದ್ರೆ ತೆಲಂಗಾಣದ ಗಡಿಯನ್ನ ಹಂಚಿಕೊಂಡಿರುವ ಗ್ರಾಮದಲ್ಲಿ ಅಧಿಕಾರಿಗಳ ಕಣ್ಣು ತಪ್ಪಿಸಿ ರೈತರಿಗೆ ಮೋಸದಿಂದ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಡಾ.ಚಂದ್ರು ಗೋಲ್ಡ್ ಎನ್ನುವ ಕಂಪನಿಯ ಹತ್ತಿ ಬೀಜಗಳು ಇಲ್ಲಿ ಮಾರಾಟ ಮಾಡಲಾಗುತ್ತಿದೆ. ಆದ್ರೆ ಬೀಜ ರಾಜ್ಯದಲ್ಲಿ ಮಾರಾಟ ಮಾಡೋದ್ದಕ್ಕೆ ರಾಜ್ಯ ಸರ್ಕಾರದಿಂದ ಯಾವುದೇ ರೀತಿ ಅನುಮೋದನೆ ಪಡೆದಿಲ್ಲ. ಕೃಷಿ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆಯದೆ ಈ ಕಂಪನಿಯ ಹತ್ತಿ ಬೀಜಗಳನ್ನ ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ ಯಾದಗಿರಿ ಹಾಗೂ ಗುರುಮಠಕಲ್ ತಾಲೂಕಿನ ಬಹುತೇಕ ಕಡೆ ಈ ಕಂಪನಿಯ ಬೀಜಗಳನ್ನ ಮಾರಾಟ ಮಾಡಲಾಗುತ್ತಿದೆ.
ಇದನ್ನೂ ಓದಿ: ಬಸವಸಾಗರ ಜಲಾಶಯದ ನೀರು ತೆಲಂಗಾಣ ಪಾಲು: ಕಾವೇರಿ ನೀರು ತಮಿಳುನಾಡಿಗೆ ಬಿಟ್ಟ ಸರ್ಕಾರದಿಂದ ಮತ್ತೊಂದು ಯಡವಟ್ಟು
ಡಾ.ಚಂದ್ರು ಗೋಲ್ಡ್ ಎನ್ನುವಂತ ಕಂಪನಿಯ ಹತ್ತಿ ಬೀಜ ಹಿಂದೆ ಆಂಧ್ರ ಮತ್ತು ತೆಲಂಗಾಣದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆದ್ರೆ ಅಲ್ಲಿನ ಸರ್ಕಾರಗಳು ಈ ಕಂಪನಿಯ ಬೀಜಗಳನ್ನ ಬ್ಯಾನ್ ಮಾಡಿದ್ದಾರೆ. ಹೀಗಾಗಿ ಈ ಕಂಪನಿ ಈಗ ಯಾವುದೇ ಅನುಮೋದನೆ ಪಡೆಯದೆ ಯಾದಗಿರಿ ಜಿಲ್ಲೆಯಲ್ಲಿ ಮಾರಾಟ ಮಾಡುತ್ತಿದೆ. ಕೇವಲ 52 ಬ್ರ್ಯಾಂಡ್ ಬೀಜಗಳನ್ನ ಮಾರಾಟ ಮಾಡೋದ್ದಕ್ಕೆ ಮಾತ್ರ ರಾಜ್ಯದಲ್ಲಿ ಅನುಮೋದನೆ ಸಿಕ್ಕಿದೆ. ಆದ್ರೆ ಈ ಬ್ರ್ಯಾಂಡ್ ನ ಬೀಜಗಳಿಗೆ ಮಾರಾಟ ಮಾಡುವುದ್ದಕ್ಕೆ ಯಾವುದೇ ರೀತಿ ಪರವಾನಿಗೆ ಇಲ್ಲದೆ ಇದ್ರು ಸಹ ಅಂಗಡಿಗಳಿಗೆ ಬೀಜಗಳು ಮಾರಾಟವಾಗುತ್ತಿದೆ. ಹೀಗಾಗಿ ರೈತರಿಗೆ ಇದರಿಂದ ಮೋಸ ಹೋಗುವ ಸಾಧ್ಯತೆ ಹೆಚ್ಚಾಗಿವೆ.
ಜಿಲ್ಲೆಯ ರೈತರು ಕಳೆದ ಬಾರಿಯಂತೆ ಈ ಬಾರಿಯೂ ಸಹ ಭರ್ಜರಿಯಾಗಿ ಹತ್ತಿ ಬೆಳೆಯನ್ನ ಬೆಳೆಯೋಕೆ ಮುಂದಾಗಿದ್ದಾರೆ. ಆದ್ರೆ ನಕಲಿ ಬೀಜ ಖರೀದಿ ಮಾಡಿ ಬಿತ್ತನೆ ಮಾಡಿ ಮೋಸ ಹೋದ್ರೆ ಮುಂದೆನೂ ಎನ್ನುವ ಚಿಂತೆ ಕಾಡ್ತಾಯಿದೆ. ಹೀಗಾಗಿ ಕೃಷಿ ಇಲಾಖೆ ಅಧಿಕಾರಿಗಳು ನಕಲಿ ಬೀಜಗಳು ಮಾರಾಟವಾಗದಂತೆ ತಡೆಹಿಡಿಯುವ ಕೆಲಸ ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.