AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Photos ತನ್ನ ಜಮೀನಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡರ ಪ್ರತಿಮೆ ಮಾಡಿ, ಗೌರವ ಸಲ್ಲಿಸಿದ ರಾಯಚೂರು ರೈತ ಪ್ರಭುಗೌಡ

ರೈತ ಪ್ರಭುಗೌಡ ಈ ರೀತಿ ದೇವೇಗೌಡರ ಮೂರ್ತಿ ಪ್ರತಿಷ್ಠಾಪನೆ ಮಾಡಲು ಪ್ರಮುಖ ಕಾರಣ ಹೆಚ್.ಡಿ. ದೇವೇಗೌಡರು ಈ ಹಿಂದೆ ಪ್ರಧಾನಿಯಾಗಿದ್ದ ವೇಳೆಯಲ್ಲಿ ರಾಜ್ಯಕ್ಕೆ ಹಲವಾರು ನೀರಾವರಿ ಯೋಜನೆಗಳನ್ನ ಜಾರಿಗೆ ತಂದಿದ್ದಾರೆ.

Photos ತನ್ನ ಜಮೀನಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡರ ಪ್ರತಿಮೆ ಮಾಡಿ, ಗೌರವ ಸಲ್ಲಿಸಿದ ರಾಯಚೂರು ರೈತ ಪ್ರಭುಗೌಡ
ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡರ ಮೂರ್ತಿ
Follow us
preethi shettigar
| Updated By: ಸಾಧು ಶ್ರೀನಾಥ್​

Updated on: Feb 10, 2021 | 5:13 PM

ರಾಯಚೂರು: ಸಾಮಾನ್ಯವಾಗಿ ಜನ ಅಭಿಮಾನಕ್ಕಾಗಿ ತಾವಿಷ್ಟ ಪಡುವ ಸಿನಿಮಾ ನಟ-ನಟಿಯರ ಮೂರ್ತಿ/ಪ್ರತಿಮೆ ಮಾಡುವುದು ಸಾಮಾನ್ಯ. ಅಲ್ಲದೆ ಭಕ್ತಿಯ ಸಂಕೇತವಾಗಿ ಕೆಲವರು ತಮ್ಮನ್ನು ಪಾಲನೆ ಪೋಷಣೆ ಮಾಡಿರುವ ತಂದೆ-ತಾಯಿಯಂದಿರ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದನ್ನೂ ಕೇಳಿದ್ದೇವೆ. ಆದರೆ ರಾಯಚೂರಿನ ಒಬ್ಬ ರೈತ ತನ್ನ ಜಮೀನಿಗೆ ನೀರು ತಂದುಕೊಟ್ಟ ಮಾಜಿ ಪ್ರಧಾನಿಯೊಬ್ಬರ ಮೂರ್ತಿ ನಿರ್ಮಿಸುವ ಮೂಲಕ ವಿಶಿಷ್ಟ ರೀತಿಯ ಅಭಿಮಾನ ಮೆರೆದಿದ್ದಾರೆ.

ತನ್ನ 5 ಎಕರೆ ಜಮೀನಲ್ಲಿ 5 ಲಕ್ಷ ರೂ ಖರ್ಚು ಮಾಡಿ ದೇವೆಗೌಡರ ಮೂರ್ತಿ ಪ್ರತಿಷ್ಠಾಪನೆ ಹೌದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಾಣಧಾಳ ಗ್ರಾಮದ ರೈತ ಪ್ರಭುಗೌಡ ತನ್ನ ಜಮೀನಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಗಾಣಧಾಳ ಗ್ರಾಮದ ಸಮೀಪದಲ್ಲೆ ಇರುವ ತನ್ನ 5 ಎಕರೆ ಜಮೀನಲ್ಲಿ 5 ಲಕ್ಷ ರೂಪಾಯಿ ಖರ್ಚು ಮಾಡಿ ದೇವೆಗೌಡರ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ನಿತ್ಯವೂ ಕೃಷಿ ಚಟುವಟಿಕೆಗೆ ತೆರಳುವ ಮುನ್ನ ರೈತ ಪ್ರಭುಗೌಡ ಮಾಜಿ ಪ್ರಧಾನಿ ದೇವೇಗೌಡರ ಮೂರ್ತಿಗೆ ಭಕ್ತಿಯಿಂದ ನಮಸ್ಕರಿಸಿ ತೆರಳುತ್ತಾರೆ.

ಅನ್ನದಾತರ ಅರಾಧ್ಯ ದೈವ ಈ ರೈತ ಪ್ರಭುಗೌಡ ಈ ರೀತಿ ದೇವೇಗೌಡರ ಮೂರ್ತಿ ಪ್ರತಿಷ್ಠಾಪನೆ ಮಾಡಲು ಪ್ರಮುಖ ಕಾರಣವೂ ಇದೆ. ಹೆಚ್.ಡಿ. ದೇವೇಗೌಡರು ಈ ಹಿಂದೆ ಪ್ರಧಾನಿಯಾಗಿದ್ದ ವೇಳೆಯಲ್ಲಿ ರಾಜ್ಯಕ್ಕೆ ಹಲವಾರು ನೀರಾವರಿ ಯೋಜನೆಗಳನ್ನ ಜಾರಿಗೆ ತಂದಿದ್ದಾರೆ. ಆ ಯೋಜನೆಗಳಲ್ಲಿ ಪ್ರಮುಖವಾದದ್ದು ಕೃಷ್ಣಾ ಕೊಳ್ಳ ನೀರಾವರಿ ಯೋಜನೆ.‌ ಇನ್ನು ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೆ ತರುವ ಮೂಲಕ ಅಂದು ಮಾಜಿ ಪ್ರಧಾನಿ ದೇವೇಗೌಡರು ಅನ್ನದಾತರ ಅರಾಧ್ಯ ದೈವ ಎಂದೇ ಕರೆಸಿಕೊಂಡಿದ್ದು, ಆ ಸಂದರ್ಭದಲ್ಲೆ ರೈತರು ದೇವೇಗೌಡರಿಗೆ ಮಣ್ಣಿನ ಮಗನೆಂದು ಅಭಿಮಾನದಿಂದ ಕರೆದಿದ್ದರು.

raichur devegowda model

ರೈತ ಪ್ರಭುಗೌಡ

ಸದ್ಯ ದೇವದುರ್ಗ ತಾಲೂಕಿನ ಗಾಣದಾಳ ಗ್ರಾಮದ ರೈತ ಪ್ರಭುಗೌಡ ತನ್ನ ಜಮೀನಿಗೆ ದೇವೇಗೌಡರು ಅಂದು ಜಾರಿಗೆ ತಂದಿರುವ ಕೃಷ್ಣ ಮೇಲ್ದಂಡೆ ಯೋಜನೆ ವ್ಯಾಪ್ತಿಯ ನಾರಾಯಣಪುರ ಬಲದಂಡೆ ಕಾಲುವೆಯ 10ನೇ ವಿತರಣ ಕಾಲುವೆ ಮೂಲಕ ನೀರು ಪಡೆದು ಭತ್ತ ಬೆಳೆಯುತ್ತಿದ್ದಾರೆ. ದೇವೇಗೌಡರು ಅಂದು ಜಾರಿಗೆ ತಂದಿದ್ದ ಕೃಷ್ಣ ಮೇಲ್ದಂಡೆ ಯೋಜನೆಯಿಂದಾಗಿ ಇಂದು ತಮ್ಮ ಬದುಕು ಹಸನಾಗಿದೆ ಎಂಬುದು ರೈತ ಪ್ರಭುಗೌಡರ ಅಭಿಮಾನದ ಮಾತು.

raichur devegowda model

ರೈತ ಪ್ರಭುಗೌಡ ಭಕ್ತಿಯಿಂದ ದೇವೆಗೌಡರ ಮೂರ್ತಿಯನ್ನು ನಿರ್ಮಿಸಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆ: ಆಲಮಟ್ಟಿ, ಬಸವಸಾಗರ ಜಲಾಶಯ ಸೇರಿದಂತೆ ಕೃಷ್ಣಾ ನದಿಯಿಂದ ಹರಿದು ಬರುವ ನೀರನ್ನ ಭರಪೂರಾಗಿ ಬಳಸಿಕೊಳ್ಳುವ ಮೂಲಕ ಉತ್ತರ ಕರ್ನಾಟಕ ಭಾಗದ ರೈತರ ಜಮೀನು ಹಸಿರಾಗಿಸುವ ಕನಸು ನನಸು ಮಾಡಿದ್ದು ದೇವೇಗೌಡರು. ಅಂದು ಜಾರಿಗೆ ಬಂದ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳು ಇಂದಿಗೂ ನಡೆದಿವೆ‌. ಕೃಷ್ಣಾ ಮೇಲ್ದಂಡೆ ಯೋಜನೆಯ ಎರಡು ಹಂತದ ಕಾಮಗಾರಿಗಳನ್ನ ಪೂರ್ಣಗೊಳಿಸಲಾಗಿದ್ದು, ಈಗಾಗಲೇ ಲಕ್ಷಾಂತರ ರೈತರ ಜಮೀನಿಗೆ ನೀರು ಹರಿಸಲಾಗುತ್ತಿದೆ.

raichur devegowda model

5 ಲಕ್ಷ ವೆಚ್ಚದಲ್ಲಿ ರೈತ ಪ್ರಭುಗೌಡ ಅವರ ಜಮೀನಿನಲ್ಲಿ ಮೂರ್ತಿ ನಿರ್ಮಾಣ

ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗಳು ನಡೆಯುತ್ತಿದ್ದು ಮುಗಿಯುವ ಹಂತಕ್ಕೆ ತಲುಪಿವೆ. ಈ ಮೂರನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆ ಸಂಪೂರ್ಣವಾಗಿ ಜಾರಿಗೆ ಬಂದ ರಾಯಚೂರು ಜಿಲ್ಲೆಯ ರಾಯಚೂರು ತಾಲೂಕಿನ ಕೊನೆ ಭಾಗದ ರೈತರ ಜಮೀನಿಗೂ ಕೃಷ್ಣಾ ನದಿ ನೀರು ಹರಿಯಲಿದೆ. ಈಗಾಗಲೇ ನಾರಾಯಣಪುರ ಬಲದಂಡೆ ಕಾಲುವೆ 95 ಕಿ.ಮೀ. ನಿಂದ 168 ಕಿ.ಮೀ. ವರೆಗೆ ವಿಸ್ತರಣೆ ಕಾಮಗಾರಿಯೂ ಮುಗಿದಿದ್ದು ಇನ್ನೇನು ನೀರು ಹರಿಸುವುದಷ್ಟೇ ಬಾಕಿ‌ ಉಳಿದಿದೆ. ಈಗಾಗಲೇ ವಿಸ್ತರಣೆಯಾದ ನಾರಾಯಣಪುರ ಬಲದಂಡೆ ಕಾಲುವೆಗೆ 18 ಟಿಎಂಸಿ ನೀರು ಕೂಡ ಹಂಚಿಕೆ ಮಾಡಲಾಗಿದೆ. ಹೀಗಾಗಿ ಈ ಕಾಲುವೆ ನೀರಿಗಾಗಿ ಬಿಸಿಲನಾಡಿನ ರೈತರು ದಶಕದಿಂದಲೂ ಕಾದು ಕುಳಿತಿದ್ದಾರೆ.

ಇನ್ನು ಕೃಷ್ಣಾ ನ್ಯಾಯಾಧೀಕರಣದ ಮೊದಲನೇ ತೀರ್ಪಿನ ಅನ್ವಯ ರಾಜ್ಯಕ್ಕೆ ಹಂಚಿಕೆಯಾದ 730 ಟಿಎಂಸಿ ನೀರು ಹಾಗೂ ಕೃಷ್ಣಾ ನ್ಯಾಯಾಧೀಕರಣದ ಎರಡನೇ ಐತೀರ್ಪಿನಲ್ಲಿ ರಾಜ್ಯಕ್ಕೆ ಹಂಚಿಕೆಯಾದ 177 ಟಿಎಂಸಿ ನೀರು ಬಳಸಿಕೊಳ್ಳಲು ರಾಜ್ಯಕ್ಕೆ ಅವಕಾಶವಿದೆ. ಆದರೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಸರ್ಕಾರಗಳು ಇಂದಿಗೂ ಈ ನೀರನ್ನ ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ವಿಶೇಷ ಆಸಕ್ತಿವಹಿಸುತ್ತಿಲ್ಲ. ಅದ್ಯಾವಾಗ ರಾಜ್ಯ ಸರ್ಕಾರ ಕೃಷ್ಣಾ ನ್ಯಾಯಾಧಿಕರಣದಲ್ಲಿ ಹಂಚಿಕೆಯಾದ ರಾಜ್ಯದ ಪಾಲಿನ ನೀರನ್ನ ಸಂಪೂರ್ಣವಾಗಿ ಬಳಸಿಕೊಳ್ಳುತ್ತದೆಯೋ ಅವಾಗಲೇ ಮಾಜಿ ಪ್ರಧಾನಿ ದೇವೇಗೌಡರು ಜಾರಿಗೆ ತಂದಿರುವ ನೀರಾವರಿ ಯೋಜನೆಗಳು ಸಾರ್ಥಕವಾಗಲಿವೆ ಎಂಬುದರಲ್ಲಿ ಸಂದೇಹ ಇಲ್ಲ.

ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ಇಂದಿಗೂ ಲಕ್ಷಾಂತರ ಅನ್ನದಾತರು ಮಾಜಿ ಪ್ರಧಾನಿ ದೇವೇಗೌಡರನ್ನ ನೆನಪಿಸಿಕೊಳುತ್ತಾರೆ. ಅಂದು ದೇವೇಗೌಡರು ಜಾರಿಗೆ ತಂದಿರುವ ನೀರಾವರಿ ಯೋಜನೆಗಳಿಂದ ಇಂದು ಅಸಂಖ್ಯಾತ ಅನ್ನದಾತರ ಬದುಕು ಹಸುನಾಗಿದ್ದಂತು ಸತ್ಯ. ಹೀಗಾಗಿ ಮಾಜಿ ಪ್ರಧಾನಿ ದೇವೇಗೌಡರು ಜಾರಿಗೆ ತಂದಿರುವ ನೀರಾವರಿ ಯೋಜನೆಯ ಮೂಲಕ ಬದುಕು ರೂಪಿಸಿಕೊಂಡ ರೈತರಲ್ಲಿ ದೇವದುರ್ಗದ ಈ ರೈತ ಪ್ರಭುಗೌಡ ಕೂಡ ಒಬ್ಬರು ಎನ್ನುವುದು ಇಲ್ಲಿ ವಿಶೇಷ.

ಮಾಜಿ ಪ್ರಧಾನಿ ದೇವೇಗೌಡರು ಜಾರಿಗೆ ತಂದಿರುವ ನೀರಾವರಿ ಯೋಜನೆಗಳು ಇಂದಿಗೂ ಉತ್ತರ ಕರ್ನಾಟಕ ಭಾಗದ ಜನರ ಮನಸಲ್ಲಿ ನೆಲೆಯೂರಿವೆ. ಅಂದು ದೇವೇಗೌಡರು ಜಾರಿಗೆ ತಂದಿರುವ ನೀರಾವರಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದರೆ ಉತ್ತರ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಗಳ ರೈತರ ಬದುಕು ಹಸಿರಾಗಲಿದೆ ಅಂದರೆ ಬಹುಶಃ ಅತಿಶಯೋಕ್ತಿಯಾಗಲಾರದು ಎಂದು ರಾಯಚೂರು ಜಿಲ್ಲೆಯ ನ್ಯಾಯವಾದಿ ಎನ್. ಶಿವಶಂಕರ್ ಹೇಳಿದರು.

ಪ್ರಾದೇಶಿಕ ಪಕ್ಷ ಉಳಿಸಲು ಶಕ್ತಿ ಮೀರಿ ಪ್ರಯತ್ನಿಸುವೆ; ಸರ್ಕಾರ ತೆಗೆಯುವ ಕೆಲಸದಲ್ಲಿ ನಾನು ಭಾಗಿಯಾಗಲ್ಲ: ಹೆಚ್.ಡಿ. ದೇವೇಗೌಡ