ಮ್ಯಾಂಡಾಸ್ ಚಂಡಮಾರುತದ ಅಬ್ಬರಕ್ಕೆ ಕಂಗಾಲಾದ ರಾಜ್ಯದ ರೈತರು
ಮಾಂಡೋಸ್ ಚಂಡಮಾರುತದಿಂದ ರಾಜ್ಯಾದ್ಯಂತ ಮಳೆ ಸುರಿಯುತ್ತಿದ್ದು, ರೈತರು ಹೈರಾಣಾಗಿದ್ದಾರೆ. ನಿರಂತರ ಮಳೆಯಿಂದ ಈಗಾಗಲೇ ಬಂದ ಬೆಳೆಯನ್ನು ಕಟಾವು ಮಾಡಲಾಗದೇ ರೈತರು ಸಂಕಷ್ಟದಲ್ಲಿದ್ದಾರೆ.
ಕೋಲಾರ: ರಾಜ್ಯಾದ್ಯಂತ ಸತತವಾಗಿ ಮೂರು ದಿನಗಳಿಂದ ಸುರಿಯುತ್ತಿರುವ ಜಡಿ ಮಳೆಯಿಂದ ಟೊಮ್ಯಾಟೊ ಬೆಳೆ ನಾಶವಾಗಿವೆ. ತೇವಾಂಶ ಹೆಚ್ಚಾಗಿ ಟೊಮ್ಯಾಟೊ ಬೆಳೆಗೆ ಹೂಜಿ ಮತ್ತು ವೈರಸ್ ರೋಗಗಳು ಅಟ್ಯಾಕ್ ಮಾಡಿದ್ದು, ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದ್ದ ರೈತರು ಬೆಳೆ ನಾಶದಿಂದ ಕಂಗಾಲಾಗಿದ್ದಾರೆ. ಗಿಡದಲ್ಲಿರುವ ಟೊಮ್ಯಾಟೊ ಹಣ್ಣು ಕೀಳಲು ಆಗದೇ ತೋಟದಲ್ಲಿ ಬಿಟ್ಟಿದ್ದಾರೆ ರೈತರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಮ್ಯಾಂಡಾಸ್ ಚಂಡಮಾರುತದ ಪರಿಣಾಮ ಹೂ ಗಳ ಬೆಲೆಯಲ್ಲಿ ಭಾರಿ ಕುಸಿತ.
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹೂ ಬೆಳೆದ ಬೆಳೆಗಾರರು ಆತಂಕದಲ್ಲಿದ್ದಾರೆ. ಹೂಗಳಲ್ಲಿ ಮಳೆ ಹನಿ ಸೇರಿರುವ ಹಿನ್ನಲೆ ಬೆಲೆ ಕುಸಿತವಾಗಿದ್ದು, ಹೂ ಒದ್ದೆಯಾಗಿರುವ ಕಾರಣಕ್ಕೆ ಹೂ ಕೊಂಡುಕೊಳ್ಳಲು ವರ್ತಕರು ಹಿಂದೇಟು ಹಾಕುತ್ತಿದ್ದಾರೆ. ತರೇವಾರಿ ಹೂ ಬೆಳೆ ಹಾಗೂ ಮಾರುಕಟ್ಟೆಗೆ ಖ್ಯಾತಿಯಾಗಿದ್ದ ಚಿಕ್ಕಬಳ್ಳಾಪುರ, ಸಾವಿರಾರು ಹೆಕ್ಟರ್ ಪ್ರದೇಶಗಳಲ್ಲಿ ಹೂ ಬೆಳೆಯಲಾಗುತ್ತಿತ್ತು. ಇದ್ದಕ್ಕಿದ್ದ ಹಾಗೆ ಹೂ ಗಳ ಬೆಲೆಯಲ್ಲಿ ಭಾರಿ ಕುಸಿತವಾಗಿದೆ. ಕೆ.ಜಿ ರೋಜ್ ಹೂ ಗೆ 40 ರೂಪಾಯಿ, ಸೇವಂತಿಗೆ 20 ರೂಪಾಯಿ, ಚೆಂಡೂ ಹೂ ಗೆ 10 ರೂ ಸೇರಿದಂತೆ ಬಹುತೇಕ ಎಲ್ಲಾ ಹೂಗಳ ಬೆಲೆ ಕುಸಿತವಾಗಿದ್ದು, ರೈತ ಕಣ್ಣೀರು ಹಾಕುತ್ತಿದ್ದಾನೆ.
ರಾಮನಗರ ಜಿಲ್ಲೆಯಲ್ಲಿ ನಿರಂತರ ಮಳೆಗೆ ನೆಲಕಚ್ಚಿದ ರಾಗಿಬೆಳೆ
ರಾಮನಗರ: ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ರಾಗಿ ಬೆಳೆಗಾರರು ಕಂಗಾಲಾಗಿದ್ದಾರೆ. ಕಟಾವಿಗೆ ಬಂದ ರಾಗಿಬೆಳೆ ನೆಲಕಚ್ಚಿದ್ದು, ತೆನೆಯಲ್ಲಿ ಮೊಳಕೆ ಬರಲು ಆರಂಭಿಸಿದೆ. ಜಿಲ್ಲೆಯಲ್ಲಿ ಸುಮಾರು 65 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆ ಬೆಳೆಯಲಾಗುತ್ತಿದೆ. ಇದರ ಜೊತೆ ಮಾವು, ರೇಷ್ಮೆ ಹೆಚ್ಚಾಗಿ ಬೆಳೆಯುತ್ತಾರೆ. ಇದೀಗ ನಿರಂತರ ಮಳೆಯಿಂದಾಗಿ ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ. ಇದೇ ರೀತಿ ಮಳೆ ಮುಂದುವರೆದರೆ ರಾಗಿ ಬೆಳೆ ಸಂಪೂರ್ಣ ನಾಶವಾಗಲಿದೆ.
ನೆರೆ ರಾಜ್ಯಗಳಲ್ಲಿ ಮ್ಯಾಂಡಾಸ್ ಅಬ್ಬರದಿಂದ ರಾಯಚೂರಿನ ರೈತರು ತತ್ತರ
ರಾಯಚೂರು: ಮ್ಯಾಂಡಾಸ್ ಹೊಡೆತಕ್ಕೆ ರಾಯಚೂರಿನ ರೈತರು ಕಂಗಾಲಾಗಿದ್ದಾರೆ. ರಾಜ್ಯದಲ್ಲೇ ಅತೀ ಹೆಚ್ಚು ಭತ್ತ ಬೆಳೆಯುವ ರಾಯಚೂರು ಜಿಲ್ಲೆ, ಕಟಾವಿನ ಹಂತದಲ್ಲಿದ್ದ ಭತ್ತ ಹಾಗೂ ರಾಶಿ ಮಾಡಲಾಗಿರುವ ಭತ್ತದಿಂದ ನಷ್ಟವಾಗುವ ಆತಂಕದಲ್ಲಿದ್ದಾನೆ. ಅಪಾರ ಪ್ರಮಾಣದ ಬೆಳೆ ಕಟಾವು ಮಾಡಿದ್ದ ರೈತರಲ್ಲಿ ಸಂಕಷ್ಟ ಶುರುವಾಗಿದೆ. ಏಕಾಏಕಿ ಸುರಿದ ಮಳೆಗೆ ರೈತರು ಹೈರಾಣಾಗಿದ್ದಾರೆ. ಬೆಳೆ ಕಟಾವು ಮಾಡಿ ರಾಶಿ ಮಾಡಿದ್ದ ರೈತರು ನಿರಂತರ ಮಳೆಯಿಂದ ಹತ್ತಿ ಬಿಡಿಸಲಾಗುತ್ತಿಲ್ಲ.
ಮ್ಯಾಂಡಾಸ್ ಚಂಡಮಾರುತದ ಮಳೆಗೆ ಭತ್ತ, ಹತ್ತಿ ನಾಶವಾಗುವ ಲಕ್ಷಣ ಕಾಣುತ್ತಿದೆ. ರಾಶಿ ಮಾಡಲಾಗುತ್ತಿದ್ದ ಸ್ಥಳಕ್ಕೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಕಟಾವಿನ ಹಂತಕ್ಕೆ ಬಂದಿದ್ದ ಹತ್ತಿ ಬೆಳೆಗೂ ಹಾನಿಯಾಗಿದೆ. ಹೀಗೆ ಮಳೆ ಮುಂದುವರೆದರೆ ಹತ್ತಿ, ಭತ್ತದ ಬೆಲೆ ನೆಲಕಚ್ಚುವ ಸಾಧ್ಯತೆಯಿದೆ. ಇರುವ ಭತ್ತ, ಹತ್ತಿ ರಕ್ಷಣೆಗೆ ಹರಸಾಹಸ ಪಡುತ್ತಿರುವ ರೈತರು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:10 am, Mon, 12 December 22