ಬಾಗಲಕೋಟೆ: ಕಷ್ಟಪಟ್ಟು ದುಡಿದು ಗಿಡಗಳಿಗೆ ಆರೈಕೆ ಮಾಡಿ, ಉತ್ತಮ ಬೆಳೆಗೆ ಕಾಯುವ ರೈತರಿಗೆ ಬಹುತೇಕ ಸಂದರ್ಭದಲ್ಲಿ ನಿರಾಶೆಯೇ ಎದುರಾಗುವುದು ನಿಜಕ್ಕೂ ದುರದೃಷ್ಟಕರ ಸಂಗತಿ. ಇತ್ತ ಬೆಳೆ ಕೈಗೆ ಬರುವಾಗ ಅತ್ತ ಮಾರುಕಟ್ಟೆಯಲ್ಲಿ ಒಂದೇ ಸಮನೆ ಬೆಲೆ ಕುಸಿದರೆ ರೈತರ ಕಷ್ಟ ಕೇಳುವವರು ಯಾರು? ಎಂಬಂತಾಗಿದೆ ಪರಿಸ್ಥಿತಿ. ಇದೀಗ ಏಕಾಏಕಿ ಟೊಮ್ಯಾಟೋ ದರ ಕುಸಿತ ಕಂಡಿರುವುದರಿಂದ ಮಾರುಕಟ್ಟೆಯಲ್ಲಿ ಯಾರೂ ಟೊಮ್ಯಾಟೋ ಕೊಳ್ಳಲು ಮುಂದಾಗುತ್ತಿಲ್ಲ ಎಂದು ಜಿಲ್ಲೆಯ ಹುನಗುಂದ ಪಟ್ಟಣದ ರೈತರು ಆಕ್ರೋಶ ಹೊರಹಾಕಿದ್ದಾರೆ.
ಬೆಳಗಲ್ ಗ್ರಾಮದ ಪರಶುರಾಮ ರತ್ನಾಕರ್ ರಸ್ತೆಗೆ ಟೊಮ್ಯಾಟೋ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಂಗಾಲಾದ ರೈತರು ಆರೈಕೆ ಮಾಡಿ ಬೆಳೆದ ಎಲ್ಲಾ ಟೊಮ್ಯಾಟೋಗಳನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೊಮ್ಯಾಟೋ ದರ ಕುಸಿದಿದೆ, ಇದರಿಂದ ನಾನು ಬೆಳೆದ ಟ್ಯೊಮಾಟೋವನ್ನು ಮಾರುಕಟ್ಟೆಯಲ್ಲಿ ಯಾರೂ ಕೊಳ್ಳುತ್ತಿಲ್ಲ ಎಂದು ರೈತ ಬೇಸರ ವ್ಯಕ್ತಪಡಿಸಿದ್ದಾರೆ.
ಮನೆಯಿಂದ ಪ್ರಯಾಣ ಬೆಳೆಸಿ ಮಾರುಕಟ್ಟೆಗೆ ತಂದ ಟೊಮ್ಯಾಟೊವನ್ನು ಹಿಂದಿರುಗಿ ತೆಗೆದುಕೊಂಡು ಹೋಗಲು ಮನಸ್ಸು ಒಪ್ಪಲಿಲ್ಲ. ಆದ್ದರಿಂದ ರಸ್ತೆಯಲ್ಲಿ ಇಟ್ಟಿದ್ದೇನೆ. ಬಡವರೆಲ್ಲ ಟೊಮ್ಯಾಟೋವನ್ನು ಆಯ್ದು ಕೊಂಡೊಯ್ಯುತ್ತಿದ್ದಾರೆ. ನಾನು ಅವರಲ್ಲಿ ಒಂದು ರೂಪಾಯಿಯನ್ನೂ ನಿರೀಕ್ಷಿಸುವುದಿಲ್ಲ. ದರ ಕುಸಿತ ಕಂಡಿರುವುದರಿಂದ ರೈತರಿಗೆ ಜೀವನ ನಡೆಸಲು ಭೀಕರ ಪರಿಸ್ಥಿತಿ ಎದುರಾಗಿದೆ. ಬೆಳೆದ ಬೆಲೆಗೆ ಉತ್ತಮ ಮಾರುಕಟ್ಟೆ ಬೇಕು. ಸರ್ಕಾರ ಈ ಕುರಿತು ಗಮನ ಹರಿಸಬೇಕು ಎಂದು ರೈತರು ತಮ್ಮ ಅಳಲನ್ನು ಹೊರಹಾಕಿದ್ದಾರೆ.