ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ; ಕೆಕೆಆರ್ಡಿಬಿಯಿಂದ 15 ಕೋಟಿ ಮಂಜೂರು
ಕೆಕೆಆರ್ಡಿಬಿಯಿಂದ ಬಳ್ಳಾರಿ ಜಿಲ್ಲೆಯ ಆಕ್ಸಿಜನ್ ಪ್ಲಾಂಟ್ಗಳ ನಿರ್ಮಾಣಕ್ಕೆ ಈಗಾಗಲೇ ಕ್ರಿಯಾ ಯೋಜನೆ ಸಲ್ಲಿಕೆಯಾಗಿದ್ದು, ಕೆಕೆಆರ್ಡಿಬಿಯಿಂದ 15 ಕೋಟಿ ಮಂಜೂರು ಆಗಿದೆ. ಇನ್ನೂ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳಲ್ಲೂ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲು ಕೆಕೆಆರ್ಡಿಬಿ ಮುಂದಾಗಿದೆ.
ಬಳ್ಳಾರಿ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಪ್ರಸರಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಆದರೆ ಕೊರೊನಾ ಆರಂಭವಾದ ದಿನಗಳಲ್ಲಿ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಉಂಟಾಗಿತ್ತು, ಬೆಡ್ ಕೊರತೆ ಉಂಟಾಗಿತ್ತು. ಜತೆಗೆ ಸಮರ್ಪಕವಾಗಿ ಆಕ್ಸಿಜನ್ ಸಿಗದೆ ಸೋಂಕಿತರು ಸಾವನ್ನಪ್ಪಿದ್ದಾರೆ. ಒಟ್ಟಾರೆ ಎರಡನೇ ಅಲೆ ಸೃಷ್ಟಿಸಿದ ಅವಾಂತರ ಮನುಕುಲಕ್ಕೆ ಪಾಠದಂತಾಗಿತ್ತು. ಆದರೆ ಈಗ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಮುಂದೆ ಆಕ್ಸಿಜನ್ ಸಮಸ್ಯೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ನೂತನ ಯೋಜನೆ ಜಾರಿಗೆ ತಂದಿದೆ. ಆ ಮೂಲಕ ಬಳ್ಳಾರಿ ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲೂ ಆಕ್ಸಿಜನ್ ಉತ್ಪಾದನೆ ಪ್ಲಾಂಟ್ ತಲೆ ಎತ್ತಲಿದೆ.
ಕೊರೊನಾ ಎರಡನೇ ಅಲೆ ಪೂರ್ಣಗೊಳ್ಳುವ ಮೊದಲೇ ಈಗ ಮೂರನೇ ಅಲೆ ಭೀತಿ ಶುರುವಾಗಿದೆ. ಹೀಗಾಗಿ ಮನ್ನೇಚ್ಚರಿಕೆಯ ಕ್ರಮವಾಗಿ ಕಲ್ಯಾಣ ಕರ್ನಾಟಕ ಪ್ರದೇಶಾವೃದ್ಧಿ ಮಂಡಳಿ ಕೆಕೆಆರ್ಡಿಬಿ ವ್ಯಾಪ್ತಿಯ 7 ಜಿಲ್ಲೆಗಳಲ್ಲಿ ಈಗ ಆಕ್ಸಿಜನ್ ಪ್ಲಾಂಟ್ ನಿರ್ಮಿಸಲು ಮುಂದಾಗಿದೆ.ಈ ಸಂಬಂಧ ಬಳ್ಳಾರಿ ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲೂ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲು ಕ್ರಿಯಾ ಯೋಜನೆ ರೂಪಗೊಂಡಿದ್ದು, ಶೀಘ್ರದಲ್ಲಿ ಆಕ್ಸಿಜನ್ ಪ್ಲಾಂಟ್ ಉತ್ಪಾದನೆ ಘಟಕಗಳು ಆರಂಭವಾಗಿದೆ ಎಂದು ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ತಿಳಿಸಿದ್ದಾರೆ.
ಇನ್ನು ಕೆಕೆಆರ್ಡಿಬಿಯಿಂದ ಬಳ್ಳಾರಿ ಜಿಲ್ಲೆಯ ಆಕ್ಸಿಜನ್ ಪ್ಲಾಂಟ್ಗಳ ನಿರ್ಮಾಣಕ್ಕೆ ಈಗಾಗಲೇ ಕ್ರಿಯಾ ಯೋಜನೆ ಸಲ್ಲಿಕೆಯಾಗಿದ್ದು, ಕೆಕೆಆರ್ಡಿಬಿಯಿಂದ 15 ಕೋಟಿ ಮಂಜೂರು ಆಗಿದೆ. ಇನ್ನೂ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳಲ್ಲೂ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲು ಕೆಕೆಆರ್ಡಿಬಿ ಮುಂದಾಗಿದೆ. ಇನ್ನು ಈ ಮೊದಲು ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಕೊವಿಡ್ ನಿರ್ವಹಣೆಗಾಗಿ ಸುಮಾರು 100 ಕೋಟಿ ಅಧಿಕ ಅನುದಾನವನ್ನು ಕೆಕೆಆರ್ಡಿಬಿ ನೀಡಿದೆ.
ಆಕ್ಸಿಜನ್ ಪ್ಲಾಂಟ್ ಜೊತೆಗೆ ಅಗತ್ಯ ಇರುವ ಆಂಬ್ಯುಲೇನ್ಸ್ಗಳ ಖರೀದಿಗೆ ಕೂಡ ಕ್ರಮ ಕೈಗೊಳ್ಳಲಾಗಿದೆ.ಈಗ ಬಳ್ಳಾರಿ ಜಿಲ್ಲೆಗೆ ಹತ್ತು ಅಂಬ್ಯುಲೆನ್ಸ್ ಹಾಗೂ 25 ವೆಂಟಿಲೇಟರ್ಗಳನ್ನು ಖರೀದಿ ಮಾಡಲಾಗುತ್ತಿದೆ. ಈಗಾಲೇ ಬಳ್ಳಾರಿ ಜಿಲ್ಲೆಯಲ್ಲಿ ಲಭ್ಯ ಇರುವ ಜಿಲ್ಲಾ ಖನಿಜ ನಿಧಿಯಿಂದಲೇ ಕೊವಿಡ್ ನಿರ್ವಹಣೆಗಾಗಿ ಅನುದಾನ ಬಳಕೆ ಮಾಡಿಕೊಡಲಾಗುತ್ತಿದೆ. ಇದರ ಜೊತೆಗೆ ಕೆಕೆಆರ್ಡಿಬಿ ಅನುದಾನವನ್ನು ಕೂಡ ಕೊವಿಡ್ ನಿರ್ವಹಣೆಗೆ ಬಳಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.
ಕೊರೊನಾ ಎರಡನೇ ಅಲೆ ಇನ್ನೂ ಮುಗಿದಿಲ್ಲ. ಈ ವೇಳೆಗಾಗಲೇ ಈಗ ಮೂರನೇ ಅಲೆಯ ಭೀತಿ ಶುರುವಾಗಿದೆ. ಈ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಆಕ್ಸಿಜನ್ ಕೊರತೆಯಾಗಬಾರದು ಎನ್ನುವ ದೃಷ್ಟಿಯಿಂದ ಕೆಕೆಆರ್ಡಿಬಿ ಆಕ್ಸಿಜನ್ ಉತ್ಪಾದನೆ ಪ್ಲಾಂಟ್ ನಿರ್ಮಾಣಕ್ಕೆ ಮುಂದಾಗಿದ್ದು, ಇದರಿಂದ ಈ ಭಾಗದ ಜನರಿಗೆ ತುಂಬಾ ಅನುಕೂಲವಾಗಲಿದೆ ಎನ್ನುವುದು ಮಾತ್ರ ನಿಜ.
ಇದನ್ನೂ ಓದಿ:
ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳು ಸೋಮವಾರದಿಂದ ಬಂದ್: ಪ್ರತಿಭಟನೆಗೆ ಮುಂದಾದ ಖಾಸಗಿ ಶಾಲಾ ಒಕ್ಕೂಟ
ಕೆಂಪು ತೊಗರಿಗೆ ವಿದೇಶದಲ್ಲೂ ಡಿಮ್ಯಾಂಡ್: ಕಲ್ಯಾಣ ಕರ್ನಾಟಕ ರೈತರ ಮೊಗದಲ್ಲಿ ಮಂದಹಾಸ