Ramesh Jarkiholi | ರಮೇಶ್​ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣದಲ್ಲಿ ಎಫ್‌ಐಆರ್ ಅನಿವಾರ್ಯ- ಏಕೆ?

Ramesh Jarkiholi | ರಮೇಶ್​ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣದಲ್ಲಿ ಎಫ್‌ಐಆರ್ ಅನಿವಾರ್ಯ- ಏಕೆ?
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ

ಪೊಲೀಸರು ಹೊಸ ಸಂಪ್ರದಾಯ ಆರಂಭಿಸುತ್ತಿದ್ದಾರೆ. ಹೈಕೋರ್ಟ್ ನಲ್ಲಿ ಯಾರಾದರೂ ಇದನ್ನು ಪ್ರಶ್ನಿಸಿದ್ರೆ ಪೊಲೀಸರಿಗೆ ಹಿನ್ನಡೆಯಾಗಬಹುದು. ಮೊದಲು ಎಫ್‌ಐಆರ್ ದಾಖಲಿಸಿ ನಂತರ ವ್ಯಕ್ತಿಗಳನ್ನು ಕರೆದು ತನಿಖೆ ನಡೆಸಿ ಅಂತ ಹೈಕೋರ್ಟ್ ಸೂಚಿಸಬಹುದು.

sadhu srinath

|

Mar 13, 2021 | 4:30 PM

ರಮೇಶ್ ಜಾರಕಿಹೊಳಿ ಸೆಕ್ಸ್‌ ಸಿಡಿ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಆರಂಭವಾಗಿದೆ. ಆದ್ರೆ ಪೊಲೀಸ್ ಅಧಿಕಾರಗಳೇ ಇಲ್ಲದೇ ಕೇವಲ ಸರ್ಕಾರದ ಆದೇಶದ ಮೇಲೆ ನಡೆಯುತ್ತಿರುವ ಎಸ್‌ಐಟಿ ತನಿಖೆಗೆ ಕಾನೂನಿನಡಿ ಯಾವ ಮಾನ್ಯತೆಯೂ ಇಲ್ಲ. ಒಂದು ಪ್ರಕರಣ ಕಾಗ್ನಿಜಬಲ್ (cognisable) ಅಥವಾ ಸಂಜ್ಞೇಯ ಅಪರಾಧ ಎಂದು ಕಂಡು ಬಂದ ಕೂಡಲೇ ಎಫ್‌ಐಆರ್ ದಾಖಲಿಸುವುದು ಪೊಲೀಸರ ಕರ್ತವ್ಯ. ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ನೊಂದ ವ್ಯಕ್ತಿಯಾಗಲೀ, ಪ್ರತ್ಯಕ್ಷದರ್ಶಿಯಾಗಲೀ ಈವರೆಗೆ ದೂರು ನೀಡಿಲ್ಲ. ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಈ ಪ್ರಕರಣದಲ್ಲಿ ಪ್ರತ್ಯಕ್ಷ ದರ್ಶಿಯೂ ಅಲ್ಲ, ನೊಂದ ವ್ಯಕ್ತಿಯೂ ಅಲ್ಲ. ಕಾಗ್ನಿಜಬಲ್ ಪ್ರಕರಣಗಳಲ್ಲಿ ಯಾರು ಬೇಕಿದ್ದರೂ ದೂರು ಸಲ್ಲಿಸಬಹುದಾದರೂ ಇಲ್ಲಿ ಇಬ್ಬರು ವ್ಯಕ್ತಿಗಳ ಖಾಸಗಿತನದ ಪ್ರಶ್ನೆಯೂ ಇರುವುದರಿಂದ ಕೇವಲ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಗೊಂಡ ದೃಶ್ಯಗಳನ್ನು ಇಟ್ಟುಕೊಂಡು ಇದು ಲೈಂಗಿಕ ದೌರ್ಜನ್ಯ ಎಂದು ಹೇಳುವುದೂ ಸಮಂಜಸವಾಗುವುದಿಲ್ಲ.

ಇದನ್ನು ದೂರೆಂದು ಪರಿಗಣಿಸಿದ್ದೇ ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುವ ಎಲ್ಲಾ ಸೆಕ್ಸ್ ದೃಶ್ಯದ ಸಿಡಿಗಳಿಗೂ 3ನೇ ವ್ಯಕ್ತಿಗಳು ದೂರು ಸಲ್ಲಿಸಬಹುದೇ ಎಂಬ ಪ್ರಶ್ನೆಯೂ ಏಳುವುದು ಸಹಜ. ಆದರೆ ಸರ್ಕಾರದ ಸಚಿವರು ಹಾಗೂ ಮಹಿಳೆಯನ್ನೊಳಗೊಂಡ ಅಶ್ಲೀಲ ದೃಶ್ಯ, ಸಿಡಿ ನಕಲಿ ಎಂಬ ಸಚಿವರ ಹೇಳಿಕೆ, ದಿನೇಶ್ ಕಲ್ಲಹಳ್ಳಿ ದೂರಿನಲ್ಲಿರುವ ಅಂಶಗಳೆಲ್ಲವನ್ನು ಗಮನಿಸಿದಾಗ ಇಲ್ಲಿ ಒಂದು ಗಂಭೀರ ಕಾಗ್ನಿಜಬಲ್ ಅಥವಾ ಸಂಜ್ಞೇಯ ಅಪರಾಧ ನಡೆದಿರುವುದನ್ನು ಸೂಚಿಸುತ್ತಿವೆ. ಆದರೆ ಸರ್ಕಾರ ರಮೇಶ್ ಜಾರಕಿಹೊಳಿ ಪತ್ರ ಆಧರಿಸಿ ಎಸ್‌ಐಟಿ ರಚಿಸಿರುವುದೂ ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ.

ಸರ್ಕಾರ ರಚಿಸಿರುವ ಎಸ್‌ಐಟಿ ಕೇವಲ ವಿಚಾರಣಾ ಆಯೋಗದಂತೆ ಕಾರ್ಯನಿರ್ವಹಿಸಬಹುದೇ ಹೊರತು ಪೊಲೀಸ್ ಅಧಿಕಾರಗಳೇ ಇಲ್ಲ. ಎಫ್‌ಐಆರ್ ದಾಖಲಿಸಿದ ಬಳಿಕವಷ್ಟೇ ಸಂಬಂಧಪಟ್ಟವರಿಗೆ ನೋಟಿಸ್ ನೀಡುವ, ಹೇಳಿಕೆ ದಾಖಲಿಸಿಕೊಳ್ಳುವ, ಬಂಧಿಸುವ, ಕೋರ್ಟ್ ಮುಂದೆ ಹಾಜರುಪಡಿಸುವ ಅಧಿಕಾರವು ತನಿಖಾಧಿಕಾರಿಗೆ ಪ್ರಾಪ್ತವಾಗುತ್ತದೆ. ಆದರೆ ಈಗ ರಚಿಸಿರುವ ಎಸ್‌ಐಟಿ ಗೆ ಈ ಯಾವುದೇ ಅಧಿಕಾರಗಳಿಲ್ಲ. ಹೀಗಾಗಿ ಕೆಲವರನ್ನು ಕರೆತಂದು ವಿಚಾರಣೆಗೆ ಒಳಪಡಿಸಿ ಸರ್ಕಾರಕ್ಕೆ ವರದಿ ನೀಡುವ ಕೆಲಸವನ್ನಷ್ಟೇ ಈ ಎಸ್‌ಐಟಿ ಮಾಡುತ್ತಿದೆಯೇ ಹೊರತು, ಅಪರಾಧದ ತನಿಖೆ ನಡೆಸುತ್ತಿಲ್ಲ. ಸರ್ಕಾರವೂ ಕೂಡಾ ತನ್ನ ಆದೇಶದಲ್ಲಿ ವರದಿ ನೀಡಬೇಕೆಂದು ಸೂಚಿಸಿದೆಯೇ ಹೊರತು ವಿಚಾರಣೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಉದ್ದೇಶ ಸದ್ಯ ಸರ್ಕಾರ ಹೊರಡಿಸಿರುವ ಆದೇಶದಲ್ಲಿರುವಂತೆ ಕಾಣುತ್ತಿಲ್ಲ.

ಕಾಗ್ನಿಜಬಲ್ ಅಥವಾ ಸಂಜ್ಞೇಯ ಅಪರಾಧವೆಂದರೇನು?: ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನೂ ಸಂಜ್ಞೇಯ ಅಥವಾ ಅಸಂಜ್ಞೇಯ ಪ್ರಕರಣಗಳೆಂದು ವಿಂಗಡಿಸಲಾಗಿದೆ. ವಾರೆಂಟ್ ಇಲ್ಲದೇ ಆರೋಪಿಗಳನ್ನು ಬಂಧಿಸಬಹುದಾದ ಪ್ರಕರಣಗಳನ್ನು ಕಾಗ್ನಿಜಬಲ್ ಅಥವಾ ಸಂಜ್ಞೇಯ ಅಪರಾಧಗಳೆಂದು ಪರಿಗಣಿಸಲಾಗಿದೆ. ಲೈಂಗಿಕ ದೌರ್ಜನ್ಯ, ಸುಲಿಗೆ, ಅಶ್ಲೀಲ ದೃಶ್ಯ ಪ್ರಸಾರ, ಸಂಚು ಇವೆಲ್ಲವೂ ಐಪಿಸಿ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕಾಗ್ನಿಜಬಲ್ ಪ್ರಕರಣಗಳಾಗಿವೆ.

ಅದೇ ನಾನ್​-ಕಾಗ್ನಿಜೆಬಲ್​ ಒಫೆನ್ಸ್​ನಲ್ಲಿ ಕೋರ್ಟ್​ನ ಒಪ್ಪಿಗೆ ಪಡೆದು (warrant) ಪಡೆದು ಆರೋಪಿಯೊಬ್ಬರನ್ನು ಬಂಧಿಸಬಹುದು. ಆದರೆ ಕಾಗ್ನಿಜೆಬಲ್ ಒಫೆನ್ಸ್​ನಲ್ಲಿ ಕೊರ್ಟ್​ನ ಪೂರ್ವಾನುಮತಿ ಬೇಕೆಂದೇನೂ ಇಲ್ಲ.​

ಎಸ್‌ಐಟಿ ವಿಚಾರಣೆಯಿಂದ ಆರೋಪಿಗಳಿಗೇ ಅನುಕೂಲ!: ಎಸ್‌ಐಟಿ ಗೆ ಬಂಧಿಸುವ ಅಧಿಕಾರ ಇಲ್ಲದಿರುವುದರಿಂದ ಆರೋಪಿ ತಪ್ಪು ಮಾಡಿದ್ದಾನೆಂದು ವಿಚಾರಣೆ ವೇಳೆ ಕಂಡುಬಂದರೂ ಆತನನ್ನು ಬಂಧಿಸುವಂತಿಲ್ಲ ಅಲ್ಲದೇ 24 ಗಂಟೆಗಳ ಕಾಲ ವಶದಲ್ಲೂ ಇಟ್ಟುಕೊಳ್ಳುವಂತಿಲ್ಲ. ಹೀಗಾಗೇ ನಿನ್ನೆ ಐವರ ವಿಚಾರಣೆ ನಡೆಸಿದ್ದ ಎಸ್‌ಐಟಿ ಪೊಲೀಸರು ರಾತ್ರಿ ವೇಳೆಗೆ ಅಷ್ಟೂ ಜನರನ್ನು ಬಿಟ್ಟು ಕಳುಹಿಸಿದ್ದರು. ಹೀಗೆ ಹೊರಬರುವ ಆರೋಪಿಗಳಿಗೆ ತಮ್ಮ ಮೇಲಿನ ಆರೋಪವೇನು? ಪೊಲೀಸರ ತನಿಖೆಯ ವಿಧಾನ ಹೇಗಿದೆ? ಎಂಬುದನ್ನು ಅರಿತುಕೊಂಡು ಉಳಿದ ಆರೋಪಿಗಳನ್ನು ಅಲರ್ಟ್ ಮಾಡಲು ಅನುಕೂಲವಾಗುತ್ತದೆ. ಹೀಗಾಗಿ ಕೆಲವು ಆರೋಪಿಗಳು ಸಾಕ್ಷ್ಯ ನಾಶದಲ್ಲಿ ತೊಡಗಬಹುದು, ಹಾಗೂ ನಿರೀಕ್ಷಣಾ ಜಾಮೀನು ಪಡೆಯಲೂ ಕೂಡಾ ಇವರು ಮುಂದಾಗಬಹುದು.

ಪೊಲೀಸರು ಎಫ್ಐಆರ್ ಹಾಕದೇ ಸಂಗ್ರಹಿಸುವ ಯಾವುದೇ ಸಾಕ್ಷ್ಯಗಳಿಗೂ ಕಾನೂನಿನಡಿ ಮಹತ್ವ ಇರುವುದಿಲ್ಲ. ಪ್ರಕರಣದ ಹಿಂದೆ ಪ್ರಭಾವಿಗಳಿರಬಹುದೆಂದು ಈಗಾಗಲೇ ಅಂದಾಜಿಸಲಾಗಿದೆ. ಹೀಗಿರುವಾಗ ಎಸ್‌ಐಟಿಯ ವಿಚಾರಣೆಯಿಂದ ಪ್ರಭಾವಿಗಳು ತಪ್ಪಿಸಿಕೊಳ್ಳಲು ಅನುಕೂಲವಾಗಬಹುದೇ ಹೊರತು ಪ್ರಯೋಜನವಂತೂ ಇಲ್ಲ. ಅಲ್ಲದೇ ಮುಂದೆ ಎಫ್‌ಐಆರ್ ದಾಖಲಾದರೂ ಪ್ರಕರಣ ರದ್ದುಪಡಿಸುವಂತೆ ಹೈಕೋರ್ಟ್ ಮೆಟ್ಟಿಲೇರಲೂ ಈ ಪ್ರಾಥಮಿಕ ವಿಚಾರಣೆಯನ್ನೇ ಆರೋಪಿಗಳ ಪರ ವಕೀಲರು ಆಯುಧವನ್ನಾಗಿ ಉಪಯೋಗಿಸಬಹುದು.

ಲಲಿತಾ ಕುಮಾರಿ vs ಉತ್ತರ ಪ್ರದೇಶ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಏನು ಹೇಳಿದೆ: ಪೊಲೀಸರಿಗೆ ನೀಡುವ ಯಾವುದೇ ಮಾಹಿತಿಯಲ್ಲಿ ಕಾಗ್ನಿಜಬಲ್ ಅಥವಾ ಸಂಜ್ಞೇಯವಾಗಿದ್ದರೆ ಪೊಲೀಸರು ತಕ್ಷಣ ಎಫ್‌ಐಆರ್ ದಾಖಲಿಸಿ ಪ್ರಕರಣದ ತನಿಖೆ ನಡೆಸಬೇಕು, ಪ್ರಾಥಮಿಕ ವಿಚಾರಣೆ ನಡೆಸಬಾರದೆಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಒಂದು ವೇಳೆ ಪೊಲೀಸರಿಗೆ ಕಾಗ್ನಿಜಲ್ ಪ್ರಕರಣದ ಮಾಹಿತಿ ಸಿಕ್ಕರೂ ಎಫ್‌ಐಆರ್ ದಾಖಲಿಸದಿದ್ದರೆ ಅಂತಹ ಪೊಲೀಸ್ ಅಧಿಕಾರಿಗಳ ವಿರುದ್ಧವೇ ಕ್ರಮ ಕೈಗೊಳ್ಳುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

ಪೊಲೀಸರಿಗೆ ಸಿಕ್ಕ ಮಾಹಿತಿಯಲ್ಲಿ ಕಾಗ್ನಿಜಬಲ್ ಪ್ರಕರಣದ ಅಂಶಗಳು ಇವೆಯೇ, ಇಲ್ಲವೇ ಎಂಬುದನ್ನು ತಿಳಿಯುವುದಷ್ಟೇ ಪ್ರಾಥಮಿಕ ತನಿಖೆಯ ಉದ್ದೇಶವೇ ಹೊರತು, ಮಾಹಿತಿಯಲ್ಲಿನ ಸತ್ಯಾಸತ್ಯತೆಯನ್ನು ಪರಿಶೀಲಿಸುವುದಲ್ಲ ಎಂದು ಲಲಿತಾ ಕುಮಾರಿ ಪ್ರಕರಣ ಹೇಳುತ್ತದೆ. ಸದ್ಯದ ಪ್ರಕರಣದಲ್ಲಿ ಸಂತ್ರಸ್ತೆ ಎನ್ನಲಾದ ಯುವತಿ ದೂರು ನೀಡಿಲ್ಲ. ಆದರೆ ಯುವತಿ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಅಶ್ಲೀಲ ಸಿಡಿ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗಿವೆ. ಈ ಸಿಡಿಯಲ್ಲಿ ಅಶ್ಲೀಲ ದೃಶ್ಯಗಳಿಗೆ ಅಡಿ ಬರಹ, ಧ್ವನಿ ನಿರೂಪಣೆ ಸೇರಿಸಿ ತಯಾರಿಸಲಾಗಿದೆ.

ಇಂತಹ ದೃಶ್ಯಗಳನ್ನು ಸೆರೆ ಹಿಡಿಯುವುದು, ಅದನ್ನು ಪ್ರಸಾರ ಮಾಡುವುದು ಕಾಗ್ನಿಜಬಲ್ ಅಥವಾ ಸಂಜ್ಞೇಯ ಪ್ರಕರಣವಾಗುತ್ತದೆ. ಹೀಗಾಗಿ ರಮೇಶ್ ಜಾರಕಿಹೊಳಿ ಪತ್ರ, ಸುದ್ದಿಗೋಷ್ಟಿ, ಅಥವಾ ದಿನೇಶ್ ಕಲ್ಲಹಳ್ಳಿ ದೂರು ಅಥವಾ ಇನ್ನಿತರೆ ವ್ಯಕ್ತಿಗಳು ನೀಡಿರುವ ಯಾವುದೇ ದೂರನ್ನು ಪೊಲೀಸರು ಪರಿಗಣಿಸಿದರೂ ಎಫ್‌ಐಆರ್ ದಾಖಲಿಸಬೇಕಿತ್ತು. ಲಭ್ಯವಿರುವ ಮಾಹಿತಿಗಳನ್ನು ಪರಿಶೀಲಿಸಿದರೆ ಇದೊಂದು ಗಂಭೀರ ಕಾಗ್ನಿಜಬಲ್ ಕೇಸ್ ಎಂದು ಪರಿಗಣಿಸಬಹುದೇ ಹೊರತು, ಪ್ರಾಥಮಿಕ ವಿಚಾರಣೆಗೆ ಅವಕಾಶ ಕಲ್ಪಿಸುವ ನಾನ್ ಕಾಗ್ನಿಜಬಲ್ ಅಥವಾ ಅಸಂಜ್ಞೇಯ ಪ್ರಕರಣವೆಂದಂತೂ ಭಾವಿಸಲು ಅವಕಾಶವಿಲ್ಲ.

ಹೀಗಾಗಿ ಪೊಲೀಸರು ಕೂಡಲೇ ಸ್ವಯಂಪ್ರೇರಿತವಾಗಿ ಕೇಸ್ ದಾಖಲಿಸಿಕೊಳ್ಳಬೇಕು. ಅಥವಾ ಸಲ್ಲಿಕೆಯಾಗಿರುವ ಎಲ್ಲಾ ದೂರುಗಳನ್ನು ಆಧರಿಸಿ ಎಫ್‌ಐಆರ್ ದಾಖಲಿಸಿಕೊಳ್ಳಬೇಕಿರುವುದು ಅನಿವಾರ್ಯ. ಒಂದು ವೇಳೆ ಎಫ್‌ಐಆರ್ ಹಾಕುವುದನ್ನು ತಪ್ಪಿಸಿದರೆ ಮುಂದೆ ಪ್ರಕರಣ ಕೋರ್ಟ್ ಗೆ ಹೋದಾಗ ಪೊಲೀಸರು ಮುಜುಗರ ಅನುಭವಿಸಬೇಕಾಗಬಹುದು.

ಈಗಲೂ ಹೈಕೋರ್ಟ್ ನಲ್ಲಿ ಯಾರಾದರೂ ಇದನ್ನು ಪ್ರಶ್ನಿಸಿದ್ರೆ ಪೊಲೀಸರಿಗೆ ಹಿನ್ನಡೆಯಾಗಬಹುದು:

C H Hanumantharaya

C H Hanumantharaya

ಕೇಸ್ ದಾಖಲಾದ ನಂತರ ಮಾಡಬೇಕಾದ ಕೆಲಸವನ್ನು ಪ್ರಕರಣ ದಾಖಲಿಸುವ ಮುನ್ನವೇ ಪೊಲೀಸರು ಮಾಡುತ್ತಿದ್ದಾರೆ. ಕಾಗ್ನಿಜಬಲ್ ಪ್ರಕರಣ ಎಂದು ಕಂಡು ಬಂದ ನಂತರವೂ ಪೊಲೀಸರು ಎಫ್‌ಐಆರ್ ದಾಖಲಿಸದೇ ವಿಚಾರಣೆ ನಡೆಸುವುದು ಸೂಕ್ತವಲ್ಲ. ಪೊಲೀಸರು ಅನುಸರಿಸುತ್ತಿರುವ ಕ್ರಮಕ್ಕೆ ಕಾನೂನಿನಲ್ಲಿ ಬಹುಮಟ್ಟಿನ ಸಹಮತ ಇಲ್ಲ. ದೂರು ದಾಖಲಿಸಿಕೊಂಡು ತನಿಖೆ ನಡೆಸಬಹುದಿತ್ತು, ತಪ್ಪು ದೂರೆಂದು ಕಂಡುಬಂದರೆ ದೂರುದಾರನ ವಿರುದ್ಧವೇ ಕ್ರಮಕ್ಕೆ ಸಿಆರ್‌ಪಿಸಿಯಲ್ಲಿ ಅವಕಾಶವಿದೆ.

ಸರ್ಕಾರ ಹಾಗೂ ಪೊಲೀಸರು ಹೊಸ ಸಂಪ್ರದಾಯ ಆರಂಭಿಸುತ್ತಿದ್ದಾರೆ. ಈಗಲೂ ಹೈಕೋರ್ಟ್ ನಲ್ಲಿ ಯಾರಾದರೂ ಇದನ್ನು ಪ್ರಶ್ನಿಸಿದ್ರೆ ಪೊಲೀಸರಿಗೆ ಹಿನ್ನಡೆಯಾಗಬಹುದು. ಮೊದಲು ಎಫ್‌ಐಆರ್ ದಾಖಲಿಸಿ ನಂತರ ವ್ಯಕ್ತಿಗಳನ್ನು ಕರೆದು ತನಿಖೆ ನಡೆಸಿ ಅಂತ ಹೈಕೋರ್ಟ್ ಸೂಚಿಸಬಹುದು. ಎಫ್‌ಐಆರ್ ಗೂ ಮೊದಲೇ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವುದನ್ನು ಅಕ್ರಮ ಬಂಧನ ಎಂದು ಪರಿಗಣಿಸಲಾಗುವ ಸಾಧ್ಯತೆಯೂ ಇದೆ. – ಸಿ.ಹೆಚ್.ಹನುಮಂತರಾಯ, ಹಿರಿಯ ವಕೀಲ

ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಬೇಕು:

Dr. A Nagarathna

ಐಪಿಸಿ ಅಲ್ಲದೇ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯೂ ಈ ಪ್ರಕರಣ ಕಾಗ್ನಿಜಬಲ್ ಅಪರಾಧವಾಗಿದೆ. ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ಎಫ್ಐಆರ್ ದಾಖಲಿಸಬೇಕು. ಇಲ್ಲವಾದರೆ ಲಲಿತಾಕುಮಾರಿ, ಭಜನ್ ಲಾಲ್ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಉಲ್ಲಂಘನೆಯಾಗಲಿದೆ. ನೈತಿಕತೆ, ಅಶ್ಲೀಲತೆ ಅಷ್ಟೇ ಅಲ್ಲ ಮಹಿಳೆಯ ಘನತೆ, ಖಾಸಗಿತನ ಹಾಗೂ ಸಚಿವರ ಘನತೆ, ಖಾಸಗಿತನ ವಿಷಯವೂ ಇರುವುದರಿಂದ ಇದೊಂದು ತೀರಾ ಗಂಭೀರ ಅಪರಾಧ. ತನಿಖೆ ಕಾನೂನಾತ್ಮಕವಾಗಿರಬೇಕು.

ಎಫ್ಐಆರ್ ಆದರೆ ಮಾತ್ರ ತನಿಖೆ ನಡೆದು ಅಂತಿಮ ವರದಿ ಸಲ್ಲಿಸಲು ಅಧಿಕಾರವಿರುತ್ತದೆ. ಕೇವಲ ವರದಿ ಸಲ್ಲಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆದು ನ್ಯಾಯ ಸಿಗುವ ಉದ್ದೇಶದ ತನಿಖೆ ನಡೆಸಬೇಕು. ಇಲ್ಲವಾದರೆ ವ್ಯವಸ್ಥೆಯ ದುರುಪಯೋಗಕ್ಕೆ ಅವಕಾಶ ಮಾಡಿಕೊಟ್ಟಂತಾಗಲಿದೆ.

– ಡಾ. ಎ.ನಾಗರತ್ನ, ಅಸೋಸಿಯೇಟ್ ಪ್ರೊಫೆಸರ್, ಎನ್‌ಎಲ್‌ಎಸ್‌ಐಯು

Follow us on

Related Stories

Most Read Stories

Click on your DTH Provider to Add TV9 Kannada