
ಬೆಂಗಳೂರು, (ಜನವರಿ 24): ಜೈಲಿನಲ್ಲಿರುವ ವಿಚಾರಣಾಧೀನ ಆರೋಪಿಗಳಿಗೆ ಒದಗಿಸುವ ಸೌಕರ್ಯಗಳ ಕುರಿತು ಕಾರಾಗೃಹ ಮತ್ತು ಸುಧಾರಣಾ ಸೇವೆಯ ಡಿಜಿಪಿ ಅಲೋಕ್ ಕುಮಾರ್ (Alok Kumar) ಮಹತ್ವದ ಸುತ್ತೋಲೆ ಹೊರಡಿಸಿದ್ದು, ಕೈದಿಗಳಿಗೆ ಆಹಾರ, ಬಟ್ಟೆ, ಹಾಸಿಗೆ ಸರಬರಾಜು ನಿಯಂತ್ರಣಕ್ಕೆ ಕ್ರಮವಹಿಸುವಂತೆ ರಾಜ್ಯ ಎಲ್ಲಾ ಜೈಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಾರಾಗೃಹ ಡಿಜಿಪಿ ಅವರ ಹೊಸ ಆದೇಶದಿಂದಾಗಿ ಕೊಲೆ ಆರೋಪದಲ್ಲಿ ಜೈಲಲ್ಲಿರುವ ದರ್ಶನ್ (Darshan) ಹೆಚ್ಚುವರಿ ಬ್ಲಾಂಕೆಟ್ ಸೌಲಭ್ಯಕ್ಕೆ ಕುತ್ತು ಎದುರಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಮತ್ತು ಇತರ ಆರೋಪಿಗಳು ಮನೆ ಊಟಕ್ಕೆ ಮನವಿ ಮಾಡಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ರಾಜ್ಯದ ಕಾರಾಗೃಹಗಳಲ್ಲಿರುವ ಕೈದಿಗಳಿಗೆ ಮನೆ ಊಟ ಹಾಗೂ ಇತರ ಅಗತ್ಯ ವಸ್ತುಗಳನ್ನು ಪೂರೈಸುವ ಕುರಿತು ಮಾರ್ಗಸೂಚಿಗಳನ್ನು ರೂಪಿಸಲು ಇದು ಸಕಾಲ ಎಂದು ಹೈಕೋರ್ಟ್ ಮೌಖಿಕವಾಗಿ ಹೇಳಿತ್ತು. ಇದರ ಬೆನ್ನಲ್ಲೇ ಫುಡ್ ಮತ್ತು ಬೆಡ್ ಬಗ್ಗೆ ಹೊಸ ಆದೇಶ ಹೊರಬಿದ್ದಿದೆ.
ವಿಚಾರಣಾಧೀನ ಕೈದಿಗಳು ಮತ್ತು ಸಿವಿಲ್ ಕೈದಿಗಳಿಗೆ ಆಹಾರ, ಹಾಸಿಗೆ ಮತ್ತು ಬಟ್ಟೆಗಳನ್ನು ಒದಗಿಸುವ ಬಗ್ಗೆ ಮೊದಲ ಬಾರಿಗೆ ನಿಯಮಗಳನ್ನು ರೂಪಿಸಲಾಗಿದೆ. ನಾವು ಹೊರಗಿನಿಂದ ಯಾವುದೇ ಆಹಾರವನ್ನು ಅನುಮತಿಸುವುದಿಲ್ಲ. ಬೆಂಗಳೂರು ಜೈಲಿನ ಆಹಾರವನ್ನು FSSAI ಪ್ರಮಾಣೀಕರಿಸಿದೆ ಮತ್ತು ಉತ್ತಮ ಗುಣಮಟ್ಟದ್ದಾಗಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.
ವಿಚಾರಣಾಧೀನ ಆರೋಪಿಗೆ ಜೈಲಿನಲ್ಲಿ ಕೊಡುವ ಬ್ಲಾಂಕೆಟ್ ಬಳಸಬೇಕು. ಹೆಚ್ಚುವರಿಯಾಗಿ ಒಂದು ಬ್ಲಾಂಕೆಟ್ ನೀಡಲಾಗುತ್ತೆ. ಯಾವುದೇ ಹಾಸಿಗೆಯ ಸೌಲಭ್ಯ ಇರುವುದಿಲ್ಲ. ಇನ್ನು ಕೈದಿಗಳಿಗೆ ಆಹಾರ, ಬಟ್ಟೆ, ಹಾಸಿಗೆ ಸರಬರಾಜು ನಿಯಂತ್ರಣಕ್ಕೆ ಸೂಚಿಸಲಾಗಿದ್ದು, ಜೈಲಿನ ನಿಯಾಮವಳಿ ಪ್ರಕಾರ ಆಹಾರ, ಬಟ್ಟೆ, ಹಾಸಿಗೆ ನೀಡಲಾಗುತ್ತದೆ. ಇನ್ನು ಸಂದರ್ಶನ ವೇಳೆ ಕೈದಿಗಳಿಗೆ ಖಾಸಗಿ ವ್ಯಕ್ತಿಗಳಿಂದ ನಿರ್ದಿಷ್ಟ ಪ್ರಮಾಣದಲ್ಲಿ ಆಹಾರ ಪೂರೈಕೆಗೆ ಸೂಚಿಸಲಾಗಿದೆ.
ನಿರ್ದಿಷ್ಟ ಪ್ರಮಾಣದಲ್ಲಿ ಪ್ಯಾಕ್ ಮಾಡಿರುವ ಆಹಾರ ನೀಡಲು ಅವಕಾಶವಿದ್ದು, ಬಾಳೆಹಣ್ಣು, ಸೇಬು, ಸೀಬೆಹಣ್ಣು, ಸಪೋಟ ಸೇರಿ 2 ಕೆಜಿಯಷ್ಟಿರಬೇಕು. ಡ್ರೈಫ್ರೂಟ್ಸ್, ಬೇಕರಿ ತಿನಿಸು ಸೇರಿದಂತೆ 500 ಗ್ರಾಮ್ ಮೀರುವಂತಿಲ್ಲ. ವಿಚಾರಣಾಧೀನ ಕೈದಿಗಳಿಗೆ 2 ಜೊತೆ ಬಟ್ಟೆ, 2 ಒಳಉಡುಪು ನೀಡಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಜೈಲಿನಲ್ಲಿ ದೈಹಿಕ ತಪಾಸಣೆ, ಸೆಕ್ಯೂರಿಟಿ ತಪಾಸಣೆ ನಡೆಸುವಂತೆ ಸೂಚನೆ ನೀಡಿದ್ದು, ಅಗತ್ಯವಿದ್ದರೆ ಜೈಲಿನ ಅಧಿಕಾರಿಗಳಿಂದ ಯಾವುದೇ ರೀತಿಯ ತಪಾಸಣೆ ಮಾಡಬಹುದು. ತಕ್ಷಣವೇ ಈ ನಿಯಮ ಜಾರಿಮಾಡುವಂತೆ ರಾಜ್ಯ ಎಲ್ಲಾ ಜೈಲಾಧಿಕಾರಿಗಳಿಗೆ ಕಾರಾಗೃಹ ಡಿಜಿಪಿ ಸುತ್ತೋಲೆ ಹೊರಡಿಸಿದ್ದಾರೆ.
ಪವಿತ್ರಗೌಡಗೆ ಮನೆಯೂಟಕ್ಕೆ ಹೈಕೋರ್ಟ್ ನಿಷೇಧ ಹೇರಿದ ಬಗ್ಗೆ ಪ್ರತಿಕ್ರಿಯಿಸಿದ್ದ ಅಲೋಕ್ ಕುಮಾರ್, ಪವಿತ್ರಗೌಡಗೆ (Pavitra Gowda) ಮನೆ ಊಟ ಕೊಡದೇ ಇರೋದು ಒಳ್ಳೆಯದು. ನಾವು ಕಾರಾಗೃಹದಲ್ಲಿ ಒಳ್ಳೆಯ ಊಟ ನೀಡುತ್ತಿದ್ದೇವೆ. ಮನೆಯಿಂದ ತರುವ ಊಟಕ್ಕೆ ನಾವು ಅವಕಾಶ ನೀಡುವುದಿಲ್ಲ. ಕಾರಾಗೃಹದಲ್ಲಿ ತಯಾರಿಸುವ ಊಟದ ಗುಣಮಟ್ಟವನ್ನು ಎಫ್ಎಸ್ಐಎಲ್‌ಗೆ ಪರೀಕ್ಷೆಗೆ ಕಳುಹಿಸಿ ಸರ್ಟಿಪೈಟ್ ಪಡೆದ ಬಳಿಕ ಕೈದಿಗಳಿಗೆ ನೀಡುತ್ತಿದ್ದೇವೆ ಎಂದಿದ್ದಾರೆ.
ಜೈಲಿನಲ್ಲಿರುವ ಕೈದಿಗಳಲ್ಲಿ ಪ್ರಭಾವಶಾಲಿ ಯಾರು, ಕೆಳಮಟ್ಟದಲ್ಲಿರೋರು ಯಾರು ಎಂದು ನೋಡಲು ಸಾಧ್ಯವಿಲ್ಲ. ಸೆಕ್ಷನ್ 30 ಕರ್ನಾಟಕ ಪ್ರಿಜನರ್ಸ್ ಆಕ್ಟ್ 1963 ಪ್ರಕಾರ ಕೈದಿಗಳಿಗೆ ಊಟ, ಬಟ್ಟೆ ಪುಸ್ತಕ ಕೂಡಬೇಕು. ಈ ನಿಯಮದ ಅಡಿ ತೀರ್ಮಾನ ಮಾಡಲಾಗುತ್ತದೆ. ಕಾರಗೃಹದ ಕೈದಿಗಳಿಗೆ ನಾವು ನೀಡುತ್ತಿರುವ ಊಟ ಸರ್ಟಿಫೈಡ್ ಆಗಿರುವುದರಿಂದ ಒಬ್ಬರಿಗೆ ಮನೆಯಿಂದ ಊಟ ನೀಡಿದ್ರೆ, ಮುಂದೆ ಸಾವಿರಾರು ಜನ ಇದೇ ರೀತಿ ಕೇಳುತ್ತಾರೆ. ಇದರಿಂದ ಪವಿತ್ರಗೌಡಗೆ ಮನೆ ಊಟ ನೀಡಲು ನಿರಾಕರಿಸಿರುವುದು ಒಳ್ಳೆಯದು ಎಂದು ಹೇಳಿದ್ದರು.