ಬೆಂಗಳೂರು ನ.03: ಪಡಿತರದಾರಿಗೆ ಆಹಾರ ಇಲಾಖೆಯಿಂದ ಸಿಹಿ ಸುದ್ದಿ ನೀಡಿದೆ. ಬಾಕಿ ಉಳಿದಿದ್ದ ಪಡಿತರ ಕಾರ್ಡ್ಗಳನ್ನು (Ration Card) ಇಂದಿನಿಂದ ನವೆಂಬರ್ 20ನೇ ತಾರೀಖಿನವರೆಗೂ ವಿತರಿಸಲಾಗುತ್ತದೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ 2.96 ಲಕ್ಷ ಪಡಿತರ ಕಾರ್ಡ್ಗಳು ವಿತರಣೆಗೆ ಬಾಕಿ ಉಳಿದಿದ್ದವು. ಈ ಕಾರ್ಡ್ಗಳನ್ನು ಸದ್ಯ ಪರಿಶೀಲಿಸಲಾಗಿದ್ದು 2.96 ಲಕ್ಷ ಕಾರ್ಡ್‌ಗಳ ಪೈಕಿ 2.78 ಕಾರ್ಡ್‌ಗಳ ಪರಿಶೀಲನೆ ನಡೆದಿದೆ. ದಾಖಾಲೆಗಳು ಸರಿ ಇಲ್ಲದ ಕಾರಣ 50 ಸಾವಿರ ಕಾರ್ಡ್ಗಳನ್ನ ರದ್ದುಪಡಿಸಲಾಗಿದೆ. ಸದ್ಯ 2 ಲಕ್ಷದ 28 ಸಾವಿರ ಕಾರ್ಡ್ಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಈ ಕಾರ್ಡ್ಗಳನ್ನು ಆಹಾರ ಇಲಾಖೆ (Food Department) ಇಂದಿನಿಂದ ವಿತರಿಸುತ್ತಿದೆ.
ಪಡಿತರ ಕಾರ್ಡ್ದಾರರಿಗೆ ಆಹಾರ ಇಲಾಖೆಯಿಂದ ಸಂದೇಶ ರಾವಾನಿಸಲಾಗಿದ್ದು, ಒಟಿಪಿ ನಂಬರ್ ಪಡೆದು ತಾವೇ ಗೂಗಲ್ನಲ್ಲಿ ಕಾರ್ಡ್ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಬೆಳ್ಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಅಪ್ರುವಲ್ಗೆ ಅವಕಾಶ ನೀಡಲಾಗಿದೆ ಎಂದು ಆಹಾರ ಇಲಾಖೆ ಪ್ರಕಟಣೆ ಹೊರಡಿಸಿದೆ.
ಪಡಿತರ ಪಡೆಯದವರ ಬಿಪಿಎಲ್ ಕಾರ್ಡ್ ಅನ್ನು ರದ್ದುಪಡಿಸುವುದಿಲ್ಲ, ಬದಲಾಗಿ ಆರೋಗ್ಯ ಯೋಜನೆಗಳಿಗೆ ಕಾರ್ಡ್ಗಳನ್ನು ಬಳಸಲು ಅವಕಾಶವಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಸ್ಪಷ್ಟಪಡಿಸಿದರು.
ಕಳೆದ ಒಂದು ವರ್ಷದಿಂದ ಹೊಸ ಕಾರ್ಡ್ಗಳನ್ನು ವಿತರಿಸಿಲ್ಲ. ಇದೀಗ ಹೊಸದಾಗಿ ಸುಮಾರು 2.95 ಲಕ್ಷ ಕಾರ್ಡ್ಗಳನ್ನು ನೀಡಲು ತೀರ್ಮಾನಿಸಲಾಗಿದೆ. ಇವುಗಳಲ್ಲಿ ಹೆಚ್ಚಿನವು ಬಿಪಿಎಲ್ ಕಾರ್ಡ್ಗಳಿವೆ. ಸರಿಯಾದ ಪರಿಶೀಲನೆಯೊಂದಿಗೆ, ಕಾರ್ಡ್‌ಗಳ ವಿತರಣೆಗೆ ಇಂದಿನಿಂದ (ಶುಕ್ರವಾರ) ಅನುಮೋದನೆಯನ್ನು ನೀಡಲಾಗುತ್ತಿದೆ. ಪಡಿತರ ಪಡೆಯದವರೂ ಕೂಡ ಆರೋಗ್ಯ ಯೋಜನೆಗಳಿಗೆ ಕಾರ್ಡ್ ಅನ್ನು ಬಳಸಿಕೊಳ್ಳಲು ಅನುಮತಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಪಡಿತರ ವಿತರಕರ ಪ್ರತಿಭಟನೆ: ನ.7ರ ವರೆಗೆ ನ್ಯಾಯಬೆಲೆ ಅಂಗಡಿ ಬಂದ್
ಶೇಕಡಾ 95 ಕ್ಕಿಂತ ಹೆಚ್ಚು ಬಿಪಿಎಲ್ ಕಾರ್ಡ್ ಹೊಂದಿರುವವರು 5 ಕೆಜಿ ಅಕ್ಕಿಗೆ ಬದಲಾಗಿ ಹಣವನ್ನು ಪಡೆಯುತ್ತಿದ್ದಾರೆ. ರಾಜ್ಯದಲ್ಲಿ 1.08 ಕೋಟಿ ಬಿಪಿಎಲ್ ಕಾರ್ಡ್‌ಗಳಿದ್ದು, 1.03 ಕೋಟಿ ಬಿಪಿಎಲ್ ಕಾರ್ಡ್ದಾರರು 170 ರೂಪಾಯಿ ಪಡೆಯುತ್ತಿದ್ದಾರೆ. ಮತ್ತು ಒಂದು ಕುಟುಂಬ ಒಂದಕ್ಕಿಂತ ಹೆಚ್ಚು ಬಿಪಿಎಲ್ ಕಾರ್ಡ್ ಹೊಂದಿರುವಂತಹ ಅಕ್ರಮವನ್ನು ಪತ್ತೆ ಹಚ್ಚಲಾಗುತ್ತಿದೆ ಎಂದರು.
ಬಿಪಿಎಲ್ ಕುಟುಂಬಗಳಿಗೆ ತಿಂಗಳಿಗೆ ತಲಾ 10 ಕೆಜಿ ಅಕ್ಕಿ ನೀಡುವ ‘ಅನ್ನ ಭಾಗ್ಯ’ ಯೋಜನೆಗೆ ಅಗತ್ಯವಿರುವ ಹೆಚ್ಚುವರಿ ಅಕ್ಕಿಯನ್ನು ನೀಡಲು ನಿರಾಕರಿಸುವ ಮೂಲಕ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ಆಂಧ್ರಪ್ರದೇಶ, ಛತ್ತೀಸ್‌ಗಢ ಮತ್ತು ಇತರ ರಾಜ್ಯಗಳಿಂದ ಅಕ್ಕಿ ಕೊಂಡುಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಫಲಾನುಭವಿಗಳಿಗೆ ನೇರವಾಗಿ ಹಣ ನೀಡುತ್ತಿರುವುದರಿಂದ ನ್ಯಾಯಬೆಲೆ ಅಂಗಡಿ ನಿರ್ವಾಹಕರ ಕಮಿಷನ್ಗೆ ಕತ್ತರಿ ಬಿದ್ದಿದೆ ಎಂಬ ವಿಚಾರವಾಗಿ ಮಾತನಾಡಿದ ಅವರು ನಾವು ಹೆಚ್ಚುವರಿ ಅಕ್ಕಿ ನೀಡಲು ಪ್ರಾರಂಭಿಸಿದಾಗ ಕಮಿಷನ್ ಸಿಗುತ್ತದೆ. ಅರ್ಹರಿಗೆ ಅಕ್ಕಿ ಸಿಗಲಿದ್ದು, ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ