ಕರ್ನಾಟಕದಲ್ಲಿ ಸರ್ಕಾರಿ ಜಮೀನು ಸ್ವಾಧೀನ ಆರೋಪ: ಪಿತ್ರೋಡಾ ಸೇರಿ 6 ಮಂದಿ ವಿರುದ್ದ ಇಡಿ, ಲೋಕಾಯುಕ್ತಕ್ಕೆ ದೂರು
ರಾಹುಲ್ ಗಾಂಧಿ ಆಪ್ತ ಸ್ಯಾಮ್ ಪಿತ್ರೋಡಾ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಸಾಮಾಜಿಕ ಹೋರಾಟಗಾರ ಎನ್ ಆರ್ ರಮೇಶ್ ಅವರು ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಪಿತ್ರೋಡಾ ಅವರು ಅಕ್ರಮವಾಗಿ ಸರ್ಕಾರಿ ಜಮೀನನ್ನು ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಗಾದ್ರೆ, ಏನಿದು ಪ್ರಕರಣ? ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಫೆಬ್ರವರಿ 24): ಕರ್ನಾಟಕ ಅರಣ್ಯ ಇಲಾಖೆಯ 150 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ಸ್ವತ್ತನ್ನು ಕಾನೂನುಬಾಹಿರವಾಗಿ ಸ್ವಾಧೀನದಲ್ಲಿರಿಸಿಕೊಂಡಿರುವ ಆರೋಪದಡಿ ಕಾಂಗ್ರೆಸ್‌ನ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಸೇರಿದಂತೆ ಆರು ಜನರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. ಸ್ಯಾಮ್ ಪಿತ್ರೋಡಾ, ಕರ್ನಾಟಕ ರಾಜ್ಯ ಅರಣ್ಯ ಮತ್ತು ಪರಿಸರ ಇಲಾಖೆಯ ಮಾಜಿ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಾದ ಆರ್.ಕೆ. ಸಿಂಗ್ ಮತ್ತು ಸಂಜಯ್ ಮೋಹನ್, ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ಬೆಂಗಳೂರು ನಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎನ್.ರವೀಂದ್ರ ಕುಮಾರ್ ಮತ್ತು ಎಸ್.ಎಸ್.ರವಿಶಂಕರ್ ವಿರುದ್ಧ ಬಿಜೆಪಿ ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರು ದಾಖಲೆಗಳಸಹಿತ ದೂರು ದಾಖಲಿಸಿದ್ದಾರೆ.
ಬೆಂಗಳೂರಿನ ಯಲಹಂಕ ಬಳಿಯ ಜಾರಕಬಂಡೆ ಮೀಸಲು ಅರಣ್ಯ ಪ್ರದೇಶದಲ್ಲಿ 12.35 ಎಕರೆ ಜಮೀನನ್ನು ಪಿತ್ರೋಡಾ ಅವರಿಗೆ 2001 ರಲ್ಲಿ ಗುತ್ತಿಗೆ ನೀಡಲಾಗಿತ್ತು. ಔಷಧೀಯ ಗಿಡಮೂಲಿಕೆಗಳನ್ನು ಬೆಳೆಸುವ ಉದ್ದೇಶದಿಂದ ಅಂದಿನ ಸರ್ಕಾರ 10 ವರ್ಷಗಳ ಅವಧಿಗೆ ಈ ಜಮೀನನ್ನು ಗುತ್ತಿಗೆಗೆ ನೀಡಿತ್ತು. 2011 ರಲ್ಲಿ ಗುತ್ತಿಗೆ ಅವಧಿ ಮುಕ್ತಾಯಗೊಂಡರೂ ಪಿತ್ರೋಡಾ ಅವರು ಜಮೀನನ್ನು ತಮ್ಮ ವಶದಲ್ಲೇ ಇಟ್ಟುಕೊಂಡಿದ್ದಾರೆ ಎಂದು ರಮೇಶ್ ಆರೋಪಿಸಿದ್ದಾರೆ.
ಈ ಜಮೀನಿನಲ್ಲಿ ಬೆಳೆದ ಗಿಡಮೂಲಿಕೆಗಳಿಂದ ಪಿತ್ರೋಡಾ ಅವರಿಗೆ ವಾರ್ಷಿಕ ಕೋಟ್ಯಂತರ ರೂಪಾಯಿ ಆದಾಯ ಬರುತ್ತಿದೆ ಎಂದು ಹೇಳಲಾಗಿದೆ. ಕಳೆದ 15 ವರ್ಷಗಳಿಂದ ಮೀಸಲು ಅರಣ್ಯ ಪ್ರದೇಶವನ್ನು ಅಕ್ರಮವಾಗಿ ಪಿತ್ರೋಡಾ ಅವರು ವಶಪಡಿಸಿಕೊಂಡಿದ್ದಾರೆ ಮತ್ತು ಈ ಜಮೀನಿನ ಪ್ರಸ್ತುತ ಮಾರುಕಟ್ಟೆ ಮೌಲ್ಯ 400 ಕೋಟಿ ರೂಪಾಯಿಗೂ ಹೆಚ್ಚು ಎಂದು ರಮೇಶ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಎನ್ಆರ್ ರಮೇಶ್ ದೂರಿನಲ್ಲೇನಿದೆ?
ಸತ್ಯನಾರಾಯಣ ಗಂಗಾರಾಮ್ ಪಿತ್ರೋಡಾ (ಸ್ಯಾಮ್ ಪಿತ್ರೋಡಾ) ಅವರು 23/10/1991ರಂದು ಮುಂಬೈನ ರಿಜಿಸ್ಟ್ರಾರ್ ಆಫ್ ಕೋ–ಆಪರೇಟಿವ್ ಸೊಸೈಟೀಸ್ ಕಚೇರಿಯಲ್ಲಿ “Foundation for Revitalisation of Local Health Traditions” (FRLHT) ಎಂಬ ಸಂಸ್ಥೆ ನೋಂದಣಿ ಮಾಡಿದ್ದಾರೆ. ನಂತರ ಸ್ಯಾಮ್ ಪಿತ್ರೋಡಾ ಅವರ ಲಿಖಿತ ರೂಪದ ಮನವಿಯಂತೆ 2010ರಲ್ಲಿ FRLHT ಸಂಸ್ಥೆಯ ನೋಂದಣಿಯನ್ನು ರದ್ದುಗೊಳಿಸಲಾಗಿದೆ. 2008ರಲ್ಲಿ ಬೆಂಗಳೂರಿನ ಬ್ಯಾಟರಾಯನಪುರ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ “Foundation for Revitalisation of Local Health Traditions” (FRLHT) ಎಂಬ ಅದೇ ಹೆಸರಿನ Trust Deedನ್ನು ದಿನಾಂಕ 05/09/2008ರಂದು ನೋಂದಣಿ ಮಾಡಿಸಲಾಗಿದೆ.
ಗಿಡಮೂಲಿಕೆ ಔಷಧಿ ಸಸಿಗಳ ಸಂರಕ್ಷಣೆ ಮತ್ತು ಸಂಶೋಧನೆ ಕಾರ್ಯಕ್ಕೆಂದು ಸ್ಯಾಮ್ ಪಿತ್ರೋಡಾರವರು 1996ರಲ್ಲಿ FRLHT ಸಂಸ್ಥೆಗೆ ಮೀಸಲು ಅರಣ್ಯ ಪ್ರದೇಶವನ್ನು ಗುತ್ತಿಗೆಗೆ ನೀಡುವಂತೆ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಅದರಂತೆ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯು ಸ್ಯಾಮ್ ಪಿತ್ರೋಡಾರವರ ಅಧ್ಯಕ್ಷತೆಯ FRLHT, Mumbai ಸಂಸ್ಥೆಗೆ ಬೆಂಗಳೂರಿನ ಯಲಹಂಕ ಬಳಿಯ ಜಾರಕಬಂಡೆ ಕಾವಲ್‌ನ ‘ಬಿ’ ಬ್ಲಾಕ್‌ನಲ್ಲಿ 5 ಹೆಕ್ಟೇರ್ (12.35 ಎಕರೆ) ವಿಸ್ತೀರ್ಣದ ಮೀಸಲು ಅರಣ್ಯ ಪ್ರದೇಶವನ್ನು 5 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಿತ್ತು. ಇದಕ್ಕೆ ಕೇಂದ್ರದ ಅರಣ್ಯ ಮತ್ತು ಪರಿಸರ ವಿಜ್ಞಾನ ಇಲಾಖೆ (Ministry of Forest, Ecology & Environment, Govt: of India) ಯೂ ಸಹ ಅನುಮೋದನೆ ನೀಡಿತ್ತು. FRLHT ಸಂಸ್ಥೆಗೆ ನೀಡಿದ್ದ 5 ವರ್ಷಗಳ ಗುತ್ತಿಗೆ ಅವಧಿ ಮುಕ್ತಾಯದ ನಂತರ (2001ರಲ್ಲಿ) ಮುಂದಿನ 10 ವರ್ಷಗಳ ಅವಧಿಗೆ ಗುತ್ತಿಗೆಯನ್ನು ಮುಂದುವರೆಸಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯು ಆದೇಶಿಸಿತ್ತು. 2001ರ ಆದೇಶದಂತೆ ದಿನಾಂಕ 2/12/2011ಕ್ಕೆ ಸ್ಯಾಮ್ ಪಿತ್ರೋಡಾ ಅವರ FRLHT ಸಂಸ್ಥೆಗೆ ನೀಡಿದ್ದ ಗುತ್ತಿಗೆ ಅವಧಿ ಮುಕ್ತಾಯಗೊಂಡಿದೆ.
ಇದಾದ ನಂತರ ಅರಣ್ಯ ಇಲಾಖೆಯು FRLHT ಸಂಸ್ಥೆಯ ಗುತ್ತಿಗೆ ಅವಧಿಯನ್ನು ವಿಸ್ತರಿಸಿಲ್ಲ. ಆದರೂ ಸಹ 150 ಕೋಟಿ ರೂಗಳಿಗೂ ಹೆಚ್ಚು ಮೌಲ್ಯದ 12.35 ಎಕರೆ ವಿಸ್ತೀರ್ಣದದ ಸರ್ಕಾರಿ ಸ್ವತ್ತನ್ನು ರಾಜ್ಯ ಅರಣ್ಯ ಇಲಾಖೆ ತನ್ನ ವಶಕ್ಕೆ ಪಡೆದುಕೊಂಡಿಲ್ಲ ಎಂದು ಎನ್.ಆರ್.ರಮೇಶ್ ದೂರಿನಲ್ಲಿ ಆರೋಪಿಸಿದ್ದಾರೆ.