ಬೆಂಗಳೂರು: ಅನೈತಿಕವಾಗಿ ಅಸ್ತಿತ್ವದಲ್ಲಿ ಇರುವ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ವೆಚ್ಚ ಮಾಡುವುದು ತಪ್ಪು. ಎರಡೂವರೆ ಲಕ್ಷ ಕೋಟಿ ರೂಪಾಯಿ ಬಜೆಟ್ ಇದಾಗಿದೆ. ಸಂವಿಧಾನಬಾಹಿರವಾದ ಈ ಕಾರ್ಯಕ್ಕೆ ಕಾಂಗ್ರೆಸ್ ಸಹಕಾರ ಇಲ್ಲ ಎಂದು ಘೋಷಿಸಿದ ಪ್ರತಿಪಕ್ಷ ಕಾಂಗ್ರೆಸ್ ಸಭಾನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಬಜೆಟ್ ಮಂಡನೆಗೆ ಮೊದಲೇ ಸಭಾತ್ಯಾಗ ಮಾಡಿತು. ಬಜೆಟ್ ಮಂಡನೆಗೂ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಈ ಸಲ ಕೈಗೆ ಕಪ್ಪು ಪಟ್ಟಿ ಕಟ್ಟಿ ಕಟ್ಟಿಕೊಂಡು ಪ್ರತಿಭಟಿಸಿ, ಸಭಾತ್ಯಾಗ ಮಾಡುತ್ತೇವೆ ಘೋಷಿಸಿದ್ದರು. ಕಪ್ಪು ಪಟ್ಟಿ ಧರಿಸಿಕೊಂಡು ವಿಧಾನಸೌಧಕ್ಕೆ ಕಾಂಗ್ರೆಸ್ ಸದಸ್ಯರು ಬಂದಿದ್ದರು.
ಇವರೆಲ್ಲ ಪ್ರಮಾಣ ವಚನ ಸ್ವೀಕರಿಸಿ, ಸಚಿವರಾದವರು. ಈಗ ಭಯ ಇದೆ ಎಂದು ಕೋರ್ಟ್ಗೆ ಹೋಗಿದ್ದಾರೆ. ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಸರ್ಕಾರಕ್ಕೆ ಯಾವ ನೈತಿಕತೆ ಇದೆ. ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಆಗಿ ಮುಂದುವರಿಯಲು ಹಾಗೂ ಬಜೆಟ್ ಮಂಡಿಸಲು ನೈತಿಕತೆ ಇಲ್ಲ. ಯಡಿಯೂರಪ್ಪ, ನಿರಾಣಿ ಜಾಮೀನಿನ ಮೇಲೆ ಇದ್ದಾರೆ. ಇದರ ಜತೆಗೆ ಆರು ಸಚಿವರು ಸಿವಿಲ್ ಕೋರ್ಟ್ ಮೊರೆ ಹೋಗಿದ್ದಾರೆ. ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಸೋಮಶೇಖರ್, ಬಿ.ಸಿ.ಪಾಟೀಲ್, ಭೈರತಿ ಬಸವರಾಜ್ ಸುಧಾಕರ್ ಈ ಆರು ಸಚಿವರು ಕೋರ್ಟ್ಗೆ ಹೋಗಿದ್ದಾರೆ. ಸುದ್ದಿ ಪ್ರಸಾರಕ್ಕೆ ತಾತ್ಕಾಲಿಕ ನಿರ್ಬಂಧಕ ಆಜ್ಞೆ ತಂದಿದ್ದಾರೆ. ಇದರಿಂದ ಮಾಧ್ಯಮಗಳ ಸ್ವಾತಂತ್ರ್ಯದ ಹರಣ ಆದಂತಾಗಿದೆ. ಈ ಸರ್ಕಾರ ಅನೈತಿಕತೆಯ ಮೂಟೆ ಹೊತ್ತಿಕೊಂಡಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಬಜೆಟ್ ಮಂಡನೆಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ದಯವಿಟ್ಟು ಸಹಕರಿಸಿ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿದರು. ಆದರೂ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡುವ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.
ಇದನ್ನೂ ಓದಿ: ಕೇಂದ್ರ ಸಚಿವೆ ನಿರ್ಮಲಾ ಹಾಕಿಕೊಟ್ಟ ಡಿಜಿಟಲ್ ಬಜೆಟ್ ಮೇಲ್ಪಂಕ್ತಿ ಅನುಸರಿಸದ ಸಿಎಂ ಯಡಿಯೂರಪ್ಪ
Published On - 12:20 pm, Mon, 8 March 21