ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಜೊತೆ ಇಬ್ಬರು ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆ
ಈ ಬಾರಿ ಕರ್ನಾಟಕದಲ್ಲಿ 20 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಲು ಗುರಿ ಹೊಂದಿರುವ ಕಾಂಗ್ರೆಸ್ ಜೆಡಿಎಸ್, ಬಿಜೆಪಿ ನಾಯಕರುಗಳಿಗೆ ಗಾಳ ಹಾಕಿದೆ. ಇದಕ್ಕೆ ಪೂರಕವೆಂಬಂತೆ ಲೋಕಸಭಾ ಚುನಾವಣೆ ಹೊತ್ತಲ್ಲೇ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಸೇರಿದಂತೆ ಇಬ್ಬರು ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಬೆಂಗಳೂರು, (ಮಾರ್ಚ್ 12): ಲೋಕಸಭಾ ಚುನಾವಣೆ (Loksabha Elections 2024) ಹೊತ್ತಲ್ಲೇ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ(jayaprakash hegde) ಸೇರಿದಂತೆ ಇಬ್ಬರು ಮಾಜಿ ಶಾಸಕರು ಕಾಂಗ್ರೆಸ್(Congress) ಸೇರ್ಪಡೆಯಾಗಿದ್ದಾರೆ. ಇಂದು(ಮಾರ್ಚ್ 12) ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ , ಮಾಜಿ ಶಾಸಕರಾದ ಸುಕುಮಾರ್ ಶೆಟ್ಟಿ, ಮತ್ತು ಎಂ.ಪಿ.ಕುಮಾರಸ್ವಾಮಿ ಕಾಂಗ್ರೆಸ್ ಸೇರ್ಪಡೆಯಾದರು. ಈ ಮೂಲಕ ಜಯಪ್ರಕಾಶ್ ಹೆಗ್ಡೆ ಅವರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆಗಳು ಹೆಚ್ಚಿವೆ.
ಜಯಪ್ರಕಾಶ್ ಹೆಗ್ಡೆ ಮಾತು
ಕಾಂಗ್ರೆಸ್ ಸೇರ್ಪಡೆ ಬಳಿಕ ಮಾತನಾಡಿದ ಜಯಪ್ರಕಾಶ್ ಹೆಗ್ಡೆ, ಹಿಂದಿನ ಕೆಲ ಕಹಿ ಘಟನೆಗಳನ್ನ ಬಿಟ್ಟು, ಸಿಹಿ ಘಟನೆಗಳ ಜೊತೆಗೆ ಮುಂದುವರೆಯಬೇಕು. ಅದಕ್ಕೆ ನಾನು ಬಂದಿದ್ದೇನೆ, ಸರ್ಕಾರದ ಗ್ಯಾರಂಟಿ ಯೋಜನೆಗಳನ್ನ ಮನೆ ಮನೆಗೆ ಹೋಗಿ ನೆನಪು ಮಾಡಿಕೊಡಬೇಕು. ಈ ಹಿಂದೆ ಮೀನುಗಾರರಿಗೆ ಸಬ್ಸಿಡಿ ನಾನು ಕೊಡಿಸಿದ್ದೆ. ಅದನ್ನು ಪುನಃ ನೆನಪು ಮಾಡಿಕೊಡಬೇಕು. ಯಾಕೆಂದರೆ ಹಿಂದಿನವರು ಹೇಳದೆ ಇರಬಹುದು. ನಾನು ಆಯೋಗ ಅಧ್ಯಕ್ಷನಾಗಿದ್ದ ಮೇಲೆ ಒಂದು ಕಡೆ ಹೋಗಿದ್ದೆ. ಆಹ ಒಬ್ಬರು ಬಂದು ನೀವು ಸಚಿವರು, ಸಂಸದರು ಆಗಿದ್ರಂತೆ ಎಂದು ಕೇಳಿದ್ರು. ಮತದಾರರ ಮತ ಹಾಕಿದ್ದಕ್ಕೆ ನಾನು ಸಂಸದ, ಮಂತ್ರಿ ಆಗಿದ್ದು ಎಂದು ಹೇಳಿದೆ ಎಂದರು.
ಇದನ್ನೂ ಓದಿ: ಯಾರ್ಯಾರಿಗೆ ಟಿಕೆಟ್? ದಿಲ್ಲಿಯಿಂದ ಹೊಸ ಸುದ್ದಿ ಹೊತ್ತು ತಂದ ಅಶೋಕ್ , ಬೊಮ್ಮಾಯಿ
ಕಳೆದ ಬಾರಿಗಿಂತ ಈ ಬಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚಿತ್ರಣ ಬದಲಾಗಿದೆ. ಕಳೆದ ಎರಡು ಅವಧಿಗಳಲ್ಲಿ ಪ್ರಧಾನಿ ಮೋದಿ ಅಲೆಯಿಂದ ರಾಜ್ಯದ ಬಿಜೆಪಿ ನಾಯಕರಿಗೆ ಗೆಲುವು ಸುಲಭ ಮಾರ್ಗವಾಗಿತ್ತು. ಆದರೆ ಈ ಬಾರಿ ಬಿಜೆಪಿ ಗೆಲುವಿನ ಹಾದಿ ಅಷ್ಟು ಸುಲಭವಾಗಿಲ್ಲ. ಒಂದು ವೇಳೆ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್‌ನಿಂದ ಲೋಕಸಭಾ ಚುನಾವಣಾ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಬಿಜೆಪಿಯ ಗೆಲುವು ಕಷ್ಟ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಜಯಪ್ರಕಾಶ್ ಹೆಗ್ಡೆ ಜನತಾದಳದ ಮೂಲಕ ರಾಜ್ಯದ ರಾಜಕೀಯ ರಂಗಕ್ಕೆ ಪ್ರವೇಶಿಸಿದ್ದರು. 1994ರಲ್ಲಿ ಬ್ರಹ್ಮಾವರ ಕ್ಷೇತ್ರದಲ್ಲೇ ಮೊದಲ ಬಾರಿ ಜಯಗಳಿಸುವ ಮೂಲಕ ರಾಜ್ಯ ವಿಧಾನಸಭೆಯನ್ನು ಪ್ರವೇಶಿಸಿದ್ದರು. ಬಳಿಕ 2004ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಸತತ 11 ವರ್ಷ ಈ ಕ್ಷೇತ್ರವನ್ನು ಪ್ರತಿನಿಧಿಸಿ ಮೀನುಗಾರಿಕಾ ಸಚಿವರಾಗಿ ಕೂಡ ಸೇವೆ ಸಲ್ಲಿಸಿದ್ದರು.
ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಉಡುಪಿ ಜಿಲ್ಲೆಯ ಮೊದಲ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಬಳಿಕ ಕಾಂಗ್ರೆಸ್ ಪಕ್ಷ ಸೇರಿ 2012ರಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದು ಸಂಸದರಾಗಿದ್ದರು. ಬಳಿಕ ಕಾಂಗ್ರೆಸ್ ಪಕ್ಷ ತ್ಯಜಿಸಿ ಬಿಜೆಪಿಗೆ ಸೇರಿಕೊಂಡಿದ್ದರು. ಬಿಜೆಪಿ ಸರಕಾರ ಇದ್ದಾಗ ಇವರನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ನೇಮಿಸಿತ್ತು. ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಅಧ್ಯಯನ ವರದಿಯನ್ನು ಇತ್ತೀಚಿಗಷ್ಟೇ ಸರಕಾರಕ್ಕೆ ಸಲ್ಲಿಸಿದ್ದರು.
ಆಯೋಗದ ಅಧ್ಯಕ್ಷ ಅವಧಿ ಮುಗಿದ ಆನಂತರ ಕಾಂಗ್ರೆಸ್ ಸೇರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿದ್ದರು. ಅದರಂತೆ ಇದೀಗ ಜಯಪ್ರಕಾಶ್ ಹೆಗ್ಡೆ ಅವರು ಕಾಂಗ್ರೆಸ್ಗೆ ವಾಪಸ್ ಆಗಿದ್ದು, ಈ ಬಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗುವವ ಎಲ್ಲ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:23 pm, Tue, 12 March 24