ಬೆಂಗಳೂರು: ನೀರಿನ ವಿಚಾರದಲ್ಲಿ ಜೆಡಿಎಸ್ ಬಿಜೆಪಿ ಮತ್ತು ಕಾಂಗ್ರೆಸ್ ಮೂರು ವಿಷಯಗಳು ಒಂದೇ, ನಮ್ಮಲ್ಲಿ ಭೇದಭಾವ ಇಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ (HD Deve Gowda) ಸ್ಪಷ್ಟಪಡಿಸಿದ್ದಾರೆ. ಈಮೂಲಕ ಕಾವೇರುತ್ತಿರುವ ಮೇಕೆದಾಟು ಯೋಜನೆ (Mekedatu Project) ಕುರಿತು ಪಕ್ಷಾತೀತವಾಗಿ ಒಗ್ಗೂಡುವ ಸೂಚನೆಯನ್ನು ರಾಜ್ಯದ ಹಿರಿಯ ರಾಜಕಾರಣಿಗಳಾದ ಅವರು ನೀಡಿದ್ದಾರೆ.
ಸದ್ಯ ಮಧ್ಯಂತರ ಚುನಾವಣೆಗೆ ಹೋಗುವ ಯೋಚನೆ ನಮಗಿಲ್ಲ. ಈಗ ಜಿ.ಪಂ, ತಾ.ಪಂ ಚುನಾವಣೆ ಬರುತ್ತಿದೆ. ಆ ನಂತರ ಚುನಾವಣೆ ಬಂದೇ ಬಿಡುತ್ತೆ. ಸಿದ್ದರಾಮಯ್ಯ ನನ್ನ ಶಿಷ್ಯ ಅಲ್ಲಾ, ಎಲ್ಲರೂ ಕೂಡ ನಾಯಕರೇ, ಅವರೆಲ್ಲರೂ ಈಗ ಅವರದೇ ಗೌರವಯುತ ಸ್ಥಾನ ತಲುಪಿದ್ದಾರೆ. ಅವರೆಲ್ಲರಿಗೂ ಆ ಗೌರವ ಕೊಡಲೇಬೇಕು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಸಿಎಂ ಬೊಮ್ಮಾಯಿ ಭೇಟಿ ವೇಳೆ ಯಾವುದೇ ಚರ್ಚೆ ಮಾಡಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್.ಆರ್.ಬೊಮ್ಮಾಯಿ ಮತ್ತು ನಾನು ಒಟ್ಟಿಗಿದ್ದೆವು. ಜನತಾ ಪರಿವಾರದಲ್ಲಿದ್ದರಿಂದ ಭೇಟಿಗೆ ಬರುವುದಾಗಿ ಹೇಳಿದ್ದರು. ಅಂತೆಯೇ ಭೇಟಿಯಾಗಿದ್ದಾರೆ. ಆದ್ದರಿಂದ ಆಶೀರ್ವಾದ ಪಡೆಯಲು ಮನೆಗೆ ಬಂದಿದ್ದರು. ರಾಜ್ಯಕ್ಕೆ ಒಳ್ಳೆಯ ಕೆಲಸ ಮಾಡಿ ಎಂದು ಸಿಎಂ ಹೇಳಿದ್ದೇನೆ. ಸರ್ಕಾರದ ಒಳ್ಳೆಯ ಕೆಲಸಗಳಿಗೆ ನಮ್ಮ ಸಹಕಾರ ಇರುತ್ತದೆ ಎಂದು ತಿಳಿಸಿದ್ದೇನೆ ಎಂದು ಬೆಂಗಳೂರಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.
ನೀರಾವರಿ ಹೋರಾಟದ ವಿಚಾರಕ್ಕೆ ನಮ್ಮ ಬೆಂಬಲವಿರುತ್ತದೆ. ದೆಹಲಿ ಸೇರಿದಂತೆ ಎಲ್ಲ ಕಡೆ ಓಡಾಡಲು ನನಗೆ ಆಗುವುದಿಲ್ಲ. ನನ್ನ ಮೊಮ್ಮಗ ಪ್ರಜ್ವಲ್ ರೇವಣ್ಣ ಸಂಸದನಿದ್ದಾನೆ, ಆತ ಹೋರಾಟಗಳಿಗೆ ಆಗಮಿಸುತ್ತಾನೆ. ರಾಜ್ಯದ ಎಲ್ಲಾ ನಾಯಕರು ಮುಖ್ಯಮಂತ್ರಿ ಆಗಲು ಅಸಾಧ್ಯ. ಸಿದ್ದರಾಮಯ್ಯ ಸೇರಿದಂತೆ ಹಲವರು ಜನತಾ ಪರಿವಾರದಲ್ಲಿದ್ದರು. ಆದರೆ ಅವರೆಲ್ಲರೂ ಸಿಎಂ ಆಗಲಿಲ್ಲ ಎಂದು ಸಹ ದೇವೇಗೌಡರು ಹೇಳಿದರು.
ರಾಜಕಾರಣದಲ್ಲಿ ವಯಸ್ಸು ಮುಖ್ಯವಲ್ಲ. ನಾವು ಮಹಾಭಾರತವನ್ನು ನೆನಪಿಸಿಕೊಂಡರೆ ಇದು ವಯಸ್ಸು ಮುಖ್ಯವಲ್ಲ ಎಂಬುದು ಅರ್ಥವಾಗುತ್ತದೆ. ಭೀಷ್ಮ ವಯೋವೃದ್ಧನಾದರೂ ಹತ್ತು ದಿನ ಯುದ್ಧ ಮಾಡಿದ. ಕರ್ಣ ಒಂದೂವರೆ ದಿನ ಯುದ್ಧ ಮಾಡಿದ. ರಾಜಕಾರಣ ಮಾಡಲು ಅಥವಾ ಜನರ ಕೆಲಸ ಮಾಡಲು ಉತ್ಸಾಹ ಮುಖ್ಯವೇ ಹೊರತು ವಯಸ್ಸು ಮುಖ್ಯವಲ್ಲ. ಎಂದು ಅವರು ದೃಢ ವಿಶ್ವಾಸ ವ್ಯಕ್ತಪಡಿಸಿದರು. ಯುವ ರಾಜಕಾರಣಿಗಳು ವಯಸ್ಸು ಇನ್ನೂ ಇದೆ ಎಂದು ಮನೆಯಲ್ಲಿ ಮಲಗಿಕೊಂಡರೆ ಏನು ಪ್ರಯೋಜನ? ಎಂದು ಅವರು ಇದೇ ಸಂದರ್ಭದಲ್ಲಿ ಪ್ರಶ್ನಿಸಿದರು.
ಸಂಸತ್ತಿನ ಗೌರವ ಇತ್ತೀಚಿಗೆ ಕಡಿಮೆ ಆಗುತ್ತಿದೆ. ಕೂಗಾಡಿ ಸದನ ಮುಂದಕ್ಕೆ ಹಾಕುವುದು ಸರಿಯಲ್ಲ. ಅಲ್ಲಿ ನಾನು ಯಾರಿಗೂ ಬುದ್ಧಿ ಹೇಳುವ ಸ್ಥಾನದಲ್ಲಿ ಇಲ್ಲ. ವ್ಯವಸ್ಥೆ ಹಾಳಾಗಿದೆ. ಎರಡೂ ಕಡೆ ದೋಷವಿದೆ. ಹಠ ಬಿಡಬೇಕು, ಕೂತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಸಂಸತ್ ನಡೆಯದಂತೆ ಮಾಡುವುದು ಸರಿಯಲ್ಲ ಎಂದು ಸಹ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದರು.
ಇದನ್ನೂ ಓದಿ:
ದೇವೇಗೌಡರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಸಿಎಂ ಬಸವರಾಜ ಬೊಮ್ಮಾಯಿ, ದೇವೇಗೌಡರಿಂದ ನೂತನ ಸಿಎಂಗೆ ಸನ್ಮಾನ
ಉಪವಾಸ ಬೇಕಾದ್ರೂ ಮಾಡಲಿ, ಇಲ್ಲ ಊಟ ಮಾಡಲಿ; ನಾವಂತೂ ಮೇಕೆದಾಟು ಮಾಡೇ ಮಾಡ್ತೀವಿ: ಅಣ್ಣಾಮಲೈಗೆ ಸಿಎಂ ಬೊಮ್ಮಾಯಿ ಟಾಂಗ್
(Former PM HD Deve Gowda on Mekedatu Project JDS BJP and Congress all the same when it comes to water for Karnataka)
Published On - 4:39 pm, Sun, 1 August 21