ದೇವನಹಳ್ಳಿ: 14 ವರ್ಷಗಳ ಕಾಲ ದೇಶ ಸೇವೆ ಮಾಡಿದ್ದ ಯೋಧರೋರ್ವರು ಅಗಲಿದ ತಂದೆ ಅಂತ್ಯ ಸಂಸ್ಕಾರಕ್ಕೆ ಎಂದು ಮನೆಗೆ ಬಂದಿದ್ದರು. ಆದರೆ ಹೀಗೆ ಮನೆಗೆ ಬಂದ ಈ ಯೋಧರಿಗೆ ತಂದೆಯ ಅಂತ್ಯಕ್ರಿಯೆಯೇ ಸವಾಲಾಗಿ ಪರಿಣಮಿಸಿತ್ತು. ಹೀಗಾಗಿ ದೇಶ ಸೇವೆಗೆ ಅಂತ್ಯ ಹೇಳಿದ ಮಾಜಿ ಸೈನಿಕ ಕಳೆದ ಏಳು ವರ್ಷಗಳಿಂದ ಗ್ರಾಮದ ರುದ್ರಭೂಮಿಯಲ್ಲೇ ಬೀಡುಬಿಟ್ಟಿದ್ದಾರೆ.
ನಿವೃತ್ತ ಯೋಧ ನಾಗೇಶ್ ಅವರು ಸ್ಮಶಾನದಲ್ಲೆ ವಾಸ ಮಾಡುತ್ತಾ, ರುದ್ರಭೂಮಿಯನ್ನೇ ಉದ್ಯಾನವನದ ರೀತಿ ಮಾಡಿ ಕಳೆದ ಏಳು ವರ್ಷಗಳಿಂದ ಇಲ್ಲಿಯೇ ವಾಸ ಮಾಡುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಅಣ್ಣೇಶ್ವರ ಗ್ರಾಮದ ನಿವಾಸಿಯಾದ ಇವರು ತಮ್ಮ ತಂದೆ ಮರಣ ಹೊಂದಿದ ಕಾರಣ ಗ್ರಾಮಕ್ಕೆ ಬಂದಿದ್ದರು. ಆದರೆ ಅಂದು ತಂದೆಯ ಅಂತ್ಯಸಂಸ್ಕಾರಕ್ಕೆ ಬಂದ ಅವರಿರ ಬಳಿ ಕಾಡಿನಂತಿದ್ದ ಗ್ರಾಮದ ಸ್ಮಶಾನದಲ್ಲಿ ಗುಂಡಿ ತೆಗೆದು ಅಂತ್ಯ ಸಂಸ್ಕಾರ ಮಾಡುವುದಕ್ಕೆ ಆಗಲಿಲ್ಲ.
ಗ್ರಾಮಸ್ಥರು ಸಹ ಪ್ರತಿ ಬಾರಿ ಅಂತ್ಯಸಂಸ್ಕಾರ ನಡೆಸಲು ಸಮರ್ಪಕ ವ್ಯವಸ್ಥೆಯಿಲ್ಲದೇ ಪರದಾಡುತ್ತಿದ್ದನ್ನು ಕಂಡು ಬೇಸರಗೊಂಡಿದ್ದೆ. ಅಲ್ಲದೇ ದೇಶ ಸೇವೆ ಮಾಡುವ ನಾನು ಹುಟ್ಟಿದ ಊರಿಗೂ ಏನಾದರೂ ಮಾಡಬೇಕು ಎಂದು ಅಂದಿನಿಂದಲೇ ಗ್ರಾಮದ ಸ್ಮಶಾನದಲ್ಲಿ ಬೀಡು ಬಿಟ್ಟಿದ್ದೇನೆ. ಕಳೆದ ಏಳು ವರ್ಷಗಳಿಂದ ಸ್ಮಶಾನ ವಾಸಿಯಾಗಿ ಜೀವನ ಮಾಡುತ್ತಿದ್ದೇನೆ ಎಂದು ನಿವೃತ್ತ ಯೋಧ ನಾಗೇಶ್ ಹೇಳಿದ್ದಾರೆ.
ಪತ್ನಿ ಮತ್ತು ಮಕ್ಕಳಿದ್ದರೂ ಸಹ ಕಳೆದ ಏಳು ವರ್ಷಗಳಿಂದ ದಿನಪೂರ್ತಿ ರುದ್ರಭೂಮಿಯಲ್ಲೇ ಬೀಡುಬಿಟ್ಟಿರುವ ಮಾಜಿ ಸೈನಿಕ ನಿವೃತ್ತಿಯಿಂದ ಬಂದ ಪಿಂಚಣಿ ಹಣದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದ್ದ ಗಿಡ ಮರಗಳನ್ನೆಲ್ಲ ಸ್ವಚ್ಚ ಮಾಡಿ ಸುಲಭವಾಗಿ ಅಂತ್ಯ ಸಂಸ್ಕಾರ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಜತೆಗೆ ಸ್ಮಶಾನದ ಪ್ರತಿಯೊಂದು ಸಮಾಧಿಯ ಬಳಿಯೂ ಅರಣ್ಯ ಇಲಾಖೆಯಿಂದ ಗಿಡಗಳನ್ನು ತಂದು ನೆಟ್ಟಿದ್ದು, ಇದೀಗ ಉದ್ಯಾನವನದಂತೆ ಸ್ಮಶಾನ ಕಂಗೊಳಿಸುತ್ತಿದೆ.
ಅಲ್ಲದೇ ಇಂದಿಗೂ ಬೆಳಗಿನಿಂದ ಮಧ್ಯರಾತ್ರಿವರೆಗೂ ಸ್ಮಶಾನದಲ್ಲೇ ಕಾಲ ಕಳೆಯುತ್ತಿರುವ ಮಾಜಿ ಸೈನಿಕ ನಾಗೇಶ್ ಸ್ಮಶಾನ ರುದ್ರನಾಗಿ ಕೆಲಸ ಮಾಡ್ತಿದ್ದಾರೆ. ಇನ್ನೂ ದೇಶ ಸೇವೆ ಮಾಡಿ ಮನೆಗೆ ಬಂದ ಯೋಧನಿಗೆ ಹಲವು ಕಡೆ ಕೆಲಸ ಸಿಕ್ಕಿದ್ದರೂ, ಹೋಗದೆ ಸ್ಮಶಾನ ಕಾವಲು ಕಾಯುವುದು ಮತ್ತು ನಿರ್ವಹಣೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಮಾಜಿ ಸೈನಿಕರ ಈ ಕಾರ್ಯದಿಂದ ಗ್ರಾಮಸ್ಥರು ಅಂತ್ಯ ಸಂಸ್ಕಾರ ಮಾಡಲು ಅವಕಾಶವಾಗಿದೆ ಎಂದು ಗ್ರಾಮಸ್ಥರಾದ ನಾರಾಯಣಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ 14 ವರ್ಷಗಳ ಕಾಲ ತಾಯ್ನಾಡಿಗಾಗಿ ದುಡಿದ ಯೋಧ ಇಂದಿಗೂ ಯಾವುದೇ ಸ್ವಾರ್ಥವಿಲ್ಲದೆ ಗ್ರಾಮಸ್ಥರಿಗಾಗಿ ನಿಸ್ವಾರ್ಥ ಸೇವೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇನ್ನು ಇದೇ ರೀತಿ ಗ್ರಾಮಸ್ಥರು ತಮ್ಮ ಗ್ರಾಮದ ಸರ್ಕಾರಿ ಭೂಮಿಗಳನ್ನ ಸ್ವಚ್ಛಮಾಡಿಕೊಂಡಲ್ಲಿ ಸರ್ಕಾರದ ಆಸರೆಗಾಗಿ ಕಾದು ಕೂರುವ ಅವಶ್ಯಕತೆ ಖಂಡಿತಾ ಬರುವುದಿಲ್ಲ ಎಂಬ ಮಾತುಗಳು ಕೇಳಿಬಂದಿವೆ.
ಇದನ್ನೂ ಓದಿ:
ಯೋಧರು ತೆರಳುತ್ತಿದ್ದ ಬಸ್ ಸ್ಫೋಟಿಸಿದ ನಕ್ಸಲರು: ಮೂವರು ಹುತಾತ್ಮ, 21 ಯೋಧರಿಗೆ ಗಾಯ
Published On - 1:46 pm, Tue, 30 March 21