ಎರಡೇ ತಿಂಗಳಲ್ಲಿ ನಾಲ್ವರು ವಿಐಪಿಗಳ ಬಂಧನ; ಕರ್ನಾಟಕಕ್ಕೆ ಶಾಕ್ ನೀಡಿದ ಘಟನೆಗಳಿವು

|

Updated on: Jun 24, 2024 | 10:43 AM

ಕೇವಲ 2 ತಿಂಗಳ ಅವಧಿಯಲ್ಲಿ ನಾಲ್ಕು ಹೈ ಪ್ರೊಫೈಲ್​​ ಕೇಸ್​​ಗಳಿಂದ ಕರ್ನಾಟಕ ಬೆಚ್ಚಿಬಿದ್ದಿದೆ. ಅಷ್ಟಕ್ಕೂ ಈ ಅಪರಾಧ ಪ್ರಕರಣಗಳಲ್ಲಿ ಬಂಧನವಾಗಿದ್ದು ಅಂತಿಂಥವರಲ್ಲ. ಘಟನಾನುಘಟಿ ರಾಜಕಾರಣಿಗಳು ಹಾಗೂ ಖ್ಯಾತ ನಟ. ಮಾಜಿ ಸಚಿವ ಹೆಚ್​ಡಿ ರೇವಣ್ಣ ಮತ್ತು ಅವರ ಕುಟುಂಬದವರು ಹಾಗೂ ನಟ ದರ್ಶನ್ ಬಂಧನಕ್ಕೆ ಕಾರಣವಾದ ಘಟನೆಗಳ ಇಣುಕುನೋಟ ಇಲ್ಲಿದೆ.

ಎರಡೇ ತಿಂಗಳಲ್ಲಿ ನಾಲ್ವರು ವಿಐಪಿಗಳ ಬಂಧನ; ಕರ್ನಾಟಕಕ್ಕೆ ಶಾಕ್ ನೀಡಿದ ಘಟನೆಗಳಿವು
ಎರಡೇ ತಿಂಗಳಲ್ಲಿ ನಾಲ್ವರು ವಿಐಪಿಗಳ ಬಂಧನ; ಕರ್ನಾಟಕಕ್ಕೆ ಶಾಕ್
Follow us on

ಬೆಂಗಳೂರು, ಜೂನ್ 24: ಅತ್ಯಾಚಾರ, ಕಿಡ್ನಾಪ್, ಕೊಲೆ, ಬಲವಂತದ ಸಲಿಂಗಕಾಮ ಪ್ರಕರಣಗಳಲ್ಲಿ ಕರ್ನಾಟಕದಲ್ಲಿ (Karnataka) ಕೇವಲ 2 ತಿಂಗಳ ಅವಧಿಯಲ್ಲಿ ನಾಲ್ವರು ಪ್ರಮುಖರ ಬಂಧನವಾಗಿದೆ. ಅದೂ ಅಂತಿಂಥವರಲ್ಲ, ವಿಐಪಿಗಳೇ (VIPs) ಪೊಲೀಸರ ಅತಿಥಿಗಳಾಗಿದ್ದಾರೆ. ಈ ನಾಲ್ಕು ಹೈ ಪ್ರೊಫೈಲ್ ಪ್ರಕರಣಗಳು ರಾಜ್ಯವನ್ನೇ ಬೆಚ್ಚಿಬೀಳಿಸಿವೆ. ಒಂದೇ ತಿಂಗಳಲ್ಲಿ ಜೈಲು ಕಂಬಿ ಎಣಿಸಿದ ರಾಜ್ಯದ ನಾಲ್ವರು ಗಣ್ಯವ್ಯಕ್ತಿಗಳಲ್ಲಿ ಮೂವರು ಜನಪ್ರತಿನಿಧಿಗಳಾದರೆ, ಒಬ್ಬರು ಸ್ಟಾರ್ ನಟ. ಈ ನಾಲ್ವರಲ್ಲಿ ಇಬ್ಬರು ಜೈಲಿನಲ್ಲಿ, ಒಬ್ಬರು ಎಸ್​ಐಟಿ ಕಸ್ಟಡಿ ಹಾಗೂ ಒಬ್ಬರು ಜಾಮೀನಿನ ಮೇಲೆ ಹೊರಗಡೆ ಇದ್ದಾರೆ.

ಅಶ್ಲೀಲ ವಿಡಿಯೋ, ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ಬಂಧನ

ಅತ್ಯಾಚಾರ ಕೇಸ್​​​ನಲ್ಲಿ ಹಾಸನ ಸಂಸದರಾಗಿದ್ದ (ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದರಿಂದ ಅವರು ಈಗ ಮಾಜಿಯಾಗಿದ್ದಾರೆ) ಪ್ರಜ್ವಲ್ ಬಂಧನವಾಗಿದೆ. ಮೇ 30ರಂದು ಬೆಂಗಳೂರು ವಿಮಾನ ನಿಲ್ದಾಣದಲ್ಲೇ ವಿದೇಶದಿಂದ ಬರುತ್ತಿದ್ದಾಗ ಪ್ರಜ್ವಲ್ ರೇವಣ್ಣ ಬಂಧನವಾಗಿತ್ತು. ಒಟ್ಟು ಮೂರು ಪ್ರಕರಣಗಳನ್ನು ಅವರು ಎದುರಿಸುತ್ತಿದ್ದಾರೆ. ಸದ್ಯ ಪ್ರಜ್ವಲ್ ರೇವಣ್ಣ ಎಸ್​​​ಐಟಿ ಕಸ್ಟಡಿಯಲ್ಲಿದ್ದಾರೆ. ಒಂದರ ನಂತರ ಒಂದು ಕೇಸ್​​ನಲ್ಲಿ ಎಸ್​ಐಟಿ ಕಸ್ಟಡಿಗೆ ಪಡೆಯುತ್ತಿದೆ. ಇಂದು ಮೂರನೇ ಕೇಸ್​​ನಲ್ಲಿ ಎಸ್​ಐಟಿ ಕಸ್ಟಡಿ ಅಂತ್ಯವಾಗಲಿದ್ದು, ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರುವ ಸಾಧ್ಯತೆ ಇದೆ.

ಕಿಡ್ನಾಪ್ ಪ್ರಕರಣದಲ್ಲಿ ಮಾಜಿ ಸಚಿವ ರೇವಣ್ಣ

ಮಹಿಳೆಯ ಅಪಹರಣ ಪ್ರಕರಣದಲ್ಲಿ ಜೈಲು ಸೇರಿದ್ದ ಮಾಜಿ ಮಂತ್ರಿ ಹೆಚ್​​ಡಿ ರೇವಣ್ಣ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ಮೇ 4ರಂದು ರೇವಣ್ಣರನ್ನು ಎಸ್​​ಐಟಿ ಅಧಿಕಾರಿಗಳು ಬಂಧಿಸಿದ್ದರು. 6 ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಮಾಜಿ ಸಚಿವ ಮೇ 13ರಂದು ಜಾಮೀನು ಪಡೆದು ಹೊರಬಂದಿದ್ದಾರೆ.

ಕೊಲೆ ಕೇಸ್​​ನಲ್ಲಿ ಖ್ಯಾತ ನಟ ದರ್ಶನ್ ಜೈಲುಪಾಲು

ಚಿತ್ರದುರ್ಗದ ರೇಣುಕಾಸ್ವಾಮಿ ಎಂಬವರ ಕೊಲೆ ಪ್ರಕರಣದಲ್ಲಿ ಖ್ಯಾತ ನಟ ದರ್ಶನ್ ಜೈಲುಪಾಲಾಗಿದ್ದಾರೆ. 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿರುವ ನಟ ದರ್ಶನ್​ರನ್ನು ಜೂನ್ 11ರಂದು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಒಟ್ಟು 17 ಜನರ ಬಂಧನವಾಗಿದೆ.

ಇದನ್ನೂ ಓದಿ: ಉಪ್ಪು ಖಾರ ಇಲ್ಲದ ಊಟ, ಸೊಳ್ಳೆ ಕಾಟ: ಪವಿತ್ರಾ ಗೌಡಗೆ ನರಕವಾಯ್ತು ಜೈಲು

ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಸೂರಜ್​ಗೆ ಜೈಲು

ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಜೆಡಿಎಸ್ ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಜೈಲುಪಾಲಾಗಿದ್ದಾರೆ. ಹಾಸನದಲ್ಲಿ ಭಾನುವಾರ ಸೂರಜ್ ರೇವಣ್ಣರನ್ನು ಪೊಲೀಸರು ಬಂಧಿಸಿದ್ದರು. ಸದ್ಯ ನ್ಯಾಯಾಲಯದ 14 ದಿನ ನ್ಯಾಯಾಂಗ ಬಂಧನ ವಿಧಿಸಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ವರದಿ: ಪ್ರದೀಪ್, ಟಿವಿ9

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ