ನೆಲಮಂಗಲ: ಸುಮಾರು ಇಪ್ಪತ್ತು ವರ್ಷಗಳಿಂದ ಚಿನ್ನಾಭರಣ ಅಂಗಡಿಯಲ್ಲಿ ಲೇವಾದೇವಿ ವ್ಯವಹಾರ ಮಾಡುತ್ತಿದ್ದ ವ್ಯಾಪಾರಿಯೊಬ್ಬ ನಂಬಿದ್ದವರಿಗೆ ಮೋಸ ಮಾಡಿ ಓಡಿಹೋಗಿದ್ದಾನೆ ಎಂದು ಚಿನ್ನ ಅಡ ಇಟ್ಟಿದ್ದ ಜನರು ದೂರಿದ್ದಾರೆ. ಬೆಂಗಳೂರು ಉತ್ತರ ತಾಲ್ಲೂಕಿನ ಚಿಕ್ಕಬಿದರಕಲ್ಲು ಗ್ರಾಮದಲ್ಲಿ ಕೃಷ್ಣ ಜ್ಯುವೆಲರ್ಸ್ ಹೆಸರಿನ ದೊಡ್ಡ ಅಭರಣ ಅಂಗಡಿ ಇಟ್ಟುಕೊಂಡಿದ್ದ ಚೈನಾರಾಮ್ ಎಂಬಾತ 100ಕ್ಕೂ ಹೆಚ್ಚು ಜನರ, ₹ 5 ಕೋಟಿಗೂ ಹೆಚ್ಚು ಮೌಲ್ಯದ ಒಡವೆಗಳನ್ನು ದೋಚಿಕೊಂಡು ರಾಜಸ್ಥಾನಕ್ಕೆ ಪರಾರಿಯಾಗಿದ್ದಾನೆ ಎಂದು ದೂರಲಾಗಿದೆ.
ಚೈನಾರಾಮ್ ಸೇಟು ಬಗ್ಗೆ ಜನರಲ್ಲಿ ವಿಶ್ವಾಸ ಕುದುರಿತ್ತು. ಎಷ್ಟೋ ಹೆಣ್ಣುಮಕ್ಕಳು ತಮ್ಮ ಮನೆಯವರಿಗೆ ತಿಳಿಯದಂತೆ ಈತನ ಬಳಿ ಲೇವಾದೇವಿ ವ್ಯವಹಾರ ಮಾಡಿದ್ದರು. ತಿಂಗಳ ಕಂತಿನಲ್ಲಿ ಹಣ ಕಟ್ಟಿಸಿಕೊಂಡು ಆಭರಣ ಕೊಡುವ ಯೋಜನೆಯನ್ನೂ ಚೈನಾರಾಮ್ ಆರಂಭಿಸಿದ್ದ. ಇದನ್ನು ನಂಬಿದ್ದ ನೂರಾರು ಜನರು ಇವನ ಬಳಿ ಚೀಟಿ ಹಾಕಿದ್ದರು. ಮದುವೆಗೆಂದು ಕೂಡಿಟ್ಟಿದ್ದ ಲಕ್ಷಾಂತರ ರುಪಾಯಿ ಹಣವನ್ನು ಈತನಿಗೆ ಕೊಟ್ಟಿದ್ದರು. ಚೈನಾರಾಮ್ ಓಡಿಹೋದ ಕಾರಣ, ಈತನಿಂದ ಮೋಸ ಹೋಗಿರುವ ಅದೆಷ್ಟೋ ಕುಟುಂಬಗಳು ಸದ್ಯ ಕಣ್ಣೀರಲ್ಲಿ ಕೈ ತೊಳೆಯುತ್ತಿವೆ.
ಬೆಂಗಳೂರಿನಿಂದ ಹೋಗುವ ಮುನ್ನ ತನ್ನ ಮಕ್ಕಳ ಸ್ಕೂಲ್ ವಾಟ್ಸ್‌ಆಪ್ ಗ್ರೂಪ್‌ನಲ್ಲಿ ನಾವು ರಾಜಸ್ಥಾನಕ್ಕೆ ಹೋಗ್ತಿದ್ದಿವಿ ಎಂದು ಮೆಸೇಜ್ ಮಾಡಿ ಲೆಫ್ಟ್ ಆಗಿದ್ದ. ಸದ್ಯ ಈತನ ಬಳಿ ಹಣ ಹೂಡಿಕೆ ಮಾಡಿರುವವರು ಪ್ರತಿದಿನ ಈತನನ್ನು ಎದುರು ನೋಡುತ್ತಿದ್ದಾರೆ. ಜನರು ಹೂಡಿಕೆ ಮಾಡಿದ್ದ ಹಣವನ್ನು ಈತ ದುಶ್ಚಟಗಳಿಗೆ ದಾಸನಾಗಿ ಕಳೆದುಕೊಂಡಿದ್ದಾನೆ ಎಂದು ಕೆಲವರು ಶಂಕಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮಾದಕವಸ್ತು ಪೂರೈಕೆಗೆ ಯತ್ನಿಸಿದ ಮೂವರ ಸೆರೆ
ಬೆಂಗಳೂರು: ಮಾದಕವಸ್ತು ಸರಬರಾಜು ಮಾಡಲು ಯತ್ನಿಸಿದ ಮೂವರನ್ನು ಬೆಂಗಳೂರಿನ ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿದ್ದಾರೆ ರಾಹುಲ್, ತುರೇ ಮುಸ್ತಫಾ, ಶಿಹಾಬ್ ಬಂಧಿತರು. ಇವರಿಂದ ₹ 2.5 ಲಕ್ಷ ಮೌಲ್ಯದ 4 ಕೆಜಿ ಗಾಂಜಾ, 23 ಗ್ರಾಂ ಎಂಡಿಎಂ, 12 ಗ್ರಾಂ ಎಕ್ಸ್ಟಸಿ ಮಾತ್ರೆಗಳು ಮತ್ತು ಕೃತ್ಯಕ್ಕೆ ಬಳಸಿದ ಕಾರು ವಶಪಡಿಸಿಕೊಳ್ಳಲಾಗಿದೆ.
ಕಿರುಕುಳ ಆರೋಪ: ಲೆಕ್ಕಾಧಿಕಾರಿ ಆತ್ಮಹತ್ಯೆಗೆ ಯತ್ನ
ಮಡಿಕೇರಿ: ವಾಟರ್‌ಮೆನ್‌ಗಳ ವಿರುದ್ಧ ಕಿರುಕುಳ ಆರೋಪ ಹೊರಿಸಿ, ಗ್ರಾಮ ಪಂಚಾಯಿತಿ ಲೆಕ್ಕಾಧಿಕಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆಯಲ್ಲಿ ನಡೆದಿದೆ. ಆತ್ಮಹತ್ಯೆ ಯತ್ನಕ್ಕೂ ಮುನ್ನ ವಿಡಿಯೊ ಮಾಡಿದ್ದಾರೆ. ವಾಟರ್‌ಮೆನ್‌ಗಳು ಕಿರುಕುಳ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಸ್ವಸ್ಥ ಹರಿಣಿಗೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: Bengaluru Crime: ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತರ ನಡುವೆ ಶುರುವಾದ ಜಗಳ ಸಾವಿನಲ್ಲಿ ಅಂತ್ಯ