ಹುಬ್ಬಳ್ಳಿ: ಸರ್ಕಾರಿ ಆಸ್ಪತ್ರೆ ಎಂದರೆ ಮುಗುಮುರಿಯುವವರೆ ಹೆಚ್ಚು. ಅಲ್ಲಿ ಉತ್ತಮ ಚಿಕಿತ್ಸೆ ನೀಡುವ ವೈದ್ಯರು, ತಜ್ಞರು ಇದ್ದರೂ ಅಲ್ಲಿನ ವಾತಾವರಣ, ಅವರು ನೀಡುವ ಊಟ-ಉಪಚಾರ ಯಾವುದೂ ಸರಿಯಾಗಿ ಇರುವುದಿಲ್ಲ ಎನ್ನವುದು ಸಾಮಾನ್ಯವಾಗಿ ಕೇಳಿ ಬರುವ ಮಾತು. ಆದರೆ ಇದಕ್ಕೆಲ್ಲಾ ಅಪವಾದ ಎಂಬಂತೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಇದ್ದು, ಖಾಸಗಿ ಆಸ್ಪತ್ರೆಯನ್ನು ಮೀರಿಸುವಂತೆ ರೋಗಿಗಳಿಗೆ ಊಟ ಉಪಚಾರವನ್ನು ನೀಡಲಾಗುತ್ತಿದೆ.
ಒಂದಲ್ಲಾ ಒಂದು ವಿಷಯದಲ್ಲಿ ಹೆಸರು ಮಾಡುತ್ತಿದ್ದ ಕಿಮ್ಸ್ ಆಸ್ಪತ್ರೆ, ಇತ್ತೀಚೆಗಂತೂ ಎಲ್ಲರ ಗಮನ ಸೆಳೆಯುವ ಕಾರ್ಯ ಮಾಡುತ್ತಿದೆ. ಕೊರೊನಾ ಸಮಯದಲ್ಲಿ ಎಲ್ಲರಿಂದ ಶಭಾಷ್ಗಿರಿ ಪಡೆದಿರುವ ಕಿಮ್ಸ್ ಇದೀಗ ಮತ್ತೊಂದು ಸಾಧನೆಗೆ ಕೈ ಹಾಕಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಿಮ್ಸ್, ಹೈಟೆಕ್ ಆಹಾರ ಪದ್ಧತಿಯನ್ನೂ ಪರಿಚಯಿಸುತ್ತಿದೆ.
ರೋಗಿಗಳ ರೋಗಗಳಿಗೆ ಅನುಗುಣವಾಗಿ ಆಹಾರವನ್ನು ನೀಡುತ್ತಿದೆ. ಮಧುಮೇಹ ರೋಗಿ ದಾಖಲಾದರೆ ಆ ರೋಗಿಗೆ ಡಯಟ್ ಫುಡ್ ನೀಡಲಾಗುತ್ತಿದೆ. ಹೀಗೆ ಯಾವುದೇ ರೋಗ ಇರುವ ರೋಗಿ ದಾಖಲಾದರೂ, ಅವರಿಗೆ ವೈದ್ಯರು ಸೂಚಿಸುವ ಆಹಾರವನ್ನೇ ಪೂರೈಕೆ ಮಾಡಲಾಗುತ್ತಿದೆ..
ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹೈಟೆಕ್ ಆಹಾರದ ವ್ಯವಸ್ಥೆ ಮಾಡಿರುವುದು ಇದೇ ಮೊದಲು ಎನ್ನಲಾಗಿದೆ. ಕಿಮ್ಸ್ ಗೆ ಅಡ್ಮಿಟ್ ಆಗುವ ಗರ್ಭಿಣಿಯರು, ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳು, ಕ್ಷಯ ರೋಗಿಗಳು, ಸುಟ್ಟ ಗಾಯದ ರೋಗಿಗಳು, ಅಪಘಾತದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಹೀಗೆ ನಾನಾ ರೋಗಿಗಳಿಗೆ ಅವರವರ ರೋಗಗಳಿಗೆ ಪೂರಕವಾದ ಆಹಾರ ಪೂರೈಕೆ ಮಾಡಲಾಗುತ್ತಿದೆ.
ಹಾಲು ಬ್ರೆಡ್, ಇಡ್ಲಿ, ಚಪಾತಿ, ರೊಟ್ಟಿ, ರಾಗಿ ಗಂಜಿ, ಅನ್ನ ಸಾಂಬಾರ್,ಉಪ್ಪಿಟ್ಟು ಸೇರಿದಂತೆ ವಿವಿಧ ಬಗೆಯ ಆಹಾರವನ್ನು ರೋಗಿಗಳಿಗೆ ಉಚಿತವಾಗಿ ಪೂರೈಕೆ ಮಾಡಲಾಗುತ್ತಿದೆ. ಹೈಟೆಕ್ ಪದ್ಧತಿಯಲ್ಲಿ ಆಹಾರ ತಯಾರಿಸಿ ಸರಬರಾಜು ಮಾಡುತ್ತಿರುವುದರಿಂದ ರೋಗಿಗಳು ಖುಷಿಪಟ್ಟಿದ್ದಾರೆ. ಗುಣಮಟ್ಟದ ಆಹಾರ ನೀಡುತ್ತಿರುವುದರಿಂದ ರೋಗಿಗಳಿಗೆ ಇದೊಂದು ವರದಾನವಾಗಿಯೂ ಇದೆ ಎಂದು ಕಿಮ್ಸ್ ಆಸ್ಪತ್ರೆಯ ಸಿಇಓ ರಾಜಶ್ರೀ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಇರುವ ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆಯುತ್ತಿರುವ ಸರ್ಕಾರಿ ಆಸ್ಪತ್ರೆ ಎನ್ನುವ ಹೆಗ್ಗಳಿಕೆಗೆ ಕಿಮ್ಸ್ ಪಾತ್ರವಾಗುತ್ತಿದೆ. ನಿತ್ಯ 1500 ಒಳ ರೋಗಿಗಳಿಗೆ ಇಂತಹ ಗುಣಮಟ್ಟದ ಆಹಾರವನ್ನು ಕಿಮ್ಸ್ ಪೂರೈಕೆ ಮಾಡುತ್ತಿದೆ. ಪ್ರತಿದಿನ ಪ್ರತಿ ರೋಗಿಗೆ ₹68ಕ್ಕೆ ಗುಣಮಟ್ಟದ ಆಹಾರ ಪೂರೈಕೆ ಮಾಡಲು ಹೊರ ಗುತ್ತಿಗೆ ನೀಡಲಾಗಿದೆ. ಬೆಳಗ್ಗೆ ರೋಗಿಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಗೂ ಬಿಸಿಬಿಸಿಯಾಗಿ ರೋಗಿಗಳ ಡಯಟ್ಗೆ ತಕ್ಕಂತೆ ಆಹಾರ ಪೂರೈಕೆ ಮಾಡಲಾಗುತ್ತಿದೆ. ಇದಕ್ಕೂ ಮೊದಲಿಗೆ ಕಿಮ್ಸ್ ತಯಾರು ಮಾಡುತ್ತಿದ್ದ ಆಹಾರದಲ್ಲಿ ಸೋರಿಕೆ ಆಗುತ್ತಿತ್ತು ಎನ್ನಲಾಗಿದೆ. ಆದರೆ, ಕಿಮ್ಸ್ಗೆ ಬಜೆಟ್ನಲ್ಲಿ ಉಳಿತಾಯವಾಗುವ ಜತೆಗೆ ರೋಗಿಗಳಿಗೂ ಉತ್ತಮ ಆಹಾರ ಸಿಗುವಂತಾಗಿದೆ.
ಇದನ್ನೂ ಓದಿ:
ಕರಡಿ ದಾಳಿಯಿಂದ ಮಗುವಿನ ಮುಖಕ್ಕೆ ಗಾಯ: ಪ್ಲಾಸ್ಟಿಕ್ ಸರ್ಜರಿಯಿಂದ ಜೀವ ಉಳಿಸಿದ ಕಿಮ್ಸ್ ಆಸ್ಪತ್ರೆ ತಜ್ಞರು
ಬನ್ನೇರುಘಟ್ಟ ಉದ್ಯಾನವನದಿಂದ ತಪ್ಪಿಸಿಕೊಂಡ ಕರಡಿಗೆ ಹುಡುಕಾಟ; ಶೆಟ್ಟಿಹಳ್ಳಿ ಗ್ರಾಮದ ಐವರ ಮೇಲೆ ಕರಡಿ ದಾಳಿ!
( Free lunch arrangements for patients in KIMS government hospital in Hubli )