ಪಾದಯಾತ್ರೆ ಮೂಲಕ ಶ್ರೀಶೈಲಂಗೆ ತೆರಳಿದ್ದ 7 ಮಂದಿಗೆ ಕೊರೊನಾ.. ಭಕ್ತರಲ್ಲಿ ಹೆಚ್ಚಾಯ್ತು ಆತಂಕ
ಬಾಗಲಕೋಟೆಯಲ್ಲಿ ನಿನ್ನೆ ಒಂದೇ ದಿನ 37ಜನರಿಗೆ ಸೋಂಕು ತಗುಲಿದೆ. ಹಾಗೂ ಜಿಲ್ಲೆಯಿಂದ ಶ್ರೀಶೈಲಂಗೆ ಪಾದಯಾತ್ರೆ ಮೂಲಕ ತೆರಳಿದ್ದ 7ಜನ ಭಕ್ತರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಶ್ರೀಶೈಲಂ ಭಕ್ತರಲ್ಲಿ ಆತಂಕ ಹೆಚ್ಚಾಗಿದೆ.
ಬಾಗಲಕೋಟೆ: ಕರ್ನಾಟಕಕ್ಕೆ ಅಪ್ಪಳಿಸಿರೋ ಕೊರೊನಾ 2ನೇ ಅಲೆ ಅಕ್ಷರಶ: ಭಯಾನಕವಾಗಿದೆ. ಕೆಲ ತಿಂಗಳ ಹಿಂದೆ ಇಳಿಕೆ ಕಂಡಿದ್ದ ಕೇಸ್ಗಳ ಸಂಖ್ಯೆ ಈಗ ಮತ್ತೆ ರಾಕೆಟ್ ವೇಗದಲ್ಲಿ ಹೆಚ್ಚಾಗ್ತಿದೆ. ಈ ಪರಿಣಾಮ ನಿನ್ನೆ ಒಂದೇ ದಿನ ರಾಜ್ಯದಲ್ಲಿ ಬರೋಬ್ಬರಿ 7,955ಮಂದಿಗೆ ಹೆಮ್ಮಾರಿ ವಕ್ಕರಿಸಿತ್ತು. ಈಗ ಮತ್ತೊಂದು ಆತಂಕಕಾರಿ ಸಂಗತಿ ಎಂದರೆ ಬಾಗಲಕೋಟೆ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ನಿನ್ನೆ ಒಂದೇ ದಿನ 37ಜನರಿಗೆ ಸೋಂಕು ತಗುಲಿದೆ. ಹಾಗೂ ಜಿಲ್ಲೆಯಿಂದ ಶ್ರೀಶೈಲಂಗೆ ಪಾದಯಾತ್ರೆ ಮೂಲಕ ತೆರಳಿದ್ದ 7ಜನ ಭಕ್ತರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಶ್ರೀಶೈಲಂ ಭಕ್ತರಲ್ಲಿ ಆತಂಕ ಹೆಚ್ಚಾಗಿದೆ.
ಆದರೆ ಬಾಗಲಕೋಟೆ ಜಿಲ್ಲಾಡಳಿತದ ಸಂಪರ್ಕಕ್ಕೆ ಈ 7ಜನ ಭಕ್ತರು ಇನ್ನೂ ಸಿಕ್ಕಿಲ್ಲ. ಕೊರೊನಾ ಟೆಸ್ಟ್ ಮಾಡಲು ಸ್ಯಾಂಪಲ್ ಪಡೆದ ಬಳಿಕವೇ ಭಕ್ತರಿಗೆ ಪಾದಯಾತ್ರೆಗೆ ತೆರಳಲು ಅವಕಾಶ ನೀಡಲಾಗಿತ್ತು. ಹೀಗಾಗಿ ಸ್ಯಾಂಪಲ್ ನೀಡಿ ಆಂಧ್ರ ಪ್ರದೇಶದ ಶ್ರೀಶೈಲಂಗೆ ಪಾದಯಾತ್ರೆ ಮೂಲಕ ತೆರಳಿದ್ದ ಭಕ್ತರ ವರದಿ ಬಂದಿದ್ದು 7 ಭಕ್ತರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸದ್ಯ ಕರ್ನಾಟಕದಿದ್ದ ಬಂದ ಕೊರೊನಾ ಸೋಂಕಿತರ ಪತ್ತೆಗಾಗಿ ಆಂಧ್ರ ಪ್ರದೇಶ ಸಕಾ೯ರಕ್ಕೆ ಮನವಿ ಮಾಡಲಾಗಿದೆ ಎಂದು ಬಾಗಲಕೋಟೆ ಡಿಸಿ ಕ್ಯಾಪ್ಟನ್ ಡಾ.ಕೆ. ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಿ ಜಾತ್ರೆ, ಹಬ್ಬ , ಸಮಾರಂಭಗಳ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ. ಅಲ್ಲದೆ ಕೊವಿಡ್ ನಿಯಮ ಉಲ್ಲಂಘಿಸಿದ ಎರಡು ಕೇಸ್ಗಳಲ್ಲಿ ಈಗಾಗಲೇ ಎಫ್ಐಆರ್ ಕೂಡ ದಾಖಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಮಾಸ್ಕ್ ಧರಿಸದೇ ಇರುವ 63,621 ಜನರಿಗೆ ದಂಡ ವಿಧಿಸಿ 56,85,039 ರೂ ಹಣವನ್ನು ಸಂಗ್ರಹಿಸಲಾಗಿದೆ. ಏಪ್ರಿಲ್ ತಿಂಗಳಿನ 8 ದಿನದಲ್ಲಿ 3,585 ಜನರಿಗೆ ದಂಡ ವಿಧಿಸಿ 3,58,500 ರೂ. ಸಂಗ್ರಹ ಮಾಡಲಾಗಿದೆ ಎಂದು ರಾಜೇಂದ್ರ ತಿಳಿಸಿದ್ದಾರೆ.
ಇದನ್ನೂ ಓದಿ: ಸಾರಿಗೆ ಮುಷ್ಕರ.. ಕರ್ನಾಟಕ ಮೂಲದ ಭಕ್ತರು ನೆರೆಯ ಶ್ರೀಶೈಲಂನಲ್ಲಿ ಪರದಾಡುತ್ತಿದ್ದಾರೆ, ಸರ್ಕಾರ ಮೌನವಾಗಿದೆ!
(Seven Srisailam Devotees Tested Positive For Coronavirus Bagalkot in High Alert)
Published On - 9:04 am, Sat, 10 April 21