ಗ್ರಾಮದಿಂದ ರೈತ ಕುಟುಂಬವನ್ನು ಬಹಿಷ್ಕರಿಸಿದ ಆರೋಪ; ನ್ಯಾಯಕ್ಕಾಗಿ ಆಗ್ರಹಿಸಿ ಗದಗ ಜಿಲ್ಲಾ ಕಚೇರಿ ಮುಂದೆ ಧರಣಿ
ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗ್ರಾಮದ ಕೆಲವರು ಸೇರಿಕೊಂಡು ನನ್ನ ಮಗನ ಮೇಲೆ ಹಲ್ಲೆ ಮಾಡಿದ್ದಾರೆ. ಹೀಗಾಗಿ ಗ್ರಾಮ ಪಂಚಾಯತಿ ಸದಸ್ಯರ ಮೇಲೆ ದೂರು ದಾಖಲು ಮಾಡಿದ್ದೇವೆ. ಇದರಿಂದಾಗಿ ನಮ್ಮನ್ನು ಗ್ರಾಮದಿಂದ ಬಹಿಷ್ಕಾರ ಹಾಕಿ ಊರಿನಿಂದ ಹೊರ ಹಾಕಿದ್ದಾರೆ ಎಂದು ಶಾರವ್ವಾ ಕಟಗಿ ಆರೋಪ ಮಾಡಿದ್ದಾರೆ.
ಗದಗ: ಜನರ ಪ್ರಾಣ ಕಾಪಾಡಬೇಕಾದ ಜನಪ್ರತಿನಿಧಿಗಳೇ ಗದಗ ಜಿಲ್ಲೆಯಲ್ಲಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಕಾರಣ ರೈತ ಕುಟುಂಬವೊಂದು ಗ್ರಾಮ ಪಂಚಾಯತಿ ಸದಸ್ಯರಿಂದ ಅನ್ಯಾಯಕ್ಕೊಳಗಾಗಿದ್ದು, ಮನೆ ಕಳೆದುಕೊಂಡು ಜಿಲ್ಲಾಡಳಿತದ ಮೊರೆ ಹೋಗಿರುವುದೇ ಆಗಿದೆ. ಗದಗ ತಾಲೂಕಿನ ಅಂತೂರು ಬೆಂತೂರು ಗ್ರಾಮದ ಶಾರವ್ವಾ ಹನುಮಂತಪ್ಪ ಕಟಗಿ ಅವರ ಕುಟುಂಬದ ಮೇಲೆ ಅಂತೂರು ಬೆಂತೂರು ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರು ದಬ್ಬಾಳಿಕೆ ಮಾಡಿದ್ದಾರೆ ಎಂಬ ಆರೋಪ ಸದ್ಯ ಕೇಳಿ ಬಂದಿದೆ.
ಶಾರವ್ವಾ ಕಟಗಿ ಎನ್ನುವವರಿಗೆ ಸರ್ಕಾರದ ಮನೆ ಮಂಜೂರು ಆಗಿದೆ ಎಂದು ಇದ್ದ ಮನೆಯನ್ನು ಕೆಡವಿ, ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕೆಡವಿದ ಮನೆಯನ್ನು ಸರ್ಕಾರದ ಅನುದಾನದಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದರು. ಆದರೆ ಮನೆಯ ಹಕ್ಕು ಪತ್ರ ಈವರಿಗೆ ನೀಡಿಲ್ಲಾ. ಮನೆಯ ಹಕ್ಕು ಪತ್ರವನ್ನು ನೀಡುವ ವಿಷಯಕ್ಕೆ ಈ ಕುಟುಂಬಕ್ಕೆ ಹಾಗೂ ಗ್ರಾಮ ಪಂಚಾಯತಿ ಸದಸ್ಯರ ನಡುವೆ ವಾಗ್ವಾದವಾಗಿದೆ.
ಈ ವಿಚಾರವಾಗಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗ್ರಾಮದ ಕೆಲವರು ಸೇರಿಕೊಂಡು ನನ್ನ ಮಗನ ಮೇಲೆ ಹಲ್ಲೆ ಮಾಡಿದ್ದಾರೆ. ಹೀಗಾಗಿ ಗ್ರಾಮ ಪಂಚಾಯತಿ ಸದಸ್ಯರ ಮೇಲೆ ದೂರು ದಾಖಲು ಮಾಡಿದ್ದೇವೆ. ಇದರಿಂದಾಗಿ ನಮ್ಮನ್ನು ಗ್ರಾಮದಿಂದ ಬಹಿಷ್ಕಾರ ಹಾಕಿ ಊರಿನಿಂದ ಹೊರ ಹಾಕಿದ್ದಾರೆ ಎಂದು ಶಾರವ್ವಾ ಕಟಗಿ ಆರೋಪ ಮಾಡಿದ್ದಾರೆ.
ಗ್ರಾಮ ಪಂಚಾಯತಿ ಸದಸ್ಯರಾದ ಚನ್ನಬಸಪ್ಪ ಪತ್ತಾರ ಹಾಗೂ ಮಂಜುನಾಥ ಸೇರಿದಂತೆ ಹಲವರು ಸೇರಿಕೊಂಡು ನಮ್ಮ ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾರೆ. ಗ್ರಾಮ ಪಂಚಾಯತಿ ಸದಸ್ಯರು ತಾತ್ಕಾಲಿಕವಾಗಿ ಬಾಡಿಗೆ ಮನೆಯಲ್ಲಿದ್ದ ನಮ್ಮ ಕುಟುಂಬವನ್ನು ಮಾಲೀಕರಿಗೆ ಹೇಳಿ ಮನೆಯಿಂದ ಹೊರ ಹಾಕಿಸಿದ್ದಾರೆ. ಹೀಗಾಗಿ ದಿಕ್ಕು ಕಾಣದೆ ಮನೆಯ ಎಲ್ಲಾ ವಸ್ತುಗಳನ್ನು ಗಂಟು ಮೊಟೆಕಟ್ಟಿಕೊಂಡು ನೇರವಾಗಿ ಗದಗ ಜಿಲ್ಲಾಡಳಿತ ಭವನ ಮುಂದೆ ಠಿಕಾಣಿ ಹೂಡಿದ್ದೇವೆ ಎಂದು ಶಾರವ್ವಾ ಕಟಗಿ ತಿಳಿಸಿದ್ದಾರೆ.
ಈ ರೈತ ಕುಟುಂಬ ಮುಂಜಾನೆಯಿಂದ ಜಿಲ್ಲಾಡಳಿತ ಭವನದ ಮುಂದೆ ರೈತ ಸಂಘಟನೆ ಜೊತೆಗೆ ಹೋರಾಟ ನಡೆಸಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿ ಸಿಇಓ ಭರತ್ ಸೌಜನ್ಯಕ್ಕೂ ಭೇಟಿ ಮಾಡಿಲ್ಲ. ಉಪವಾಸ ಧರಣಿ ಮಾಡಿದ ರೈತ ಕುಟುಂಬದ ಕಷ್ಟವನ್ನು ಆಲಿಸಿಲ್ಲಾ ಎಂದು ರೈತ ಸಂಘ ತಾಲೂಕಾ ಅಧ್ಯಕ್ಷ ವಿಜಯ ಕುಮಾರ್ ಆರೋಪ ಮಾಡಿದ್ದಾರೆ.
ಒಟ್ಟಿನಲ್ಲಿ ರೈತ ಕುಟುಂಬ ಈ ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಊಟ ವಸತಿ ಇಲ್ಲದೆ ಜಿಲ್ಲಾಡಳಿತ ಭವನದ ಮುಂದೆ ನ್ಯಾಯಕ್ಕಾಗಿ ಹೋರಾಟ ನಡೆಸಿದೆ. ಇನಾದರೂ ಹಿರಿಯ ಅಧಿಕಾರಿಗಳು ಮಧ್ಯ ಪ್ರವೇಶ ಮಾಡಿ, ಈ ರೈತ ಕುಟುಂಬಕ್ಕೆ ಸೂಕ್ತವಾದ ನ್ಯಾಯ ಕೊಡಿಸಿ, ಪುನಃ ಊರಿಗೆ ಮರಳುವಂತೆ ಮಾಡಬೇಕಾಗಿದೆ.
ಇದನ್ನೂ ಓದಿ:
ಗದಗ: ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳದವರಿಗೆ ರೇಷನ್ ಇಲ್ಲ; ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ನಿರ್ಧಾರ
ಗದಗದಲ್ಲಿ ಮತ್ತೆ ಸರ್ಕಾರಿ ನಿಯಮಗಳ ಉಲ್ಲಂಘನೆ; ದೇವರ ಜಾತ್ರೆ ಹೆಸರಿನಲ್ಲಿ ನೂರಾರು ಮಂದಿ ಒಂದೆಡೆ ಭಾಗಿ