ಎಪಿಎಂಸಿ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಗೆ ರೈತರ 50 ಲಕ್ಷ ರೂಪಾಯಿ ಬಳಕೆ; ಕಾಮಗಾರಿಯ ವಿರುದ್ಧ ಅನ್ನದಾತರ ಆಕ್ರೋಶ
ಇದುವರೆಗೂ ರಾಷ್ಟೀಯ ಹೆದ್ದಾರಿಯ ಪ್ರಾಧಿಕಾರದ ನಿರಾಕ್ಷೇಪಣಾ ಪತ್ರ ಸಿಕ್ಕಿಲ್ಲವಾದರೂ ವಾಹನಗಳ ನಿಲುಗಡೆಗೆ ತೊಂದರೆಯಿಂದ ಜಿಲ್ಲಾಧಿಕಾರಿಗಳ ಅನುಮತಿ ಮೇರೆಗೆ ಕೆಲಸ ಆರಂಭಿಸಲಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ರವಿಕುಮಾರ ತಿಳಿಸಿದ್ದಾರೆ.
ಕೋಲಾರ: ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಕೈಗೊಂಡಿರುವ ನಿರ್ಣಯವೊಂದು ಸದ್ಯ ವಿವಾದಕ್ಕೀಡಾಗಿದೆ. ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಕಾಮಗಾರಿಯ ಸುತ್ತ ಹಲವಾರು ಅನುಮಾನಗಳ ಹುತ್ತ ಹುಟ್ಟಿಕೊಂಡಿದ್ದು, ರೈತರ ಹಣವನ್ನು ಅಧಿಕಾರಿಗಳು ವ್ಯಯ ಮಾಡಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಇದಕ್ಕೆಲ್ಲಾ ಕಾರಣ ಕೊಲಾರದ ಎಪಿಎಂಸಿ ಪ್ರಾಗಂಣದ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ಅಭಿವೃದ್ಧಿ ಕಾಮಗಾರಿ ಶುರು ಮಾಡಿರುವುದು. ನಿರ್ಮಿತಿ ಕೇಂದ್ರಕ್ಕೆ ಗುತ್ತಿಗೆ ವಹಿಸಿರುವ ಈ ಕಾಮಗಾರಿಗಾಗಿ ಎಪಿಎಂಸಿಯು ತನ್ನ ಖಾತೆಯಲ್ಲಿರುವ ರೈತರ 50 ಲಕ್ಷ ರೂಪಾಯಿಗಳನ್ನು ವ್ಯಯಿಸುತ್ತಿದೆ. ಈ ವಿಚಾರವೇ ಇದೀಗ ವಿವಾದಕ್ಕೆ ಕಾರಣವಾಗಿದೆ.
ಕೋಲಾರದ ಎಪಿಎಂಸಿ ಆಡಳಿತ ಮಂಡಳಿಯು ಇದೇ ಮಾರ್ಚ್ 23 ರಂದು ಸಭೆ ನಡೆಸಿದ್ದು, ಈ ಸಭೆಯಲ್ಲಿ ಎಪಿಎಂಸಿ ಕಾಂಪೌಂಡ್ ಹೊರಗಿನ ಸರ್ವಿಸ್ ರಸ್ತೆಯನ್ನು ಅಭಿವೃದ್ಧಿಗೊಳಿಸುವ ವಿಚಾರ ಪ್ರಸ್ತಾಪಿಸಲಾಗಿದೆ.ಇನ್ನು ಹೆದ್ದಾರಿಯ ಸರ್ವಿಸ್ ರಸ್ತೆ ಅಭಿವೃದ್ಧಿಯು ಎಪಿಎಂಸಿ ವ್ಯಾಪ್ತಿಗೆ ಬರುವ ವಿಷಯವಲ್ಲ ಎಂಬುದನ್ನು ಕೆಲವು ಸದಸ್ಯರು ಹೇಳಿದ್ದರೂ ಪ್ರಯೋಜನವಾಗಿಲ್ಲ. ಈ ಸಭೆಯಲ್ಲಿ ‘ಸರ್ವಾನುಮತ’ದ ರಸ್ತೆ ಅಭಿವೃದ್ಧಿಗೆ ನಿರ್ಣಯ ಕೈಗೊಳ್ಳಲಾಗಿದೆ.
ಎಪಿಎಂಸಿ ಆಡಳಿತ ಮಂಡಳಿ ವತಿಯಿಂದ ಅಂದಿನ ಸಭೆಯಲ್ಲಿ ಕೈಗೊಂಡ ನಿರ್ಣಯದ ಅನುಸಾರ 50 ಲಕ್ಷ ರೂಪಾಯಿ ವೆಚ್ಚದ ಈ ಕಾಮಗಾರಿಯನ್ನು ಸದ್ಯ ಆರಂಭಿಸಲಾಗಿದೆ. ಆದರೆ ಇದುವರೆಗೂ ರಾಷ್ಟೀಯ ಹೆದ್ದಾರಿಯ ಪ್ರಾಧಿಕಾರದ ನಿರಾಕ್ಷೇಪಣಾ ಪತ್ರ ಸಿಕ್ಕಿಲ್ಲವಾದರೂ ವಾಹನಗಳ ನಿಲುಗಡೆಗೆ ತೊಂದರೆಯಿಂದ ಜಿಲ್ಲಾಧಿಕಾರಿಗಳ ಅನುಮತಿ ಮೇರೆಗೆ ಕೆಲಸ ಆರಂಭಿಸಲಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ರವಿಕುಮಾರ ತಿಳಿಸಿದ್ದಾರೆ.
ರಾಷ್ಟೀಯ ಹೆದ್ದಾರಿ ಸರ್ವಿಸ್ ರಸ್ತೆಯನ್ನು ಅಭಿವೃದ್ಧಿ ಮಾಡುವ ಅಧಿಕಾರ ಎಪಿಎಂಸಿಗೆ ಇಲ್ಲ. ಎಪಿಎಂಸಿ ಆಡಳಿತ ಮಂಡಳಿ ತೆಗೆದುಕೊಂಡಿರುವ ನಿರ್ಣಯ ಅಕ್ರಮ. ಈ ನಿರ್ಣಯಕ್ಕೆ ಕೃಷಿ ಮಾರಾಟ ಇಲಾಖೆಯ ಅನುಮೋದನೆ ಕೊಟ್ಟಿರುವುದು ಕಾನೂನುಬಾಹಿರವಾಗಿದೆ. ರೈತರ ಹಣವನ್ನು ಲಪಟಾಯಿಸಲು ಕೆಲವು ಅಧಿಕಾರಿಗಳು ಈ ಕುತಂತ್ರ ರೂಪಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ನಿರೀಕ್ಷಣಾ ಪತ್ರವು ಸಿಕ್ಕಿಲ್ಲ. ಈಗಿರುವಾಗ ಎಪಿಎಂಸಿ ರೈತನ ಹಣದಲ್ಲಿ ಕಾಮಗಾರಿಯನ್ನು ಆರಂಭಿಸಿದ್ದು, ತಕ್ಷಣವೇ ಈ ಅಕ್ರಮ ಕಾಮಗಾರಿಯನ್ನು ನಿಲ್ಲಿಸಬೇಕು. ಒಂದು ವೇಳೆ ರೈತನ ಬಗ್ಗೆ ಕಾಳಜಿ ಇದ್ದರೆ ಎಪಿಎಂಸಿ ಹೊಂದಿಕೊಂಡಿರುವ ಫೆಡರೇಶನ್ಗೆ ಮೀಸಲಿಟ್ಟಿರುವ ನಾಲ್ಕು ಎಕರೆ ಜಮೀನು ಪಡೆದುಕೊಂಡು ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಲ್ಲಿ. ಅದು ಬಿಟ್ಟು ರೈತನ ಪಾಲಿನ ಹಣ ಈ ರೀತಿ ವ್ಯಯ ಮಾಡುವುದು ಸರಿಯಲ್ಲ ಎಂದು ರೈತ ನಾರಾಯಣ ಗೌಡ ಆರೋಪಿಸಿದ್ದಾರೆ.
ಒಟ್ಟಾರೆ ರೈತರ ಅಭಿವೃದ್ಧಿಗೆ ಮೀಸಲಿರಿಸಿದ್ದ 50 ಲಕ್ಷ ರೂಪಾಯಿಗಳನ್ನು ಸಂಬಂಧವೇ ಇಲ್ಲದ ಕಾಮಗಾರಿಗಾಗಿ ವೆಚ್ಚ ಮಾಡುತ್ತಿರುವ ಎಪಿಎಂಸಿ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯ ಉದ್ದೇಶದ ಹಿಂದೆ ಅಕ್ರಮದ ದಾರಿ ಇದೆ ಎಂದು ರೈತರು ಆರೋಪ ಮಾಡಿದ್ದು, ಈ ಬಗ್ಗೆ ಸಾರ್ವಜನಿಕ ವಲಯದಲ್ಲೂ ಕೂಡ ಚರ್ಚೆಯಾಗುತ್ತಿದೆ.
ಇದನ್ನೂ ಓದಿ:
ಕೊರೊನಾ ಆತಂಕದ ನಡುವೆಯೂ ವ್ಯಾಪಾರಕ್ಕೆ ಅವಕಾಶ; ಕೋಲಾರದ ವಿಶ್ವ ಪ್ರಸಿದ್ಧ ಮಾವಿನ ಮಾರುಕಟ್ಟೆ ಆರಂಭ
ಕನಿಷ್ಠ ಬೆಂಬಲ ಬೆಲೆ, ರೈತರ ಅನಿಶ್ಚಿತ ಆದಾಯ, ಎಪಿಎಂಸಿ ಬಗ್ಗೆ ಪ್ರಕಾಶ್ ಕಮ್ಮರಡಿ ಎಕ್ಸ್ಕ್ಲೂಸಿವ್ ಸಂದರ್ಶನ
Published On - 12:44 pm, Tue, 15 June 21