ಗದಗ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಸೋಂಕಿತರ ಸಂಖ್ಯೆಯಲ್ಲಿ ಕೂಡ ಹೆಚ್ಚಳ ಉಂಟಾಗಿದೆ. ಇದರ ಜೊತೆಗೆ ಸಾವಿನ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಡುಬಂದಿದೆ. ಹೀಗಿರುವಾಗಲೇ ಗದಗದಲ್ಲಿ ಕೊರೊನಾ ಸೋಂಕಿನ ಹೆಚ್ಚಳವು ಯುವಕರನ್ನೇ ಹೆಚ್ಚಾಗಿ ಬಲಿ ಪಡೆಯುತ್ತಿದೆ ಎಂದು ಹೇಳಿರುವ ವೈದ್ಯರ ಮಾತು ಸದ್ಯ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.
ಮೂರು ತಿಂಗಳಿಂದ ಕೊರೊನಾ ಸೋಂಕಿಗೆ ಯಾರು ಬಲಿಯಾಗಿಲ್ಲ ಎಂದು ನಿತ್ಯವೂ ಜಿಲ್ಲಾ ಹೆಲ್ಪ್ ಬುಲಿಟಿನ್ನಲ್ಲಿ ಪ್ರಕಟವಾಗುತ್ತಲೇ ಇದೆ. ಆದರೆ ಗದಗ ಜಿಲ್ಲೆಯಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಸೇರಿ 20 ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಗಂಭೀರ ಆರೋಪವಿದೆ. ಗದಗ ಜಿಮ್ಸ್ ಹಾಗೂ ಅವಳಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೋಂಕಿತರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಉಸಿರು ಚೆಲ್ಲಿದ್ದಾರೆ. ಅದರಲ್ಲೂ ಯುವಕರೇ ಹೆಚ್ಚು ಬಲಿಯಾಗಿದ್ದಾರೆ.
ಈ ಬಗ್ಗೆ ನಗರದ ಖಾಸಗಿ ಆಸ್ಪತ್ರೆ ವೈದ್ಯರಾದ ಡಾ. ಪವನ್ ಪಾಟೀಲ್ ಮಾತನಾಡಿದ್ದು, ಸಾವಿನ ಅಸಲಿಯತ್ತು ಬಿಚ್ಚಿಟ್ಟಿದ್ದಾರೆ. ಏಪ್ರಿಲ್ ತಿಂಗಳಲ್ಲೇ ನಮ್ಮ ಆಸ್ಪತ್ರೆಯಲ್ಲಿ 6-7 ಜನ ಸಾವಿನಪ್ಪಿದ್ದಾರೆ. ಆದರೆ ಏಪ್ರಿಲ್ ತಿಂಗಳಲ್ಲಿ ಈ ಸಾವುಗಳು ಹೆಲ್ಪ್ ಬುಲಿಟಿನಲ್ಲಿ ಪ್ರಕಟವಾಗಿಲ್ಲ. ಜಿಲ್ಲಾಡಳಿತಕ್ಕೆ ಖಾಸಗಿ ಆಸ್ಪತ್ರೆಗಳಿಂದ ಈ ಮಾಹಿತಿ ನೀಡಲಾಗಿದೆ. ಆದರೆ ಜಿಲ್ಲಾಡಳಿತ ಮಾತ್ರ ಸಾವಿನ ಬಗ್ಗೆ ಸರಿಯಾದ ಅಂಕಿ ಸಂಖ್ಯೆ, ನೀಡಿಲ್ಲ ಎಂದು ತಿಳಿಸಿದ್ದಾರೆ.
ಆರ್ಟಿಪಿಸಿಆರ್ ಮೇಲೆ ನಂಬಿಕೆ ಬೇಡ. ಟೆಸ್ಟ್ನಲ್ಲಿ ನೆಗೆಟಿವ್ ಬಂದ್ರೂ ಲಂಗ್ಸ್ ಡ್ಯಾಮೇಜ್ ಆಗುತ್ತಿದೆ. ಹೀಗಾಗಿ ಸಣ್ಣಪುಟ್ಟ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಬೇಡ. ಅದರಲ್ಲೂ ಯುವಕರು ಚೆನ್ನಾಗಿದ್ದೇವೆ ಎಂದು ಸುಮ್ಮನಿರುತ್ತಾರೆ. ಆದರೆ ಆ ಮೇಲೆ ಉಸಿರಾಟದ ತೊಂದರೆ ಆದ ಬಳಿಕ ಆಸ್ಪತ್ರೆಗೆ ದಾಖಲಾಗುತ್ತಾರೆ. ಸಿಟಿ ಸ್ಕ್ಯಾನ್ ಮಾಡಿದಾಗ. ಲಂಗ್ಸ್ ಅಟ್ಯಾಕ್ ಆಗಿದ್ದು, ಕಂಡು ಬರುತ್ತಿದೆ. ಹೀಗಾಗಿ ಸಣ್ಣಪುಟ್ಟ ಲಕ್ಷಣಗಳು ಇದ್ರೂ ವೈದ್ಯರನ್ನು ಸಂಪರ್ಕ ಮಾಡಿ ಎಂದು ಡಾ. ಪವನ್ ಪಾಟೀಲ್ ಹೇಳಿದ್ದಾರೆ.
ಎರಡ್ಮೂರು ದಿನಗಳಲ್ಲೇ ಶೇಕಡಾ 60 ರಿಂದ 80 ಜನರ ಲಂಗ್ಸ್ಗೆ ಹಾನಿಯಾಗಿದೆ. ಮನೆಯಲ್ಲಿ ಆರೋಗ್ಯವಾಗಿದ್ರೂ ಏಕಾಏಕಿ ಆಕ್ಸಿಜನ್ ಬೇಕಾಗುವಷ್ಟು ಸಿರಿಯಸ್ ಆಗುತ್ತಿದ್ದಾರೆ. ಜನರು ನಿರ್ಲಕ್ಷ್ಯ ತೋರದೇ ತಕ್ಷಣ ವೈದ್ಯರ ಸಲಹೆ ಪಡೆಯುವಂತೆ ಡಾ. ಪವನ್ ಪಾಟೀಲ್ ಮನವಿ ಮಾಡಿದ್ದಾರೆ.
ಇನ್ನು ಈ ಬಗ್ಗೆ ಗದಗ ಜಿಲ್ಲಾಧಿಕಾರಿ ಸುಂದರೇಶ್ ಬಾಬು ಅವರನ್ನು ಕೇಳಿದರೆ ಏಪ್ರಿಲ್ ತಿಂಗಳಲ್ಲಿ ಆಗಿರುವ ಸಾವಿನ ಬಗ್ಗೆ ಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ. ಈ ಸುದ್ದಿ ವ್ಯಾಪಕವಾಗಿ ಹಬ್ಬುತ್ತಿದ್ದಂತೆ ಎಚ್ಛೆತ್ತ ಜಿಲ್ಲಾಡಳಿ ಮೂರ್ನಾಲ್ಕು ದಿನಗಳಲ್ಲಿ 9 ಜನರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದೆ. ಜಿಲ್ಲಾಡಳಿತ ನಡೆ ವಿರುದ್ಧ ಮಾಜಿ ಸಚಿವ ಎಚ್. ಕೆ ಪಾಟೀಲ್ ಆಕ್ರೋಶ ಹೊರಹಾಕಿದ್ದು, ಸಾವಿನ ಸಂಖ್ಯೆ ಬಚ್ಚಿಡದಂತೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:
ಸರ್ಕಾರದ ವಿಫಲ ಕಾರ್ಯನೀತಿ, ಜನರ ಅಸಹಕಾರ: ಕೊರೊನಾ ಬೆಂಗಳೂರಿಗರನ್ನು ಹೇಗೆ ಕಾಡುತ್ತಿದೆ ನೋಡಿ, ಇಲ್ಲಿದೆ ಸಂಪೂರ್ಣ ವಿವರ
ತುಮಕೂರು ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಳ; ಬೆಂಗಳೂರಿನೊಂದಿಗಿನ ಸಂಪರ್ಕವೇ ಕೊವಿಡ್ ತೀವ್ರತೆಗೆ ಕಾರಣ