ಬೆಳೆಹಾನಿಗೆ ಬಾರದ ಪರಿಹಾರ: ನಾಡಕಚೇರಿಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ರೈತನ ಯತ್ನ

ಗದಗದಲ್ಲಿ ಬೆಳೆಹಾನಿ ಪರಿಹಾರ ಸಿಗದೆ ಮನನೊಂದ ರೈತನೊಬ್ಬ ನಾಡಕಚೇರಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಳೆ ಮತ್ತು ಪ್ರವಾಹದಿಂದ ಬೆಳೆ ನಾಶವಾಗಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಬಗ್ಗೆ ಮಾಹಿತಿ ದಾಖಲಾಗಿರಲಿಲ್ಲ. ಸ್ಥಳದಲ್ಲಿದ್ದವರು ರೈತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ರವಾನಿಸಲಾಗಿದೆ.

ಬೆಳೆಹಾನಿಗೆ ಬಾರದ ಪರಿಹಾರ: ನಾಡಕಚೇರಿಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ರೈತನ ಯತ್ನ
ಆತ್ಮಹತ್ಯೆಗೆ ಯತ್ನಿಸಿರುವ ರೈತನಿಗೆ ಚಿಕಿತ್ಸೆ.
Edited By:

Updated on: Nov 05, 2025 | 4:51 PM

ಗದಗ, ನವೆಂಬರ್​ 05: ಬೆಳೆಹಾನಿ ಪರಿಹಾರ ಬಾರದಕ್ಕೆ ಮನನೊಂದು ರೈತ ನಾಡಕಚೇರಿಯಲ್ಲಿ ಅಧಿಕಾರಿಗಳ ಎದುರಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ. ನರಗುಂದ ತಾಲೂಕಿನ ಬೆಳ್ಳೇರಿ ಗ್ರಾಮದ ರೈತ ಸಿದ್ದನಗೌಡ ಹಿರೇಗೌಡ್ರು ಆತ್ಮಹತ್ಯೆಗೆ ಯತ್ನಿಸಿದ್ದು, ಸಂಕಟ ತಾಳಲಾರದೆ ನಾಡ ಕಚೇರಿಯಲ್ಲೇ ನರಳಾಡಿದ್ದಾರೆ.

ನಾಲ್ಕು ಎಕರೆ ಜಮೀನಿನಲ್ಲಿ ಗೋವಿನ ಜೋಳ, ಈರುಳ್ಳಿ ಬೆಳೆಯನ್ನ ಸಿದ್ದನಗೌಡ ಹಿರೇಗೌಡ್ರು ಬೆಳೆದಿದ್ದರು. ಆದರೆ, ಮಳೆ ಮತ್ತು ಮಲಪ್ರಭಾ ನದಿ ಪ್ರವಾಹದಿಂದ ಬೆಳೆಗೆ ಹಾನಿಯಾಗಿದೆ. ಹೀಗಿದ್ದರೂ ಈ ಬಗ್ಗೆ ಬೆಳೆ ಹಾನಿ ಎಂಟ್ರಿಯಾಗಿಲ್ಲ. ವಿಷಯವನ್ನು ತಹಶೀಲ್ದಾರ್​ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತರದೆ ಗ್ರಾಮ ಲೆಕ್ಕಾಧಿಕಾರಿ ನಿರ್ಲಕ್ಷ್ಯತೋರಿದ್ದಾರೆ ಎಂಬುದು ಆರೋಪ ರೈತನದ್ದು. ಹೀಗಾಗಿ ಮನನೊಂದಿದ್ದ ಸಿದ್ದನಗೌಡ ಹಿರೇಗೌಡ್ರು ನಾಡಕಚೇರಿ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ರೈತ ಮಂಜೇಗೌಡ ಆತ್ಮಹತ್ಯೆ ಕೇಸ್​ಗೆ ಟ್ವಿಸ್ಟ್​: ಮಹತ್ವದ ದಾಖಲೆ ಬಹಿರಂಗ​

ವಿಷ ಸೇವಿಸಿದ್ದ ಸಿದ್ದನಗೌಡ ಹಿರೇಗೌಡ್ರನ್ನು ಸ್ಥಳದಲ್ಲಿದ್ದ ರೈತರು ತಕ್ಷಣ ನರಗುಂದ ಆಸ್ಪತ್ರೆಗೆ ಆ್ಯಂಬುಲೆನ್ಸ್ ಮೂಲಕ ಕೊಂಡೊಯ್ದು ದಾಖಲಿಸಿದ್ದಾರೆ. ಆದರೆ ಪರಿಸ್ಥಿತಿ ಗಂಭೀರವಾಗಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ನರಗುಂದ ಡಿವೈಎಸ್ಪಿ ಪ್ರಭು ಸೇರಿ ಅಧಿಕಾರಿಗಳು ಘಟನೆ ಬಗ್ಗೆ ಮಾಹಿತಿ ಪಡೆದಿದ್ದು, ಸಿದ್ದನಗೌಡ ಹಿರೇಗೌಡರಿಗೆ ಏನಾದರೂ ಹೆಚ್ಚುಕಮ್ಮಿ ಆದರೆ ಅಧಿಕಾರಿಗಳೇ ಹೊಣೆ ಎಂದು ಈ ವೇಳೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ

ನೇಣು ಬಿಗಿದುಕೊಂಡು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದ ಕೋಟೆ ರಸ್ತೆಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ನಡೆದಿದೆ. ವನೀಷಾ (21) ಮೃತ ಯುವತಿಯಾಗಿದ್ದು, ಮೃತಳು ಭದ್ರಾವತಿ ತಾಲೂಕಿನ ದೊಡ್ಡೇರಿ ಗಂಗೂರು ಗ್ರಾಮದ ನಿವಾಸಿ ಎಂಬುದು ತಿಳಿದುಬಂದಿದೆ. ಶಿವಮೊಗ್ಗದ ಡಿವಿಎಸ್ ಸೈನ್ಸ್ ಕಾಲೇಜ್ ವಿದ್ಯಾರ್ಥಿನಿಯಾಗಿದ್ದ ವನೀಷಾಳ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಲ್ಲ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

ಸಂಜೀವ ಕುಮಾರ್​ ಪಾಂಡ್ರೆ, ಗದಗ

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More
Follow Us