ಗದಗದಲ್ಲಿ ಭಾವೈಕ್ಯತಾ ಯಾತ್ರೆ ಆರಂಭ, ಶಿರಹಟ್ಟಿ ಫಕೀರೇಶ್ವರ ಮಠಕ್ಕೆ ಪೊಲೀಸ್ ದಿಗ್ಬಂಧನ
ಇಂದು ತೋಂಟದಾರ್ಯ ಡಾ. ಸಿದ್ದಲಿಂಗ ಶ್ರೀಗಳ ಜಯಂತಿ ಹಿನ್ನೆಲೆ ತೋಂಟದಾರ್ಯ ಮಠ ಭಾವೈಕ್ಯತಾ ದಿನ ಆಚರಣೆ ಮಾಡುತ್ತಿದೆ. ಆದರೆ ಭಾವೈಕ್ಯತಾ ಪದ ಬಳಕೆಗೆ ವಿರೋಧ ವ್ಯಕ್ತಪಡಿಸಿರುವ ಶಿರಹಟ್ಟಿ ಫಕೀರೇಶ್ವರ ಮಠ ಕರಾಳ ದಿನ ಆಚರಣೆಗೆ ಮುಂದಾಗಿದೆ. ಹೀಗಾಗಿ ಪೊಲೀಸರು ಶಿರಹಟ್ಟಿ ಫಕೀರೇಶ್ವರ ಮಠಕ್ಕೆ ದಿಗ್ಬಂಧನ ಹಾಕಿದ್ದು ಕರಾಳ ದಿನ ಆಚರಿಸಲು ಮುಂದಾಗಿದ್ದ ಶ್ರೀಗಳಿಗೆ ಸರ್ಪಗಾವಲು ಹಾಕಿ ತಡೆದಿದ್ದಾರೆ. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಗದಗ, ಫೆ.21: ಭಾವೈಕ್ಯತಾ ದಿನ ಆಚರಣೆ ವಿಷಯಕ್ಕಾಗಿ ಉತ್ತರ ಕರ್ನಾಟಕದ ಪ್ರಸಿದ್ಧ ಮಠಗಳಾದ ತೋಂಟದಾರ್ಯ ಮಠ (Tontadarya Matha) ಹಾಗೂ ಫಕೀರೇಶ್ವರ ಮಠಗಳ ನಡುವೆ ಸಂಘರ್ಷ ಉಂಟಾಗಿದೆ. ಇಂದು (ಫೆ.21) ತೋಂಟದಾರ್ಯ ಡಾ. ಸಿದ್ದಲಿಂಗ ಶ್ರೀಗಳ ಜಯಂತಿ ಹಿನ್ನೆಲೆ ಭಾವೈಕ್ಯತಾ ದಿನ ಆಚರಣೆ ಮಾಡಲಾಗುತ್ತಿದೆ. ಆದರೆ ಭಾವೈಕ್ಯತಾ ದಿನ ಆಚರಣೆ ಮಾಡಿದರೆ ನಾವು ಕರಾಳ ದಿನ ಆಚರಿಸುತ್ತೇವೆ ಎಂದು ಶಿರಹಟ್ಟಿ ಫಕೀರೇಶ್ವರ ಮಠದ ಸ್ವಾಮೀಜಿ ಎಚ್ಚರಿಕೆ ಕೊಟ್ಟಿದ್ದರು. ಈ ಹಿನ್ನೆಲೆ ಶಿರಹಟ್ಟಿ ಪಟ್ಟಣದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಶಿರಹಟ್ಟಿ ಫಕೀರೇಶ್ವರ ಮಠಕ್ಕೆ (Shirahatti Fakkireshwar Mutt) ಪೊಲೀಸ್ ದಿಗ್ಬಂಧನ ಹಾಕಲಾಗಿದೆ. ಕರಾಳ ದಿನ ಆಚರಿಸಲು ಮುಂದಾಗಿದ್ದ ಶ್ರೀಗಳಿಗೆ ಪೊಲೀಸ್ ಸರ್ಪಗಾವಲು ಹಾಕಿ ತಡೆದಿದ್ದಾರೆ.
ಲಿಂಗೈಕ್ಯ ತೋಂಟದ ಸಿದ್ದಲಿಂಗ ಸ್ವಾಮಿಗಳ 75 ನೇ ಜಯಂತಿ ಹಿನ್ನೆಲೆ ಗದಗ ನಗರದ ಭೀಷ್ಮ ಕೆರೆ ಅಂಗಳದಿಂದ ಭಾವೈಕ್ಯತಾ ಯಾತ್ರೆಗೆ ಚಾಲನೆ ನೀಡಲಾಗಿದೆ. ತೋಂಟದ ಸಿದ್ದರಾಮ ಶ್ರೀಗಳು ಭಾವೈಕ್ಯತಾ ಯಾತ್ರೆಗೆ ಚಾಲನೆ ನೀಡಿದ್ದಾರೆ. ಪ್ರಗತಿಪರರು, ಮಠದ ಭಕ್ತರು, ವಿದ್ಯಾರ್ಥಿಗಳು ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿ ತೋಂಟದಾರ್ಯ ಮಠಕ್ಕೆ ಯಾತ್ರೆ ತಲುಪಲಿದೆ. ಶಿರಹಟ್ಟಿ ಫಕೀರೇಶ್ವರ ಸ್ವಾಮೀಜಿಗಳ ವಿರೋಧದ ನಡೆವೆಯೂ ಯಾತ್ರೆ ನಡೆಯುತ್ತಿದೆ. ಇನ್ನು ಯಾತ್ರೆ ವೇಳೆ ಅಹಿತಕರ ಘಟನೆಗಳು ಸಂಭವಿಸಬಹುದು ಎಂದು ಪೊಲೀಸರು ಹೆಚ್ಚಿನ ಭದ್ರತೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಭಾವೈಕ್ಯತೆ ದಿನಾಚರಣೆ ಬಗ್ಗೆ 2 ಮಠಗಳ ಮಧ್ಯೆ ಸಂಘರ್ಷ: ಸಿದ್ಧರಾಮ ಶ್ರೀಗಳು ಹೇಳಿದ್ದಿಷ್ಟು
ಶಿರಹಟ್ಟಿ ಪಟ್ಟಣದಲ್ಲಿ 144 ಸೆಕ್ಷನ್ ಜಾರಿ, ಭಕ್ತರಿಗೆ ನೋಟಿಸ್
ಇನ್ನು ಶಿರಹಟ್ಟಿ ಫಕೀರೇಶ್ವರ ಮಠಕ್ಕೆ ಪೊಲೀಸ್ ದಿಗ್ಬಂಧನ ಹಾಕಲಾಗಿದ್ದು ಶಿರಹಟ್ಟಿ ಪಟ್ಟಣದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಹಾಗೂ ಭಕ್ತರಿಗೆ ನೋಟಿಸ್ ನೀಡಲಾಗಿದೆ. ಪೊಲೀಸ್ ಇಲಾಖೆ ಕರಾಳ ದಿನ ಆಚರಣೆಗೆ ಅವಕಾಶ ನಿರಾಕರಿಸಿದೆ. ಕರಾಳ ದಿನ ಆಚರಿಸಲು ಮುಂದಾಗಿದ್ದ ಶ್ರೀಗಳಿಗೆ ಪೊಲೀಸ್ ಸರ್ಪಗಾವಲು ಹಾಕಿ ತಡೆದಿದ್ದಾರೆ. ಶಿರಹಟ್ಟಿ ಫಕೀರೇಶ್ವರ ಮಠದಿಂದ ಆಚೆ ಬಿಡದೇ ಭಕ್ತರ ಮೇಲೆ ಪೊಲೀಸ್ ಕಣ್ಗಾವಲು. ಪೊಲೀಸ್ ವರ್ತನೆಗೆ ದಿಂಗಾಲೇಶ್ವರ ಶ್ರೀ ಬೇಸರ ವ್ಯಕ್ತಪಡಿಸಿದರು. ಭಾವೈಕ್ಯತೆ ಹೆಸರನ್ನ ತೋಂಟದಾರ್ಯ ಮಠ ಕಳ್ಳತನ ಮಾಡಿದೆ. ಆದರೆ ನಮ್ಮ ಮಠದಿಂದ ಯಾರನ್ನೂ ಆಚೆ ಬಿಡದೆ ಪೊಲೀಸರು ದರ್ಪ ತೋರುತ್ತಿದ್ದಾರೆ. ಡ್ರೈವರ್ ರನ್ನೂ ಸಹ ಮಠದೊಳಗೆ ಬಿಡುತ್ತಿಲ್ಲ ಎಂದು ಶ್ರೀಗಳು ಅಳಲು ತೋಡಿಕೊಂಡರು. ಶಿರಹಟ್ಟಿ ಫಕೀರೇಶ್ವರ ಮಠದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ