ಗದಗನಲ್ಲಿ ವೀರಭದ್ರೇಶ್ವರ ಜಾತ್ರೆಯ ಸಂಭ್ರಮ, ಸಡಗರ! ಅಗ್ನಿಕುಂಡದಲ್ಲಿ ಹಾಯ್ದು ಭಕ್ತಿ ಪರಾಕಾಷ್ಟೆ ಮೆರೆದ ಭಕ್ತರು
ಆತ ಭಕ್ತರ ಇಷ್ಟಾರ್ಥಗಳು ಈಡೇರಿಸುವ ವೀರಭದ್ರೇಶ್ವರ. ಸಂತಾನ, ಮದುವೆ, ನೌಕರಿ ಹೀಗೆ ಭಕ್ತರು ಬೇಡಿದ ವರವರನ್ನು ಕೊಡುವ ವೀರಭದ್ರ. ಇಂದು ಈ ವೀರಭದ್ರೇಶ್ವರನ ಜಾತ್ರೆ ಸಡಗರ ಸಂಭ್ರಮದಿಂದ ನಡೆಯಿತು. ಭಕ್ತರ ಇಷ್ಟಾರ್ಥಗಳು ಈಡೇರಿಸಿದ ವೀರಭದ್ರನಿಗೆ ಶಸ್ತ್ರ ಹಾಕಿಕೊಳ್ಳುವ ಮೂಲಕ ಹರಕೆ ತೀರಿಸಿದ್ರೆ. ಇನ್ನೂ ಕೆಲವರು ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ಶಸ್ತ್ರ ಹಾಕಿಸಿಕೊಂಡು ಭಕ್ತಿಯ ಪರಾಕಾಷ್ಠೆ ತೋರಿದರು.
ಗದಗ, ಸೆ.05: ವೀರಭದ್ರೇಶ್ವರನ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತರ ಸಂಭ್ರಮ. ವಿವಿಧ ಕಲಾತಂಡಗಳ ನೃತ್ಯ, ವಾದ್ಯಮೇಳಗಳ ಝೇಂಕಾರ. ಹೌದು, ಈ ಎಲ್ಲ ದೃಶ್ಯಗಳು ಕಂಡಿದ್ದು, ಗದಗ (Gadag) ನಗರದ ಶಹಾಪೂರ ಪೇಠಗಲ್ಲಿಯ ವೀರಭದ್ರೇಶ್ವರ ದೇವಸ್ಥಾನದ ಜಾತ್ರೆಯಲ್ಲಿ. ಶಾಹಾಪೂರ ಪೇಠ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಈ ದೇವರು ನಂಬಿದ ಭಕ್ತರನ್ನು ಎಂದೂ ಕೈಬಿಡಲ್ಲ ಎನ್ನುವ ನಂಬಿಕೆ ಭಕ್ತರದ್ದು. ಭಕ್ತರು ಮನಸ್ಸಿನಲ್ಲಿ ಬೇಡಿಕೊಂಡು ಶಸ್ತ್ರ ಚುಚ್ಚಿಸಿಕೊಂಡರೆ ಸಾಕು, ಇಷ್ಟಾರ್ಥಗಳು ಈಡೇರುವುದು ಎಂಬ ಗ್ಯಾರಂಟಿಯಿದೆ.
ಇನ್ನು ಈ ಜಾತ್ರೆಗೆ ಗದಗ ನಗರದ ಭಕ್ತರು ಮಾತ್ರವಲ್ಲ ಪಕ್ಕದ ಬಾಗಲಕೋಟೆ, ದಾವಣಗೇರಿ, ಕೊಪ್ಪಳ, ಹಾವೇರಿ, ಧಾರವಾಡ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ಮದುವೆಯಾದವರು ಮದುವೆಯಾಗಲೀ ಎಂದು ಶಸ್ತ್ರ ಚುಚ್ಚಿಸಿಕೊಂಡ್ರೆ, ಸಂತಾನ ಆಗದ ದಂಪತಿ ಜೋಡಿಯಾಗಿ ಶಸ್ತ್ರ ಚುಚ್ಚಿಸಿಕೊಳ್ತಾರೆ. ಇನ್ನು ನೌಕರಿ ಸೇರಿದಂತೆ ವಿವಿಧ ಸಮಸ್ಯೆ ನಿವಾರಣೆಗೆ ಭಕ್ತರು ವೀರಭದ್ರೇಶ್ವರನಿಗೆ ಹರಕೆ ಹೊತ್ತುಕೊಂಡು ಕೈ, ಕೆನ್ನೆ, ನಾಲಿಗೆ ಶಸ್ತ್ರ ಚುಚ್ಚಿಕೊಳ್ಳುತ್ತಾರೆ. ಹೀಗಾಗಿ ಇವತ್ತು ಸಾವಿರಾರು ಭಕ್ತರು ಜಾತ್ರೆ ಆಗಮಿಸಿದ್ರು. ಜಾತ್ರೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಇದನ್ನೂ ಓದಿ:Tumakur News: ಜಾತ್ರಾ ಮಹೋತ್ಸವದಲ್ಲಿ ನೂಕುನುಗ್ಗಲು; 30 ಜನರಿಗೆ ಗಾಯ
ವಿವಿಧೆಡೆಯಿಂದ ಬೆಳ್ಳಂಬೆಳಗ್ಗೆಯೇ ಭಕ್ತರು ವೀರಭದ್ರ ದೇವಸ್ಥಾನಕ್ಕೆ ಆಗಮಿಸಿದರು. ವೀರಭದ್ರೇಶ್ವರನ ದರ್ಶನ ಪಡೆದು ಜಾತ್ರೆಯಲ್ಲಿ ಭಾಗಿಯಾಗಿದ್ರು. ಇನ್ನು 12ಗಂಟೆಯಾಗುತ್ತಿದಂತೆ ಪಲ್ಲಕ್ಕಿ ಉತ್ಸವ ಆರಂಭವಾಯ್ತು. ಪಲ್ಲಕ್ಕಿಯಲ್ಲಿ ವೀರಭದ್ರೇಶ್ವರನ ಬೆಳ್ಳಿ ಮೂರ್ತಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಗೆಜ್ಜೆ ನಂದಿಕೋಳ ಕುಣಿತ, ವೀರಗಾಸೆ, ವಿವಿಧ ವಾಧ್ಯಮೇಳಗಳ ಅಬ್ಬರ ಜೋರಾಗಿತ್ತು. ದೇವಸ್ಥಾನ ಎದುರು ಬೃಹತ್ ಅಗ್ನಿಕುಂಡ ವ್ಯವಸ್ಥೆ ಮಾಡಲಾಗಿತ್ತು. ಸಾಕಷ್ಟು ಭಕ್ತರು ಅಗ್ನಿಕುಂಡದಲ್ಲಿ ಹಾಯ್ದು ಭಕ್ತಿ ಮೆರೆದ್ರು. ಬಳಿಕ ಪಲ್ಲಕ್ಕಿ ಹೊತ್ತ ತಂಡವೂ ಅಗ್ನಿಕುಂಡ ಪ್ರವೇಶ ಮಾಡಲಾಯಿತು.
ಅಗ್ನಿಕುಂಡದಲ್ಲಿ ಹಾಯ್ದರೆ ಭಕ್ತರ ಮನಸ್ಸಿನಲ್ಲಿ ಎಲ್ಲ ಕಲ್ಮಷಗಳು ಸುಟ್ಟು ಭಸ್ಮ ಆಗುತ್ತವೆ. ಯಾರೇ ಭಕ್ತರು ಅಗ್ನಿಕುಂಡದಲ್ಲಿ ಹಾಯ್ದರು ಏನೂ ಆಗಲ್ಲ. ಇದು ವೀರಭದ್ರನ ಪವಾಡ. ಒಟ್ಟಾರೆಯಾಗಿ ಗದಗ ನಗರದಲ್ಲಿ ನಡೆದ ವೀರಭದ್ರನ ಪವಾಡ ಭಕ್ತರನ್ನು ಭಕ್ತಿಯ ಪರಾಕಾಷ್ಠೆಯಲ್ಲಿ ಮುಳುಗೇಳುವಂತೆ ಮಾಡಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ