ಅದು ಸಿಎಂ ಸಿದ್ದರಾಮಯ್ಯ ಮಹತ್ವಾಕಾಂಕ್ಷಿ ಯೋಜನೆ. ಹಸಿವು ಮುಕ್ತ ರಾಜ್ಯಕ್ಕಾಗಿ ಈ ಯೋಜನೆ ಸಿಎಂ ಜಾರಿ ಮಾಡಿದ್ರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಯೋಜನೆ ಸಂಪೂರ್ಣ ಕ್ಲೋಸ್ ಮಾಡಲಾಗಿತ್ತು. ಆದ್ರೆ, ಈಗ ಮತ್ತೆ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಕ್ಲೋಸ್ ಆಗಿದ್ದ ಯೋಜನೆ 15 ದಿನಗಳೊಳಗೆ ಆರಂಭ ಮಾಡುವುದಾಗಿ ಘೋಷಣೆ ಮಾಡಿದ್ರು. ಸಿಎಂ ಕನಸಿನ ಯೋಜನೆ ಕಟ್ಟಡ ಭೂತ ಬಂಗಲೆಯಾಗಿದೆ. ಸಿಎಂ ಆದೇಶ ಮಾಡಿದ್ರೂ ತಾಲೂಕಾಡಳಿತ ಕವಡೆ ಕಾಸಿನ ಕಿಮ್ಮತ್ತು ನೀಡದೇ ಡೋಂಟ್ ಕೇರ್ ಅಂತಿದೆ. ಜಿಲ್ಲಾಡಳಿತ ನಿರ್ಲಕ್ಷ್ಯಕ್ಕೆ ಗದಗ ಜಿಲ್ಲೆಯ ಜನ್ರ ತೀವ್ರ ಆಕ್ರೋಶ…! ಸುಮಾರು 80 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿ ಇಂದಿರಾ ಕ್ಯಾಂಟಿನ್ ಈಗ ಅಕ್ಷರಶಃ ಭೂತ ಬಂಗಲೆಯಾಗಿದೆ. ಸಿಎಂ ಕನಸಿನ ಯೋಜನೆ ಇಲ್ಲಿ ಧೂಳು ತಿನ್ನುತ್ತಿದೆ. ಕಟ್ಟಡ ನಿರ್ಮಾಣ ಮಾಡಿ 6 ವರ್ಷಗಳಾದ್ರೂ ಇಲ್ಲಿ ಹಸಿದು ಬಂದವ್ರಿಗೆ ಒಂದು ತುತ್ತು ಅನ್ನ ನೀಡುವ ಭಾಗ್ಯ ಮಾತ್ರ ಇನ್ನೂ ದೊರೆತಿಲ್ಲ. ತಿನ್ನುವ ಅನ್ನದಲ್ಲೂ ಬಿಜೆಪಿ-ಕಾಂಗ್ರೆಸ್ ರಾಜಕೀಯಕ್ಕೆ ಬಡವರ ಅನ್ನಕ್ಕೆ ಕನ್ನ ಬಿದ್ದಿದೆ ಅನ್ನೋ ಆಕ್ರೋಶ ಬಂಡಾಯದ ನಾಡಿನಲ್ಲಿ ಗೊಣಗುಡುತ್ತಿದೆ. ಹೌದು ಈ ದೃಶ್ಯಗಳು ಕಂಡಿದ್ದು, ಗದಗ ಜಿಲ್ಲೆಯ ಬಂಡಾಯನ ನಾಡು ನರಗುಂದ ಪಟ್ಟಣದಲ್ಲಿ.
ನರಗುಂದ ತಾಲೂಕಾ ಆಸ್ಪತ್ರೆ ಆವರಣದಲ್ಲಿ ಸುಮಾರು 80 ಲಕ್ಷ ವೆಚ್ಚದಲ್ಲಿ 2018ರಲ್ಲಿ ಹೈಟೆಕ್ ಇಂದಿರಾ ಕ್ಯಾಂಟಿನ್ ನಿರ್ಮಾಣ ಮಾಡಲಾಗಿದೆ. ಬಳಿಕ ಬಂದ ಬಿಜೆಪಿ ಸರ್ಕಾರ ಇಂದಿರಾ ಕ್ಯಾಂಟಿನ್ ಆರಂಭ ಮಾಡುವ ಗೋಜಿಗೆ ಹೋಗಿಲ್ಲ. ಹೀಗಾಗಿ, ಆರು ವರ್ಷಗಳು ಕಳೆದ್ರೂ ಹಸಿದ ಹೊಟ್ಟೆಗೆ ಒಂದು ತುತ್ತು ಅನ್ನ ಹಾಕುವ ಭಾಗ್ಯ ಮಾತ್ರ ಈ ಕ್ಯಾಂಟಿನ್ ಗೆ ಸಿಕ್ಕಿಲ್ಲ. ಬಿಜೆಪಿ-ಕಾಂಗ್ರೆಸ್ ರಾಜಕೀಯದಾಟಕ್ಕೆ ಬಡವರು, ಕಾರ್ಮಿಕರು, ಕೂಲಿಕಾರರು, ನಿರ್ಗತಿಕರು ಹಸಿವು ಅಂತ ಬಂದ್ರೆ ಹೊಟ್ಟೆಗೆ ಅನ್ನವಿಲ್ಲದಂತಾಗಿದೆ.
ಹಳ್ಳಿಗಳಿಂದ ಬರುವ ನೂರಾರು ಬಡ ಜನ್ರಿಗೆ ಆಸರೆಯಾಗಬೇಕಿದ್ದ ಇಂದಿರಾ ಕ್ಯಾಂಟಿನ್ ಪಾಳುಬಿದ್ದಿದೆ.
ಸರ್ಕಾರದ 80 ಲಕ್ಷ ರೂಪಾಯಿ ಹಣದಲ್ಲಿ ನಿರ್ಮಾಣವಾದ ಕಟ್ಟಡ ಸಂಪೂರ್ಣ ಹಾಳಾಗಿ ಹೋಗಿದೆ. ಈಗ ಮತ್ತೆ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಪ್ರಮಾಣ ವಚನ ಸ್ವೀಕಾರ ಬಳಿಕ 15 ದಿನಗಳಲ್ಲಿ ರಾಜ್ಯಾದ್ಯಂತ ಎಲ್ಲ ಇಂದಿರಾ ಕ್ಯಾಂಟಿನ್ ಆರಂಭ ಮಾಡುವುದಾಗಿ ಘೋಷಣೆ ಮಾಡಿದ್ರು. ಆದ್ರೆ, ಎಂಟು ತಿಂಗಳಾದ್ರೂ ನರಗುಂದ ಪುರಸಭೆ ಅಧಿಕಾರಿಗಳು ಮಾತ್ರ ಇಂದಿರಾ ಕ್ಯಾಂಟಿನ್ ಆರಂಭ ಮಾಡಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೂ ಇನ್ನೂ ಇಂದಿರಾ ಕ್ಯಾಂಟಿನ್ ಆರಂಭವಾಗಿಲ್ಲ. ಇದು ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ. ಸಿಎಂ ಆದೇಶಕ್ಕೂ ನರಗುಂದ ಪುರಸಭೆ ಆಡಳಿತ ಕ್ಯಾರೇ ಎಂದಿಲ್ಲ. ಸಿಎಂ ಆದೇಶ ಪಾಲನೆ ಮಾಡದ ಪುರಸಭೆ ಕಿವಿಹಿಂಡಬೇಕಾದ ಜಿಲ್ಲಾಡಳಿತ ಕೂಡ ಮೌನವಾಗಿದೆ. ಇನ್ನು ನರಗುಂದ ಕ್ಷೇತ್ರದಲ್ಲಿ ಈಗ ಬಿಜೆಪಿ ಶಾಸಕ ಸಿ ಸಿ ಪಾಟೀಲ್ ಇದ್ದಾರೆ. ಹೀಗಾಗಿ ನರಗುಂದ ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ್ ಆರಂಭವಾಗಿಲ್ಲ ಅನ್ನೋ ಆರೋಪವೂ ಇದೆ. ಸರ್ಕಾರ ಸುಮಾರು 80 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ ಇಂದಿರಾ ಕ್ಯಾಂಟಿನ್ ಇದ್ದೂ ಇಲ್ಲದಂತಾಗಿದೆ. ಈಗ ಅನೈತಿಕ ಚಟುವಟಿಕೆ ತಾಣವಾಗಿದೆ. ಸರ್ಕಾರದ ಉದ್ದೇಶ ಇಲ್ಲಿ ಸಂಪೂರ್ಣ ಮಣ್ಣುಪಾಲಾಗಿದೆ. ಲಕ್ಷಾಂತರ ಖರ್ಚು ಮಾಡಿ ಖರೀದಿ ಮಾಡಿದ ಅಡುಗೆ ಭಾಂಡೆಗಳು ತುಕ್ಕುಹಿಡಿಯುತ್ತಿವೆ.
ಗದಗ ಜಿಲ್ಲೆಯಲ್ಲಿ ಅಧಿಕಾರಿಗಳಿಗೆ ಯಾರ ಭಯವೂ ಇಲ್ಲದಂತಾಗಿದೆ. ಯಾಕಂದ್ರೆ ಸಿಎಂ ಆದೇಶ ಮಾಡಿದ್ರೂ ಎಂಟು ತಿಂಗಳಾದ್ರೂ ಇಂದಿರಾ ಕ್ಯಾಂಟಿನ್ ಆರಂಭಿಸಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ನೋಡಿದ್ರೆ, ಇಲ್ಲಿ ಹೇಳೋರಿಲ್ಲ.. ಕೇಳೋರಿಲ್ಲ ಎಂಬಂತಾಗಿದೆ. ಇನ್ನಾದ್ರೂ ಉಸ್ತುವಾರಿ ಸಚಿವರು ಸಂಬಂಧಪಟ್ಟ ಅಧಿಕಾರಿಗಳ ಕಿವಿ ಹಿಂಡುವ ಮೂಲಕ ಸಿಎಂ ಆದೇಶ ಪಾಲನೆಗೆ ಸೂಚನೆ ನೀಡ್ತಾರಾ ಅನ್ನೋದು ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ