ಗದಗ; ಹಂಗನಕಟ್ಟಿಯ ಮಕ್ಕಳಲ್ಲಿ ಹೆಚ್ಚಾದ ಡೆಂಗ್ಯೂ, ತಲೆ ಕೆಡಿಸಿಕೊಳ್ಳದ ಆರೋಗ್ಯ ಇಲಾಖೆ
ಗದಗ ತಾಲೂಕಿನ ಹಂಗನಕಟ್ಟಿ ಗ್ರಾಮದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿವೆ. ಪ್ರತಿ ಮನೆಯಲ್ಲೂ ಮಕ್ಕಳಲ್ಲಿ ಜ್ವರ ಕಾಣಿಸಿಕೊಳ್ಳುತ್ತಿದೆ. ಗದಗ ಜಿಮ್ಸ್ ಆಸ್ಪತ್ರೆಯ NICU ಸೇರಿದಂತೆ ನಗರದ ವಿವಿಧ ಖಾಸಗಿ ಆಸ್ಪತ್ರೆ ಹಾಗೂ ಹುಬ್ಬಳ್ಳಿ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪರಿಸ್ಥಿತಿ ಹದಗೆಟ್ಟಿದ್ದರೂ ಆರೋಗ್ಯ ಇಲಾಖೆ ಮಾತ್ರ ಈವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.
ಗದಗ, ಮಾರ್ಚ್.22: ಜಿಲ್ಲೆಯಲ್ಲಿ ಡೆಂಗ್ಯೂ (Dengue) ಪ್ರಕರಣಗಳು ಹೆಚ್ಚಾಗಿವೆ. ಅದರಲ್ಲೂ ಗದಗ ತಾಲೂಕಿನ ಹಂಗನಕಟ್ಟಿ (Hanganakatti) ಗ್ರಾಮದಲ್ಲಿ ಮಕ್ಕಳಲ್ಲಿ ಡೆಂಗ್ಯೂ ಕಾಣಿಸಿಕೊಳ್ಳುತ್ತಿದ್ದು ಗ್ರಾಮಸ್ಥರು ಕಂಗಾಲಾಗಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಸ್ಥಿತಿ ಕಂಡು ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ. ಹಂಗನಕಟ್ಟಿ ಗ್ರಾಮ ಒಂದರಲ್ಲೇ 4 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ತೀವ್ರ ಜ್ವರ, ವಾಂತಿಯಿಂದ 15ಕ್ಕೂ ಹೆಚ್ಚು ಮಕ್ಕಳು ಬಳಲುತ್ತಿದ್ದಾರೆ. ಜ್ವರದಿಂದ ಬಳಲುತ್ತಿರೋ ಮಕ್ಕಳ ಸಂಖ್ಯೆ ನಿತ್ಯವೂ ಏರುತ್ತಿದೆ.
ಗದಗ ಜಿಮ್ಸ್ ಆಸ್ಪತ್ರೆಯ NICU ಸೇರಿದಂತೆ ನಗರದ ವಿವಿಧ ಖಾಸಗಿ ಆಸ್ಪತ್ರೆ ಹಾಗೂ ಹುಬ್ಬಳ್ಳಿ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಂಗನಕಟ್ಟಿ ಗ್ರಾಮದಲ್ಲಿ ಡೆಂಗ್ಯೂ ಹೆಚ್ಚಾದರೂ ಆರೋಗ್ಯ ಇಲಾಖೆ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಏನೂ ತಿಳಿಯದಂತೆ ಕಣ್ಮುಚ್ಚಿ ಕುಳಿತಿದೆ. ಬಹುತೇಕ ಮನೆಗಳಲ್ಲಿ ಮಕ್ಕಳು ಜ್ವರದಿಂದ ಬಳಲುತ್ತಿರುವುದು ಕಂಡು ಬಂದಿದೆ. ಇಷ್ಟಾದ್ರೂ ಆರೋಗ್ಯ ಇಲಾಖೆ ಕ್ಯಾಂಪ್ ಮಾಡದೆ ದಿವ್ಯ ನಿರ್ಲಕ್ಷ್ಯವಹಿಸಿದೆ. ಡೆಂಗ್ಯೂ ಹೆಚ್ಚಾಗುತ್ತಿರುವ ಕಾರಣ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಆರೋಗ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ. ಗ್ರಾಮದಲ್ಲಿ ಆರೋಗ್ಯ ಶಿಬಿರ ಆಯೋಜನೆ ಮಾಡುವಂತೆ ಒತ್ತಾಯ ಕೇಳಿ ಬಂದಿದೆ.
ಇದನ್ನೂ ಓದಿ: ಕ್ಯಾನ್ಸರ್ ಅಪಾಯಕ್ಕೂ ಕ್ಯಾಲ್ಸಿಯಂ, ವಿಟಮಿನ್ ಡಿ ಸಪ್ಲಿಮೆಂಟ್ಗೂ ಏನು ಸಂಬಂಧ?
ಡೆಂಗ್ಯೂ ಜ್ವರವು ಈಡಿಸ್ ಎಂಬ ಸೊಳ್ಳೆ ಕಡಿತದಿಂದ ಹರಡುವಂತಹ ಗಂಭೀರ ಕಾಯಿಲೆಯಾಗಿದೆ. ಈಡಿಸ್ ಸೊಳ್ಳೆ ಡೆಂಗ್ಯೂ ವೈರಸ್ ಅನ್ನು ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾಯಿಸುತ್ತದೆ. ಡೆಂಗ್ಯೂ ಕಾಣಿಸಿಕೊಂಡ 3 ರಿಂದ 10 ದಿನಗಳ ನಂತರ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಡೆಂಗ್ಯೂ ಹಠಾತ್ ಜ್ವರವನ್ನು ಉಂಟುಮಾಡುತ್ತದೆ. ಇದು 104 ° F ವರೆಗೆ ಏರುತ್ತದೆ. ಡೆಂಗ್ಯೂ ಜ್ವರದಿಂದ ತಲೆನೋವು, ಬೆನ್ನು ನೋವು, ಸ್ನಾಯು ನೋವು ಮತ್ತು ಕೀಲು ನೋವು ಇರುತ್ತದೆ.
ಡೆಂಗ್ಯೂ ಜ್ವರ ಇರುವ ವ್ಯಕ್ತಿಯಲ್ಲಿ ಚರ್ಮದ ಮೇಲೆ ಕೆಂಪು ದದ್ದುಗಳು ಕಾಣಿಸಿಕೊಳ್ಳುತ್ತವೆ, ಇದು ಈ ರೋಗವನ್ನು ಗುರುತಿಸುವ ಮುಖ್ಯ ಲಕ್ಷಣ. ಡೆಂಗ್ಯೂನಲ್ಲಿ ರಕ್ತಸ್ರಾವದ ಸಮಸ್ಯೆ ಇರಬಹುದು, ಇದರಿಂದಾಗಿ ರೋಗಿಯ ಮೂಗು ಮತ್ತು ಬಾಯಿಯಿಂದ ರಕ್ತಸ್ರಾವವಾಗಬಹುದು. ಡೆಂಗ್ಯೂನಿಂದ ಪ್ಲೇಟ್ಲೆಟ್ಗಳು ಮತ್ತು ಬಿಳಿ ರಕ್ತ ಕಣಗಳ ಸಂಖ್ಯೆ ವೇಗವಾಗಿ ಕುಸಿಯುತ್ತದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ