ಗದಗ: ಶಿರಹಟ್ಟಿ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಪೂರ್ವಶ್ರಮದ ಕುರಿತು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಭಕ್ತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಏಪ್ರಿಲ್ 27ರ ಒಳಗೆ ಸಚಿವರು ತಮ್ಮ ಆರೋಪಕ್ಕೆ ವಿವರಣೆ ಒದಗಿಸಬೇಕು ಇಲ್ಲದಿದ್ದರೆ ಅವರ ಮನೆಯ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಸಿದ್ದರು. ಅದರಂತೆ ಇಂದು ಮುಂಜಾನೆಯಿಂದಲೂ ನರಗುಂದ ಪಟ್ಟಣದತ್ತ ದಿಂಗಾಲೇಶ್ವರ ಸ್ವಾಮೀಜಿಯ ಭಕ್ತರ ಸಂಚಾರ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದೆ. ದಿಂಗಾಲೇಶ್ವರ ಶ್ರೀಗಳನ್ನು ತಡೆಯಲು ನಗರದ ಸುತ್ತಮುತ್ತಲ ಕಲಕೇರಿ, ಕುರ್ಲಗೇರಿ, ಅಳಗವಾಡಿ ಗ್ರಾಮಗಳ ಸಮೀಪ ಚೆಕ್ಪೋಸ್ಟ್ ನಿರ್ಮಿಸಲಾಗಿದ್ದು, ಸಚಿವರ ಮನೆ ಸುತ್ತಮುತ್ತ ಬಿಗಿ ಪಹರೆ ಹಾಕಲಾಗಿದೆ. ಡಿವೈಎಸ್ಪಿ ಏಗನಗೌಡ, ಸಿಪಿಐ ಮಲ್ಲಯ್ಯ ಸ್ಥಳದಲ್ಲಿ ಉಪಸ್ಥಿತರಿದ್ದಾರೆ. ಅಲ್ಲಲ್ಲಿ ಬ್ಯಾರಿಕೇಡ್ಗಳನ್ನೂ ಅಳವಡಿಸಲಾಗಿದೆ. ಶ್ರೀಗಳ ನಗರ ಪ್ರವೇಶ ತಡೆಯಲು ಪೊಲೀಸರು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎರಡು ವ್ಯಾನ್ಗಳೂ ಸ್ಥಳಕ್ಕೆ ಬಂದಿವೆ.
ದಿಂಗಾಲೇಶ್ವರ ಮಠ, ಫಕೀರೇಶ್ವರ ಮಠದ ಪೀಠಾಧಿಪತಿ ಆಗಿರುವ ಸ್ವಾಮೀಜಿಯನ್ನು ಬೆಂಬಲಿಸಿ ನರಗುಂದ ಪಟ್ಟಣಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಮುಳಗುಂದ ಪಟ್ಟಣದಲ್ಲಿಯೇ ಶ್ರೀಗಳ ಭಕ್ತರನ್ನು ಪೊಲೀಸರು ತಡೆಯುತ್ತಿದ್ದಾರೆ. ಪೊಲೀಸರ ನಡೆಗೆ ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ಧ್ವಜ ಕಟ್ಟಿದ ವಾಹನಗಳನ್ನು ಮಾತ್ರ ಪೊಲೀಸರು ಒಳಗೆ ಬಿಡುತ್ತಿದ್ದಾರೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂರು ಸಾವಿರ ಮಠದ ಪಿಠಾಧಿಪತಿಯಾಗಲು ದಿಂಗಾಗಲೇಶ್ವರ ಸ್ವಾಮೀಜಿ ರೌಡಿಸಂ ಮಾಡಿದ್ದರು. ಅವರ ಪೂರ್ವಾಶ್ರಮದ ಬಗ್ಗೆ ನನಗೆ ಗೊತ್ತಿದೆ ಎಂದು ಸಚಿವ ಸಿ.ಸಿ.ಪಾಟೀಲ ಬೆಂಗಳೂರಿನ ವಿಧಾನಸೌಧದಲ್ಲಿ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದ್ದರು. ಈ ಹೇಳಿಕೆಯಿಂದ ಕೆರಳಿದ್ದ ದಿಂಗಾಲೇಶ್ವರ ಸ್ವಾಮೀಜಿ, ನಾನು ಏನಾಗಿದ್ದ ಎಂಬುದನ್ನು ಸಿ.ಸಿ.ಪಾಟೀಲ ವಿವರಿಸಬೇಕು ಎಂದು ಒತ್ತಾಯಿಸಿದ್ದರು.
ನನ್ನ ಪೂರ್ವಾಶ್ರಮದ ಬಗ್ಗೆ ಅವರು ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಅವರು ನಮ್ಮ ಮನೆಯಲ್ಲಿ ಮಾಲೀಕರಾಗಿದ್ದಿರೋ ಅಥವಾ ಜೀತದಾಳು ಆಗಿದ್ದರೋ ಎಂಬ ಬಗ್ಗೆ ಸಮಾಜಕ್ಕೆ ಸ್ಪಷ್ಟನೆ ನೀಡಬೇಕು. ಸ್ಪಷ್ಟನೆ ನೀಡಲು ವಿಫಲರಾದರೆ ಅವರ ಮನೆ ಎದುರು ಸತ್ಯಾಗ್ರಹ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.
ಏನು ಕಾರಣ?
ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆಯ ನಂತರ ರಾಜ್ಯದಲ್ಲಿ ಕಮಿಷನ್ ಬಗ್ಗೆ ದೊಡ್ಡ ಚರ್ಚೆ ಆರಂಭವಾಗಿತ್ತು. ಈ ವೇಳೆ ಚಿತ್ರದುರ್ಗದಲ್ಲಿ ನಡೆದಿದ್ದ ಸಮಾರಂಭದಲ್ಲಿ ಮಾತನಾಡಿದ್ದ ದಿಂಗಾಲೇಶ್ವರ ಸ್ವಾಮೀಜಿ ರಾಜ್ಯ ಸರ್ಕಾರದಿಂದ ಅನುದಾನ ಪಡೆಯಲು ಮಠಗಳು ಸಹ ಶೇ 30ರ ಕಮಿಷನ್ ಕೊಡಬೇಕಿದೆ ಎಂದು ದೂರಿದ್ದರು. ಇದು ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು, ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟು ಮಾಡಿತ್ತು. ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರು ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದರು. ನಂತರದ ದಿನಗಳಲ್ಲಿ ಇದು ದೊಡ್ಡ ವಿವಾದವಾಗಿ ಬೆಳೆಯಿತು.
ಈ ಹೇಳಿಕೆಯನ್ನು ಖಂಡಿಸುವ ಭರದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಸಚಿವ ಸಿ.ಸಿ.ಪಾಟೀಲ ರೌಡಿಸಂ ಆರೋಪ ಮಾಡಿದ್ದರು. ಈ ಹೇಳಿಕೆ ಖಂಡಿಸಿ ಇದೀಗ ಧರಣಿ ನಡೆಸಲು ದಿಂಗಾಲೇಶ್ವರ ಸ್ವಾಮೀಜಿ ಮುಂದಾಗಿದ್ದಾರೆ.
ಇದನ್ನೂ ಓದಿ: ನನ್ನ ರೌಡಿಸಂ ಸಾಬೀತು ಮಾಡಿ: ಸಚಿವ ಸಿಸಿ ಪಾಟೀಲ್ ಮನೆ ಎದುರು ದಿಂಗಾಲೇಶ್ವರ ಸ್ವಾಮೀಜಿ ಇಂದು ಧರಣಿ
ಇದನ್ನೂ ಓದಿ: ಶಿರಹಟ್ಟಿ ಮಠಕ್ಕೆ ಬಿಡುಗಡೆಯಾದ ಅನುದಾನದಲ್ಲಿ ಹಣ ಗುಳುಂ; ಸರ್ಕಾರದ ವಿರುದ್ಧ ದಿಂಗಾಲೇಶ್ವರ ಶ್ರೀಗಳಿಂದ ಹೊಸ ಬಾಂಬ್
Published On - 11:47 am, Wed, 27 April 22