
ಗದಗ, ಮಾರ್ಚ್ 08: ಲಕ್ಷ್ಮೇಶ್ವರ (Laxmeshwar) ತಾಲೂಕಿನ ಆದರಹಳ್ಳಿ ಗ್ರಾಮದ ಐತಿಹಾಸಿಕ ಗವಿಮಠಕ್ಕೆ (Gavimath) ಕುಮಾರ್ ಮಹಾರಾಜ ಸ್ವಾಮೀಜಿಯವರನ್ನು ನೇಮಕ ಮಾಡಲಾಗಿದೆ. ಆದರೆ, ಸ್ವಾಮೀಜಿ ವಿರುದ್ಧ ಆರೋಪವೊಂದು ಕೇಳಿಬಂದಿದೆ. ಗವಿಮಠದ ಸುತ್ತಲೂ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡುತ್ತಾರೆಂದು ಭೋವಿ ಸಮಾಜದವರ ವಿರುದ್ಧ ಸ್ವಾಮೀಜಿ ಪೊಲೀಸರಿಗೆ ದೂರು ನೀಡಿ ಅರೆಸ್ಟ್ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಸ್ವಾಮೀಜಿ, “ಅವರ ಅಕ್ರಮ ಬಯಲು ಮಾಡಿದಕ್ಕೆ ನನ್ನನ್ನು ಮಠದಿಂದ ಹೊರಕ್ಕೆ ಕಳಿಸಿದ್ದಾರೆ. ಇದರಲ್ಲಿ, ಸ್ಥಳೀಯ ರಾಜಕೀಯ ನಾಯಕನ ಕೈವಾಡವಿದೆ. ನಮ್ಮನ್ನು ಮಠದಿಂದ ಓಡಿಸಲು ಯತ್ನಿಸಲಾಗಿದೆ. ಹೀಗಾಗಿ, ನ್ಯಾಯ ಸಿಗುವವರಿಗೆ ನಾನು ಸೇವಾಲಾಲ್ ಮಂದಿರದಲ್ಲಿ ಧರಣಿ ಮಾಡುತ್ತೇನೆ. ಸಲ್ಲೇಖನ ವೃತ್ತ ಆರಂಭ ಮಾಡಿದ್ದೇನೆ” ಎಂದು ಸ್ವಾಮೀಜಿ ಹೇಳಿದ್ದಾರೆ.
“ಸ್ವಾಮೀಜಿ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮವನ್ನು ಬಯಲು ಮಾಡಿದ್ದಾರೆ. ಕಲ್ಲುಗಣಿಗಾರಿಕೆ, ಮರಳು ದಂಧೆ ಮಾಡುವವರ ವಿರುದ್ಧ ಹೋರಾಟ ಮಾಡಿದರು. ಹೀಗಾಗಿ, ಸ್ವಾಮೀಜಿ ಮೇಲೆ ವಿನಾಕಾರಣ ಒಂದು ಸಮುದಾಯದವರು ಆರೋಪ ಮಾಡುತ್ತಿದ್ದಾರೆ. ನಮಗೆ ಏನಾದರೂ ಸಮಸ್ಯೆಯಾದರೂ ಸ್ವಾಮೀಜಿ ಮುಂದೆ ಬರುತ್ತಿದ್ದರು. ರಾಜಕಾರಣಿಗಳು ಕೈವಾಡದಿಂದ ಹೀಗೆ ಮಾಡುತ್ತಿದ್ದಾರೆ. ನಮ್ಮ ಸ್ವಾಮೀಜಿಯನ್ನು ಮಠದಿಂದ ಹೊರಕ್ಕೆ ಹಾಕಿ, ಕೊಠಡಿಗೆ ಬೀಗ ಹಾಕಿದ್ದಾರೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡೆಸಿದ್ದಾರೆ.
“ಕುಮಾರ ಮಹಾರಾಜ ಸ್ವಾಮೀಜಿಯನ್ನು ಗವಿಮಠಕ್ಕೆ ನಾವೇ ಕರೆದುಕೊಂಡು ಬಂದಿದ್ದೇವೆ. ಆಗ ಬಂಜಾರ ಸಮಾಜ ವಿರೋಧ ಮಾಡಿತ್ತು. ಆದರೂ, ಸ್ವಾಮೀಜಿ ಇರಲಿ ಅಂತ ಕರೆದುಕೊಂಡು ಬಂದು ಲಕ್ಷಾಂತರ ರೂಪಾಯಿ ದೇಣಿಗೆ ನೀಡಿದ್ದೇವೆ. ಅದರ ಲೆಕ್ಕ ಕೂಡ ಇಲ್ಲ. ಸ್ವಾಮೀಜಿ ಮಠವನ್ನು ಅಭಿವೃದ್ಧಿ ಮಾಡುವುದನ್ನು ಬಿಟ್ಟು ನಮ್ಮವರ ಮೇಲೆ ದೂರು ನೀಡಿ ಕಿರುಕುಳ ನೀಡುತ್ತಿದ್ದಾರೆ. ನಾವು ನೂರಾರು ವರ್ಷಗಳಿಂದ ಕಲ್ಲು ಒಡೆದು ಜೀವನ ಮಾಡುತ್ತಿದ್ದೇವೆ. ಈವಾಗ ನಮ್ಮ ಕುಲಕಸುಬವನ್ನು ಅಕ್ರಮ ಕಲ್ಲುಗಣಿಗಾರಿಕೆ ಅಂತ ದೂರು ನೀಡುತ್ತಿದ್ದಾರೆ. ಸ್ವಾಮೀಜಿ ಗ್ರಾಮದಲ್ಲಿ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ನಮಗೆ ಈ ಸ್ವಾಮೀಜಿ ಬೇಡ, ಹೀಗಾಗಿ ಅವರ ಕೊಠಡಿಗೆ ಬೀಗ್ ಹಾಕಿದ್ದೇವೆ ಎಂದು ಭೋವಿ ಸಮಾಜದ ತಿಮ್ಮವ್ವ ಹೇಳಿದ್ದಾರೆ.
ಇದನ್ನೂ ಓದಿ: ಬಾಲಕಿಯನ್ನು ಕರೆದ್ಯೊಯ್ದು ಸುಲೇಮಾನ್ ಅತ್ಯಾಚಾರ: ವಿಡಿಯೋ ಮಾಡಿದ ಅಲ್ತಾಫ್ ಅರೆಸ್ಟ್!
ಒಟ್ಟಿನಲ್ಲಿ, ಸ್ವಾಮೀಜಿಗಾಗಿ ಎರಡು ಸಮಾಜದ ನಡುವೆ ವೈಮನಸ್ಸು ಆರಂಭವಾಗಿದೆ. ಸ್ವಾಮೀಜಿ ನ್ಯಾಯ ಸಿಗುವವರಿಗೆ ಸಲ್ಲೇಖನ ವೃತ್ತ ಆರಂಭ ಮಾಡಿದ್ದಾರೆ. ಪರ ಹಾಗೂ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಈ ಸ್ವಾಮೀಜಿ ಕದನ ಎಲ್ಲಿಗೆ ಹೋಗಿ ತಲುಪುತ್ತದೆ ಕಾದು ನೋಡಬೇಕಾಗಿದೆ.