ಗದಗನಲ್ಲಿ ಮೀಟರ್ ಬಡ್ಡಿ ದಂಧೆಕೋರರ ಮನೆ ಮೇಲೆ ಪೊಲೀಸರ ದಾಳಿ, 9 ಮಂದಿ ವಶಕ್ಕೆ
ಗದಗದಲ್ಲಿ ಪೊಲೀಸರು ಮೀಟರ್ ಬಡ್ಡಿ ದಂಧೆಕೋರರ ವಿರುದ್ಧ ದೊಡ್ಡ ಪ್ರಮಾಣದ ಕಾರ್ಯಾಚರಣೆ ನಡೆಸಿದ್ದಾರೆ. ಹಲವಾರು ಮನೆಗಳ ಮೇಲೆ ದಾಳಿ ನಡೆಸಿ ದೊಡ್ಡ ಪ್ರಮಾಣದ ನಗದು, ಚೆಕ್‌ಗಳು ಮತ್ತು ಬಾಂಡ್‌ಗಳನ್ನು ಜಪ್ತಿ ಮಾಡಲಾಗಿದೆ. ಹಲವಾರು ರೌಡಿಶೀಟರ್‌ಗಳು ಸಹ ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಈ ಕುರಿತು ತನಿಖೆ ಮುಂದುವರಿಸಿದ್ದಾರೆ.

ಗದಗ, ಫೆಬ್ರವರಿ 09: ಪೊಲೀಸರು ಬೆಳ್ಳಂಬೆಳಗ್ಗೆ ಮೀಟರ್ ಬಡ್ಡಿ ದಂಧೆಕೋರರಿಗೆ ಬಿಗ್ ಶಾಕ್ ನೀಡಿದ್ದಾರೆ. ಗದಗ–ಬೆಟಗೇರಿ (Gadag-Betageri) ಅವಳಿ ನಗರದಲ್ಲಿ 12 ಕಡೆ ಮೀಟರ್ ಬಡ್ಡಿ ದಂಧೆಕೋರರ ಮನೆಗಳ ಮೇಲೆ ಏಕಕಾಲಕ್ಕೆ ಪೊಲೀಸರು ದಿಢೀರ್ ದಾಳಿ ಮಾಡಿದ್ದಾರೆ. ದಾಳಿ ವೇಳೆ ನಗದು, ಬಾಂಡ್, ಖಾಲಿ ಚೆಕ್ ಜಪ್ತಿ ಮಾಡಿದ್ದಾರೆ. ಸಂಗಮೇಶ್ ದೊಡ್ಡಣ್ಣವರ್ ಎಂಬುವರ ಮನೆಯಲ್ಲಿ 26 ಲಕ್ಷದ 57 ಸಾವಿರ ನಗದು, ಖಾಲಿ ಬಾಂಡ್, ಚೆಕ್ ಮತ್ತು ದಾಖಲೆ ಪತ್ರಗಳು ಪತ್ತೆಯಾಗಿವೆ. ರವಿ ಕೌಜಗೇರಿ ಎಂಬುವರ ಮನೆಯಲ್ಲಿ ಚೆಕ್, ಬಾಂಡ್, ಹಣ ಎಣಿಸುವ ಮಷಿನ್ ಪತ್ತೆಯಾಗಿದೆ.
ಕೆಲವರು ನೋಂದಣಿ ಮಾಡಿಸಿ ವ್ಯವಹಾರ, ಕೆಲವರು ಅನಧಿಕೃತವಾಗಿ ದಂಧೆ ಮಾಡುತ್ತಿದ್ದರು. ಮೀಟರ್ ಬಡ್ಡಿ ದಂಧೆಯಲ್ಲಿ ಹಲವು ರೌಡಿಶೀಟರ್‌ಗಳು ಸಹ ಭಾಗಿಯಾಗಿದ್ದಾರೆ. ಧಮ್ಕಿ, ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದರು ಎಂಬ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ಮಾಡಿದ್ದಾರೆ. ರೌಡಿಶೀಟರ್‌ಗಳಾದ ದರ್ಶನ್, ಉಮೇಶ್ ಸುಂಕದ, ಉದಯ ಸುಂಕದ, ಮಾರುತಿ ಮುತಗಾರ, ಶಿವರಾಜ್ ಹಂಸನೂರ, ವಿಜಯ ಸೋಳಂಕಿ, ಶ್ಯಾಮ್ ಕುರಗೋಡನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ತಿಳಿಸಿದರು.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಸಂಸ್ಥೆಯೊಂದರ ಕಿರುಕುಳಕ್ಕೆ ಬೇಸತ್ತು ಮಕ್ಕಳ ಶಾಲೆ ಬಿಡಿಸಿ ಊರನ್ನೇ ತ್ಯಜಿಸಿದ ಕುಟುಂಬ
ಮೀಟರ್ ಬಡ್ಡಿ ಕಿರುಕುಳ 39 ಜನರ ಬಂಧನ
ಮೀಟರ್ ಬಡ್ಡಿ ವಸೂಲಿಗೆ ಕಿರುಕುಳ ವಿಚಾರವಾಗಿ 9 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಆರ್ಬಿಐ ನಿಯಮ ಉಲ್ಲಂಘಿಸಿ ಬಡ್ಡಿ ವಸೂಲಿ ಮಾಡಿದಕ್ಕೆ 4 ಕೇಸ್ ದಾಖಲಾಗಿದೆ. ಇದುವರೆಗೂ ಒಟ್ಟು 39 ಜನರನ್ನ ಬಂಧಿಸಿಲಾಗಿದೆ. ಕಿರುಕುಳ ಕೊಡುವುದು ಕಂಡು ಬಂದ್ರೆ ನೇರವಾಗಿ ನಮಗೆ ತಿಳಿಸಿ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಹೇಳಿದರು.
ಕಾರವಾರ ತಾಲೂಕಿನ ಚಿತ್ತಾಕುಲ ಗ್ರಾಮದ ಸುಲಕ್ಷಮಿ ಎಂಬ ಮಹಿಳೆ ಸೆಂಟ್ ಮಿಲಾಗ್ರಿಸ್ ಕಂಪನಿಯಿಂದ ಸಾಲ ಪಡೆದಿದ್ದರು. ಸುಲಕ್ಷಮಿ 2018ರಲ್ಲಿ 4.5 ಲಕ್ಷ ರೂ. ಸಾಲ ಪಡೆದಿದ್ದರು. ಇದುವರೆಗೂ ಬಡ್ಡಿ ಕಟ್ಟುತ್ತಿದ್ದರು. ಬಡ್ಡಿ ಕಂತು ಕಟ್ಟಿಲ್ಲ ಅಂತ ಐದು ಜನರು ರಾತ್ರಿ ಅವರ ಮನೆಗೆ ನುಗ್ಗಿ ಅನುಚಿತ ವರ್ತಿಸಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಸೆಂಟ್ ಮಿಲಾಗ್ರಿಸ್ ಕಂಪನಿ ಮೇಲೆ ಕೇಸ್ ದಾಖಲು ಮಾಡಿದ್ದೇವೆ ಎಂದರು.
ಸಾಲಗಾರರಿಂದ ಯಾವುದೇ ಕಿರುಕುಳ ಬಂದ್ರೂ ಸಮಿಪದ ಪೊಲೀಸ್ ಠಾಣೆಗೆ ತಿಳಿಸಿ. ಉತ್ತರ ಕನ್ನಡ ಜಿಲ್ಲಾಡಳಿತ ನಿಮ್ಮ ಜೊತೆ ಇದೆ. ಯಾವುದೇ ಕಿರುಕಳಕ್ಕೂ ಎದೆಗುಂದು ತಪ್ಪು ನಿರ್ಧಾರಕ್ಕೆ ಮುಂದಾಗಬೇಡಿ. ಕಿರುಕಳ ತಪ್ಪಿಸಲೆಂದೇ ಜಿಲ್ಲೆಯ ಪ್ರತಿ ಠಾಣೆಯಲ್ಲಿ ಹೆಲ್ಪ ಡೆಸ್ಕ್ ಆರಂಭ ಮಾಡಲಾಗಿದೆ ಎಂದು ತಿಳಿಸಿದರು.
ಚಕ್ ಬೌನ್ಸ್ ಕೇಸ್ ವಿಚಾರದಲ್ಲಿ ಹಳಿಯಾಳದಲ್ಲಿ ಅಬ್ದುಲ್, ಶಾಂತಾ, ಭಾಷಾ, ರಾಜು ಮತ್ತು ಸುಭಾನಿ ಐವರ ಮೇಲೆ ಕೇಸ್ ದಾಖಲಾಗಿದೆ. ಈ ಐವರು 10 ಸಾವಿರ ರೂಪಾಯಿಯಂತೆ 50 ಸಾವಿರ ರೂಪಾಯಿ ಸಾಲವನ್ನು ಹಸಿನಾ ಎಂಬುವರಿಗೆ ಕೊಟ್ಟಿದ್ದರು. ಐದು ಜನ ಪ್ರತ್ಯೇಕವಾಗಿ ಐದು ಖಾಲಿ ಚೆಕ್ಗಳನ್ನು ಹಸಿನಾರಿಂದ ಪಡೆದಿದ್ದಾರೆ. ಹಸೀನಾ ಬಡ್ಡಿ ಸಮೇತ ಸಾಲ ಮರುಪಾವತಿ ಮಾಡಿದರೂ ಸಹಿತ ಚಕ್ ವಾಪಸ್ ಕೊಟ್ಟಿರಲಿಲ್ಲ. ಈ ಐವರು ಸೇರಿ ಹಸೀನಾರನ್ನು ಲೈಂಗಿಕತೆಗೆ ಬಳಸಲು ಮುಂದಾಗಿರುವ ಬಗ್ಗೆ ದೂರು ಬಂದಿದೆ. ಇವರು, ಈಗಾಗಲೇ ಈ ಮಹಿಳೆ ಮೇಲೆ ಕೂಡ ಚಕ್ ಬೌನ್ಸ್ ಕೇಸ್ ದಾಖಲು ಮಾಡಿದ್ದಾರೆ ಎಂದು ಮಾಹಿತಿ ನೀಡಿದರು. ದೂರು ಬಂದ ಕೂಡಲೆ ಎ1 ಅಬ್ದುಲ್ನನ್ನು ಕೂಡಲೆ ಬಂಧಿಸಲಾಗಿದೆ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:59 pm, Sun, 9 February 25