ಮರ್ಯಾದೆ ಹತ್ಯೆ ಕೇಸ್: 6 ವರ್ಷದ ಬಳಿಕ 4 ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನಲ್ಲಿ 2019ರಲ್ಲಿ ನಡೆದ ಜೋಡಿ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಮರಣದಂಡನೆ ವಿಧಿಸಲಾಗಿದೆ. ಭಿನ್ನ ಜಾತಿಗಳಿಗೆ ಸೇರಿದ ಯುವ ದಂಪತಿಯನ್ನು ಅವರ ಸಂಬಂಧಿಕರೇ ಕೊಲೆ ಮಾಡಿದ್ದರು. ಮೂರು ವರ್ಷಗಳ ವಿಚಾರಣೆಯ ನಂತರ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದೆ.

ಗದಗ, ಜನವರಿ 30: ಜಾತಿ ಬೇರೆ ಬೇರೆ ಆದರೆ ಗಾಢವಾದ ಪ್ರೀತಿ ಅವರನ್ನ ಒಂದು ಮಾಡಿತ್ತು. ಪ್ರೀತಿಸಿ ಮದ್ವೆಯಾಗಿದ್ದ ಇಬ್ಬರು ಸುಖವಾಗಿ ಸಂಸಾರ ನಡೆಸಿದ್ದರು. ಆದರೆ ಮನೆ ಮಗಳು ಇಚ್ಛೆಗೆ ವಿರುದ್ಧವಾಗಿ ಮದ್ವೆಯಾದಲು ಅನ್ನೋ ಒಂದೇ ಒಂದು ಕಾರಣಕ್ಕೆ ಕುಟುಂಬಸ್ಥರೇ ಸೇರಿ ಮಗಳು, ಅಳಿಯನನ್ನ ಕೊಲೆ (kill) ಮಾಡಿದ್ದರು. ಭೀಕರ ಕೊಲೆಗೆ ಗದಗ ಜಿಲ್ಲೆಯೇ ಬೆಚ್ಚಿ ಬಿದ್ದಿತ್ತು. ಈ ಘಟನೆ ನಡೆದು ಭರ್ತಿ 6 ವರ್ಷಗಳ ನಂತರ ಕೊಲೆ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಐತಿಹಾಸಿ ತೀರ್ಪು ನೀಡಿದೆ. ಆ ಮೂಲಕ ಮರ್ಯಾದೆಗೇಡು ಹತ್ಯೆಗೆ ನ್ಯಾಯ ಸಿಕ್ಕಿದೆ.
ಜೋಡಿ ಕೊಲೆಗೆ ಬೆಚ್ಚಿಬಿದ್ದ ಗದಗ ಜಿಲ್ಲೆ
2016 ರಲ್ಲಿ ರಿಲೀಸ್ ಆಗಿದ್ದ ಸೈರಾಟ್ ಸಿನಿಮಾ ಭಾರಿ ಸದ್ದು ಮಾಡಿತ್ತು. ಇದೇ ಕಥೆಯನ್ನೇ ಹೋಲುವ ಪ್ರಕರಣ 2019ರಲ್ಲಿ ಗದಗ ಜಿಲ್ಲೆಯಲ್ಲಿ ನಡೆದಿತ್ತು. ಈ ಘಟನೆಗೆ ಇಡೀ ಜಿಲ್ಲೆಯೇ ಬೆಚ್ಚಿ ಹೋಗಿತ್ತು. ಹೌದು. ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ 2019 ರ ನವೆಂಬರ್ 6 ರಂದು ಜೋಡಿ ಕೊಲೆ ನಡೆದಿತ್ತು. ಮನೆಗೆ ನುಗ್ಗಿದ್ದ ನಾಲ್ವರು ಹಂತಕರು 28 ವರ್ಷದ ರಮೇಶ್ ಮಾದರ್ ಹಾಗೂ 24 ವರ್ಷದ ಗಂಗವ್ವ ರಾಠೋಡ್ ಅನ್ನೋ ಜೋಡಿಯನ್ನ ಕಟ್ಟಿಗೆ, ದೊಣ್ಣೆಯಿಂದ ಹೊಡೆದು ಕಲ್ಲು ಎತ್ತಿಹಾಕಿ, ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದರು.
ಇದನ್ನೂ ಓದಿ: ಯಾದಗಿರಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಪತಿಯನ್ನೇ ಹತ್ಯೆಗೈದ ಪತ್ನಿ
ಮನೆಯಲ್ಲಿದ್ದ ಇಬ್ಬರನ್ನ ಹೊರಗೆಳೆದು ಮೃಗೀಯವಾಗಿ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದ ಗಜೇಂದ್ರಗಡ ಪೊಲೀಸರು, ಕೊಲೆ ಆರೋಪಿಗಳಾಗಿದ್ದ ಪರಶುರಾಮ ರಾಠೋಡ್, ಶಿವಪ್ಪ ರಾಠೋಡ್, ರವಿ, ರಮೇಶ್ ಅನ್ನೋರನ್ನ ಬಂಧಿಸಿದ್ದರು. ಈ ನಾಲ್ವರು ಆರೋಪಿಗಳು ಗಂಗವ್ವನ ಸಂಬಂಧಿಗಳು. ಶಿವಪ್ಪ, ಪರಶುರಾಮ್ ಚಿಕ್ಕಪ್ಪಂದಿರು. ರವಿ, ರಮೇಶ್ ಒಡಹುಟ್ಟಿದ ತಮ್ಮಂದಿರು. ಮಾದಿಗ ಸಮಾಜದ ಯುವಕನನ್ನ ಪ್ರೀತಿಸಿ ಮದ್ವೆಯಾಗಿದ್ಲು ಅನ್ನೋ ಕಾರಣಕ್ಕೆ ಮನೆ ಮಗಳು ಗಂಗವ್ವ ಹಾಗೂ ಅಳಿಯ ರಮೇಶ್ ನನ್ನ ಕ್ರೂರವಾಗಿ ಕೊಲೆ ಮಾಡಲಾಗಿತ್ತು.
ನಾಲ್ವರು ಆರೋಪಿಗಳಿಗೆ ಮರಣದಂಡನೆ
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಗಜೇಂದ್ರಗಡ ಪೊಲೀಸರು 2020 ಜನವರಿ 18ರಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಆರೋಪಿಗಳ ವಿರುದ್ಧ ಸೆಕ್ಷನ್ 427, 449, 302, 506(2) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಸರ್ಕಾರಿ ಅಭಿಯೋಜಕಿ ಸವಿತಾ ಶಿಗ್ಲಿ ವಾದಮಂಡಿಸಿದ್ದರು. ಮೂರು ವರ್ಷ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಎಸ್ ಬಸವರಾಜ್, ಅಂತಿಮವಾಗಿ ನಾಲ್ವರು ಆರೋಪಿಗಳಿಗೆ ಮರಣದಂಡನೆ ವಿಧಿಸಿ ಐತಿಹಾಸಿಕ ಆದೇಶ ಹೊರಡಿಸಿದ್ದಾರೆ.
ಗಂಗವ್ವ ಅವರ ಜಮೀನಿನಲ್ಲಿ ರಮೇಶ್ ಕೆಲಸಕ್ಕೆ ಹೋಗುತ್ತಿದ್ದ. ಆ ವೇಳೆ ಇಬ್ಬರಿಗೂ ಪ್ರೀತಿ ಚಿಗುರಿತ್ತು. ರಮೇಶ್ ಹಾಗೂ ಗಂಗವ್ವ ಸುಮಾರು ವರ್ಷಗಳಿಂದ ಪ್ರೀತಿಸುತಿದ್ದರು. ಹೀಗಾಗಿ ಓಡಿ ಹೋಗಿ 2017 ರಲ್ಲೇ ಮದ್ವೆಯಾಗಿದ್ದರು. ಮನೆಯವರಿಗೆ ಅಂಜಿ ಎರಡು ವರ್ಷ ಬೆಂಗಳೂರು, ಶಿವಮೊಗ್ಗದಲ್ಲಿ ವಾಸವಾಗಿದ್ದರು. ಇಬ್ಬರ ಪ್ರೀತಿಗೆ ಎರಡು ಮುದ್ದಾದ ಮಕ್ಕಳಿದ್ದಾರೆ. ಎರಡು ವರ್ಷದ ಗಂಡು ಮಗು, ಇನ್ನೊಂದು ಚಿಕ್ಕ ಮಗುವಿಗೆ ಆಗಷ್ಟೆ ಮೂರು ತಿಂಗಳು.
ಇದನ್ನೂ ಓದಿ: ಗದಗ: 9ನೇ ಕ್ಲಾಸ್ ವಿದ್ಯಾರ್ಥಿನಿ ಆತ್ಮಹತ್ಯೆ, ಲವ್ ಜಿಹಾದ್ ಆರೋಪ..!
ಮದ್ವೆಯಾಗಿ ಎರಡು ವರ್ಷ ಕಳೆದಿದೆ, ಮನೆಯವರ ಸಿಟ್ಟು ಕಡಿಮೆಯಾಗಿರುತ್ತೆ ಅಂತಾ ದೀಪಾವಳಿ ಹಬ್ಬಕ್ಕೆ ಅಂತ ಊರಿಗೆ ಬಂದಿದ್ದರು. ಆದರೆ ಗಂಗವ್ವಳ ಮನೆಯವರ ದ್ವೇಷ, ಸಿಟ್ಟು ಮಾತ್ರ ಕರಗಿರಲಿಲ್ಲ. ಕೊಲೆ ಘಟನೆ ನಡೆಯುವ ಜಸ್ಟ್ ವಾರದ ಹಿಂದೆಯೇ ಊರು ಸೇರಿಕೊಂಡಿದ್ದರು. ರಮೇಶನ ತಂದೆಯ ಮನೆಯಲ್ಲೇ ಇಬ್ಬರು ಇದ್ದರು. ಊರಿಗೆ ಬಂದಿದ್ದ ಗಮನಿಸಿದ್ದ ಪರಶುರಾಮ್ ರಾಠೋಡ್ ಕೊಲೆಗೆ ಸಂಚು ರೂಪಿಸುತ್ತಾರೆ. ಕುಟುಂಬದ ಸದಸ್ಯರ ಜೊತೆಗೆ 2019 ರ ನವೆಂಬರ್ 6 ರಂದು ಮಧ್ಯಾಹ್ನ 2 ರಿಂದ ಮೂರು ಗಂಟೆ ಸುಮಾರಿಗೆ ಮನೆಗೆ ನುಗ್ಗಿ ಅಮಾನವೀಯವಾಗಿ ಹತ್ಯೆ ಮಾಡಿದ್ದಾರೆ.
ಸೈರಾಟ್ ಸಿನೆಮಾ ನೋಡಿದ್ರೆನೋ ಗೋತ್ತಿಲ್ಲ. ಈ ಇಬ್ಬರ ಸ್ಟೋರಿ ಸೈರಾಟ್ ಸಿನಿಮಾವನ್ನೇ ಹೋಲುತ್ತೆ. ಮರ್ಯಾದೆ ಹತ್ಯೆ ಇಡೀ ಜಿಲ್ಲೆಯ ಬೆಚ್ಚಿ ಹೋಗಿತ್ತು. ಎರಡು ಸಮುದಾಯದ ಮಧ್ಯೆ ಹೊತ್ತಿದ್ದ ಬೆಂಕಿ ಸದ್ಯ ತಣ್ಣಗಾಗಿದೆ. ಮಾಡಿದ ತಪ್ಪನ್ನ ಸಮರ್ಥಿಸಿಕೊಳ್ಳಲು ಯಾರೂ ತಯಾರಿಲ್ಲ. ಕೊಲೆ ಮಾಡಿದಕ್ಕೆ ಆರೋಪಿಗಳಿಗೆ ತಕ್ಕ ಶಿಕ್ಷೆ ಸಿಕ್ಕಿದೆ. ಮರ್ಯಾದೆಗೇಡು ಪ್ರಕರ್ಣವೊಂದರಲ್ಲಿ ನಾಲ್ವರಿಗೆ ಮರಣದಂಡನೆ ಶಿಕ್ಷೆ ಪ್ರಕಟವಾಗಿದ್ದು ಐತಿಹಾಸಿಕ ಎನ್ನಲಾಗುತ್ತಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.