ಅಸಮರ್ಪಕ ವಿದ್ಯುತ್ ಪೂರೈಕೆಗೆ ಹೆಸ್ಕಾಂ ವಿರುದ್ಧ ರೊಚ್ಚಿಗೆದ್ದ ರೈತರು; ರಾಜ್ಯ ಹೆದ್ದಾರಿ ಬಂದ ಮಾಡಿ ಹೋರಾಟ
ಗದಗ ಜಿಲ್ಲೆಯಲ್ಲೂ ಭೀಕರ ಬರ ತಾಂಡವಾಡುತ್ತಿದೆ. ಬಿತ್ತಿ ಬೆಳೆದ ಬೆಳೆಗಳು ಬಿಸಿಲಿನ ತಾಪಕ್ಕೆ ಒಣಗಿ ಹೋಗಿವೆ. ಉರಿ ಬಿಸಿಲು ರೈತರ ಜೀವ ಹಿಂಡುತ್ತಿದೆ. ಈ ನಡುವೆ ಅಷ್ಟೋ ಇಷ್ಟು ನೀರಾವರಿ ಮಾಡಿ ಬದುಕು ಕಟ್ಟಿಕೊಳ್ಳಬೇಕು ಅಂದುಕೊಂಡ ರೈತರು ಈಗ ಕಂಗಾಲಾಗಿದ್ದಾರೆ. ಬರದ ಗಾಯದ ಮೇಲೆ ಹೆಸ್ಕಾಂ ರೈತರಿಗೆ ಬರೆ ಎಳೆಯುತ್ತಿದೆ. ಅಧಿಕಾರಿಗಳ ಸುಳ್ಳು ಭರವಸೆಗೆ ರೊಚ್ಚಿಗೆದ್ದ ರೈತರು ಹೆದ್ದಾರಿ ಬಂದ್ ಮಾಡಿ ಧರಣಿ ಮಾಡಿದ್ದಾರೆ. ಸ್ಥಳಕ್ಕೆ ಬಂದ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಗದಗ, ಅ.10: ಜಿಲ್ಲೆಯಾದ್ಯಂತ ಭೀಕರ ಬರಗಾಲ ನೇಗಿಲಯೋಗಿ ಜೀವ ಹಿಂಡುತ್ತಿದೆ. ಗದಗ ಜಿಲ್ಲೆಯ ಏಳು ತಾಲೂಕಿನಲ್ಲಿ ಆರು ತಾಲೂಕು ಬರಪೀಡಿತ ಎಂದು ಘೋಷಣೆ ಮಾಡಿ, ಸರ್ಕಾರ ಮುಂಡರಗಿ(Mundaragi) ತಾಲೂಕಿಗೆ ಅನ್ಯಾಯ ಮಾಡಿತ್ತು. ಇದಕ್ಕಾಗಿ ರೈತರು ತೀವ್ರ ಹೋರಾಟ ಮಾಡಿದ ಫಲವಾಗಿ ನಿನ್ನೆಯೇ ಸರ್ಕಾರ ಮುಂಡರಗಿ ತಾಲೂಕನ್ನು ಕೂಡ ಬರ ಪೀಡಿತ ಎಂದು ಘೋಷಣೆ ಮಾಡಿದೆ. ಈ ನಡುವೆ ಹೆಸ್ಕಾಂ ಕಳೆದ ನಾಲ್ಕೈದು ದಿನಗಳಿಗೆ 3 ಫೇಸ್ ವಿದ್ಯುತ್ ಸಂಪರ್ಕವನ್ನು ಕಟ್ಟು ಮಾಡಿ ರೈತರಿಗೆ ಶಾಕ್ ನೀಡಿದೆ. ಸಾಕಷ್ಟು ಬಾರಿ ಹೆಸ್ಕಾಂ, ತಾಲೂಕಾಡಳಿತಕ್ಕೆ ಮನವಿ ಮಾಡಿದರೂ, ಡೋಂಟ್ ಕೇರ ಎಂದಿದ್ದಾರೆ. ಅಷ್ಟೊಇಷ್ಟು ನೀರಾವಾರಿ ಮೂಲಕ ಬೆಳೆದ ಬೆಳೆ ಒಣಗುತ್ತಿರುವುದನ್ನು ನೋಡಿದ ರೈತರು ರೊಚ್ಚಿಗೆದ್ದಿದ್ದಾರೆ. ಇವತ್ತು ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಗದಗ-ಹರಪ್ಪನಹಳ್ಳಿ ರಾಜ್ಯ ಹೆದ್ದಾರಿ ತಡೆದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗ್ಗೆ 5 ಗಂಟೆಯಿಂದಲೇ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದರೂ, ಮುಂಡರಗಿ ಹೆಸ್ಕಾಂ ಅಧಿಕಾರಿಗಳು ಹಾಗೂ ತಹಶೀಲ್ದಾರ್ ಮಾತ್ರ ಸ್ಥಳಕ್ಕೆ ಬಂದಿಲ್ಲ ಎಂದು ಕಿಡಿಕಾರಿದ್ದಾರೆ. ಸತತ ಹತ್ತು ಗಂಟೆಯಿಂದ ಹೆದ್ದಾರಿ ತಡೆ ಮಾಡಿದ ಬಳಿಕ ಎಚ್ಚೆತ್ತುಕೊಂಡು ಹೆಸ್ಕಾಂ ಅಧಿಕಾರಿಗಳು, ತಹಶೀಲ್ದಾರರು ಸ್ಥಳಕ್ಕೆ ಧಾಮಿಸಿದ್ದಾರೆ. ತಡವಾಗಿ ಆಗಮಿಸಿದ ಅಧಿಕಾರಿಗಳಿಗೆ ರೈತರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಭೀಕರ ಬರಗಾಳದಿಂದ ಮೊದಲೇ ನಮ್ಮ ಬದುಕು ಮೂರಾಬಟ್ಟೆಯಾಗಿದೆ. ಈ ನಡುವೆ ಹೆಸ್ಕಾಂ ವಿದ್ಯುತ್ ಕಟ್ ಮಾಡಿ, ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಈಗ ಭತ್ತ ಭರ್ಜರಿಯಾಗಿ ಬೆಳೆದಿದೆ. ಕಾಳು ಹಿಡಿಯುವ ಸಂದರ್ಭವಾಗಿದೆ. ಈ ವೇಳೆ ವಿದ್ಯುತ್ ಬಂದ ಮಾಡಿ, ರೈತರಿಗೆ ಹೆಸ್ಕಾ ಬರೆ ಹಾಕುತ್ತಿದೆ ಎಂದು ರೈತರು ಕಿಡಿಕಾರಿದ್ದಾರೆ.
ಇದನ್ನೂ ಓದಿ:ಕೇಂದ್ರ ಎಷ್ಟಾದರೂ ಪರಿಹಾರ ಕೊಡಲಿ, ರಾಜ್ಯ ಸರ್ಕಾರ ಬರಗಾಲವನ್ನ ಸಮರ್ಥವಾಗಿ ಎದುರಿಸುತ್ತದೆ: ಸಿಎಂ ಸಿದ್ದರಾಮಯ್ಯ
ಹೋರಾಟದ ವೇಳೆ ಆ್ಯಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟು ಮಾನವೀಯತೆ ಮೆರೆದ ರೈತರು
ಉರಿ ಬಿಸಿಲಿನಲ್ಲಿ ಹತ್ತು ಗಂಟೆ ನಿರಂತರ ಹೆದ್ದಾರಿ ಬಂದ ಮಾಡಿದ ರೈತರು ಹಸಿವಿನಿಂದ ಬಳಲುತ್ತಿದ್ದರು. ಆಗ ಕೆಲ ರೈತರು ಹಸಿಲು ಶಾಲಿನಲ್ಲಿ ಜೋಳಿಗೆ ಹಿಡಿದು ಹಣ ಸಂಗ್ರಹ ಮಾಡಿದ ಘಟನೆಯೂ ನಡೆದಿದೆ. ಸುಮಾರು 5 ಸಾವಿರ ಹಣ ಸಂಗ್ರಹ ಮಾಡಿದ ರೈತರು ಹೆದ್ದಾರಿಯಲ್ಲೇ ಪಲಾವು ಮಾಡಿ ಸೇವಿಸಿದರು. ರೈತರ ಸಮಸ್ಯೆಗೆ ಸ್ಪಂದಿಸದ ಹೆಸ್ಕಾಂ, ಜಿಲ್ಲಾಡಳಿತ ವಿರುದ್ಧ ವಿನೂತನ ಹೋರಾಟ ಮಾಡಿದರು. ಇದೇ ಹೋರಾಟದ ವೇಳೆ ಆ್ಯಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟು ರೈತರು ಮಾನವೀಯತೆ ಕೂಡ ತೋರಿದರು. ಇನ್ನು ಉರಿಬಿಸಿಲಿನಲ್ಲೇ ಹೆದ್ದಾರಿಯಲ್ಲಿ ಅರೆಬೆತ್ತಲೆ ಪ್ರತಿಭಟನೆ ಮಾಡಿ ಸರ್ಕಾರದ ವಿರದ್ಧ ಕಿಡಿಕಾರಿದ್ದಾರೆ.
ಸರ್ಕಾರ, ಅಧಿಕಾರಿಗಳು ನಮ್ಮ ಪಾಲಿಗೆ ಸತ್ತು ಹೋಗಿದ್ದಾರೆ ಎಂದು ಘೋಷಣೆ ಕೂಗಿದ ರೈತರು, ಬೇಕೇ ಬೇಕು ಕರೆಂಟ್ ಬೇಕು ಎಂದು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರಿಗೂ ಬಗ್ಗದ ಬಳಿಕ ಹೆಸ್ಕಾಂ ಅಧಿಕಾರಿಗಳಿಗೆ ಫೋನ್ ಮಾಡಿ ಕರೆಸಿದ್ದಾರೆ. ಆಗ ಹೆಸ್ಕಾಂ ಅಧಿಕ್ಷಕ ಇಂಜಿನಿಯರ್ ಹಾಗೂ ಗದಗ ಎಕ್ಸಿಕ್ಯೂಟಿ ಇಂಜಿನಿಯರ್ ಸ್ಥಳಕ್ಕೆ ಆಗಮಿಸಿದರು. ಆದ್ರೆ, ರೈತರು ಮಾತ್ರ ಹೆಸ್ಕಾಂ ಎಂಡಿ ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು. ನೀವು ಲಿಖಿತ ಭರವಸೆ ನೀಡಿದ್ರೆ ಮಾತ್ರ ಹೋರಾಟ ಹಿಂಪಡೆಯುತ್ತೇವೆ. ಇಲ್ಲವೆಂದರೆ ಅಹೋರಾತ್ರಿ ಹೆದ್ದಾರಿ ತಡೆದು ಪ್ರತಿಭಟನೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ:ನಾವು ನಷ್ಟ ಮಾಡಿ ನಿಮ್ಮನ್ನು ಲಾಭದಲ್ಲಿ ಇಡಬೇಕಾ: ಬಿಲ್ ಕಟ್ಟಿ ಎಂದ ಹೆಸ್ಕಾಂ ಎಂಡಿಗೆ ಕೈಗಾರಿಕೋದ್ಯಮಿಗಳ ಪ್ರಶ್ನೆ
ಬಳಿಕ ಸ್ಥಳಕ್ಕೆ ಆಗಮಿಸಿದ ಅಧೀಕ್ಷಕ ಇಂಜಿನಿಯರ್ ‘ನಾವು ಉದ್ದೇಶ ಪೂರ್ವಕ ವಿದ್ಯುತ್ ಕಡಿತ ಮಾಡಿಲ್ಲ. ರಾಯಚೂರು ವಿದ್ಯುತ್ ಸ್ಥಾವರದಲ್ಲಿ ವಿದ್ಯುತ್ ಬಂದಾಗಿರುವ ಹಿನ್ನಲೆ ವಿದ್ಯುತ್ ಅಭಾವ ಆಗಿದೆ. ಹೀಗಾಗಿ ಕಡಿತ ಮಾಡಲಾಗಿದೆ. ಇನ್ನೆರಡು ದಿನಗಳಲ್ಲಿ ಎಲ್ಲವೂ ಸರಿಯಾಗುತ್ತೆ ಎಂದು ಪ್ರತಿಭಟನೆ ಕೈಬಿಡುವಂತೆ ರೈತರಿಗೆ ಕೈಮುಗಿದು ಬೇಡಿಕೊಂಡರು. ಆದ್ರೆ, ಸುಳ್ಳು ಭವರಸೆ ಸಾಕಾಗಿದೆ ಲಿಖಿತ ಪತ್ರ ನೀಡಿ, ಅಂದಾಗ ಮಾತ್ರ ಹೋರಾಟ ಹಿಂಪಡೆಯುತ್ತೆವೆ ಎಂದರು. ಬೇಸಿಗೆ ಮುನ್ನವೇ ರಾಜ್ಯದ ಕತ್ತಲಲ್ಲಿ ಮುಳುಗುವ ಮುನ್ಸೂಚನೆ ಹೆಸ್ಕಾಂ ನೀಡಿದೆ. ಇಂದಿನಿಂದ ಗದಗ ಜಿಲ್ಲೆಯಲ್ಲಿ ಎಲ್ಲ ನಗರಗಳಲ್ಲಿ ಎರಡು ಗಂಟೆ ಲೋಡ್ ಶೆಡ್ಡಿಂಗ್ ಮಾಡುವುದಾಗಿ ಹೆಸ್ಕಾಂ ಅಧಿಕಾರಿಗಳು ಹೇಳಿದ್ದಾರೆ. ಕೊನೆಗೆ ತಹಶೀಲ್ದಾರ್ ಲಿಖಿತ್ ಭರವಸೆ ನೀಡಿದ ಬಳಿಕ ರೈತರು ಹೋರಾಟ ಹಿಂಪಡೆದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ