ಗದಗ-ಬೆಟಗೇರಿ ನಗರಸಭೆ ಚುನಾವಣೆ: ಕರ್ನಾಟಕ ಮುನ್ಸಿಪಲ್ ಕಾಯ್ದೆ ಗಾಳಿಗೆ ತೂರಿ ಮನಬಂದವರೆಲ್ಲ ಚುನಾವಣೆಗೆ ಸ್ಪರ್ಧೆ

ಗದಗ-ಬೆಟಗೇರಿ ನಗರಸಭೆ ಚುನಾವಣೆ: ಕರ್ನಾಟಕ ಮುನ್ಸಿಪಲ್ ಕಾಯ್ದೆ ಗಾಳಿಗೆ ತೂರಿ ಮನಬಂದವರೆಲ್ಲ ಚುನಾವಣೆಗೆ ಸ್ಪರ್ಧೆ
ಗದಗ-ಬೆಟಗೇರಿ ನಗರಸಭೆ

ಕರ್ನಾಟಕ ಮುನ್ಸಿಪಲ್ ಕಾಯ್ದೆ ಯಡಿ ನಾಮಪತ್ರಗಳ ಕ್ರಮಬದ್ಧತೆ ಕುರಿತು ಪರಿಶೀಲನೆ ನಡೆಯಬೇಕು ಅನ್ನೋ ಒತ್ತಾಯ ಗದಗ-ಬೆಟಗೇರಿ ಅವಳಿ ನಗರದಲ್ಲಿ ಕೇಳಿಬಂದಿದೆ.

TV9kannada Web Team

| Edited By: Ayesha Banu

Dec 12, 2021 | 4:34 PM

ಗದಗ: ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ಡಿಸೆಂಬರ್ 8ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು ಡಿ.15ಕ್ಕೆ ಕೊನೆಗೊಳ್ಳಲಿದೆ. ಎಂಟು ವರ್ಷಗಳ ಬಳಿಕ ಅವಳಿ ನಗರದಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆ ಜರಗುತ್ತಿರುವುದರಿಂದ ಕದನ ಕುತೂಹಲ ಕೆರಳಿಸಿದೆ. ಟಿಕೆಟ್‌ಗಾಗಿ ತೀವ್ರ ಪೈಪೋಟಿ ಕೂಡ ಶುರುವಾಗಿದೆ. ಆದ್ರೆ ಕರ್ನಾಟಕ ಮುನ್ಸಿಪಲ್ ಕಾಯ್ದೆ ಯಡಿ ನಾಮಪತ್ರಗಳ ಕ್ರಮಬದ್ಧತೆ ಕುರಿತು ಪರಿಶೀಲನೆ ನಡೆಯಬೇಕು ಅನ್ನೋ ಒತ್ತಾಯ ಗದಗ-ಬೆಟಗೇರಿ ಅವಳಿ ನಗರದಲ್ಲಿ ಕೇಳಿಬಂದಿದೆ.

ಕರ್ನಾಟಕ ಮುನ್ಸಿಪಾಲಿಟಿ ಕಾಯ್ದೆ 1964 ಸೆಕ್ಷನ್ 16ರಡಿ ಯಾವುದೇ ವ್ಯಕ್ತಿ ನಗರಸಭೆ ವಿರುದ್ಧ ಮೊಕದ್ದಮೆ ದಾಖಲಿಸಿದ್ದರೆ ಅಂಥವರು ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿಲ್ಲ. ಅಲ್ಲದೇ, ನಗರಸಭೆಯಲ್ಲಿ ನೋಂದಾಯಿತ ಗುತ್ತಿಗೆದಾರರು, ಗುತ್ತಿಗೆದಾರರ ಮಕ್ಕಳು ಅವರ ತಂದೆ ಮತ್ತು ತಾಯಿಗೆ ಚುನಾವಣೆಯಲ್ಲಿ ನಿಲ್ಲಲು ಅವಕಾಶವಿಲ್ಲ. ನಗರಸಭೆಗೆ ಸಂಬಂಧಿಸಿದಂತೆ ಉಪಕರಣ ಮತ್ತಿತರ ವಸ್ತುಗಳ ಪೂರೈಕೆದಾರರಾಗಿ ಕಾರ್ಯನಿರ್ವಹಿಸುತ್ತಿರುವವರೂ ಸ್ಪರ್ಧಿಸುವಂತಿಲ್ಲ ಎಂಬುದು ಕಾಯ್ದೆಯಲ್ಲಿದೆ.

ಹೀಗಾಗಿ ನಗರಸಭೆಯಿಂದ ಚುನಾವಣೆಗೆ ಸ್ಪರ್ಧಿಸುವವರು ಕಾನೂನಿನ ಕಡೆಗೆ ಕೊಂಚ ಗಮನ ಹರಿಸಿ ನಾಮಪತ್ರ ಸಲ್ಲಿಸುವುದು ಒಳಿತು. ಏಕೆಂದರೆ ಇಂತಹ ಎಲ್ಲ ತರಹದ ವಿಷಯಗಳು ನಾಮಪತ್ರ ಪರಿಶೀಲನೆ ಸಂದರ್ಭದಲ್ಲಿ ಚರ್ಚೆಯಾಗುವುದು ಖಚಿತ. ಪಕ್ಷದ ಟಿಕೆಟ್ ಲಭಿಸಿದೆ ಎಂದು ಮುಚ್ಚುಮರೆಯಿಂದ ನಾಮಪತ್ರ ಸಲ್ಲಿಸಿದರೆ ಮುಗಿಯಿತು ಎನ್ನುವಂತಿಲ್ಲ. ಪರಿಶೀಲನೆ ವೇಳೆಯಲ್ಲಿ ಸಿಕ್ಕಿಬಿದ್ದು ನಾಮಪತ್ರ ತಿರಸ್ಕೃತಗೊಂಡರೂ ಅಚ್ಚರಿ ಪಡಬೇಕಿಲ್ಲ. ಹೀಗಾಗಿ ಪಕ್ಷದ ಮುಖಂಡರು ಸಹ ಟಿಕೆಟ್ ಹಂಚಿಕೆ ಮಾಡುವ ಸಮಯದಲ್ಲಿ ಅಭ್ಯರ್ಥಿಯ ಪೂರ್ವಾಪರ ಯೋಚಿಸಿ ಟಿಕೆಟ್ ನೀಡುವ ಅನಿವಾರ್ಯತೆ ಎದುರಾಗಿದೆ. ಟಿಕೆಟ್ ವಂಚಿತರು ಇಂತಹ ವಿಷಯಗಳನ್ನು ಇಟ್ಟುಕೊಂಡು ಪಕ್ಷವನ್ನೇ ಪೇಚಿಗೆ ಸಿಲುಕಿಸುವಂತಹ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ನ್ಯಾಯಾಲಯ ಮೆಟ್ಟಿಲೇರಿದವರಿಗೆ ನಡುಕ ಗದಗ ಬೆಟಗೇರಿ ಅವಳಿ ನಗರದ ವಿವಿಧ ಭಾಗಗಳಲ್ಲಿರುವ ಬಾಡಿಗೆ ಅವಧಿ ಪೂರ್ಣಗೊಂಡಿರುವ ನಗರಸಭೆ ಒಡೆತನದ 389 ವಾಣಿಜ್ಯ ಮಳಿಗೆಗಳ ಪೈಕಿ 287 ಮಳಿಗೆಗಳನ್ನು ಸಾರ್ವಜನಿಕ ಬಹಿರಂಗ ಹರಾಜು ಹಾಕುವ ಪ್ರಕ್ರಿಯೆಗೆ ಕಳೆದ ಅಕ್ಟೋಬರ್ ತಿಂಗಳಲ್ಲಿ ಮುಹೂರ್ತ ಕೂಡಿಬಂದಿತ್ತು. ವಾಣಿಜ್ಯ ಮಳಿಗೆಗಳನ್ನು ಅಕ್ಟೊಬರ್. 21, ಅಕ್ಟೊಬರ್. 25 ಮತ್ತು ಅಕ್ಟೊಬರ್. 27ರಂದು ಮೂರು ಹಂತದಲ್ಲಿ ಮಳಿಗೆ ಹರಾಜು ಪ್ರಕ್ರಿಯೆ ನಡೆಯುವ ಮುಹೂರ್ತವೂ ನಿಗದಿಯಾಗಿತ್ತು. ಆದರೆ, ಮಳಿಗೆಯ ಬಾಡಿಗೆದಾರರು ನಗರಸಭೆಯ ನಿರ್ಣಯ ವಿರೋಧಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಹೀಗೆ ಕೋರ್ಟ್ ಮೊರೆ ಹೋದವರು ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಬಹುದೇ? ಮೀಸಲಾತಿ ವಿರೋಧಿಸಿ ಹಾಗೂ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಕಾರ್ಯವೈಖರಿ ವಿರೋಧಿಸಿ ಕೋರ್ಟ್ ನಲ್ಲಿ ದಾವೆ ಹೂಡಿರುವಂಥವರು ಈ ಚುನಾವಣೆಯಲ್ಲಿ ಸ್ಪರ್ಧಿಸಬಹುದೇ ಎಂಬ ಜಿಜ್ಞಾಸೆ ಶುರುವಾಗಿದೆ. ಕರ್ನಾಟಕ ಮುನ್ಸಿಪಾಲಿಟಿ ಕಾಯ್ದೆಯಡಿ ಇಂಥ ವ್ಯಕ್ತಿಗಳು ಸ್ಪರ್ಧಿಸಲು ಅವಕಾಶ ಇದೆಯೋ ಇಲ್ಲವೋ ಎಂಬ ಚೆರ್ಚೆಯಂತೂ ಜೋರಾಗಿದೆ.

ಬಿಜೆಪಿ-ಕಾಂಗ್ರೆಸ್ ಆಕಾಂಕ್ಷಿಗಳಿಗೆ ಢವಢವ ಈಗಾಗಲೇ ಬಿಜೆಪಿ ನಿನ್ನೆ 30 ಜನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಇದ್ರಲ್ಲಿ ಹಲವು ಅಭ್ಯರ್ಥಿಗಳ ಕುಟುಂಬದ ಸದಸ್ಯರು ನಗರಸಭೆ ಗುತ್ತಿಗೆದಾರರು ಇದ್ದಾರೆ ಎನ್ನಲಾಗಿದೆ. ಹೀಗಾಗಿ ಈಗ ಬಿಜೆಪಿ ಅಭ್ಯರ್ಥಿಗಳಿಗೆ ಆತಂಕ ಶುರುವಾಗಿದೆ. ಈ ಅಭ್ಯರ್ಥಿಗಳ ಬದಲಾವಣೆ ಮಾಡುವ ಅನಿವಾರ್ಯತೆ ಬಿಜೆಪಿಗೆ ಎದುರಾಗಿದೆ. ಇನ್ನು ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳಲ್ಲೂ ಸಾಕಷ್ಟು ಜನ್ರು ಇದ್ದಾರಂತೆ. ಹೀಗಾಗಿ ಆ ಪಕ್ಷದ ನಾಯಕರು ಈ ಕಾಯ್ದೆ ಅಡಿಯಲ್ಲಿ ಬರುವ ಆಕಾಂಕ್ಷಿಗಳಿಗೆ ಟಿಕೆಟ್ ಕೊಡಬೇಕೋ ಬೇಡವೋ ಅನ್ನೂ ಚಿಂತನೆಯಲ್ಲಿದೆ ಎನ್ನಲಾಗಿದೆ. ಹೀಗಾಗಿ ಈ ಬಾರಿ ನಗರಸಭೆ ಚುನಾವಣೆಯಲ್ಲಿ ಒಂದು ಕೈ ನೋಡಿಯೇ ಬಿಡೋಣ ಎನ್ನುವರಿಗೆ ಈ ಕಾಯ್ದೆ ನಿರಾಸೆ ಮೂಡಿಸಿದೆ.

ಸ್ಪರ್ಧಿಸಲು ಅರ್ಹರಲ್ಲ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾದವರು, ಜೈಲು ವಾಸ ಅನುಭವಿಸಿದವರು, ಮುನ್ಸಿಪಲ್ ಕೌನ್ಸಿಲ್ ನ ಆದೇಶದ ಮೂಲಕ ಮಾಡಲಾದ ಯಾವುದೇ ಕಾಮಗಾರಿಯಲ್ಲಿ ಅಥವಾ ಮುನ್ಸಿಪಲ್ ಕೌನ್ಸಿಲ್‍ನೊಂದಿಗೆ ಅಥವಾ ಅದರ ಅಧೀನದಲ್ಲಿ ಅಥವಾ ಅದರ ಪರವಾಗಿ ಮಾಡಿಕೊಂಡಿರುವ ಯಾವುದೇ ಕರಾರಿನ ಅಥವಾ ನಿಯೋಜನೆಯಲ್ಲಿ ಅವನು ಅಥವಾ ಅವನ ಪಾಲುದಾರರನು ಪ್ರತ್ತಕ್ಷ ಅಥವಾ ಪರೋಕ್ಷವಾಗಿ ಯಾವುದೇ ಪಾಲು ಅಥವಾ ಹಿತಾಸಕ್ತಿ ಹೊಂದಿದ್ದರೆ, ಮುನ್ಸಿಪಲ್ ಕೌನ್ಸಿಲ್‍ನ ನ್ಯಾಯವಾದಿಯಾಗಿ ನಿಯೋಜನೆಗೊಂಡಿದ್ದರೆ ಅಥವಾ ಮುನ್ಸಿಪಲ್ ಕೌನ್ಸಿಲ್ ನ ವಿರುದ್ಧವಾಗಿ ನ್ಯಾಯವಾದಿಯಾಗಿ ನಿಯೋಜನೆಯನ್ನು ಅಂಗೀಕರಿಸಿದ್ದರೆ, ಮುನ್ಸಿಪಲ್ ಕೌನ್ಸಿಲ್‍ನ ಲೈಸೆನ್ಸ್ ಪಡೆದ ಮೋಜಣಿದಾರ, ಕೊಳಾಯಿಗಾರ ಅಥವಾ ನೀರು ಸರಬರಾಜು ಮಾಡುವ ಕಂಟ್ರಾಕ್ಟರಾಗಿದ್ದರೆ ಅಥವಾ ಲೈಸೆನ್ಸ್ ಪಡೆದ ವ್ಯಕ್ತಿಯ ಪಾಲುದಾರನಾಗಿರುವ ಕಂಪನಿಯ ಪಾಲುದಾರನಾಗಿದ್ದರೆ ಚುನಾವಣೆಯ ಸಿಂಧುತ್ವವನ್ನು ಕ್ರಮಬದ್ಧತೆಯನ್ನು ಪ್ರಶ್ನಿಸುವ ವ್ಯವಹಾರಗಳಲ್ಲಿ ಭಾಗಿಯಾಗಿದ್ದರೆ ಅಂಥವರು ಚುನಾವಣೆ ಸ್ಪರ್ಧಿಸಲು ಅವಕಾಶವಿಲ್ಲ ಎಂಬುದು ಕಾಯ್ದೆಯಲ್ಲಿ ಉಲ್ಲೇಖವಿದೆ. ಆದ್ದರಿಂದ ಅಭ್ಯರ್ಥಿಗಳು ಪರಾಮರ್ಶೆ ನಡೆಸಬೇಕಿದೆ.

ಕಾಯ್ದೆ ಪಾಲನೆಯಾಗಲಿ ನಗರಸಭೆಯಲ್ಲಿ ಕಂಟ್ರಾಕ್ಟರ್ ಕೆಲಸ ಮಾಡುವಂತವರು, ಉಪಕರಣಗಳ ಸೇರಿ ಮತ್ತಿತರ ವಸ್ತುಗಳ ಪೂರೈಕೆ ಮಾಡುವಂತವರು, ಕ್ರಿಮಿನಲ್ ಹಿನ್ನೆಲೆವುಳ್ಳವರು ಸಹ ನಗರಸಭೆ ಸದಸ್ಯರಾಗಿದ್ದಾರೆ. ಅಂದು ಸಹ ಕರ್ನಾಟಕ ಮುನ್ಸಿಪಲ್ ಕಾಯ್ದೆ ಜಾರಿಯಲ್ಲಿದ್ದರೂ ಇಂತಹ ಹಿನ್ನೆಲೆ ಇರುವಂಥವರು ಹೇಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿತು ಎಂಬುದು ಯಕ್ಷಪ್ರಶ್ನೆಯಾಗಿದೆ. ನಾಮಪತ್ರ ಪರಿಶೀಲನೆ ಸಂದರ್ಭದಲ್ಲಿ ಚುನಾವಣೆ ಅಧಿಕಾರಿಗಳು ಇಂತಹ ಸೂಕ್ಷ್ಮಾತಿ ಸೂಕ್ಷ್ಮ ಸಂಗತಿಗಳ ಬಗ್ಗೆ ಗಮನ ಹರಿಸದಿರುವುದು ಸೋಜಿಗ ಮೂಡಿಸಿದೆ. ಈ ಚುನಾವಣೆಯಲ್ಲಾದರೂ ಕರ್ನಾಟಕ ಮುನ್ಸಿಪಲ್ ಕಾಯ್ದೆ ಯಡಿ ನಾಮಪತ್ರಗಳ ಕ್ರಮಬದ್ಧತೆ ಕುರಿತು ಪರಿಶೀಲನೆ ನಡೆಯಬೇಕು ಅನ್ನೋ ಒತ್ತಾಯ ಗದಗ-ಬೆಟಗೇರಿ ಅವಳಿ ನಗರದಲ್ಲಿ ಕೇಳಿಬಂದಿದೆ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

ಇದನ್ನೂ ಓದಿ: Omicron ಒಮಿಕ್ರಾನ್ ಏಪ್ರಿಲ್ ಅಂತ್ಯದ ವೇಳೆಗೆ ಯುಕೆಯಲ್ಲಿ 75,000 ಸಾವುಗಳಿಗೆ ಕಾರಣವಾಗಬಹುದು: ಅಧ್ಯಯನ ವರದಿ

Follow us on

Related Stories

Most Read Stories

Click on your DTH Provider to Add TV9 Kannada