ಗದಗದಲ್ಲಿ ನಕಲಿ ಲಾಟರಿ ಜಾಲ ಸಕ್ರಿಯ: ಕೇರಳ ಸರ್ಕಾರದ ಚಿಹ್ನೆ ದುರ್ಬಳಕೆ ಮಾಡಿ ವಂಚನೆ ಆರೋಪ

ಗದಗ ಜಿಲ್ಲೆಯಲ್ಲಿ ನಕಲಿ ಲಾಟರಿ ಜಾಲ ಸಕ್ರಿಯವಾಗಿದೆ. ವಂಚಕರು ಕೇರಳ ಸರ್ಕಾರದ ಹೆಸರು ಮತ್ತು ಚಿಹ್ನೆಯನ್ನು ದುರ್ಬಳಕೆ ಮಾಡಿ, 15 ಲಕ್ಷ ಬಹುಮಾನ ಗೆದ್ದಿದ್ದೀರಿ ಎಂದು ನಕಲಿ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಪ್ರೊಸೆಸಿಂಗ್ ಶುಲ್ಕದ ಹೆಸರಿನಲ್ಲಿ 8,000 ರೂ. ವಸೂಲಿ ಮಾಡಿ, ಅಮಾಯಕರನ್ನು ಮೋಸಗೊಳಿಸುತ್ತಿದ್ದಾರೆ. ಹಲವರು ಹಣ ಕಳೆದುಕೊಂಡಿದ್ದು, ಪೊಲೀಸರು ಸೈಬರ್ ವಂಚನೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಗದಗದಲ್ಲಿ ನಕಲಿ ಲಾಟರಿ ಜಾಲ ಸಕ್ರಿಯ: ಕೇರಳ ಸರ್ಕಾರದ ಚಿಹ್ನೆ ದುರ್ಬಳಕೆ ಮಾಡಿ ವಂಚನೆ ಆರೋಪ
ಪ್ರಮಾಣಪತ್ರ
Image Credit source: Google

Updated on: Mar 12, 2026 | 11:08 AM

ಗದಗ, ಮಾರ್ಚ್​​ 12: ನಕಲಿ ಲಾಟರಿ ಯೋಜನೆಯ ಮೂಲಕ ಜನರನ್ನು ಮೋಸಗೊಳಿಸುತ್ತಿರುವ ವಂಚಕ ಜಾಲ ಗದಗ ಜಿಲ್ಲೆಯಲ್ಲಿ ಸಕ್ರಿಯವಾಗಿದೆ ಎಂಬ ಆರೋಪ ಕೇಳಿಬಂದಿದೆ. ಖದೀಮರು ಕೇರಳ ಸರ್ಕಾರದ ಹೆಸರು ಮತ್ತು ಚಿಹ್ನೆಯನ್ನು ದುರುಪಯೋಗಪಡಿಸಿಕೊಂಡು ಲಾಟರಿ ಯೋಜನೆಯ ಹೆಸರಲ್ಲಿ ರ‍್ಯಾಂಡಮ್‌ ಮೊಬೈಲ್​​ ಸಂಖ್ಯೆಗಳಿಗೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ನೀವು 15 ಲಕ್ಷ ರೂ. ಲಾಟರಿ ಬಹುಮಾನ ಗೆದ್ದಿದ್ದೀರಿ ಎಂಬ ಮಾಹಿತಿ ಮೆಸೇಜ್​​ನಲ್ಲಿ ಇರಲಿದ್ದು,
ಜೊತೆಗೆ ಕೇರಳ ಸರ್ಕಾರದ ಚಿಹ್ನೆ ಹೊಂದಿರುವ PDF ಪ್ರಮಾಣಪತ್ರವನ್ನೂ ಕಳುಹಿಸಲಾಗುತ್ತಿದೆ. ಇದರಿಂದ ಲಾಟರಿ ನಿಜವಾದದ್ದು ಎಂಬ ಭಾವನೆ ಮೂಡಿಸಿ ವಂಚನೆ ಎಸಗಲಾಗುತ್ತಿದೆ ಎನ್ನಲಾಗಿದೆ.

ಹಣದ ಆಸೆಗೆ ಬಿದ್ದವರ ಬಳಿ ಬಹುಮಾನ ಪಡೆಯಲು 8,000 ಪ್ರೊಸೆಸಿಂಗ್ ಶುಲ್ಕ ಪಾವತಿಸಲು ಹೇಳಲಾಗುತ್ತದೆ. ಪ್ರಮಾಣಪತ್ರವನ್ನು ನಿಜವೆಂದು ನಂಬಿದ ಕೆಲವರು ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ. ಗದಗ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಈ ರೀತಿಯ ವಂಚನೆ ಪ್ರಕರಣಗಳು ನಡೆಯುತ್ತಿದ್ದು, ಮೂಲಗಳ ಪ್ರಕಾರ ಒಮ್ಮೆ ಕರ್ನಾಟಕದಲ್ಲಿಯೂ ಪ್ರಸಿದ್ಧವಾಗಿದ್ದ ಕೇರಳ ಲಾಟರಿಗಳ ಜನಪ್ರಿಯತೆಯನ್ನು ದುರುಪಯೋಗಪಡಿಸಿಕೊಂಡು ವಂಚಕರು ಜನರನ್ನು ಸೆಳೆಯುತ್ತಿದ್ದಾರೆ. ಅನೇಕರು ಈ ಮೋಸದ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದ್ದರೂ ಭಯ ಅಥವಾ ನಾಚಿಕೆ ಕಾರಣದಿಂದ ಅನೇಕರು ಪೊಲೀಸರಿಗೆ ದೂರು ನೀಡಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಲಕ್ಕುಂಡಿ ನಿಧಿ ಪ್ರಕರಣಕ್ಕೆ ಟ್ವಿಸ್ಟ್​​; ರಿತ್ತಿ ಕುಟುಂಬದಿಂದ ಹೊಸ ಡಿಮ್ಯಾಂಡ್​​

ರೋಣ ಪಟ್ಟಣದ ನಿವಾಸಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವಿವರ ಹಂಚಿಕೊಂಡ ನಂತರ ಪ್ರಕರಣ ಬೆಳಕಿಗೆ ಬಂದಿದ್ದು, ಆ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಹಲವರು ತಮಗು ಕೂಡ ಇದೇ ರೀತಿಯ ಸಂದೇಶಗಳು ಬಂದಿವೆ ಎಂದು ತಿಳಿಸಿದ್ದಾರೆ. ಆದರೆ ಆ ಪೋಸ್ಟ್ ಬಳಿಕ ಡಿಲೀಟ್​​ ಆಗಿದೆ. ಹೆಸರು ಹೇಳಲು ಇಚ್ಛಿಸದೆ ಮಾತನಾಡಿರುವ ರೋಣದ ನಿವಾಸಿಯೊಬ್ಬರು, ಕೇರಳ ಸರ್ಕಾರದ ಲೋಗೋ ಇರುವ ಪ್ರಮಾಣಪತ್ರವೇ ಹಲವರನ್ನು ನಂಬುವಂತೆ ಮಾಡಿತು ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಸೈಬರ್ ವಂಚನೆಗಳ ಬಗ್ಗೆ ಪೊಲೀಸರು ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದ್ದಾರೆ. ಸಂಶಯಾಸ್ಪದ ಲಾಟರಿ ಸಂದೇಶಗಳಿಗೆ ಪ್ರತಿಕ್ರಿಯಿಸಬಾರದು ಮತ್ತು ಎಚ್ಚರಿಕೆಯಿಂದಿರಬೇಕು ಎಂದು ಮನವಿ ಮಾಡಿದ್ದಾರೆ ಎಂದು ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us