ಗದಗ: ಮೂಲ ಭುವನೇಶ್ವರಿ ಭಾವಚಿತ್ರವನ್ನು ಕೈಬಿಟ್ಟ ಸಮಿತಿ: ಸಾಹಿತಿ, ಕನ್ನಡಾಭಿಮಾನಿಗಳಿಂದ ಆಕ್ರೋಶ

ಮೂಲ ತೈಲವರ್ಣದ ಭುವನೇಶ್ವರಿ ಭಾವಚಿತ್ರದಲ್ಲಿ ಅಖಂಡ ಕರ್ನಾಟಕದ ಕಲಾ ಸಂಸ್ಕೃತಿಗಳನ್ನು ಬಿಂಬಿಸಲಾಗಿದೆ. ಇದನ್ನು ಕೈಬಿಟ್ಟಿದ್ದು ಗದಗ ಜಿಲ್ಲೆಯ ಸಾಹಿತಿಗಳು ಹಾಗೂ ಕನ್ನಡಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಗದಗ: ಮೂಲ ಭುವನೇಶ್ವರಿ ಭಾವಚಿತ್ರವನ್ನು ಕೈಬಿಟ್ಟ ಸಮಿತಿ: ಸಾಹಿತಿ, ಕನ್ನಡಾಭಿಮಾನಿಗಳಿಂದ ಆಕ್ರೋಶ
ಗದಗ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 27, 2022 | 12:55 PM

ಗದಗ: ರಾಜ್ಯ ಸರ್ಕಾರ ಕೆಲವು ದಿನಗಳ ಹಿಂದೆ ತಾಯಿ ಭುವನೇಶ್ವರಿ ಭಾವಚಿತ್ರವನ್ನು ಅಂಗೀಕಾರ ಮಾಡುವ ಉದ್ದೇಶದಿಂದ ಡಿ.ಮಹೇಂದ್ರ(D. Mahendra) ನೇತೃತ್ವದ ಸಮಿತಿಯೊಂದನ್ನು ರಚಿಸಿದ್ದಾರೆ. ಈ ಸಮಿತಿಯು ಈ ಹಿಂದೆ ಇದ್ದ ಅಖಂಡ ಕರ್ನಾಟಕದ ಕಲಾ ಸಂಸ್ಕೃತಿಗಳನ್ನು ಸಾರುವ ತೈಲವರ್ಣದ ಭುವನೇಶ್ವರಿ ತಾಯಿಯ ಭಾವಚಿತ್ರವನ್ನು ಕೈಬಿಟ್ಟಿದ್ದು ಗದಗ ಜಿಲ್ಲೆಯ ಸಾಹಿತಿಗಳು ಹಾಗೂ ಕನ್ನಡಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕ ಏಕೀರಣಕ್ಕೆ ಗದಗ ಜಿಲ್ಲೆ ಮಹತ್ವದ ಪಾತ್ರ ವಹಿಸಿದ್ದು, ಕರ್ನಾಟಕ ಏಕೀಕರಣದ ಹೋರಾಟದ ಸಂದರ್ಭದಲ್ಲಿ ಮುಂಚೂಣಿಯಲ್ಲಿದ್ದ ಜಿಲ್ಲೆಯ ಅಂದಾನಪ್ಪ ದೊಡ್ಡಮೇಟಿ ಅವರ ಪರಿಕಲ್ಪನೆಯಂತೆ ಕಲಾವಿದ ಸಿ.ಎನ್ ಪಾಟೀಲ್ ಅವರ ಕೈಚಳಕದಲ್ಲಿ ತೈಲವರ್ಣದ ಭುವನೇಶ್ವರಿ ಭಾವಚಿತ್ರವು ಮೂಡಿ ಬಂದಿದೆ. ಈಗ ಇದನ್ನು ತಿರಸ್ಕರಿಸಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದ ಅಂದಾನಪ್ಪ ದೊಡ್ಡಮೇಟಿ ಅವರ ಮನೆಯಲ್ಲಿ ಇಂದಿಗೂ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ನಿತ್ಯವೂ ಪೂಜೆ ಸಲ್ಲಿಸಲಾಗುತ್ತಿದೆ. ಆದರೆ ಮೂಲ ಭುವನೇಶ್ವರಿ ಭಾವಚಿತ್ರವನ್ನು ರಾಜ್ಯ ಸರ್ಕಾರ ಮರೆತಿದೆ. ಭಾವಚಿತ್ರ ಅಂತಿಮಗೊಳಿಸಲು ರಚಿಸಿರುವ ಸಮಿತಿ ಅಂದಾನಪ್ಪ ದೊಡ್ಡಮೇಟಿ ಅವರ ಮನೆಯಲ್ಲಿನ ಮೂಲ ತೈಲಚಿತ್ರವನ್ನೇ ಪರಿಗಣಿಸಿಲ್ಲ. ಇದು ಅಂದಾನಪ್ಪ ದೊಡ್ಡಮೇಟಿ ಕುಟುಂಬ ಹಾಗೂ ಜಿಲ್ಲೆಯ ಸಾಹಿತಿಗಳ, ಕನ್ನಡಾಭಿಮಾನಿಗಳ, ಕನ್ನಡಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಗದಗ ನಗರದಲ್ಲಿ(ನ.26) ಜಮಾಯಿಸಿದ ಸಾಹಿತಿಗಳು, ಕನ್ನಡಪ್ರೇಮಿಗಳು ತೈಲವರ್ಣದ ಭುವನೇಶ್ವರ ಭಾವಚಿತ್ರ ಪ್ರದರ್ಶನ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರ ಈ ವಿಷಯ ಗಂಭೀರವಾಗಿ ಪರಿಗಣಿಸಬೇಕು. ಕರ್ನಾಟಕ ಏಕೀಕರಣ ಪೂರ್ವದಲ್ಲಿಯೇ ರಚಿಸಿದ ಈ ಭಾವಚಿತ್ರ, ಲಕ್ಷಾಂತರ ಜನರು ಏಕೀಕರಣದ ಹೋರಾಟದಲ್ಲಿ ಭಾಗಿಯಾಗಲು ಪ್ರೇರಣೆ ನೀಡಿದೆ. ಹೀಗಾಗಿ ಸರ್ಕಾರ ತೈಲವರ್ಣದ ಭುವನೇಶ್ವರಿ ಭಾವಚಿತ್ರವನ್ನೇ ಅಂತಿಮಗೊಳಿಸಬೇಕು ಎಂದು ಸಾಹಿತಿಗಳು ಒತ್ತಾಯಿಸಿದ್ದಾರೆ.

ಇಡೀ ಕರ್ನಾಟಕದ ಕಲಾ ಸಂಸ್ಕೃತಿಗಳನ್ನು ಈ ಭಾವಚಿತ್ರದಲ್ಲಿ ಬಿಂಬಿಸಲಾಗಿದೆ. ಇದು ಚಿತ್ರಪಟವಲ್ಲ ಕರ್ನಾಟಕದ ಏಕೀಕರಣದ ಹೋರಾಟದ ಅಸ್ಮಿತೆ, ಭಾವನಾತ್ಮಕ ಸಂಬಂಧವನ್ನು ಹೊಂದಿದೆ. ಏಕೀಕರಣದ ಹೋರಾಟಗಾರ ಅಂದಾನಪ್ಪ ದೊಡ್ಡಮೇಟಿ ಅವರು ಹಂಪಿ ಭುವನೇಶ್ವರಿ ದೇವಿಯ ಹಿನ್ನಲೆಯಂತಹ ಭುವನೇಶ್ವರಿ ಚಿತ್ರ ಆಗಬೇಕು ಎಂಬ ಪರಿಕಲ್ಪನೆಯಲ್ಲಿ ಈ ಚಿತ್ರ ರಚನೆ ಆಗಿದೆ. ಸರ್ಕಾರ ಈ ಸಮಿತಿ ವರದಿಯನ್ನು ತೀರಸ್ಕಾರ ಮಾಡಿ ಇದೇ ಭಾವಚಿತ್ರವನ್ನು ಗೌರವಿಸಬೇಕು.

ಇದನ್ನೂಓದಿ:Gadag: ಬಡವರ ಪಾಲಿನ ಸಂಜೀವಿನಿ ಎನಿಸಿಕೊಳ್ಳಬೇಕಿದ್ದ ಗದಗ ಆಸ್ಪತ್ರೆಯ ದುಃಸ್ಥಿತಿ ಇದು! ಆರೋಗ್ಯ ಸಚಿವರು ಬಿಸಿ ಮುಟ್ಟಿಸ್ತಾರಾ ಜಿಮ್ಸ್ ಮಂಡಳಿಗೆ

ಸಮಿತಿಯು ಮೂಲ ಭುವನೇಶ್ವರಿ ಭಾವಚಿತ್ರವನ್ನು ಕೈಬಿಟ್ಟಿದ್ದು, ಈ ಭಾಗದ ಸಾಹಿತಿಗಳು, ಕನ್ನಡಾಭಿಮಾನಿಗಳನ್ನು ಆಕ್ರೋಶವಾಗುವಂತೆ ಮಾಡಿದೆ. ಸರ್ಕಾರ ಯಾವುದೇ ಕಾರಣಕ್ಕೂ ಸಮಿತಿ ನಿರ್ಧಾರ ಅಂತಿಮ ಮಾಡಬಾರದು. ಒಂದು ವೇಳೆ ಮೂಲ ಭುವನೇಶ್ವರಿ ಭಾವಚಿತ್ರವನ್ನು ನಿರ್ಲಕ್ಷ್ಯ ಮಾಡಿದರೆ ಸಾಹಿತಿಗಳು, ಕನ್ನಡಾಭಿಮಾನಿಗಳು ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಸರ್ಕಾರಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ