Gadag: ಬಡವರ ಪಾಲಿನ ಸಂಜೀವಿನಿ ಎನಿಸಿಕೊಳ್ಳಬೇಕಿದ್ದ ಗದಗ ಆಸ್ಪತ್ರೆಯ ದುಃಸ್ಥಿತಿ ಇದು! ಆರೋಗ್ಯ ಸಚಿವರು ಬಿಸಿ ಮುಟ್ಟಿಸ್ತಾರಾ ಜಿಮ್ಸ್ ಮಂಡಳಿಗೆ

GIMS hospital: ಬಾಣಂತಿಯರು ಬಿಸಿ ನೀರಿಗಾಗಿ ಅಲೆದಾಡುವ ದೃಶ್ಯ ಕಂಡು ಬಂದಿದ್ದು ಗದಗ ನಗರದ ಜಿಮ್ಸ್ ಆಸ್ಪತ್ರೆ ಆವರಣದಲ್ಲಿ. ಸರ್ಕಾರ ಬಡ ಜನ್ರಿಗೆ ಒಳ್ಳೆಯ ಚಿಕಿತ್ಸೆ ಸಿಗಲಿ ಅಂತ ಕೋಟ್ಯಾಂತರ ರೂ ಅನುದಾನ ನೀಡಿದೆ. ಆದ್ರೆ, ಜಿಮ್ಸ್ ಆಡಳಿತ ಮಾತ್ರ ರೋಗಿಗಳಿಗೆ ಕನಿಷ್ಠ ಮೂಲಸೌಕರ್ಯ ಕೂಡಾ ಕೊಡ್ತಾಯಿಲ್ಲ.

Gadag: ಬಡವರ ಪಾಲಿನ ಸಂಜೀವಿನಿ ಎನಿಸಿಕೊಳ್ಳಬೇಕಿದ್ದ ಗದಗ ಆಸ್ಪತ್ರೆಯ ದುಃಸ್ಥಿತಿ ಇದು! ಆರೋಗ್ಯ ಸಚಿವರು ಬಿಸಿ ಮುಟ್ಟಿಸ್ತಾರಾ ಜಿಮ್ಸ್ ಮಂಡಳಿಗೆ
ಬಡವರ ಪಾಲಿನ ಸಂಜೀವಿನಿ ಎನಿಸಿಕೊಳ್ಳಬೇಕಿದ್ದ ಗದಗ ಆಸ್ಪತ್ರೆಯ ದುಃಸ್ಥಿತಿ ಇದು! ಆರೋಗ್ಯ ಸಚಿವರು ಬಿಸಿ ಮುಟ್ಟಿಸ್ತಾರಾ ಜಿಮ್ಸ್ ಮಂಡಳಿಗೆ
TV9kannada Web Team

| Edited By: sadhu srinath

Nov 25, 2022 | 2:46 PM

ಅದು ಬಡವರ ಪಾಲಿನ ಸಂಜೀವಿನಿ ಎಂದು ಕರೆಸಿಕೊಳ್ಳುವ ಜಿಮ್ಸ್ ಆಸ್ಪತ್ರೆ (GIMS hospital). ಬಡವರು ಹಾಗೂ ಮಧ್ಯಮ ವರ್ಗದ ಜನ್ರೆ ಹೆಚ್ಚಾಗಿ ಚಿಕಿತ್ಸೆಗೆ ಬರ್ತಾರೆ. ಆದ್ರೆ ಇಲ್ಲಿನ ಅವ್ಯವಸ್ಥೆಗೆ ಬಾಣಂತಿಯರು ಅಕ್ಷರಶಃ ಕುಗ್ಗಿಹೋಗಿದ್ದಾರೆ. ಬಾಣಂತಿಯರಿಗೆ ಬಿಸಿ ನೀರು ಸಿಗ್ತಾಯಿಲ್ಲಾ. ಹೀಗಾಗಿ ಬಾಣಂತಿಯರ ಸಂಬಂಧಿಕರು ನಿತ್ಯ ಬಾಟಲ್ ಹಾಗೂ ಬಕೆಟ್ ಹಿಡಿದುಕೊಂಡು, ಬಿಸಿ ನೀರಿಗಾಗಿ ನಿತ್ಯ ಅಲೆದಾಡುವ ದುಃಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಚಳಿಗಾಲದಲ್ಲಿ ಬಿಸಿ ನೀರು ಸಿಗದೆ ಬಾಣಂತಿಯರು ಪರದಾಟ ನಡೆಸಿದ್ದಾರೆ. ಇದೆಂಥಾ ವ್ಯವಸ್ಥೆ ಅಂತ ಜನ್ರು ಕಿಡಿಕಾರಿದ್ದಾರೆ.

ಜಿಮ್ಸ್ ಆಸ್ಪತ್ರೆ ಆವರಣದಲ್ಲಿ ಎಲ್ಲಿ ನೋಡಿದ್ರೂ ಬಾಟಲ್, ಬಕೆಟ್ ಗಳದ್ದೇ ಕಾರಬಾರು. ಯಾರ ಕೈಯಲ್ಲಿ ನೋಡಿದ್ರೂ ಬಕೆಟ್, ಬಾಟಲ್. ಬಿಸಿ ನೀರಿಗಾಗಿ ಹೀಗೆ ಅಲೆದಾಡುವ ದೃಶ್ಯಗಳು ಕಂಡು ಬಂದಿದ್ದು ಗದಗ (Gadag) ನಗರದ ಜಿಮ್ಸ್ ಆಸ್ಪತ್ರೆ ಆವರಣದಲ್ಲಿ. ಸರ್ಕಾರ ಬಡ ಜನ್ರಿಗೆ ಒಳ್ಳೆಯ ಚಿಕಿತ್ಸೆ ಸಿಗಲಿ ಅಂತ ಕೋಟ್ಯಾಂತರ ರೂಪಾಯಿ ಅನುದಾನ ನೀಡಿದೆ. ಆದ್ರೆ, ಜಿಮ್ಸ್ ಆಡಳಿತ ಮಾತ್ರ ರೋಗಿಗಳಿಗೆ ಕನಿಷ್ಠ ಮೂಲ ಸೌಕರ್ಯ ಕೂಡಾ ಕೊಡ್ತಾಯಿಲ್ಲ. ಹೌದು ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಬಿಸಿ ನೀರಿಗಾಗಿ ಬಾಣಂತಿಯರು ನಿತ್ಯ ಪರದಾಟ ನಡೆಸುತ್ತಿದ್ದಾರೆ.

ಬೆಳ್ಳಂಬೆಳ್ಳಗ್ಗೆ ನೀರಿನ ಬಾಟಲ್ ಹಾಗೂ ಬಕೆಟ್ ಹಿಡಿದುಕೊಂಡು ಬಾಣಂತಿಯ ಸಂಬಂಧಿಕರು ಹೋಟೆಲ್ ಹೋಟೆಲ್ ಗಳಿಗೆ ಅಲೆದಾಡುತ್ತಾರೆ. ಒಂದು ಬಾಟಲ್ ನೀರಿಗೆ 20 ರೂಪಾಯಿ ಹಣ ನೀಡಬೇಕು. ಒಂದು ಬಕೆಟಿಗೆ 50-60 ರೂಪಾಯಿ ಹಣ ನೀಡಬೇಕು. ಆ ಬಾಟಲ್ ನೀರು ಹಾಗೂ ಬಕೆಟ್ ನೀರನ್ನು ತೆಗೆದುಕೊಂಡು ಬಾಣಂತಿಯರು ಹಾಗೂ ನವಜಾತ ಶಿಶುಗಳ ಆರೈಕೆ ಹೇಗೆ ಮಾಡಬೇಕು ಎಂದು ಆಕ್ರೋಶ ಹೊರ ಹಾಕ್ತಾಯಿದ್ದಾರೆ.

ಬಡವರು ಸರ್ಕಾರಿ ಆಸ್ಪತ್ರೆಗೆ ಅಂತಾ ಬಂದ್ರೆ, ಇಲ್ಲಿ ನೀರಿಗಾಗಿ ಸಾಕಷ್ಟು ಹಣ ಖರ್ಚು ಮಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದು ತಿಂಗಳಿಂದ ಬಾಣಂತಿಯ ಸಂಬಂಧಿಕರು, ಹಣ ಕೊಟ್ಟು ನೀರು ತೆಗೆದುಕೊಂಡು ಬಂದು ಆರೈಕೆ ಮಾಡ್ತಾಯಿದ್ದಾರೆ. ಇಷ್ಟೊಂದು ನೀರಿನ ಸಮಸ್ಯೆ ಇದ್ರು ಕೂಡಾ ಜಿಮ್ಸ್ ಆಸ್ಪತ್ರೆಯ ನಿರ್ದೇಶಕರು ಈ ಕಡೇ ತಿರುಗಿ ಕೂಡಾ ನೋಡಿಲ್ಲ. ಇನಾದರೂ ಬಿಸಿ ನೀರಿನ ವ್ಯವಸ್ಥೆ ಮಾಡುವಂತೆ ಬಾಣಂತಿಯರ ಸಂಬಂಧಿಗಳಾದ ಜನ್ನತ್ ಬೀ, ಮಾಲತೇಶ ಒತ್ತಾಯ ಮಾಡ್ತಾಯಿದ್ದಾರೆ.

ಜಿಮ್ಸ್ ಆಸ್ಪತ್ರೆಗೆ ಗದಗ ಜಿಲ್ಲೆ ಸೇರಿದಂತೆ, ಪಕ್ಕದ ಹಾವೇರಿ, ಕೊಪ್ಪಳ, ಹಾಗೂ ಬಳ್ಳಾರಿ ಜಿಲ್ಲೆಯಿಂದ ನೂರಾರು ಸಂಖ್ಯೆಯಲ್ಲಿ ಹೆರಿಗೆಗೆ ಎಂದು ಆಸ್ಪತ್ರೆ ಬರ್ತಾರೆ. ವೈದ್ಯರು ಚನ್ನಾಗಿದ್ದಾರೆ. ಆದ್ರೆ, ಮೂಲಸೌಕರ್ಯದ ಕೊರತೆ ಸಾಕಷ್ಟು ಇದೆ. ಬಿಸಿ ನೀರಿನ ಜೊತೆಗೆ ಕುಡಿಯುವ ನೀರು ಹಾಗೂ ಆಸ್ಪತ್ರೆಯಲ್ಲಿ ಬಳಕೆ ಮಾಡುವ ನೀರಿಗೂ ಸಾಕಷ್ಟು ಸಮಸ್ಯೆ ಉಂಟಾಗಿದೆ.

ಮೂರು ಬಿಸಿ ನೀರಿನ ಗೀಜರ್ ಗಳಿದ್ದು ಎರಡು ಕೆಟ್ಟಿವೆ, ಒಂದು ಸರಿಯಿದೆಯಂತೆ:

ಅದರಲ್ಲೂ ಬಾಣಂತಿಯರು ಹಾಗೂ ನವಜಾತ ಶಿಶುಗಳಿಗೆ ಬಿಸಿ ನೀರು ಬಹಳ ಅಗತ್ಯ. ಈ ಆಸ್ಪತ್ರೆಯಲ್ಲಿ ಬಿಸಿ ನೀರೆ ಸಿಗ್ತಾಯಿಲ್ಲಾ ಎನ್ನುವುದು ವಿಪರ್ಯಾಸವೇ ಸರಿ. ಇನ್ನು ಈ ಬಗ್ಗೆ ಜಿಮ್ಸ್ ನಿರ್ದೇಶಕರಾದ ಬೊಮ್ಮನಹಳ್ಳಿ ಅವರನ್ನು ಕೇಳಿದ್ರೆ ಮೂರು ಬಿಸಿ ನೀರಿನ ಗೀಜರ್ ಗಳಿದ್ದು, ಎರಡು ಕೆಟ್ಟಿವೆ, ಒಂದು ಸರಿಯಿದೆ ಅಂತಾರೆ. ಆದ್ರೆ, ಆಸ್ಪತ್ರೆಯಲ್ಲೆಲ್ಲ ಹುಡುಕಿದರೂ ಒಂದೇ ಒಂದು ಗೀಜರ್ ಕಂಡಿಲ್ಲ.

ನಿರ್ದೇಶಕರು ಆಸ್ಪತ್ರೆ ಕಡೆ ಸುಳಿದಿದ್ದಾರೋ ಇಲ್ವೋ ಅನ್ನೋ ಅನುಮಾನ ಮೂಡ್ತಾಯಿದೆ. ಕಳೆದ ಒಂದು ತಿಂಗಳಿಂದ ಕೆಟ್ಟಿದ್ದರೂ ದುರಸ್ತಿ ಮಾತ್ರ ಮಾಡಿಲ್ಲ. ಇನ್ನು ನಾಲ್ಕೈದು ದಿನದಲ್ಲಿ ಬಿಸಿ ನೀರಿನ ಸಮಸ್ಯೆಯಾಗದೆಯಂತೆ ಕ್ರಮ ವಹಿಸುತ್ತೇವೆ ಅಂತ ನಿರ್ದೇಶಕ ಡಾ. ಬಸವರಾಜ್ ಬೊಮ್ಮನಹಳ್ಳಿ ಎಂದಿನಂತೆ ಭರವಸೆಯ ಮಾತನ್ನಾಡಿದ್ದಾರೆ.

ಸರ್ಕಾರ ಕೋಟ್ಯಾಂತರ ರೂಪಾಯಿ ಅನುದಾನ ನೀಡುತ್ತದೆ. ಆದ್ರೆ ಈ ಜಿಮ್ಸ್ ಆಸ್ಪತ್ರೆಯಲ್ಲಿ ಮೂಲ ಸೌಕರ್ಯ ಕೂಡಾ ಸಿಗ್ತಾಯಿಲ್ಲಾ. ಇಲ್ಲಿನ ಆಡಳಿತ ಮಂಡಳಿಯ ಬೇಜವಾಬ್ದಾರಿತನದಿಂದ ಬಡ ರೋಗಿಗಳು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಆರೋಗ್ಯ ಸಚಿವರು ಜಿಮ್ಸ್ ಆಡಳಿತ ಮಂಡಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕಾಗಿದೆ. (ವರದಿ: ಸಂಜೀವ ಪಾಂಡ್ರೆ, ಟಿವಿ 9, ಗದಗ)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada