ಗದಗ: ಮಕ್ಕಳ ಜೊತೆ ಮುಖ್ಯ ಶಿಕ್ಷಕಿಯ ಅಸಭ್ಯ ವರ್ತನೆ, ಶಾಲೆ ಬೀಗ ಹಾಕಿ ಪ್ರತಿಭಟನೆಗೆ ಇಳಿದ ವಿದ್ಯಾರ್ಥಿನಿಯರು
ಗಜೇಂದ್ರಗಢ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವಿರುದ್ಧ ನೂರಾರು ವಿದ್ಯಾರ್ಥಿನಿಯರು, ಪಾಲಕರು ಸಿಡಿದೆದ್ದಿದ್ದಾರೆ. ಮಕ್ಕಳ ಜೊತೆ ಅಸಭ್ಯ ವರ್ತನೆ ತೋರಿದ ಮುಖ್ಯ ಶಿಕ್ಷಕಿ ವರ್ತನೆ ಖಂಡಿಸಿ ಶಾಲೆ ಬೀಗ ಹಾಕಿ ವಿದ್ಯಾರ್ಥಿನಿಯರು ದಿಢೀರ ಪ್ರತಿಭಟನೆಗೆ ಇಳಿದಿದ್ದಾರೆ
ಗದಗ: ಶಿಕ್ಷಕರು ಅಂದರೆ ಮಕ್ಕಳ ಭವಿಷ್ಯ ರೂಪಿಸುವ ಶಿಲ್ಪಿಗಳು ಅಂತಾರೆ. ಗುರುದೇವೋ ಭವ ಅಂತಾರೆ. ಆದರೆ, ಇಲ್ಲೊಬ್ಬ ಶಿಕ್ಷಿಕಿ ಮಕ್ಕಳ ಪಾಲಿಗೆ ವಿಲನ್ ಆಗಿಬಿಟ್ಟಿದ್ದಾಳೆ. ಹೌದು, ಮುಖ್ಯ ಶಿಕ್ಷಕಿ ವಿರುದ್ಧ ನೂರಾರು ವಿದ್ಯಾರ್ಥಿನಿಯರು, ಪಾಲಕರು ಸಿಡಿದೆದ್ದಿದ್ದಾರೆ. ಮಕ್ಕಳ ಜೊತೆ ಅಸಭ್ಯ ವರ್ತನೆ ತೋರಿದ ಮುಖ್ಯ ಶಿಕ್ಷಕಿ ವರ್ತನೆ ಖಂಡಿಸಿ ಶಾಲೆ ಬೀಗ ಹಾಕಿ ವಿದ್ಯಾರ್ಥಿನಿಯರು ದಿಢೀರ ಪ್ರತಿಭಟನೆಗೆ (Students Protest) ಇಳಿದಿದ್ದಾರೆ. ಈ ಘಟನೆ ಗದಗ ಜಿಲ್ಲೆಯ ಗಜೇಂದ್ರಗಢ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಮುಖ್ಯ ಶಿಕ್ಷಕಿ ಪೂರ್ಣಿಮಾ ರಾಠೋಡ ವಿರುದ್ಧ ವಿದ್ಯಾರ್ಥಿನಿಯರು ಫುಲ್ ಗರಂ ಆಗಿದ್ದಾರೆ. ಬೇಕೇ ಬೇಕು ನಮಗೆ ನ್ಯಾಯಬೇಕು ಅಂತ ಹೋರಾಟಕ್ಕೆ ಇಳಿದಿದ್ದಾರೆ. ಮುಖ್ಯ ಶಿಕ್ಷಕಿ ಪೂರ್ಣಿಮಾ ನಿತ್ಯ ಒಂದಿಲ್ಲೊಂದು ಕಾರಣಗಳಿಂದ ಅವಾಚ್ಯ ಶಬ್ದಗಳಿಂದ ಮಕ್ಕಳಿಗೆ ನಿಂದನೆ ಮಾಡ್ತಾಯಿದ್ದಾರಂತೆ. ಇದು ಮಕ್ಕಳ ಆಕ್ರೋಶಕ್ಕೆ ಕಾರಣವಾಗಿ ಇಷ್ಟು ದಿನ ಸಹಿಸಿಕೊಂಡು ಸುಮ್ನೆ ಇದ್ದ ಮಕ್ಕಳ ಕೋಪ ಇವತ್ತು ಪ್ರತಿಭಟನೆಗೆ ಇಳಿಯುವಂತೆ ಮಾಡಿದೆ.
ಮುಖ್ಯ ಶಿಕ್ಷಕಿ ಪೂರ್ಣಿಮಾ ಎಸ್. ರಾಠೋಡ ವಿರುದ್ಧ ವಿದ್ಯಾರ್ಥಿನಿಯರ ಆರೋಪ ಮಾಡಿದ್ದಾರೆ. ವಿದ್ಯಾರ್ಥಿಗಳು ಶಿಕ್ಷಕಿ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ. ವಿದ್ಯಾರ್ಥಿನಿಯರ ಪ್ರತಿಭಟನೆ ಸುದ್ದಿ ತಿಳಿಯುತ್ತಿದ್ದಂತೆ ಶಾಲೆಗೆ ದೌಡಾಯಿಸಿದ ತಹಶಿಲ್ದಾರ ರಜನಿಕಾಂತ್ ಕೆಂಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಸಜ್ಜನರ ಪರಿಸ್ಥಿತಿ ಅವಲೋಕಿಸಿದ್ದಾರೆ. ತಕ್ಷಣ ಮುಖ್ಯಶಿಕ್ಷಕಿ ಹಾಗೂ ಶಿಕ್ಷಕರ ಸಭೆ ಮಾಡಿ ಪೂರ್ಣ ಮಾಹಿತಿ ಪಡೆದಿದ್ದಾರೆ. ಈ ವೇಳೆ ಮುಖ್ಯಶಿಕ್ಷಕಿ ಪೂರ್ಣಿಮಾ ಅಧಿಕಾರಿಗಳ ಎದುರು ತಪ್ಪು ಒಪ್ಪಿಕೊಂಡಿದ್ದಾರೆ. ಕೆಲಸದ ಒತ್ತಡದಿಂದ ಪಾಲಕರು, ಮಕ್ಕಳಿಗೆ ಬೈದಿರಬೇಕು. ತಪ್ಪಾಗಿದೆ ಕ್ಷಮೀಸುವಂತೆ ಕಣ್ಣೀರು ಹಾಕಿ ಕೈಮುಗಿದಿದ್ದಾರೆ.
ಇದನ್ನೂ ಓದಿ: ಕೊಡಗು: ಇಬ್ಬರನ್ನು ಬಲಿ ಪಡೆದ ನರಭಕ್ಷಕ ಹುಲಿಯನ್ನು ಕೊಲ್ಲುವಂತೆ ಆಗ್ರಹಿಸಿ ಕೆ.ಬಾಡಗ ಗ್ರಾಮಸ್ಥರ ಪ್ರತಿಭಟನೆ
ಆದರೆ ವಿದ್ಯಾರ್ಥಿನಿಯರು ಮಾತ್ರ ಮುಖ್ಯ ಶಿಕ್ಷಕಿಯರು ವರ್ಗಾವಣೆ ಆಗಲೇ ಬೇಕು ಅಂತ ಪಟ್ಟು ಹಿಡಿದಿದ್ದಾರೆ. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಕಾರಿ ಗಾಯತ್ರಿ ಸಜ್ಜನರ ಮಕ್ಕಳನ್ನು ಮನವೊಲಿಕೆಗೆ ಮುಂದಾದರು. ಮನವೊಲಿಕೆಗೂ ಜಗ್ಗದ ವಿದ್ಯಾರ್ಥಿನಿಯರು, ಅವರನ್ನು ವರ್ಗಾವಣೆ ಮಾಡುವವರೆಗೂ ನಾವು ಶಾಲೆ, ಕಚೇರಿ ಬೀಗ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಮಕ್ಕಳ ಮನಸ್ಸು ಹೂವಿನಂತೆ. ಆದರೆ, ಮಕ್ಕಳು ಈ ರೀತಿ ಹೋರಾಟದ ಹಾದಿ ಹಿಡಿದಿದ್ದಾರೆ ಅಂದರೆ ಆ ಶಿಕ್ಷಕಿ ಮಕ್ಕಳೊಂದಿಗೆ ಹೇಗೆ ನಡೆದುಕೊಂಡಿರಬಹದು ಅನ್ನೋ ಚರ್ಚೆ ಗಜೇಂದ್ರಗಡ ಪಟ್ಟನದಲ್ಲಿ ನಡೆಯುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:40 pm, Mon, 13 February 23