ಗದಗ ಜಿಲ್ಲೆಯಲ್ಲೂ ವಸತಿ ಹಂಚಿಕೆಯಲ್ಲಿ ಭಾರೀ ಅಕ್ರಮ: ಬಿಜೆಪಿ ಶಾಸಕ ಚಂದ್ರು‌ ಲಮಾಣಿ ಗಂಭೀರ ಆರೋಪ

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನಲ್ಲಿ 150 ವಸತಿ ಯೋಜನೆಯ ಮನೆಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಆರೋಪಿಸಿದ್ದಾರೆ. ಶಾಸಕರ ಶಿಫಾರಸು ಇಲ್ಲದೆ ಹಣ ಪಡೆದು ಉನ್ನತ ಅಧಿಕಾರಿಗಳು ಈ ಅಕ್ರಮ ಎಸಗಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಹಗರಣದ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಗದಗ ಜಿಲ್ಲೆಯಲ್ಲೂ ವಸತಿ ಹಂಚಿಕೆಯಲ್ಲಿ ಭಾರೀ ಅಕ್ರಮ: ಬಿಜೆಪಿ ಶಾಸಕ ಚಂದ್ರು‌ ಲಮಾಣಿ ಗಂಭೀರ ಆರೋಪ
ಶಾಸಕ ಚಂದ್ರು ಲಮಾಣಿ ಹಾಗೂ ಮನೆ ವಿತರಣೆಗೆ ಸಂಬಂಧಿಸಿದ ದಾಖಲೆ ಪತ್ರದ ಪ್ರತಿ
Edited By:

Updated on: Jun 24, 2025 | 12:56 PM

ಗದಗ, ಜೂನ್ 24: ವಸತಿ ಯೋಜನೆಯಲ್ಲಿ ಭಾರೀ ಅಕ್ರಮ ನಡೆಯುತ್ತಿರುವ ಬಗ್ಗೆ ಆಡಳಿತ ಪಕ್ಷದ ಶಾಸಕ ಬಿಆರ್ ಪಾಟೀಲ್ ಗಂಭೀರ ಆರೋಪ ಮಾಡಿರುವುದು ಇದೀಗ ಕರ್ನಾಟಕ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಇದೇ ಹೊತ್ತಿನಲ್ಲಿ, ಗದಗ ಜಿಲ್ಲೆಯಲ್ಲೂ ವಸತಿ ಹಂಚಿಕೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆಳಂದ ಬಿಜೆಪಿ ಶಾಸಕ ಡಾ. ಚಂದ್ರು‌ ಲಮಾಣಿ ಗಂಭೀರ ಆರೋಪ ಮಾಡಿದ್ದಾರೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೊಂಚಿಗೇರಿ ಗ್ರಾಮ ಪಂಚಾಯತಿಯಲ್ಲಿ ಹಗರಣ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.

‘ಟಿವಿ9’ ಜತೆ ಮಾತನಾಡಿದ ಶಾಸಕ ಚಂದ್ರು ಲಮಾಣಿ, ಶಾಸಕರ ಶಿಫಾರಸು ಪತ್ರ ಇಲ್ಲದೇ 150 ಮನೆಗಳನ್ನು ನೇರವಾಗಿ ಮಂಜೂರು ಮಾಡಲಾಗಿದೆ. ಹಣ ಪಡೆದು ವಸತಿ ಇಲಾಖೆ ಉನ್ನತ ಅಧಿಕಾರಿಗಳು ಮಂಜೂರು ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

‘ಶಾಸಕರ ಶಿಫಾರಸ್ಸು ಪತ್ರ ಇಲ್ಲದೇ ಮನೆಗಳ ಮಂಜೂರು ಮಾಡುವಂತಿಲ್ಲ. ಆದರೆ, ನನ್ನ ಕ್ಷೇತ್ರದಲ್ಲೂ ಹಣ ಪಡೆದು ಮನೆಗಳ ಹಂಚಿಕೆಯಾಗಿದೆ. ಈ ಹಗರಣ ನಡೆದಿದ್ದು ಅಕ್ಷರಶಃ ಸತ್ಯ, ಯಾವುದೇ ಸಂಶಯ ಬೇಡ. ಶಿರಹಟ್ಟಿ ಮತಕ್ಷೇತ್ರದ ಕೊಂಚಿಗೇರಿ ಗ್ರಾಮದ ಬಸವಾ ವಸತಿ ಯೋಜನೆಯ 150 ಮನೆಗಳ ಹಂಚಿಕೆಯಲ್ಲಿ ಹಗರಣ ಆಗಿದೆ. 30-10-2024 ರಲ್ಲಿ ಸರ್ಕಾರದಿಂದ ಆದೇಶ ಆಗಿದೆ. ಹಗರಣ ನನ್ನ ಗಮನಕ್ಕೆ ಬಂದಿದೆ. ಮನೆಗಳ ಹಂಚಿಕೆ ಮುನ್ನವೇ ಹಣ ವಸೂಲಿ ಮಾಡಿ ಅಧಿಕಾರಿಗಳಿಗೆ ನೀಡಿದ್ದಾರೆ’ ಎಂದು ಲಮಾಣಿ ಆರೋಪಿಸಿದ್ದಾರೆ.

ಇದನ್ನೂ ಓದಿ
ಬೆಂಗಳೂರು, ಶಿವಮೊಗ್ಗ, ಧಾರವಾಡ ಸೇರಿ ಕರ್ನಾಟಕದ ಹಲವೆಡೆ ಲೋಕಾಯುಕ್ತ ದಾಳಿ
ಹಲ್ಲೆ ಆರೋಪ, ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಎಫ್​ಐಆರ್
ಹಲ್ಲೆ ಕೇಸ್: ಅನಂತ್ ಕುಮಾರ್ ಹೆಗಡೆ ಬಂಧಿಸುವಂತೆ ಪ್ರತಿಭಟನೆ
ನಷ್ಟದಲ್ಲಿದ್ದ ದಾವಣಗೆರೆ ರೈತರ ಕೈ ಹಿಡಿದ ಡ್ರ್ಯಾಗನ್ ಫ್ರೂಟ್

ಈ ವಿಷಯ ಗಮನಕ್ಕೆ ಬಂದ ತಕ್ಷಣ ಎಂಡಿ ಅವರನ್ನು ಭೇಟಿಯಾಗಿ ಹಗರಣ ಬಗ್ಗೆ ಪತ್ರದ ಮೂಲಕ ಗಮನಕ್ಕೆ ತಂದಿದ್ದೇನೆ. ಈ ಮನೆಗಳು ಬೇರೆ ಪಂಚಾಯತಿಗೆ ವರ್ಗ ಮಾಡಿ ಅಂತ ಪತ್ರ ನೀಡಿದ್ದೆ. ಶಾಸಕರ ಪತ್ರ ಇಲ್ಲದೇ ಮಂಜೂರು ಮಾಡಿದ್ದು‌ ನೋಡಿದರೆ ಸರ್ಕಾರದ ಮಟ್ಟದಲ್ಲಿ ಹಣ ಪಡೆದು ಮಾಡಿದ್ದು ಎಂಬುದು ಸ್ಪಷ್ಟ. ಇದು ವಸತಿ ಸಚಿವರಿಗೆ ಸಂಬಂಧಿಸಿದ ವಿಷಯ. ಸಚಿವರ ಕಚೇರಿಯಲ್ಲಿ ಇಂಥ ಕೆಲಸ ಆಗುತ್ತಿರುವುದು ದುರ್ದೈವ. ರಾಜ್ಯದ ಎಲ್ಲ ಶಾಸಕರಿಗೂ ಅಗೌರವಾಗಿ ಈ ಅಕ್ರಮ ನಡೆಯುತ್ತಿದೆ. ದುಡ್ಡು ಕೊಟ್ಟವರಿಗೆ ಮನೆಗಳ ಮಂಜೂರು ಆಗುತ್ತಿದೆ. ಮನೆಗಳ ಮಂಜೂರು ಆಗಬೇಕಾದರೆ ಶಾಸಕರ ಅನುಮತಿ ಪತ್ರ ಕಡ್ಡಾಯ. ಆದರೂ ಶಾಸಕರ ಪತ್ರ ಇಲ್ಲದೆ ಹಣ ಪಡೆದು ಮನೆಗಳ ‌ಮಂಜೂರು‌ ಮಾಡಿದ್ದಾರೆ ಎಂದು ಲಮಾಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮನೆ ಹಂಚಿಕೆಗೆ ಹಣ: ಆಡಿಯೋ ರಿಲೀಸ್ ಮಾಡಿದ್ದ ಬಿಆರ್ ಪಾಟೀಲ್ ಕ್ಷೇತ್ರದ ವಿಡಿಯೋ ವೈರಲ್

ಗ್ರಾಮ ಪಂಚಾಯತಿಯ ಹಿಂದಿನ ಅಧ್ಯಕ್ಷೆ ಪೂರ್ಣಿಮಾ‌ ಮೇಟಿ ಅವಧಿಯಲ್ಲಿ ಹಗರಣ ಆಗಿದೆ. ಉನ್ನತ ಮಟ್ಟದ ಅಧಿಕಾರಿಗಳೇ ಈ ಹಗರಣ ಮಾಡುತ್ತಿದ್ದಾರೆ ಎಂಬುದು ಗಮನಕ್ಕೆ ಬಂದಿದೆ. ಇಲಾಖೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸಚಿವ ಜಮೀರ್ ಅಹ್ಮದ್ ಖಾನ್ ಗಮನಿಸಬೇಕು. ವಸತಿ ಇಲಾಖೆ ಹಗರಣ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು ಎಂದು ಶಾಸಕ ಚಂದ್ರು ಲಮಾಣಿ ಒತ್ತಾಯಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ