ಗದಗದಲ್ಲಿ ಬಡ್ಡಿ ಬಕಾಸುರರ ಅಟ್ಟಹಾಸ: 17 ಲಕ್ಷ ರೂ. ಸಾಲ ಕೊಟ್ಟು ರೈತನ 5 ಎಕರೆ ಜಮೀನು ನುಂಗಿದ ರೌಡಿಶೀಟರ್ ಗ್ಯಾಂಗ್

ಗದಗ ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆಕೋರರ ಅಟ್ಟಹಾಸ ಮುಂದುವರಿದಿದ್ದು, ಕೇವಲ 17 ಲಕ್ಷ ರೂಪಾಯಿ ಸಾಲ ನೀಡಿ ರೈತನ ಕೋಟ್ಯಂತರ ರೂಪಾಯಿ ಮೌಲ್ಯದ 5 ಎಕರೆ ಜಮೀನನ್ನು ನಕಲಿ ದಾಖಲೆಗಳ ಮೂಲಕ ವಸೂಲಿ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಸದ್ಯ, ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.

ಗದಗದಲ್ಲಿ ಬಡ್ಡಿ ಬಕಾಸುರರ ಅಟ್ಟಹಾಸ: 17 ಲಕ್ಷ ರೂ. ಸಾಲ ಕೊಟ್ಟು ರೈತನ 5 ಎಕರೆ ಜಮೀನು ನುಂಗಿದ ರೌಡಿಶೀಟರ್ ಗ್ಯಾಂಗ್
ಆರೋಪಿಗಳಾದ ರೌಡಿಶೀಟರ್ ಯುವರಾಜ್ ಕೊರವರ ಹಾಗೂ ರವಿ ಕೌಜಗೇರಿ
Image Credit source: tv9
Edited By:

Updated on: Jun 22, 2026 | 11:33 AM

ಗದಗ, ಜೂನ್ 22: ಗದಗ (Gadag) ಜಿಲ್ಲೆಯಲ್ಲಿ ಅಕ್ರಮ ಬಡ್ಡಿ ದಂಧೆಕೋರರ ಮತ್ತು ಮೀಟರ್ ಬಡ್ಡಿ ಮಾಫಿಯಾದ ದೌರ್ಜನ್ಯ ಮಿತಿಮೀರಿದೆ. ಸಾಲದ ನೆಪದಲ್ಲಿ ಅನ್ನದಾತನ ಆಸ್ತಿಯನ್ನೇ ದೋಚಿದ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಗದಗ ತಾಲೂಕಿನ ಬೆಳಹೋಡ ಗ್ರಾಮದ ನಿವಾಸಿಗಳಾದ ರೈತ ಮಹ್ಮದ್ ರಫೀಕ್ ದೊಡ್ಡಮನಿ ಮತ್ತು ಅವರ ಸಹೋದರರಿಗೆ ಕೇವಲ 17 ಲಕ್ಷ ರೂಪಾಯಿ ಸಾಲ ನೀಡಿ, ಅವರ ಕೋಟ್ಯಂತರ ರೂಪಾಯಿ ಮೌಲ್ಯದ 5 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಬಡ್ಡಿ ದಂಧೆಕೋರರು ತಮ್ಮದಾಗಿಸಿಕೊಂಡಿದ್ದಾರೆ. ಬೆಟಗೇರಿ ಮೂಲದ ಈ ಕಿರಾತಕರಿಂದ ಮೋಸಹೋಗಿ ಇಡೀ ರೈತ ಕುಟುಂಬ ಈಗ ಬೀದಿಗೆ ಬಿದ್ದಿದೆ.

ಮುಖ್ಯಾಂಶಗಳು

  • 17 ಲಕ್ಷಕ್ಕೆ ಕೋಟ್ಯಂತರ ರೂ. ಆಸ್ತಿ ಲೂಟಿ.
  • ಹಾಫ್ ರಿಜಿಸ್ಟ್ರೇಷನ್ ನೆಪದಲ್ಲಿ ವಂಚಿಸಿ ಖರೀದಿ ಪತ್ರ.
  • ರೌಡಿಶೀಟರ್ ಸೇರಿ ಇಬ್ಬರು ಆರೋಪಿಗಳ ಬಂಧನ.

ನಂಬಿಸಿ ನಕಲಿ ಖರೀದಿ ಪತ್ರ ಸೃಷ್ಟಿಸಿದ ಕಿರಾತಕರು

ಬೆಳಹೋಡ ಗ್ರಾಮದ ರೈತ ಮಹ್ಮದ್ ರಫೀಕ್ ತುರ್ತು ಅಗತ್ಯಕ್ಕಾಗಿ ಬೆಟಗೇರಿಯ ಬಡ್ಡಿ ದಂಧೆಕೋರರನ್ನು ಸಂಪರ್ಕಿಸಿ 17 ಲಕ್ಷ ರೂಪಾಯಿ ಸಾಲ ಕೇಳಿದ್ದರು. ಆದರೆ, ದಂಧೆಕೋರರು ಮುಂಗಡ ಬಡ್ಡಿಯಾಗಿ 5 ಲಕ್ಷ ರೂಪಾಯಿಗಳನ್ನು ಕಡಿತಗೊಳಿಸಿ, ರೈತನ ಕೈಗೆ ಕೊಟ್ಟಿದ್ದು ಕೇವಲ 12 ಲಕ್ಷ ರೂಪಾಯಿ ಮಾತ್ರ. ಈ ಸಾಲಕ್ಕೆ ಪ್ರತಿಯಾಗಿ ರೈತನಿಂದ 5 ಎಕರೆ ಜಮೀನಿನ ಅಡಮಾನ ಪತ್ರ (ಹಾಫ್ ರಿಜಿಸ್ಟ್ರೇಷನ್) ಮಾಡಿಸಿಕೊಳ್ಳುವುದಾಗಿ ನಂಬಿಸಿದ್ದರು. ಆದರೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ರೈತನಿಗೆ ತಿಳಿಯದಂತೆ ವಂಚಿಸಿ, ಶೇಷಗೀರಿಸಾ ಬಾಕಳೆ ಎಂಬಾತನ ಹೆಸರಿಗೆ ನೇರವಾಗಿ ಜಮೀನಿನ ಅಸಲಿ ‘ಖರೀದಿ ಪತ್ರ’ವನ್ನೇ (Sale Deed) ಬರೆಸಿಕೊಂಡು ವಂಚಿಸಿದ್ದಾರೆ. ಈಗ ಕೇವಲ 17 ಲಕ್ಷಕ್ಕೆ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನು ಸರಿಹೋಯಿತು ಎಂದು ದಂಧೆಕೋರರು ಬೆದರಿಕೆ ಹಾಕುತ್ತಿದ್ದಾರೆ.

ರೈತನ ಬೆನ್ನಿಗೆ ನಿಂತ ಎಸ್ಪಿ, ಇಬ್ಬರ ಬಂಧನ

ಸರ್ವಸ್ವವನ್ನೂ ಕಳೆದುಕೊಂಡು ಕಂಗಾಲಾದ ರೈತ ಕುಟುಂಬವು ಜಮೀನು ಉಳಿಸಿಕೊಡುವಂತೆ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ರೋಹನ್ ಜಗದೀಶ್ ಅವರ ಮೊರೆ ಹೋಗಿತ್ತು. ರೈತರ ಅಳಲನ್ನು ಆಲಿಸಿ ಅವರ ಬೆಂಬಲಕ್ಕೆ ನಿಂತ ಎಸ್ಪಿ ರೋಹನ್ ಜಗದೀಶ್, ತಕ್ಷಣವೇ ಕಠಿಣ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ನೀಡಿದರು. ಎಸ್ಪಿಯವರ ಸೂಚನೆ ಮೇರೆಗೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಪ್ರಮುಖ ಆರೋಪಿಗಳಾದ ರೌಡಿಶೀಟರ್ ಯುವರಾಜ್ ಕೊರವರ ಹಾಗೂ ರವಿ ಕೌಜಗೇರಿಯನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಶಾಮೀಲಾಗಿರುವ ಉಳಿದ ಮೂವರು ಆರೋಪಿಗಳಾದ ಬಸನಗೌಡ ಕರಮುಡಿ, ಶೇಷಗೀರಸಾ ಬಾಕಳೆ ಮತ್ತು ಜಗದೀಶ ಅಯ್ಯನಗೌಡರ ತಲೆಮರೆಸಿಕೊಂಡಿದ್ದು, ಪೊಲೀಸರು ಇವರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: ದರ್ಗಾವಾಲೆ ಕೊಲೆ ಬೆನ್ನಲ್ಲೇ ಮೀಟರ್ ಬಡ್ಡಿ ದಂಧೆ ಮತ್ತೆ ಆ್ಯಕ್ಟೀವ್: ಬುಡ ಸಮೇತ ಕಿತ್ತೊಗೆಯಲು ಎಸ್ಪಿ ಪ್ಲಾನ್

ಜಿಲ್ಲೆಯಲ್ಲಿ ವಾರದ ಹಿಂದಷ್ಟೇ ಬಡ್ಡಿ ಹಣಕ್ಕಾಗಿ ಮನೆಯ ಕಂಪೌಂಡ್ ಧ್ವಂಸಗೊಳಿಸಿದ ಘಟನೆ ನಡೆದಿತ್ತು. ಆ ಘಟನೆಯ ನೆನಪು ಮಾಸುವ ಮುನ್ನವೇ ಈ ದೊಡ್ಡ ವಂಚನೆ ಬೆಳಕಿಗೆ ಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:32 am, Mon, 22 June 26

ಸಂಜೀವ ಕುಮಾರ್​ ಪಾಂಡ್ರೆ, ಗದಗ

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More
Loading...
Unable to load recommendations.
Follow Us