ಗದಗ, ಫ್ರಬವರಿ 13: ಮರಳು ದಂಧೆಗೆ (Illegal Sand Mining) ಕಾಂಗ್ರೆಸ್ (Congress) ಮುಖಂಡ ಡಾ. ಶಶಿಧರ್ ಹಟ್ಟಿ (Dr Shashidhar Hatti) ಬಲಿಯಾಗಿದ್ದಾರೆ. ಗದಗ ಜಿಲ್ಲೆ ರೋಣ ತಾಲೂಕಿನ ಹಿರೇಹಾಳ ಗ್ರಾಮದಲ್ಲಿ ಶಶಿಧರ್ ಡೆತ್ನೋಟ್ ಬರೆದಿಟ್ಟು ಸೋಮವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ಲುಂಗಿಯಿಂದ ನೇಣು ಬಿಗಿದುಕೊಂಡು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೂ ಮುನ್ನ ಮರಳು ದಂಧೆಕೋರ, ಕಾಂಗ್ರೆಸ್ ಮುಖಂಡ ಶರಣಗೌಡ ಪಾಟೀಲ್ ಹೆಸರನ್ನು ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ.
ಎಲ್ಲಾ ಲೆಕ್ಕ ಕೊಟ್ಟರೂ ಶರಣಗೌಡ ಪದೇಪದೇ ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ ಮನನೋಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಉಸ್ತುವಾರಿ ಸಚಿವ ಹೆಚ್ಕೆ ಪಾಟೀಲರಿಗೆ ಹೇಳಿ ಶರಣಗೌಡಗೆ ಕಠಿಣ ಶಿಕ್ಷೆ ಕೊಡಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ರೋಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗದಗ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಹೇಳಿ ಎಗ್ಗಿಲ್ಲದೇ ನಡೆಯುತ್ತಿರುವ ಬಗ್ಗೆ ಇತ್ತೀಚೆಗೆ ‘ಟಿವಿ9’ ವಿಸ್ತೃತ ವರದಿ ಪ್ರಕಟಿಸಿತ್ತು. ಕಾನೂನು ಸಚಿವರ ತವರಲ್ಲೇ ಕಾನೂನು ಮಂಗಮಾಯವಾಗಿರುವ ಬಗ್ಗೆ ಮತ್ತು ತುಂಗಭದ್ರಾ ನದಿಯಲ್ಲಿ ಅಪಾಯಕಾರಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ಸಾಗಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ತುಂಗಭದ್ರಾ ನದಿ ಪಾತ್ರದಲ್ಲಿ ಯಾವುದೇ ಮರಳು ಟೆಂಡರ್ ಇಲ್ಲ. ಮರಳು ಗಣಿಗಾರಿಕೆ ಸಂಪೂರ್ಣ ಅಕ್ರಮವಾಗಿದೆ. ಹಗಲು ರಾತ್ರಿ ಎನ್ನದೇ ದಂಧೆಕೋರರು ನದಿ ಒಡಲು ಬಗೆದು ಮರಳು ಬಾಚುತ್ತಿದ್ದಾರೆ. ಸಿಂಗಟಾಲೂರ, ಶೀರನಹಳ್ಳಿ, ಹೆಸರೂರ ಸೇರಿದಂತೆ ನದಿ ಪಾತ್ರದ ಗ್ರಾಮಗಳಲ್ಲಿ ಅಕ್ರಮ ಮರಳು ದಂಧೆ ಸಾಗುತ್ತಿರುವ ಬಗ್ಗೆಯೂ ವರದಿ ಪ್ರಕಟಿಸಲಾಗಿತ್ತು.
ಕಾನೂನು ಸಚಿವರ ತವರಲ್ಲೇ ಎಲ್ಲ ಕಾನೂನುಗಳನ್ನು ಗಾಳಿಗೆ ತೂರಿ ಎಗ್ಗಿಲ್ಲದೇ ಅಕ್ರಮ ಮರಳು ಗಣಿಗಾರಿಕೆ ನಡೆಸಲಾಗುತ್ತಿದೆ. ಆದರೂ ಗಣಿ ಹಾಗೂ ಕಂದಾಯ ಇಲಾಖೆ ನಿರ್ಲಕ್ಷ್ಯ ವಹಿಸಿವೆ. ಇದು ರೈತರು, ನದಿ ಪಾತ್ರದ ಗ್ರಾಮಗಳ ಜನರ ಸಿಟ್ಟಿಗೆ ಗುರಿಯಾಗಿದೆ.
ಇದನ್ನೂ ಓದಿ: ಗದಗ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ: ಅಧಿಕಾರಿಗಳು ಶಾಮೀಲು ಆರೋಪ
ತುಂಗಭದ್ರಾ ನದಿಯಲ್ಲಿ ಮರಳು ಬಗೆದು ಹುಬ್ಬಳ್ಳಿಗೆ ಸಾಗಾಟ ಮಾಡಲಾಗುತ್ತಿದೆ. ತಾಲೂಕು ಆಡಳಿತ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿದೆ. ನದಿ ಪಾತ್ರದಲ್ಲಿ ರಾಶಿ ರಾಶಿ ಅಕ್ರಮವಾಗಿ ಮರಳು ಸಂಗ್ರಹ ಮಾಡಿದರೂ ಕೂಡ ದಾಳಿ ಮಾಡಿ ಸರ್ಕಾರದ ವಶಕ್ಕೆ ಪಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ