ಗದಗ: ನೀರು ಬಿಡದ ಅಧಿಕಾರಿಗಳು, ಕಾಲುವೆ ನಂಬಿಕೊಂಡು ಕೃಷಿ ಮಾಡಿದ ರೈತರ ಪಾಡು ಕೇಳುವಿರಾ ಸಚಿವ ಸಿ.ಸಿ.ಪಾಟೀಲರೇ
ಸಚಿವ ಸಿ.ಸಿ.ಪಾಟೀಲ್ ಕ್ಷೇತ್ರದ ರೈತರು ಕಾಲುವೆ ನೀರನ್ನು ನಂಬಿಕೊಂಡು ಲಕ್ಷಾಂತರ ಖರ್ಚು ಮಾಡಿ ನೀರಾವರಿ ಬೆಳೆ ಮಾಡಿದ್ದಾರೆ. ಆದರೆ ನೀರಾವರಿ ನಿಗಮದ ಅಧಿಕಾರಿಗಳು ಮಾತ್ರ ಕಾಲುವೆಗೆ ನೀರೇ ಬಿಡುತ್ತಿಲ್ಲ. ಎಷ್ಟೇ ಮನವಿ ಮಾಡಿದರೂ ಡೋಂಟ್ ಕೇರ್ ಎನ್ನುತ್ತಿದ್ದಾರೆ.
ಗದಗ: ಆ ಗ್ರಾಮಗಳ ರೈತರು ಕಾಲುವೆ ನೀರನ್ನು ನಂಬಿಕೊಂಡು ಲಕ್ಷಾಂತರ ಖರ್ಚು ಮಾಡಿ ನೀರಾವರಿ ಬೆಳೆ ಮಾಡಿದ್ದಾರೆ. ಬೆಳೆ ಕೂಡ ಭರ್ಜರಿಯಾಗಿದೆ. ಆದರೆ ಕಾಲುವೆಯಲ್ಲಿ ಮಾತ್ರ ನೀರಾವರಿ ನಿಗಮದ ಅಧಿಕಾರಿಗಳು ನೀರು ಹರಿಬಿಡುತ್ತಿಲ್ಲ. ಬೆಳೆ ಉಳಿಸಿಕೊಳ್ಳಲು ರೈತರು ನೀರಾವರಿ ನಿಗಮದ ಅಧಿಕಾರಿಗಳನ್ನು ಪರಿಪರಿಯಾಗಿ ಬೇಡಿಕೊಂಡರೂ ಡೋಂಟ್ ಕೇರ್ ಅಂತಿದ್ದಾರೆ. ಹಸರಿನಿಂದ ಕಂಗೊಳಿಸುವ ಬೆಳೆಗಳು ಈಗ ಒಣಗುವ ಭೀತಿ ಎದುರಿಸುತ್ತಿದ್ದಾರೆ. ಇನ್ನೂ ಸಮಸ್ಯೆ ಬಗ್ಗೆ ಕ್ಷೇತ್ರದ ಶಾಸಕರೂ ಆದ ಸಚಿವ ಸಿ.ಸಿ ಪಾಟೀಲ್ (C.C.Patil) ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳ ಬೇಜವಾಬ್ದಾರಿಗೆ ಅನ್ನದಾತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಷ್ಟಕ್ಕೂ ಈ ಸಮಸ್ಯೆ ಉದ್ಭವಿಸಿರುವುದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕಲ್ಲಾಪೂರ, ಕಪ್ಪಲಿ ಗ್ರಾಮಗಳ ವ್ಯಾಪ್ತಿಯಲ್ಲಿ. ಇದು ಗದಗ ಜಿಲ್ಲೆಯ ಮಲಪ್ರಭಾ ನದಿ ತೀರದ ಗ್ರಾಮಗಳ ರೈತರ ಗೋಳಾಟ ದೇವರಿಗೆ ಪ್ರೀತಿ ಎಂಬಂತಾಗಿದೆ. ಸತತ ಮೂರು ವರ್ಷ ಮಲಪ್ರಭಾ ಪ್ರವಾಹಕ್ಕೆ ಸಿಲುಕಿ ಅನ್ನದಾತರು ತತ್ತರಿಸಿ ಹೋಗಿದ್ದಾರೆ. ಅದರೆ, ಈಗ ಅಪಾರ ನೀರು ಇದ್ದರೂ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಕಾಲುವೆಗಳಿಗೆ ನೀರು ಹರಿಸುತ್ತಿಲ್ಲ. ಹೀಗಾಗಿ ಪ್ರಭಾವಿ ಸಚಿವ ಸಿ.ಸಿ ಪಾಟೀಲ್ ಕ್ಷೇತ್ರದ ಕಲ್ಲಾಪೂರ, ಕಪ್ಪಲಿ ಗ್ರಾಮಗಳ ರೈತರು ಅಕ್ಷರಶಃ ಕಂಗಾಲಾಗಿ ಹೋಗಿದ್ದಾರೆ.
ಸೂರ್ಯಕಾಂತಿ, ಗೋಧಿ, ಹತ್ತಿ, ಕಡಲೆ ಸೇರಿದಂತೆ ಹಲವಾರು ಬೆಳೆಗಳು ಚೆನ್ನಾಗಿ ಬೆಳದಿವೆ. ಇನ್ನೇನೂ ಸೂರ್ಯಕಾಂತಿ, ಗೋಧಿ ಕಾಳು ಹಿಡಿಯುವ ಸಮಯ. ಈಗ ಈ ಬೆಳೆಗಳಿಗೆ ನೀರಿನ ಅಗತ್ಯವಿದೆ. ಆದರೆ ಅಧಿಕಾರಿಗಳು ಕಾಲುವೆಗೆ ನೀರು ಹರಿಸುತ್ತಿಲ್ಲ. ಹೀಗಾಗಿ ಸರಿಯಾದ ಸಮಯಕ್ಕೆ ನೀರು ಹರಿಸದಿದ್ದರೆ ಕಾಳು ಹಿಡಿಯಲ್ಲ. ಹೀಗಾಗಿ ಒಣಗಿ ಹೋಗುತ್ತವೆ ಅಂತ ಅನ್ನದಾತರು ಗೋಳಾಡುತ್ತಿದ್ದಾರೆ.
ನರಗುಂದ ಪಟ್ಟಣದಲ್ಲಿ ಇರುವ ನೀರಾವರಿ ನಿಗಮದ ಕಚೇರಿಗೆ ಹೋಗಿ ರೈತರು ಹತ್ತಾರು ಬಾರಿ ಮನವಿ ಮಾಡಿಕೊಂಡರೂ ಕಲ್ಲು ಹೃದಯದ ಅಧಿಕಾರಿಗಳ ಮನಸ್ಸು ಮಾತ್ರ ಕರಗುತ್ತಿಲ್ಲ. ಅಧಿಕಾರಿಗಳ ಆಟಕ್ಕೆ ರೈತರು ರೋಸಿಹೋಗಿದ್ದಾರೆ. ಲಕ್ಷಾಂತರ ಸಾಲಸೋಲ ಮಾಡಿ ಬೆಳೆಗಳು ಕಣ್ಮುಂದೆಯೇ ಹಾಳಾಗುತ್ತಿರುವುದನ್ನು ನೋಡಿ ರೈತರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ನೀರು ಕೊಟ್ಟು ನಮ್ಮನ್ನು ಬದುಕಿಸಿ ಅಂತ ಕೃಷ್ಣಗೌಡ ಪಾಟೀಲ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಗದಗ: ಮತ್ತೆ ತಾರಕಕ್ಕೇರಿದ ಶಿವಾನಂದ ಮಠದ ಉತ್ತರಾಧಿಕಾರಿ ವಿವಾದ, ಹಿರಿಯ, ಕಿರಿಯ ಶ್ರೀಗಳೆದುರೇ ಭಕ್ತರ ವಾಗ್ವಾದ
ನರಗುಂದ ತಾಲೂಕಿನಲ್ಲಿ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಆಡಿದ್ದೇ ಆಟವಾಗಿದೆ. ಹೀಗಾಗಿ ಅಧಿಕಾರಿಗಳ ಆಟಕ್ಕೆ ರೈತರು ಹೈರಾಣಾಗಿದ್ದಾರೆ. ಅಧಿಕಾರಿಗಳ ಸಹವಾಸವೇ ಬೇಡ ನಮ್ಮ ಶಾಸಕರಿಗೆ ಹೇಳಿದರೆ ಕೆಲಸ ಆಗುತ್ತದೆ ಅಂತ ಕ್ಷೇತ್ರದ ಶಾಸಕ ಸಚಿವ ಸಿ.ಸಿ ಪಾಟೀಲ್ ಕಚೇರಿಗೆ ಹೋಗಿ ಗಮನಕ್ಕೆ ತಂದರೂ ರೈತರ ಜಮೀನುಗಳಿಗೆ ನೀರು ಹರಿದಿಲ್ಲ. ನಮ್ಮ ಶಾಸಕರೂ ನಮ್ಮ ಗೋಳು ಕೇಳುತ್ತಿಲ್ಲ. ಇತ್ತ ನೀರಾವರಿ ನಿಗಮದ ಅಧಿಕಾರಿಗಳು ನಮ್ಮ ಗೋಳು ಕೇಳುತ್ತಿಲ್ಲ. ಯಾರಿಗೆ ಹೇಳೋಣ ನಮ್ ಪ್ಲಾಬ್ಲಮ್ ಅಂತ ಅನ್ನದಾರು ಅಧಿಕಾರಿಗಳು, ಶಾಸಕರ ನಿರ್ಲಕ್ಷ್ಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ರೈತರ ಸಾವಿರಾರು ಎಕರೆ ಬೆಳೆ ಒಣಗುವ ಭೀತಿಯಲ್ಲಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಅಂತ ರೈತರು ಕಿಡಿಕಾರಿದ್ದಾರೆ. ನೀರಿಗಾಗಿ ಅನ್ನದಾತರು ವಿಲವಿಲ ಅಂತಿದ್ದಾರೆ. ಮೊದಲು ನೀರು ಕೊಟ್ಟು ಆಸೆ ಹುಟ್ಟಿಸಿದ್ದಾರೆ. ಆದರೆ ಈಗ ನೀರು ಬಿಡುತ್ತಿಲ್ಲ. ಇಂದು ನಾಳೆ ನೀರು ಬಿಟ್ಟರೆ ನಮ್ಮ ಬದುಕು, ಇಲ್ಲಾಂದ್ರೆ ಇಲ್ಲಾ. ಈಗಾಗಲೇ ಹತ್ತಿ ಹಾಳಾಗಿ ಹೋಗಿದೆ ಅಂತ ರೈತರು ಗೋಳಾಡುತ್ತಿದ್ದಾರೆ ಅಂತ ಕೊಲ್ಲಾಪುರ ಚಂದ್ರಗೌಡ ಪಾಟೀಲ್ ಕಿಡಿಕಾರಿದ್ದಾರೆ.
ನರಗುಂದ ಪಟ್ಟಣದಲ್ಲಿ ಇರುವ ನೀರಾವರಿ ನಿಗಮದ ಕಚೇರಿಗೆ ಹತ್ತಾರು ಬಾರಿ ಹೋಗಿ ಮನವಿ ಮಾಡಿದರೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಕಚೇರಿಯಲ್ಲಿ ಇಂಜಿನೀಯರ್ಗಳೇ ಸಿಗಲ್ಲ. ಇಲ್ಲಿನ ಅಧಿಕಾರಿಗಳಿಗೆ ಹೇಳುವವರು ಇಲ್ಲ, ಕೇಳುವವರು ಇಲ್ಲ, ಎಂಬ ಸ್ಥಿತಿ ನಿರ್ಮಾಣವಾಗಿದೆ. ಲಕ್ಷ ಲಕ್ಷ ಸರ್ಕಾರಿ ಸಂಬಳ ಪಡೆದ ಅಧಿಕಾರಿಗಳು ಸರ್ಕಾರದ ಹೆಸರಿಗೆ ಕಪ್ಪು ಮಸಿ ಬಳಿಯುವ ಕೆಲಸ ನಡೆಸಿದ್ದಾರೆ. ಕಾಲುವೆ ಹೂಳು ತೆಗೆಯವ ಟೆಂಡರ್ ಅದರೂ ಸ್ವಚ್ಛತೆ ಮಾಡಿಲ್ಲ. ಸರ್ಕಾರ ಕೋಟ್ಯಾಂತರ ಹಣ ಅಧಿಕಾರಿಗಳು, ಗುತ್ತಿಗೆದಾರರು ನುಂಗಿ ನೀರು ಕುಡಿಯುತ್ತಿದ್ದಾರೆ ಅಂತ ರೈತರು ಆರೋಪಿಸಿದ್ದಾರೆ. ಏನೇ ಇರಲಿ ನಮಗೆ ನೀರು ಕೊಡಿ ಜೀವ ಉಳಿಸಿ ಅಂತ ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:30 pm, Fri, 27 January 23