ಗದಗ: ಅನೈತಿಕ ಚಟುವಟಿಕೆಗಳ ತಾಣವಾದ ನರೇಗಲ್ ಹೈಟೆಕ್ ಆಸ್ಪತ್ರೆ ತುಂಬೆಲ್ಲಾ ಕಾಂಡೋಮ್ ರಾಶಿ
Naregal Government Hospital: ಮೂರು ವರ್ಷಗಳ ಹಿಂದೆ ಲೋಕಾರ್ಪಣೆಗೊಂಡಿದ್ದ ನರೇಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆ ಇದೀಗ ಪಾಳುಕಟ್ಟಡದಂತಾಗಿದೆ. ಸೂಕ್ತ ಸೌಕರ್ಯಗಳಿಲ್ಲದೆ ಸೊರಗಿದೆ. ರೋಗಿಗಳ ನೆರವಿಗೆ ಸಿಗಬಕಾಗಿದ್ದ ಆಸ್ಪತ್ರೆ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿರುವುದು ಬೆಳಕಿಗೆ ಬಂದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
ಗದಗ, ಫೆಬ್ರವರಿ 6: ಗದಗ (Gadag) ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆ (Naregal Government Hospital) ಅದ್ವಾನಗಳ ಆಗರವಾಗಿ ಪರಿಣಮಿಸಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಆಸ್ಪತ್ರೆ ಇದೀಗ ಸೂಕ್ತ ಸೌಲಭ್ಯಗಳಿಲ್ಲದೆ ಪಾಳು ಬಿದ್ದಿದೆ. ಅಷ್ಟೇ ಅಲ್ಲದೆ, ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿಣಮಿಸಿದೆ. ಆಸ್ಪತ್ರೆ ತುಂಬೆಲ್ಲ ಕಾಂಡೋಮ್ಗಳು ಬಿದ್ದುಕೊಂಡಿವೆ. ರೋಗಿಗಳಿಗೆ ಚಿಕಿತ್ಸೆ ನೀಡಬೇಕಿದ್ದ ಆಸ್ಪತ್ರೆಯಲ್ಲಿ ಅನೈತಿಕ ಚಟುವಟಿಕೆ ಆರೋಪ ಕೇಳಿಬಂದಿದ್ದು, ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ನರೇಗಲ್ ಪಟ್ಟಣದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಗೆ ಪ್ರವೇಶಿಸಿದರೆ ಸಾಕು ಅಸಹ್ಯ ವಸ್ತುಗಳ ದರ್ಶನವಾಗುತ್ತಿದೆ. ಹೊಸ ಕಟ್ಟಡದ ಕೊಠಡಿಗಳಲ್ಲಿ ಪ್ಯಾಕ್ಡ್ ಹಾಗೂ ಬಳಕೆ ಮಾಡಿದ ಕಾಂಡೋಮ್ಗಳೇ ಕಾಣಿಸುತ್ತಿವೆ. ಆಸ್ಪತ್ರೆ ಉದ್ಘಾಟನೆಯಾಗಿ ಮೂರು ವರ್ಷಗಳು ಕಳೆದರೂ ರೋಗಿಗಳಿಗೆ ಅದರ ಪ್ರಯೋಜನ ದೊರೆಯದಂತಾಗಿದೆ.
ಅಂದಿನ ಶಾಸಕ ಕಳಕಪ್ಪ ಬಂಡಿ ಅವರಿಂದ ಆಸ್ಪತ್ರೆ ಲೋಕಾರ್ಪಣೆಗೊಂಡಿತ್ತು. ಆಸ್ಪತ್ರೆಗೆ ಸಿಬ್ಬಂದಿ ನೇಮಕ, ಸೂಕ್ತ ಉಪಕರಣಗಳು ಹಾಗೂ ಪರಿಕರಗಳನ್ನು ಒದಗಿಸಿಕೊಡುವುದಾಗಿ ಉದ್ಘಾಟನೆ ವೇಳೆ ಶಾಸಕರು ಭರವಸೆ ನೀಡಿದ್ದರು. ಮೇಲ್ನೋಟಕ್ಕೆ ನೋಡುವವರಿಗೆ ಆಸ್ಪತ್ರೆಗೆ ಹೊರಗಡೆಯಿಂದ ಬೀಗ ಹಾಕಿದೆ. ಆದರೂ ಒಳಗಡೆಯ ಚಿತ್ರಣ ಬೇರೆಯೇ ರೀತಿಯಾಗಿದೆ. ಆಸ್ಪತ್ರೆ ಕಟ್ಟಡದಲ್ಲಿ ಅನೈತಿಕ ಚಟುವಟಿಕೆ ಮಾಡುವವರು ಯಾರು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಕೂಡಲೇ ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯಕೀಯ ಸೌಕರ್ಯ ಹಾಗೂ ಸಿಬ್ಬಂದಿ ನಿಯೋಜನೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವೈದ್ಯರು, ಸಿಬ್ಬಂದಿ ಕೊರತೆ
ನರೇಗಲ್ ಆಸ್ಪತ್ರೆಗೆ ವೈದ್ಯರು, ಅರಿವಳಿಕೆ ತಜ್ಞರು ಸೇರಿದಂತೆ ಅಂದಾಜು 35 ಮಂದಿ ಸಿಬ್ಬಂದಿ ಬೇಕಿದೆ. ಆದರೆ ಆಸ್ಪತ್ರೆಗೆ ಸೂಕ್ತ ಸಿಬ್ಬಂದಿ ನೇಮಕವೇ ಆಗಿಲ್ಲ. ಆಸ್ಪತ್ರೆಗೆ ಅಗತ್ಯವಿರುವ ವೈದ್ಯಕೀಯ ಸಾಧನಗಳು, ಸಲಕರಣೆಗಳನ್ನು ಇನ್ನೂ ಒದಗಿಸಿಲ್ಲ. ಹೀಗಾಗಿ ಹೆಸರಿಗಷ್ಟೇ ಹೈಟೆಕ್ ಆಸ್ಪತ್ರೆಯಾಗಿದ್ದು, ಸಾಮಾನ್ಯ ರೋಗಿಗಳ ಪಾಲಿಗೆ ಇನ್ನೂ ಲಭ್ಯವಾಗುತ್ತಿಲ್ಲ.
ಇದನ್ನೂ ಓದಿ: ದಲಿತ ಕುಟುಂಬಕ್ಕೆ ಕೊಟ್ಟಿರುವ ಸರ್ಕಾರಿ ಜಮೀನಿನಲ್ಲೂ ಸೋಲಾರ್ ಹಾಕಿ ಕಂಪನಿಗಳ ಉದ್ಧಟತನ, ರೈತ ಹೈರಾಣ
ನೂತನ ಆಸ್ಪತ್ರೆ ಕಟ್ಟಡಕ್ಕೆ ಸಮರ್ಪಕವಾಗಿ ಬೇಲಿಯನ್ನೂ ಹಾಕಲಾಗಿಲ್ಲ. ಪರಿಣಾಮವಾಗಿ ಅಕ್ರಮ ಚಟುವಟಿಕೆಗಳ ತಾಣವಾಗಿ ಪರಿಣಮಿಸಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:53 am, Tue, 6 February 24